ಫೋಟೋ ಕೃಪೆ-ಟ್ವಿಟ್ಟರ್
ನವದೆಹಲಿ:ದೆಹಲಿಯಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ಆಡಳಿತ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು,ಪೂರ್ಣ ರಾಜ್ಯದ ಸ್ಥಾನಮಾನ ಕೇಳಿದ್ದ ಕೇಜ್ರಿವಾಲ್ ಸರ್ಕಾರಕ್ಕೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ.
ದೆಹಲಿಗೆ ಸ್ವತಂತ್ರ ರಾಜ್ಯ ಸ್ಥಾನಮಾನ ಹಾಗು ಎಲ್ಜಿ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಆಪ್ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ,
ಲೆಫ್ಟಿನೆಂಟ್ ಗೌರ್ನರ್ಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲ ಎಂದು ಮಹತ್ವದ ಆದೇಶ ನೀಡಿತು.ಸರ್ಕಾರದ ಸಂಪುಟದ ನಿರ್ಣಯಗಳಿಗೆ ಎಲ್ಜಿ ಮನ್ನಣೆಯನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.
ಆದರೆ ದೆಹಲಿಯನ್ನು ಸ್ವತಂತ್ರ ರಾಜ್ಯ ಎಂದು ಘೋಷಿಸಲು ಸಾಧ್ಯವಿಲ್ಲ,ಕೇಂದ್ರ-ರಾಜ್ಯ ಸರ್ಕಾರಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು,ಪಬ್ಲಿಕ್ ಆರ್ಡರ್, ಪೊಲೀಸ್ ಮತ್ತು ಭೂಮಿ ವಿಚಾರದಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲ, ಸಂಘರ್ಷ ಇಲ್ಲದೇ ಸಂವಿಧಾನದ ಆಶಯದಂತೆ ಆಡಳಿತ ನಡೆಸಲು ಪೀಠ ಸೂಚನೆ ನೀಡಿತು.
ಇತ್ತೀಚೆಗೆ ಐಎಎಸ್ ಅಧಿಕಾರಿಗಳ ವಿಚಾರಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ಮತ್ತು ಸಿಎಂ ಕೇಜ್ರಿವಾಲ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಗೌರ್ನರ್ ಕಚೇರಿ ಮುಂದೆ ಕೇಜ್ರಿವಾಲ್ ಪ್ರತಿಭಟನಾ ಧರಣಿ ನಡೆಸಿದ್ದರು. ಅಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಈ ವಿಚಾರ ಮೋದಿ ವಿರುದ್ಧದ ಸಮರಕ್ಕೆ ಬಳಕೆಯಾಗಿತ್ತು.









