ಬೆಂಗಳೂರು: ಬೆಳಗಾವಿ, ಮಂಗಳೂರಿನಲ್ಲಿ ಚಿಪ್ ಉತ್ಪಾದನಾ ಘಟಕ ಸ್ಥಾಪಿಸುವುದಾದರೆ ಸರ್ಕಾರದಿಂದ ಎಲ್ಲ ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ಇಂಟೆಲ್ ಸಂಸ್ಥೆಗೆ ಭರವಸೆ ನೀಡಿದ್ದಾರೆ.
ಇಂಟೆಲ್ ಭಾರತದ ಮುಖ್ಯಸ್ಥೆ ನಿವೃತ್ತಿ ರಾಯ್ ಹಾಗೂ ಸಂಸ್ಥೆಯ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಡಾ. ಅಶ್ವತ್ಥನಾರಾಯಣ ಮಾತನಾಡಿದರು.
ವೀಡಿಯೋ ಕಾನ್ಫರೆನ್ಸ್‌ಗೂ ಮೊದಲು ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಇಂಟೆಲ್ ಇಂಡಿಯಾ ಬಿಸಿನೆಸ್ ಆಪರೇಷನ್‌ನ ನಿರ್ದೇಶಕ ಮಾನಸ್ ದಾಸ್ ಅವರು ಒಂದು ಕೋಟಿ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.
“ಮಂಗಳೂರಿನಲ್ಲೇ ಬಂದರು ಇದೆ, ಬೆಳಗಾವಿಗೆ ಗೋವಾ ಬಂದರು ಸಮೀಪದಲ್ಲಿದೆ. ಈ ಎರಡೂ ಕಡೆಗಳಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶವೂ ಇದೆ. ಇಂಟೆಲ್ ಸಂಸ್ಥೆ ಈ ಅವಕಾಶವನ್ನು ಬಳಸಿಕೊಳ್ಳುವುದಾದರೆ, ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಲಾಯಿತು,”ಎಂದು ಅವರು ಹೇಳಿದರು.
“ಕೊವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂಟೆಲ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿರುವುದು ಸಂತಸದ ವಿಷಯ. ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.
ಇಂಟೆಲ್ ಅಧಿಕಾರಿಗಳಾದ ಅನಂತನಾರಾಯಣ್, ಜಿತೇಂದ್ರ ಚಡ್ಡ, ಮಾನಸ್ ದಾಸ್, ಆನಂದ್ ದೇಶಪಾಂಡೆ, ಅಂಜಲಿ ರಾವ್, ವರ್ಟಿಕಲ್ ಸಲ್ಯೂಶನ್ ಗ್ರೂಪ್‌ನ ಉಪಾಧ್ಯಕ್ಷ ಕಿಶೋರ್ ರಾಮಿಶೆಟ್ಟಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದರು.









