ಬೆಂಗಳೂರು: ಸದಾ ಹಸನ್ಮುಖಿಯಾಗಿ ನಗುನಗುತ್ತಾ ಮಾತನಾಡುವ ಕೇಂದ್ರ ಸಚಿವ ಡಿ.ವಿ ಸದಾನದಗೌಡ ಇಂದು ಫುಲ್ ಗರಂ ಆಗುದ್ರು.ನಾನು ಎಷ್ಟೇ ನಗು ನಗುತ್ತಾ ಇರಬಹುದು, ಆದರೆ ಅಷ್ಟೇ ಕಠೋರವಾಗಿದ್ದಾರೆ ಅಂತಾ ತೋರಿಸಿ ಕೊಡುತ್ತೇನೆ ಎಂದು ಜೆಡಿಎಸ್ ಶಾಸಕ ಮಂಜುನಾಥ್ ಗೆ ಎಚ್ಚರಿಕೆ ನೀಡಿದ್ದಾರೆ.
ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರ ವಾರ್ಡ್ನಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಅಮೃತ್ ಯೋಜನೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ನನ್ನ ಮನಸ್ಸಿಗೆ ಇತ್ತೀಚಿನ ದಿನಗಳಲ್ಲಿ ಬಹಳ ನೋವಾದ ಸಂಗತಿಗಳಿವೆ. ನಾನು ಒಂದು ಡೈರಿ ಇಟ್ಟುಕೊಂಡಿದ್ದೇನೆ,ಯಾವ್ಯಾವ ಅಧಿಕಾರಿಗಳು ಏನೇನು ಮಾಡಿದ್ದಾರೆ ಅಂತಾ ಅವರ ಹೆಸರು ನೋಟ್ ಮಾಡಿಕೊಂಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ, ದಿನ ಬಂದಾಗ ಅದನ್ನು ಬಿಚ್ಚಿಡುತ್ತೇವೆ. ನಾವೇನು ಸುಮ್ಮನೆ ಬಿಡ್ತೀವಿ ಅಂತಾ ಅಂದುಕೊಳ್ಳೋದು ಬೇಡ. ಕೇಂದ್ರ ಸರ್ಕಾರದ ಅನುದಾನವನ್ನು ದಾಸರಹಳ್ಳಿಯಲ್ಲಿ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಇದು ಒಂದು ರೀತಿಯಲ್ಲಿ ಇಗೋ ಪ್ರಾಬ್ಲಂ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯರ ಅನುದಾನದ ಬಗ್ಗೆ ಬೋರ್ಡ್ ಹಾಕಿದರೆ ಕಿತ್ತು ಹಾಕುತ್ತಾರೆ. ಈ ರೀತಿ ಸಣ್ಣ ರಾಜಕಾರಣ ಮಾಡುವವರು ಸಮಾಜ ಸುಧಾರಣೆ ಮಾಡುವವರಲ್ಲ. ಅವರು ಯಾವುದೋ ಒಂದು ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿರಬಹುದು. ಅಧಿಕಾರಕ್ಕೆ ಬಂದ ಕೂಡಲೇ ಇಡೀ ಊರನ್ನು ಅವರಿಗೇ ಬರೆದುಕೊಟ್ಟಿಲ್ಲ. ನಮ್ಮ ಪಕ್ಷಕ್ಕೂ ಇಲ್ಲಿ 75 ಸಾವಿರ ವೋಟ್ ಸಿಕ್ಕಿದೆ, ನಮ್ಮ ಕಾರ್ಯಕರ್ತರನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಜೆಡಿಎಸ್ ಶಾಸಕ ಮಂಜುನಾಥ್ ವಿರುದ್ಧ ಹರಿಹಾಯ್ದರು.
ನಾಲ್ಕು ತಿಂಗಳಲ್ಲಿ ದಾಸರಹಳ್ಳಿ ಅಭಿವೃದ್ಧಿ ಎಷ್ಟು ಕುಂಠಿತ ಆಗಿದೆ ಅಂತ ಆ ಶಾಸಕರನ್ನೇ ಕೇಳಿ, ನಾನು ಅವರ ಹೆಸರು ಕೂಡಾ ಹೇಳಲ್ಲ. ಸದಾನಂದ ಗೌಡ ಎಷ್ಟೇ ನಗು ನಗುತ್ತಾ ಇರಬಹುದು, ಆದರೆ ಸದಾನಂದ ಗೌಡ ಅಷ್ಟೇ ಕಠೋರವಾಗಿದ್ದಾರೆ ಅಂತಾ ತೋರಿಸಿ ಕೊಡುತ್ತೇನೆ. ಒಬ್ಬ ಕೇಂದ್ರ ಸಚಿವ ಎಲ್ಲರಿಗೂ ಫೋನ್ ಮಾಡಿ ಕಾರ್ಯಕ್ರಮಕ್ಕೆ ಕರೆಯಲು ಆಗಲ್ಲ, ಅದೆಲ್ಲವೂ ಅಧಿಕಾರಿಗಳ ಕೆಲಸ ಎಂದರು.









