ಬೆಂಗಳೂರು: ರಾಜ್ಯದ ಇಬ್ಬರು ಧೀಮಂತ ರಾಜಕೀಯ ಮುಖಂಡರು ರಾಜ್ಯಸಭೆ ಪ್ರವೇಶಿಯಲು ಅಖಾಡ ಸಿದ್ಧವಾಗಿದೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಶಾಸಕರು, ರಾಷ್ಟ್ರೀಯ ಮುಖಂಡರ ಒತ್ತಡಕ್ಕೆ ಮಣಿದು ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ,ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಪರಾಭವಗೊಂಡಾಗ ಲೋಕಸಭೆಯಲ್ಲಿ ರಾಜ್ಯದ ಶಕ್ತಿಯೇ ಕುಂದಿತ್ತು. ರಾಜ್ಯದ ಪರ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ನಾಯಕರ ಸೋಲು ಇಡೀ ರಾಜ್ಯದ ಸೋಲು ಅಂತಾ ಹಲವಾರು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದ್ರೆ, ಇದೀಗ ಇಬ್ಬರೂ ನಾಯಕರು ರಾಜ್ಯಸಭೆ ಪ್ರವೇಶಿಸುತ್ತಿರುವುದು ಮತ್ತೆ ರಾಜ್ಯದ ಜನರಲ್ಲಿ ಅಶಾಕಿರಣ ಮೂಡಿಸಿದೆ.
ಮಾಜಿ ಪ್ರಧಾನಿ ದೇವೇಗೌಡರು 1996ರಲ್ಲಿ ಪ್ರಧಾನಿಯಾದಾಗ 2 ವರ್ಷ ರಾಜ್ಯಸಭಾ ಸದಸ್ಯರಾಗಿದ್ದರು. ಅದನ್ನು ಬಿಟ್ಟರೆ ಎಂದೂ ಕೂಡ ಸಂಸತ್ ಹಾಗೂ ವಿಧಾನ ಸಭೆಯ ಮೇಲ್ಮನೆಗೆ ಹೋದವರಲ್ಲ. ಆದ್ರೆ, ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಿಯ ಮುಖಂಡರ ಒತ್ತಡದ ಮೇರೆಗೆ ಹಾಗೂ ಪಕ್ಷದ ಶಾಸಕರ ಒತ್ತಡದ ಹಿನ್ನೆಲೆಯಲ್ಲಿ ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಜೆಡುಎಸ್ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ದೇವೇಗೌಡರು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ದೇರಿದಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ತೆರಳಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನನ್ನನ್ನು ಆಯ್ಕೆ ಮಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹೈಕಮಾಂಡ್ ನನ್ನ ಮೇಲೆ ಇಟ್ಟಿರೋ ನಂಬಿಕೆ ಉಳಿಸಿಕೊಳ್ತೇನೆ. ಜನರ ಪರ ಧ್ವನಿ ಎತ್ತುತ್ತೇನೆ ಅಂತಾ ತಿಳಿಸಿದ್ರು.
ಇನ್ನೂ ಬಿಜೆಪಿಯೂ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಯಣ್ಣ ಬ್ರಿಗೇಡ್ ಮೂಲದ ಅಶೋಕ್ ಗಸ್ತಿ, ಪ್ರಹ್ಲಾದ್ ಜೋಷಿ ಆಪ್ತ ಈರಣ್ಣ ಕಡಾಡಿಗೆ ಟಿಕೆಟ್ ಫೈನಲ್ ಆಗಿದೆ. ಒಟ್ಟಾರೆಯಾಗಿ ಮೂರು ಪಕ್ಷದಲ್ಲಿ ಮತಗಳ ಲೆಕ್ಕಾಚಾರದ ಮೇಲೆ ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿವೆ.









