ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರ ಸಂಘ ನಡೆಸಲು ಉದ್ದೇಶಿಸಿರುವ ಮುಷ್ಕರದ ಭವಿಷ್ಯ ಇಂದು ಹೈಕೋರ್ಟ್ನಲ್ಲಿ ನಿರ್ಧಾರವಾಗಲಿದೆ.
ಬಿಎಂಆರ್ಸಿಎಲ್ ನೌಕರರ ಸಂಘ ಕರೆ ನೀಡಿರುವ ಮುಷ್ಕರ ಪ್ರಶ್ನಿಸಿ ಮೆಟ್ರೋ ರೈಲು ನಿಗಮ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದ್ದು, ಕೋರ್ಟ್ ನೀಡುವ ತೀರ್ಪಿನ ಮೇಲೆ ನೌಕರರು ಮುಷ್ಕರದ ಬಗ್ಗೆ ನಿರ್ಧರಿಸಲಿದ್ದಾರೆ.
ಕಳೆದ ತಿಂಗಳು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೆಟ್ರೋ ರೈಲು ನಿಗಮದ ಆಡಳಿತ ಮಂಡಳಿ ಹಾಗೂ ನೌಕರರ ಸಂಘವು ಮತ್ತೊಂದು ಬಾರಿ ಸಭೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರುವಂತೆ ಸೂಚಿಸಿತ್ತು. ಇದೇ ವೇಳೆ ತನ್ನ ಗಮನಕ್ಕೆ ತರದೇ ಯಾವುದೇ ಮುಷ್ಕರ ನಡೆಸಬಾರದೆಂದು ನೌಕರರ ಸಂಘಕ್ಕೆ ನಿರ್ದೇಶಿಸಿತ್ತು.









