ಬೆಂಗಳೂರು: ಪತ್ನಿಗೆ ವತಿಯಿಂದ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದರೆ, ಹೆಂಡತಿಯ ಆಭರಣ ಕಿರುಕುಳ ತಾಳಲಾರದ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಎನ್ನುವ ಸುದ್ಧಿಗಳನ್ನು ನಾವು ಆಗಾಗ ಓದುತ್ತೇವೆ. ಆದರೆ, ಪತ್ನಿ ವಿರುದ್ದ ಪತಿ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.
ವೃತ್ತಿಯಲ್ಲಿ ಇಬ್ಬರೂ ಕೂಡ ಸಾಫ್ಟ್ ವೇರ್ ಇಂಜಿನಿಯರ್ಗಳಾಗಿರುವ ಆಂದ್ರ ಮೂಲದ ಧೀರಜ್ ರೆಡ್ಡಿ ಚಿಂತಾಲ ಮತ್ತು ಜಯಶೃತಿ ಇಬ್ಬರು 2014ರಲ್ಲಿ ಮದುವೆಯಾಗಿದ್ದರು. ಐಶಾರಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪತ್ನಿ ಜಯಶೃತಿ ಪೀಡಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷದ 30 ಲಕ್ಷ ಮೌಲ್ಯದ ಡೈಮಂಡ್ ಡಾಬು ಕೊಡಿಸು ಎಂದು ಪತ್ನಿ ಪೀಡಿಸುತ್ತಿದ್ದಲ್ಲದೆ, ಡಾಬು ಕೊಡಿಸದೇ ಇದ್ದರೆ ಸೂಸೈಡ್ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು. ಬಳಿಕ ತನ್ನ ತಂಗಿ ಮದುವೆಗೆ 40 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಪತ್ನಿ ವರ್ತನೆ ಬಗ್ಗೆ ಆಕೆಯ ಪೋಷಕರ ಬಳಿ ಹೇಳಿದರೆ ಅವರೂ ಕೂಡ ಮಗಳು ಹೇಳಿದಂತೆ ಕೇಳ ಬೇಕೆಂದು ಧೀರಜ್ಗೆ ತಾಕೀತು ಮಾಡಿದ್ದಾರೆ.
ಅಲ್ಲದೆ, ಆಸ್ತಿಯನ್ನೆಲ್ಲ ಜಯಶೃತಿ ಹೆಸರಿಗೆ ಬರೆದಿಡುವಂತೆ ಜಯಶೃತಿ ಪೋಷಕರು ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಜಯಶೃತಿ, ಪೋಷಕರು ಹಾಗೂ ಮೂವರು ಸ್ನೇಹಿತರ ಜೊತೆ ಬಂದು 2 ಕೋಟಿ ಹಣ ನೀಡುವಂತೆ ಧೀರಜ್ ಗೆ ಕಿರುಕುಳ ನೀಡಿದ್ದಾರೆ.
ಈ ಎಲ್ಲ ಘಟನೆಗಳಿಂದ ನೊಂದ ಪತಿ, ಪತ್ನಿ ಜಯಶೃತಿ ಹಾಗೂ ಪೋಷಕರ ವಿರುದ್ದ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.









