ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಪಟ್ಟಿ ಬದಲಾವಣೆ ಮಾಡಲಾಗಿದೆ: ರವಿಕುಮಾರ್ ಆರೋಪ

0
71

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಬದಲಾವಣೆ ಮಾಡಿರುವುದನ್ನು ವಾಪಸ್ ಪಡೆಯದೇ ಇದ್ದಲ್ಲಿ ರಾಜ್ಯ ಸರ್ಕಾದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿ ಕುಮಾರ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಕ್ಕೂ ಮೊದಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ನೀಡಿದ್ದ ಸೂಚನೆ ಮೇರೆಗೆ ಫಲಿತಾಂಶದ ದಿನ ಮಧ್ಯಾಹ್ನ ಮೀಸಲಾತಿ ಪಟ್ಟಿಯನ್ನು‌ ಸರ್ಕಾರ ಪ್ರಕಟಿಸಿತ್ತು. ಆದರೆ, ಇದೀಗ ಆ ಪಟ್ಟಿಯನ್ನು ಬದಲಾಯಿಸಿರುವುದರಿಂದ ಬಹಳ ಕಡೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇಪ್ಪತ್ತಕ್ಕು ಹೆಚ್ಚು ಕಡೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿ ರಾಜಕೀಯ ವೈಷಮ್ಯ ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದರು.

12 ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ, ಎರಡು ಉಪಾಧ್ಯಕ್ಷ ಸ್ಥಾನ, 16 ಪುರಸಭೆ ಅಧ್ಯಕ್ಷ ಸ್ಥಾನ 5 ಉಪಾಧ್ಯಕ್ಷ ಸ್ಥಾನ ಹಾಗೂ 4 ಪಟ್ಟಣ ಪಂಚಾಯತ್ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಒಟ್ಟಾರೆ 40 ಸ್ಥಾನ ಬದಲಾವಣೆ ಮಾಡಿದ್ದಾರೆ. ಇಲ್ಲಿ ಬಹುತೇಕ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ರೀತಿ ಪಟ್ಟಿ ಬದಲು ಮಾಡಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಪಟ್ಟಿಯನ್ನು ಹಿಂದಿನಂತೆ ಬದಲಿಸಬೇಕು, ಸಿಎಂ ಮಧ್ಯ ಪ್ರವೇಶಿಸಿ ಹಿಂದಿನಂತೆ ಪಟ್ಟಿಯನ್ನು ಪುನಃ ಪ್ರಕಟಿಸಬೇಕು ಇಲ್ಲವೇ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದೆ. ಸರ್ಕಾರದ ಈ ನಿಲುವು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

- Call for authors -

LEAVE A REPLY

Please enter your comment!
Please enter your name here