ಗುರ್ಜಾಪೂರ: ಶಾಶ್ವತ ಪರಿಹಾರಕ್ಕೆ ಗ್ರಾಮ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲು ಡಿಸಿಎಂ ಸವದಿ ಸೂಚನೆ

0
3

ರಾಯಚೂರು,ಅ.೧೯:ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಗ್ರಾಮ ಮಳೆಗಾಲ ಹಾಗೂ ನೆರೆಯ ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಸಿದ ಸಂದರ್ಭದಲ್ಲಿ ಪ್ರವಾಹದ ಸ್ಥಿತಿ ಏರ್ಪಡುತ್ತದೆ, ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಸಭೆ ನಡೆಸಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ಅವರು ಅ.೧೯ರ ಸೋಮವಾರ ಕೃಷ್ಣ ಮತ್ತು ಭೀಮಾ ನದಿಯ ಸಂಗಮವಾಗುವ ಗುರ್ಜಾಪುರ ಬ್ರಿಜ್ಡ್ ಕಂ ಬ್ಯಾರೇಜ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ಗುರ್ಜಾಪೂರು ಗ್ರಾಮವನ್ನು ನದಿ ಪಾತ್ರದಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರದಲ್ಲಿ ಭಿನ್ನಾಭಿಪ್ರಾಯ ಇದೆ, ಆದ ಕಾರಣ ಗ್ರಾಮದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಗ್ರಾಮ ಸಭೆ ನಡೆಸಿ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ, ಮಳೆ, ಪ್ರವಾಹದಿಂದ ಪ್ರತಿ ಭಾರಿ ಗುರ್ಜಾಪೂರು ಸೇರಿ ನಾಲ್ಕು ಗ್ರಾಮಗಳು ಪ್ರವಾಹ ಎದುರಿಸಬೇಕಾಗಿದೆ. ಅರಿಶಿಣಿಗೆ, ಡಿ.ಡೋಂಗರಾಪೂರು, ಅತ್ಕೂರು, ಬೂರ್ದಿಪಾಡು ಗ್ರಾಮದ ನದಿ ತೀರದ ಜನರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಎಂದರು.

ಕಳೆದ ಎರಡು ಮೂರು ದಿನಗಳಿಂದ ಭೀಮಾ ನದಿಗೆ ೮ ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂಬುದಕ್ಕೆ ಕುರಿತಂತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಮಹಾರಾಷ್ಟçದ ಅಧಿಕಾರಿಗಳು ನೀಡಿರುವ ಮಾಹಿತಿ ತಪ್ಪಾಗಿರಬಹುದು, ಅವರು ನೀರಿನ ಹರಿವಿಗೆ ಸಂಬಂಧಿಸಿದಂತೆ ನೀಡಿದ ಮಾಹಿತಿ ಸಮಪರ್ಕವಾಗಿಲ್ಲ, ಅವರು ನೀಡಿರುವ ಮಾಹಿತಿ ನಿಖರವಾಗಿದ್ದರೆ, ಈ ವೇಳೆಗಾಗಲೇ ನೀರು ಹರಿದು ಬರಬೇಕಿತ್ತು, ಈ ಕುರಿತಂತೆ ಮಹಾರಾಷ್ಟçದ ನೀರಾವರಿ ಸಚಿವರೊಂದಿಗೆ ಮಾತನಾಡಲಾಗಿದೆ, ಮಹಾರಾಷ್ಟçದ ನೀರಾವರಿ ಇಲಾಖೆಯ ಅಧಿಕಾರಿಗಳು ನೀರು ಹರಿಸುವಿಕೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದರು.

ಅತಿ ಹೆಚ್ಚು ಮಳೆ ಹಾಗೂ ನೆರೆಯಿಂದಾಗಿ ಜಿಲ್ಲೆಯ ವಿವಿಧೆಡೆ ಬೆಳೆಹಾನಿಯಾಗಿದೆ. ಹಾನಿ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಪ್ರವಾಹ ಸ್ಥಿತಿ ಗತಿಗಳ ಕುರಿತು ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ, ಭತ್ತ, ಹತ್ತಿ ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಸಮೀಕ್ಷಾ ಕಾರ್ಯ ಕೈಗೊಂಡು ಪರಿಹಾರ ನೀಡಲಾಗುತ್ತದೆ ಎಂದರು.

ಈಗಾಗಲೇ ನಿರ್ಮಿಸಲಾಗಿರುವ ಪುನರ್ ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗುರ್ಜಾಪೂರು ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಸ್ಥಳಾಂತರಿಸಿ ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗುತ್ತದೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗುರ್ಜಾಪುರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ನಂತರ ಮಳೆ, ಪ್ರವಾಹದಿಂದಾಗಿ ಹಾನಿಯಾಗಿರುವ ಕರೆಕಲ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಿಸಿದರು.

- Call for authors -

LEAVE A REPLY

Please enter your comment!
Please enter your name here