ಬೆಂಗಳೂರು: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಮನವಿಗಳು ಬಂದಿವೆ. ಆಗಸ್ಟ್ 1 ರಿಂದ ಹಜ್ ಯಾತ್ರೆ ಶುರುವಾಗಲಿದ್ದು, ಒಂದು ತಿಂಗಳ ಬಳಿಕ ಹೆಸರು ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಹಜ್ ಭವನಕ್ಕೆ ಟಿಪ್ಪು ಹೆಸರಿಡುವಂತೆ ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿದ್ದಾರೆ. ಕಳೆದ ವರ್ಷ ಹಜ್ ಯಾತ್ರೆಯ ವೇಳೆಯಲ್ಲೇ ಈ ಬಗ್ಗೆ ಚರ್ಚಿಸಲಾಗಿತ್ತು. ”ಟಿಪ್ಪು ಸುಲ್ತಾನ್ ಹಜ್ ಘರ್” ಎಂಬ ಹೆಸರಿಡಲು ತಿರ್ಮಾನಿಸಲಾಗಿತ್ತು ಎಂದರು.
ಟಿಪ್ಪು ಸುಲ್ತಾನ್ ಜಯಂತಿ ಬೇರೆ, ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದೇ ಬೇರೆ. ಹಜ್ ಭವನ ಸ್ವತಂತ್ರ ಸಂಸ್ಥೆಯಾಗಿದ್ದು, ಟಿಪ್ಪು ಸುಲ್ತಾನ್ ಹೆಸರಿಟ್ಟರೆ ತಪ್ಪಿಲ್ಲ. ಬಿಜೆಪಿಯವರು ವಿರೋಧಿಸುವ ಸಾಧ್ಯತೆ ಇಲ್ಲ ಎಂದುಕೊಳ್ಳುತ್ತೇನೆ ಎಂದು ಹೇಳಿದರು.









