ನಾಡಿನ ನೆಲ,ಜಲ, ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ: ಸಿಎಂ

0
64

ಬೆಂಗಳೂರು: ಯಾವುದೇ ಸಂದರ್ಭದಲ್ಲೂ ಕನ್ನಡ ಭಾಷೆಗೆ ಮಾರಕವಾಗುವಂತಹ ತೀರ್ಮಾನವನ್ನು ಕೈಗೊಳ್ಳುವುದಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ .ಸಿದ್ದರಾಮಯ್ಯ ನೇತೃತ್ವದ ಹಿರಿಯ ಸಾಹಿತಿಗಳ ನಿಯೋಗ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಸರ್ಕಾರ ನಾಡಿನ ನೆಲ ಜಲ, ಸೇರಿದಂತೆ ಕರ್ನಾಟಕದ ಹಿತವನ್ನು ಕಾಪಾಡಲು ಬದ್ದವಾಗಿದೆ. ಎಂತಹದ್ದೇ ಸಂದರ್ಭದಲ್ಲೂ ಮಾತೃ ಭಾಷೆಗೆ ವ್ಯತಿರಿಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಕನ್ಮಡಿಗರ ಹಿತ ಕಾಪಾಡುವ ಸದುದ್ದೇಶವೇ ನಮ್ಮ ಸರ್ಕಾರದ ಮೊದಲ ಗುರಿ. ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ದರಾಗಿಯೇ
ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಸರ್ಕಾರಿ ಶಾಲೆಗಳ ವಿಲೀನ ಹಾಗು ಆಂಗ್ಲಭಾಷೆ ಕಲಿಕೆ ನಿರ್ಧಾರಕೈಗೊಂಡಿರುವ ಬಗ್ಗೆ ನಿಯೋಗ ಸಿಎಂ ಬಳಿ ಪ್ರಸ್ತಾಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅವರು ಗ್ರಾಮೀಣ ಮಕ್ಕಳ ಅನುಕೂಲಕ್ಕೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬಾಷೆಯನ್ನು ಕಲಿಸಲು ನಿರ್ಧರಿಸಲಾಗಿದ್ದು ಇದರಿಂದ ಕನ್ನಡಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.

ಸರ್ಕಾರಿ ಶಾಲೆಗಳ‌ ನವೀಕರಣ, ಹೊಸ ಕಟ್ಟಡಗಳ ನಿರ್ಮಾಣ, ಮಕ್ಕಳಿಗೆ ಕ್ರೀಡಾಂಗಣ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ವಾತಾವರಣ ನಿರ್ಮಾಣ ಮಾಡಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.

ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಪರಿಸ್ಥಿತಿಯ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಅಧಿವೇಶನ ಮುಗಿದ ನಂತರ ಸರ್ಕಾರಿ ಶಾಲೆಗಳ ಬಗ್ಗೆ ಸಭೆ ನಡೆಸುವುದಾಗಿ ನಿಯೋಗಕ್ಕೆ ಆಶ್ವಾಸನೆ ಕೊಟ್ಟರು.

ನಿಯೋಗದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ .ಸಿದ್ದರಾಮಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಚಂದ್ರಶೇಖರ್ ಪಾಟೀಲ್, ಡಾ.ಮಲ್ಲಿಕಾ ಘಂಟಿ ಸೇರಿದಂತೆ ಮತ್ತಿತರರು ಇದ್ದರು.

- Call for authors -

LEAVE A REPLY

Please enter your comment!
Please enter your name here