ಬೆಂಗಳೂರು: ಮೈತ್ರಿ ಸರ್ಕಾರ ಪತನ ಪ್ರಯತ್ನದ ಕಿಂಗ್ ಪಿನ್ ಉದಯ್ ಗೌಡ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಲುಕ್ -ಔಟ್ ನೋಟೀಸ್ ಹೊರಡಿಸಿದ್ದಾರೆ.
ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಮುಂದಾಗಿದ್ದ ಕಿಂಗ್-ಪಿನ್ ಉದಯ್ ಗೌಡ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹವಾಲಾ ದಂಧೆ ಆರೋಪದಡಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಉದಯ್ ಗೌಡ ನಾಪತ್ತೆಯಾಗಿದ್ದು, ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು.
ಅಲ್ಲದೆ, ತನಿಖೆ ವೇಳೆ ಉದಯ್ ಗೌಡ ಭಾರತದಲ್ಲಿಲ್ಲ ಎಂಬುದು ದೃಡಪಟ್ಟಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಪತ್ತೆಗೆ ಇಮಿಗ್ರೇಷನ್ ಅಧಿಕಾರಿಗಳ ಮೂಲಕ ಕಬ್ಬನ್ ಪಾರ್ಕ್ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ. ಏರ್ಪೋರ್ಟ್ ಹಾಗು ಬಂದರುಗಳಲ್ಲಿ ಆರೋಪಿ ಪತ್ತೆಯಾದರೆ ಬಂಧಿಸುವ ಸಂಬಂಧ ಲುಕ್‌ಔಟ್ ನೋಟೀಸ್ ಜಾರಿಗೊಳಿಸಲಾಗುತ್ತದೆ.
ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಉದಯ್ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಳೆದ ಸೆಪ್ಟೆಂಬರ್ 25 ರಂದು ಉದಯ್ ಗೌಡ ಜಾಮೀನು ಅರ್ಜಿ ವಜಾಗೊಂಡಿತ್ತು. ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆ ಆರೋಪಿ ಉದಯ್ ಗೌಡ ಪತ್ತೆಗೆ ಕಬ್ಬನ್ ಪಾರ್ಕ್ ಪೊಲೀಸರು ಬಲೆಬೀಸಿದ್ದಾರೆ.









