ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಪ್ರಕರಣ ಸಂಬಂಧ ನ್ಯಾಯಾಧಿಕರಣ ಇಂದು ತೀರ್ಪು ಪ್ರಕಟಿಸಿದ್ದು ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.ರಾಜ್ಯದ ನಿರೀಕ್ಷೆಯ ಅರ್ಧದಷ್ಟು ಪಾಲು ಪಡೆಯುವಲ್ಲಿಯೂ ರಾಜ್ಯ ವಿಫಲವಾಗಿದೆ.
ಗೋವಾ ಹಾಗು ಕರ್ನಾಟಕ ರಾಜ್ಯದ ನಡುವಿನ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ನದಿ ಪಾತ್ರದ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ಇಂದು ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿದೆ. ನ್ಯಾಯಮಂಡಳಿ ಐ ತೀರ್ಪಿನಲ್ಲಿ ಕರ್ನಾಟಕಕ್ಕೆ ಒಟ್ಟು 13. 7 ಟಿಎಂಸಿ ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ.
ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ಮಹದಾಯಿ ಜಲನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಳಕೆ ಮಾಡಲು 1.50 ಟಿಎಂಸಿ ನೀರು ಹಾಗೂ ವಿದ್ಯುಚ್ಛಕ್ತಿಗೆ ಉತ್ಪಾದನೆಗೆ 8.02 ಟಿಎಂಸಿ ಸೇರಿದಂತೆ ರಾಜ್ಯಕ್ಕೆ ಒಟ್ಟು 13.07 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.
ವಾರ್ಷಿಕ 200 ಟಿಎಂಸಿ ಅಡಿ ನೀರಿನ ಹರಿವು ಇರುವ ಮಹದಾಯಿ ನದಿಯಲ್ಲಿ ಗೋವಾ ಕೇವಲ 9 ಟಿಎಂಸಿ ಬಳಕೆ ಮಾಡಿಕೊಳ್ಳುತ್ತಿದೆ.ಉಳಿದ ನೀರು ಸಮುದ್ರದ ಪಾಲಾಗುತ್ತಿದೆ.ಆ ನೀರಿನಲ್ಲಿ 14.98 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ರಾಜ್ಯಕ್ಕೆ ಮಂಜೂರು ಮಾಡಬೇಕು,ಇಷ್ಟು ನೀರನ್ನು ರಾಜ್ಯಕ್ಕೆ ಕೊಡುವುದರಿಂದ ಗೋವಾದಲ್ಲಿನ ಅರಣ್ಯ ಪ್ರದೇಶಕ್ಕೆ ನೀರಿನ ಕೊರತೆ ಆಗಲ್ಲ ಎಂದು ರಾಜ್ಯ ವಾದ ಮಂಡಿಸಿ ನೀರಿನ ಬೇಡಿಕೆ ಸಲ್ಲಿಸಿತ್ತು.ಆದರೆ ರಾಜ್ಯಕ್ಕೆ ಐ ತೀರ್ಪು ಭಾರೀ ಹಿನ್ನೆಡೆ ತಂದಿದೆ.









