ಬೆಂಗಳೂರು: ನಮ್ಮ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ದೆಹಲಿ ಸರ್ಕಾರದ ಸಚಿವ ಸಂಪುಟವು ಸಮ್ಮತಿ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ ಜಯಮಾಲ ಅವರು ತಿಳಿಸಿದ್ದಾರೆ.
ಈ ಬಗ್ಗೆ ನಾನು ಕರ್ನಾಟಕ ಸರ್ಕಾರದ ಮತ್ತು ಸಮಗ್ರ ಕನ್ನಡಿಗರ ಪರವಾಗಿ ದೆಹಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬಯಸುತ್ತೇನೆ.ಈ ಪ್ರತಿಷ್ಠಿತ ಅಕಾಡೆಮಿಯು ದೆಹಲಿಯಲ್ಲಿ ಸ್ಥಾಪನೆಯಾಗಿ ಸಮರ್ಪಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಎಲ್ಲಾ ಸಹಾಯ, ಸಹಕಾರ, ನೆರವುಗಳನ್ನು ನೀಡಲು ನಮ್ಮ ಇಲಾಖೆಯು ಸದಾ ಸಿದ್ಧ ಎಂದು ನಾನು ಪುನರುಚ್ಛರಿಸುತ್ತೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ನಾನು ಈಗಾಗಲೇ ಸೂಚನೆ ನೀಡಿದ್ದೇನೆ ಎಂದ್ರು.









