ನಾನು ಮಾನವ ಧರ್ಮದ ಸೇವಕ : ಹೆಚ್.ಡಿ.ಕುಮಾರಸ್ವಾಮಿ

0
4

 

ಮೈಸೂರು,ಫೆ.19: ಪ್ರತಿಯೊಬ್ಬರು ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತೇವೆ ಎಂದು ಯಾರಿಗೂ ತಿಳಿದಿಲ್ಲ. ಬದುಕಿರುವ ಸಮಯದಲ್ಲಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬೇಕು. ಈ ಧರ್ಮವನ್ನು ಪಾಲಿಸುತ್ತಿರುವ ನಾನು ಮಾನವ ಧರ್ಮದ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ತಿರುಮಕೂಡಲು ತಿ.ನರಸೀಪುರ ಶ್ರೀಕ್ಷೇತ್ರ ಕಾವೇರಿ,ಕಪಿಲಾ ಹಾಗೂ ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11 ನೇಯ ಕುಂಭಮೇಳದ ಅಂತಿಮ ದಿನವಾದ ಮಂಗಳವಾರ ನದಿಯ ಮಧ್ಯ ಭಾಗದ ಧಾರ್ಮಿಕ ಸಭಾ ಮಂಟಪದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಭಕ್ತರು ಪವಿತ್ರ ಪುಣ್ಯ ಸ್ನಾನ ಮಾಡಿ ತಮ್ಮ ಮನಸ್ಸನು ಶುದ್ಧ ಮಾಡಿಕೊಳ್ಳಬೇಕು. ಮೂರು ವರ್ಷಕೊಮ್ಮೆ ನಡೆಯುವ ಕುಂಭಮೇಳ ಯಶಸ್ವಿ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದರು.

ದಕ್ಷಿಣ ಭಾರತದಲ್ಲಿರುವವರಿಗೆ ಪ್ರಯಾಗದಲ್ಲಿ ನಡೆಯುವ ಕುಂಭಮೇಳಕ್ಕೆ ಹೋಗಲು ಕಷ್ಟವಾಗಬಹುದು. ಈ ಕುಂಭಮೇಳ ಪ್ರಯಾಗದಲ್ಲಿ ನಡೆಯುವ ಕುಂಭಮೇಳದಂತೆ ನಡೆಯಬೇಕು ಹೆಚ್ಚು ಜನರು ಭಾಗವಹಿಸುವಂತಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 70-80 ಪ್ರತಿಶತ ಭಾಗದಲ್ಲಿ ಮಳೆಯಾಧರಿತ ಕೃಷಿ ನಡೆಯುತ್ತದೆ. ಈ ಬಾರಿ ರೈತ ಸಮುದಾಯಕ್ಕೆ ಸರಿಯಾದ ಮಳೆಯಾಗಿ ನೆಮ್ಮದಿಯ ಜೀವನ ನಡೆಸಲು ಪರಮಾತ್ಮ ಮತ್ತು ಕಾವೇರಿ ಮಾತೆ ಕೃಪೆ ನೀಡಬೇಕೆಂದು ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಕುವೆಂಪು ಅವರ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲನ್ನು ಹೇಳಿ ನಮ್ಮ ನಾಡು ಎಲ್ಲರನ್ನು ಒಂದೇ ರೀತಿಯಲ್ಲಿ ಸರ್ವ ಸಮಾನವಾಗಿ ಕಾಣುವ ಶಾಂತಿಯ ತೋಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಬಸ್ ದುರಂತದಲ್ಲಿ ಇತ್ತೀಚೆಗೆ ಸಾವಿಗೀಡಾದ ಮಕ್ಕಳ ಮೃತದೇಹ ನೋಡಿ ಮನಸ್ಸಿಗೆ ಬಹಳ ನೋವಾಯಿತು. ಬಾಳಿ ಬದುಕ ಬೇಕಾಗಿದ್ದ ಮಕ್ಕಳನ್ನು ದೇವರು ಏಕೆ ಹೀಗೆ ಮಾಡುತ್ತಾನೆ ಎಂಬುದು ಪ್ರಶ್ನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಸಚಿವ ಜಿ.ಮಾದೇಗೌಡ , ಶಾಸಕರಾದ ಅಶ್ವಿನ್ ಕುಮಾರ್, ಕೆ.ಮಹದೇವ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಶಿವಾನಂದಪುರಿ ಸ್ವಾಮಿ, ಆದಿಚುಂಚನಗಿರಿ ಮೈಸೂರು ಶಾಖಾ ಮಾಠದ ಶ್ರೀ ಸೋಮೇಶ್ವರನಾಥ ಸ್ವಾಮಿ ಹಾಗೂ ಇನ್ನಿತರ ಸ್ವಾಮೀಜಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

- Call for authors -

LEAVE A REPLY

Please enter your comment!
Please enter your name here