ನಾನು ವಿಷ ಕುಡಿದು ಜನರಿಗೆ ಅಮೃತ ನೀಡುತ್ತೇನೆ: ಸಿಎಂ ಕುಮಾರಸ್ವಾಮಿ

0
340

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ನಾನು ವಿಷ ಕಂಠನಾಗಲೇಬೇಕು. ಮುಖ್ಯಮಂತ್ರಿಯಾಗಿ ನಿಮಗೆ ಅಮೃತ ಕೊಟ್ಟು ನಾನು ವಿಷ ಕುಡಿಯುತ್ತೇನೆ‌ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಸಚಿವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಮ್ಮೆಲ್ಲರ ಅಣ್ಣನೋ ತಮ್ಮನೋ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ನೀವೆಲ್ಲಾ ಸಂತೋಷವಾಗಿದ್ದೀರಿ. ಆದರೆ, ನಾನು ಸಂತೋಷವಾಗಿಲ್ಲ ಎಂದು ವೇದಿಕೆ ಮೇಲೆ ಮಾತನಾಡುತ್ತಲೇ ಗದ್ಗಿತರಾದರು. ಬಿಜೆಪಿಯವರು ಕೊಡಗಿನ ಹುಡುಗನ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಾನು ಆ ಹುಡುಗನ ಮನೆಗೇ ಹೋಗುತ್ತೇನೆ. ಅವರ ಸಮಸ್ಯೆ ಕೇಳುತ್ತೇನೆ ಎಂದರು.

ನಾನು ಹೋದ ಕಡೆಯೆಲ್ಲಾ ಜನ ಸೇರುತ್ತಾರೆ. ಪ್ರೀತಿ ತೋರಿಸುತ್ತಾರೆ. ಆದರೆ, ಅದೇ ಪ್ರೀತಿಯನ್ನು ನಮ್ಮ ಪಕ್ಷದ ಮೇಲೆ, ಅಭ್ಯರ್ಥಿಗಳ ಮೇಲೆ ಏಕೆ ತೋರಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ‌. ಹಾಗೆಂದು ಜನರನ್ನು ದೋಷಿಸಲ್ಲ. ನನ್ಮ ತಂದೆ ತಾಯಿ ಮಾಡಿದ ಪೂಜೆಯ ಫಲವಾಗಿ ನನಗೆ ಮತ್ತೆ ಅಧಿಕಾರ ಸಿಕ್ಕಿದೆ. ಮುಖ್ಯಮಂತ್ರಿ ಯಾಗಿ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರು.

ಎರಡೇ ತಿಂಗಳಲ್ಲಿ ನನ್ನ ಮೇಲೆ ಹೀಗೆ ಟೀಕೆ ಮಾಡಿದ್ರೆ ನಾನು ಯಾಕೆ ಈ ಸ್ಥಾನದಲ್ಲಿ ಮುಂದುವರಿಯಬೇಕು ಎನಿಸುತ್ತಿದೆ. ಖುರ್ಚಿ ಉಳಿಸಿಕೊಳ್ಳಲು ನನ್ನ ಸಮಯ ವ್ಯರ್ಥ ಮಾಡಲ್ಲ.ವಅಲ್ಲೆಲ್ಲೋ ಸಿದ್ದರಾಮಯ್ಯ ಏನೋ ಮಾಡಿದ್ರಂತೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಪ್ರಧಾನಿ ಹುದ್ದೆಯನ್ನೇ ಒದ್ದು ಬಂದ ದೇವೇಗೌಡರ ಮಗ ನಾನು. ಮುಖ್ಯಮಂತ್ರಿ ಗಿರಿ ಹೋಗಿ ಬಿಡುತ್ತದೆ ಎಂದು ನಾನು ಇವತ್ತು ಕಣ್ಣೀರು ಹಾಕಿಲ್ಲ. ಜನ ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂದು ಕಣ್ಣೀರು ಹಾಕಿದ್ದೇನೆ. ಮನಸ್ಸು ಮಾಡಿದ್ರೆ ಎರಡೇ ಗಂಟೆಯಲ್ಲಿ ಅಧಿಕಾರದಿಂದ ಕೆಳಗೆ ಇಳಿಯುತ್ತೇನೆ. ದೇವರು ಕೊಟ್ಟ ಈ ಜಾಗದಲ್ಲಿ ದೇವರು ಇಚ್ಚಿಸುವವರೆಗೆ ಇರುತ್ತೇನೆ ಎಂದು ಹೇಳಿದರು.

