ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ರದ್ದು ಮಾಡಿದ್ದು ಈ ಮೂಲಕ ಬಿಎಸ್ವೈ ಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ರಾಚೇನಹಳ್ಳಿ ಡಿನೋಟಿಫಿಕೇಷನ್ ಸೇರಿ 15 ಡಿನೋಟಿಫಿಕೇಷನ್ ಗಳನ್ನು ಪ್ರಶ್ನಿಸಿ ಸಿರಾಜಿನ್ ಭಾಷಾ ಹಾಗು ಬಾಲಕೃಷ್ಣ ಸಲ್ಲಿಸಿದ್ದ ದೂರುಗಳನ್ನು ಸಂಸದರು, ಶಾಸಕರ ವಿರುದ್ದದ ವಿಶೇಷ ನ್ಯಾಯಾಲಯ ರದ್ದು ಪಡಿಸಿದೆ.
ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಪ್ರಕರಣ ರದ್ದುಮಾಡಿ ಆದೇಶ ಮಾಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್
ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಸಿಬಿಐ ತನಿಖೆಗೆ ಮನವಿ ಮಾಡಿದ್ದರು. ಸಿಬಿಐ ತನಿಖೆ ನಂತರ ವಿಚಾರಣೆ ನಡೆಸಿದ ಸುಪ್ರೀಂ ಪ್ರಕರಣಗಳನ್ನು ರದ್ದು ಮಾಡಿತ್ತು.
ಆದಾಗ್ಯೂ, ಸಿರಾಜಿನ್ ಪಾಷಾ ಸಲ್ಲಿಸಿದ್ದ ದೂರು ಸೆಷನ್ಸ್ ಕೋರ್ಟ್ ನಲ್ಲಿ ಬಾಕಿ ಉಳಿದಿತ್ತು. ಇಂದು ವಿಚಾರಣೆ ನಡೆಸಿದ ಸಂಸದರು, ಶಾಸಕರ ವಿರುದ್ದ ವಿಶೇಷ ನ್ಯಾಯಾಲಯ ಪ್ರಕರಣವನ್ನು ರದ್ದು ಪಡಿಸಿ ಆದೇಶ ನೀಡಿದೆ. ಈ ಮೂಲಕ ಸಿರಾಜಿನ್ ಭಾಷಾ 2011ರಲ್ಲಿ ಸಲ್ಲಿಸಿದ್ದ ಎಲ್ಲಾ ಪ್ರಕರಣಗಳಿಂದ ಬಿಎಸ್ವೈ ಮುಕ್ತರಾಗಿದ್ದಾರೆ.









