ಬೆಂಗಳೂರು: ಸರ್ಕಾರ ಪಥನವಾದರೆ ರಾಜ್ಯಪಾಲರ ಆಡಳಿತ ಬರುತ್ತದೆಯೇ ಹೊರತು, ಬಿಎಸ್.ಯಡಿಯೂರಪ್ಪ ಸಿಎಂ ಆಗಲ್ಲ ಎಂದು ಬಿಜೆಪಿ ಪ್ರಮುಖ ಮುಖಂಡರೇ ನನ್ನ ಬಳಿ ಹೇಳಿದ್ದಾರೆ. ಸಮಯ ಬಂದಾಗ ಅವರ ಹೆಸರನ್ನು ಬಹಿರಂಗ ಪಡಿಸುವೆ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ಸರ್ಕಾರ ಪಥನವಾದರೆ ರಾಜ್ಯಪಾಲರ ಆಡಳಿತ ಬರುತ್ತದೆ.
ಬಳಿಕ, ಬೇರೆ ರಾಜ್ಯದ ಚುನಾವಣೆ ಜೊತೆ ನಮ್ಮ ರಾಜ್ಯದ ಚುನಾವಣೆಯೂ ನಡೆಯಲಿದೆ ಎಂದು ಬಿಜೆಪಿಯ ಟಾಪ್ ಲೀಡರ್ ಗಳೇ ನನಗೆ ಹೇಳಿದ್ದಾರೆ. ಸಮಯ ಬಂದಾಗ ಅವರ ಹೆಸರು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಹೇಳುವ ಹಾಗೆ ಸರಕಾರ ಬಿದ್ದು ಹೋಗುವುದಿಲ್ಲ. ಈ ಸರಕಾರ ಪೂರ್ಣಾವಧಿ ಪೂರೈಸಲಿದೆ, ಸರಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ, ದೇವರ ದಯೆಯಿಂದ ಸರ್ಕಾರ ರಚಿಸಿದ್ದೇವೆ. ಎಷ್ಟು ವರ್ಷ ಇರುತ್ತೋ ಅಷ್ಟು ವರ್ಷ ಕೆಲಸ ಮಾಡುತ್ತೇವೆ. 10 ವರ್ಷ ವಿರೋಧ ಪಕ್ಷದಲ್ಲಿ ಇದ್ದೆವು. ಪ್ರಧಾನಿ ಸ್ಥಾನ ಬಿಟ್ಟು ಬಂದವರು ನಮ್ಮ ತಂದೆ, ಇದೆಲ್ಲದಕ್ಕೂ ನಾವು ಹೆದರುವುದಿಲ್ಲ. ಸರ್ಕಾರ ಬಿದ್ದು ಹೋಗುತ್ತದೆ ಎಂದರೆ ಅದನ್ನು ಹಿಡಿದುಕೊಳ್ಳಲು ಆಗುತ್ತಾ, ಬಿಜೆಪಿಯವರು ಇಗಲೆ ಬರೆದಿಟ್ಟುಕೊಳ್ಳಲಿ, ಸರ್ಕಾರಕ್ಕೆ ಎನೂ ಆಗುವುದಿಲ್ಲ. ಬಿಜೆಪಿ ಕೈಗೆ ಅಧಿಕಾರವೂ ಸಿಗುವುದಿಲ್ಲ, ಈ ಬಗ್ಗೆ ಬೇಕಾದ್ರೆ ನಾನು ಭವಿಷ್ಯ ಹೇಳುತ್ತೆನೆ ಎಂದರು.