12 ವರ್ಷದ ಹಿಂದೆ ನಾನು ನನ್ನ ತಂದೆಗೆ ನೋವು ಕೊಟ್ಟು ಮುಖ್ಯಮಂತ್ರಿ ಯಾದಾಗ ಮಾಧ್ಯಮಗಳ ವಿರೋಧ ಇರಲಿಲ್ಲ. ಆದರೆ, ಈಗ ನಾನು ಒಂದು ವರ್ಗದ ಜನರಿಗೆ ನೋವು ಕೊಟ್ಟಿದ್ದೀನಾ. ಮುಖ್ಯಮಂತ್ರಿಯಾಗಿ ಎರಡೇ ತಿಂಗಳಲ್ಲಿ ಒಂದು ವರ್ಗದ ಆಕ್ರೋಶ ಎದುರಿಸಬೇಕಾಗಿದೆ. ನಾನು ಮಾಡಿದ ತಪ್ಪೇನು ಎಂಬುದು ನನ್ನನ್ನು ಪ್ರತಿಕ್ಷಣ ಕೊರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಮ್ಮಿಶ್ರ ಸರ್ಕಾರದಲ್ಲಿದ್ದೇನೆ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಮಾತನ್ನು ನಾನು ಉಳಿಸಿಕೊಳ್ಳಬೇಕು. ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದ 50,000 ರೂ ವರೆಗಿನ 8,000 ಕೋಟಿ ಬಾಕಿಯನ್ನೂ ನಾನೇ ತೀರಿಸಬೇಕಾಗಿದೆ. ನಾನು ಚಾಲೆಂಜ್ ಆಗಿ ಸ್ವೀಕರಿಸಿ ರೈತರ ಒಂದು ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇನೆ. ರೈತರು ಅನ್ನ ಕೊಡ್ತೀರೋ, ವಿಷ ಕೊಡ್ತೀರೋ ನೀವೇ ತೀರ್ಮಾನಿಸಿ. ನಿಮ್ಮ ತೀರ್ಮಾನದಿಂದ ನನಗೆ ನಷ್ಟವಿಲ್ಲ. ನನಗೆ ಇದು ದೇವರು ಕೊಟ್ಟ ಅಧಿಕಾರ. ಆದರೆ ಅಧಿಕಾರದಲ್ಲಿ ಇರುವವರೆಗೆ ಜನರ ಸೇವೆಯಲ್ಲಿರುತ್ತೇನೆ‌. ಇವತ್ತು ಉಡುಪಿಯಲ್ಲಿ ಮೀನುಗಾರರ ಮಹಿಳೆಯರ ಕೈಯಲ್ಲಿ ಇಂಗ್ಲೀಷ್ ಬೋರ್ಡ್ ಕೊಟ್ಟು ಪ್ರತಿಭಟನೆ ಮಾಡಿಸಿದ್ದರ ಹಿಂದೆ ಬಿಜೆಪಿಯ ಹುನ್ನಾರವಿದೆ. ಆದರೂ ನಾನು ಹೆದರಲ್ಲ. ಇನ್ನು ಹತ್ತು ಹದಿನೈದು ದಿನದಲ್ಲಿ ಮೀನುಗಾರರ ಹಳ್ಳಿಗಳಿಗೆ ತೆರಳುತ್ತೇನೆ. ಮಾಧ್ಯಮದ ಮಿತ್ರರು ನನ್ನ ಕಣ್ತರೆಸಿದ್ದಾರೆ. ನಾನು ಆ ಹೆಣ್ಣುಮಕ್ಕಳನ್ನೇ ಕೇಳುತ್ತೇನೆ. ನನ್ನ ಏಕೆ ದ್ವೇಷಿಸುತ್ತೀರಿ ಎಂದು ಕೇಳುತ್ತೇನೆ. ಬಿಜೆಪಿ ನಾಯಕರ ಕುತಂತ್ರದ ರಾಜಕಾರಣಕ್ಕೆ ಬಲಿಯಾಗಬೇಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ಮೂರನೇ ಒಂದು ಭಾಗದ ನಿಗಮ ಮಂಡಳಿ ಕೊಟ್ಟಿದ್ದಾರೆ. 20-30 ನಿಗಮ ಮಂಡಳಿಗಳಲ್ಲಿ ಎಷ್ಟು ಜನರಿಗೆ ಅಂತಾ ಕೊಡಲಿ. ನಮ್ಮ ಬಳಿಗೆ ಬಂದು ಅಂಗಲಾಚಬೇಡಿ. ನಮ್ಮ ಪಕ್ಷಕ್ಕೆ ಪೂರ್ಣ ಬಹುಮತದ ಬಲ ಬಂದಾಗ ನಾನೇ ನಿಮ್ಮನ್ನು ಗುರ್ತಿಸುತ್ತೇನೆ. ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಪಕ್ಷದ ಕಚೇರಿಗೆ ಬರುತ್ತೇನೆ.
ನಮ್ಮ ನಾಡಿನ ಜನ ಖುಷಿಯಿಂದ ನನ್ನ ಕಾರ್ಯಕ್ರಮಗಳನ್ನು‌ ಒಪ್ಪಿ ಬೆಂಬಲಿಸಿದ ದಿನ ನಾನು ಅಭಿನಂದನೆ ಸ್ವೀಕರಿಸುತ್ತೇನೆ ಅಲ್ಲಿಯವರಗೆ ಅಭಿನಂದನೆ ಸ್ವೀಕರಿಸಲ್ಲ ಎಂದು ಅಭಿನಂದನೆ ನಿರಾಕರಿಸಿದರು.

- Call for authors -

LEAVE A REPLY

Please enter your comment!
Please enter your name here