ಬೆಂಗಳೂರು: ಜ್ಯಾತ್ಯಾತೀತವಾಗಿ, ಪಕ್ಷಾತೀತವಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇದೇ 27ರಂದು ಅರಮನೆ ಮೈದಾನದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿರುವ ಕೆಂಪೇಗೌಡರ ನಾಲ್ಕು ಗಡಿ ಗೋಪುರಗಳಿಂದ ಬರುವ ಮೆರವಣಿಗೆಯು 11 ಗಂಟೆಯೊಳಗೆ ಸ್ವತಂತ್ರ ಉದ್ಯಾನವನದಲ್ಲಿ ಸಮಾವೇಶಗೊಳ್ಳಲಿದ್ದು, ಕಲಾತಂಡಗಳು ಸಾಂಸ್ಕೃತಿಕ ವೈಭವದಿಂದ ಕೂಡಿದ ಮೆರವಣಿಗೆ ಮೂಲಕ ಅರಮನೆ ಮೈದಾನದಲ್ಲಿ ಆಯೋಜಿಸಿರುವ ವೇದಿಕೆಗೆ ಬರಲಾಗುತ್ತದೆ ಎಂದು ಹೇಳಿದರು.
ಎಲ್ಲ ಸಮುದಾಯದ ಕಾರ್ಮಿಕರು, ವರ್ತಕರು, ಕೈಗಾರಿಕಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರಿಗೆ, ಪಾಲಿಕೆ ಸದಸ್ಯರಿಗೆ ಆಹ್ವಾನ ನೀಡಲಾಗುವುದು. ನಾಳೆಯಿಂದಲೇ ಕೆಂಪೇಗೌಡ ಜಯಂತಿ ಬಗ್ಗೆ ಜಾಹೀರಾತು ನೀಡಬೇಕು. ಕಳೆದ ಬಾರಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗಿತ್ತು. ಹೆಚ್ಚು ಜನರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಈ ಬಾರಿ ಅರಮನೆ ಮೈದಾನದಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.









