ಬೆಂಗಳೂರು: ಏರ್ ಶೋ ಪಾರ್ಕಿಂಗ್ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು,ಬೆಂಕಿಯ ಕೆನ್ನಾಲಿಗೆಗೆ
ಮುನ್ನೂರು ಕಾರುಗಳು ಹೊತ್ತಿ ಉರಿದಿದ್ದು,ದಟ್ಟ ಹೊಗೆಯಿಂದ ಏರ್ ಶೋ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಏರ್ ಶೋ ಪ್ರದರ್ಶನದ ವೇಳೆ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ,ಎಲೆಗಳು ಹಾಗು ಒಣಗಿದ್ದ ಹುಲ್ಲಿನಿಂದಾಗಿ ಪಾರ್ಕಿಂಗ್ ನಲ್ಲಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದ್ದು ಗೇಟ್ 5G ರ ಸಾವಿರಕ್ಕೂ ಹೆಚ್ಚಿನ ಕಾರುಗಳು ನಿಂತಿದ್ದ ಪಾರ್ಕಿಂಗ್ ಜಾಗದಲ್ಲಿ ಕಾರುಗಳಿಗೆ ತಗುಲಿದೆ ಸಾಲು ಸಾಲು ನಿಂತಿದ್ದ ಕಾರುಗಳು ಬೆಂಕಿಗೆ ಸಿಲುಕಿದ್ದು ಸ್ಪೋಟಗೊಳ್ಳುತ್ತಾ ನೋಡು ನೋಡುತ್ತಿದ್ದಂತೆ ಹೊತ್ತಿ ಉರಿದಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ ಗಾಳಿಯು ಜೋರಾಗಿ ಬೀಸುತ್ತಿರುವ ಕಾರಣ ಬೆಂಕಿ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಪರದಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಮುನ್ನೂರಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.
ಕಾರುಗಳಿಗೆ ಬೆಂಕಿ ತಗುಲಿದ ವಿಷಯ ತಿಳಿದ ಕಾರುಗಳ ಮಾಲೀಕರು ತಮ್ಮ ತಮ್ಮ ಕಾರುಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದಿದ್ದಾರೆ,ತಡವಾಗಿ ಬಂದು ನಿಲ್ಲಿಸಿದ್ದವರ ಕಾರುಗಳೇ ಹೊತ್ತಿ ಉರಿದಿವೆ ಎನ್ನಲಾಗಿದ್ದು ಸಧ್ಯ ಕಾರುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ
ದಟ್ಟ ಹೊಗೆ ಆ ರಿಸಿದ ಹಿನ್ನಲೆಯಲ್ಲಿ ಏರ್ ಶೋ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಮಧ್ಯಾಹ್ನದ ಪ್ರದರ್ಶನದ ಆರಂಭ ಎಷ್ಟೊತ್ತಿದೆ ಎನ್ನುವ ಪ್ರಶ್ನೆ ಎದುರಾಗಿದೆ.
ಆತಂಕಪಡುವ ಅಗತ್ಯವಿಲ್ಲ:
ಏರೋ ಇಂಡಿಯಾ ಶೋ ವೇಳೆ ಅಗ್ನಿ ಅವಘಡ ಸಂಬಂಧ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಜೀವಹಾನಿಯಾಗಿಲ್ಲ. ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿರುವ ಬಗ್ಗೆ ವರದಿಯಾಗಿದ್ದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಅಗ್ನಿಶಾಮಕ ವರಿಷ್ಠರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.








