ಬೆಂಗಳೂರು: ಮಹದಾಯಿ ನದಿ ನೀರು ವಿಚಾರದಲ್ಲಿ ನಾವು ಕಾನೂನು ಚೌಕಟ್ಟಿನಲ್ಲೇ ಇದ್ದೇವೆ. ಲೀಕೇಜ್ ನೀರಿನ ಬಗ್ಗೆಯೂ ಫೋಟೋ ಸಮೇತ ನ್ಯಾಯಧೀಕರಣ ಗಮನಕ್ಕೆ ತಂದಿದ್ದು, ನಾವು ಎಲ್ಲೂ ನೀರನ್ನು ಬಳಕೆ ಮಾಡ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗೋವಾ ಸಣ್ಣ ರಾಜ್ಯ, ಅವರ ಜತೆ ಯುದ್ಧ, ಜಗಳ ಮಾಡೋದಕ್ಕೆ ಇಷ್ಟ ಇಲ್ಲ. ಆಗಸ್ಟ್ ಒಳಗೆ ನ್ಯಾಯಬದ್ಧವಾದ ತೀರ್ಪು ಬರುವ ನಂಬಿಕೆ ಇದೆ ಎಂದರು.
ಗೋವಾದ ಬಗ್ಗೆ ನಮಗೇನು ಬೇಜಾರು ಇಲ್ಲ. ಸಮುದ್ರಕ್ಕೆ ಹೋಗುವ ನೀರನ್ನು ಅವರು ಬೇಕಿದ್ರೆ ಬಳಸಿಕೊಳ್ಳಲಿ. ನಮ್ಮ ಜನರಿಗೆ ಎಷ್ಟು ನೀರು ಸಿಗಬೇಕೋ ಅಷ್ಟು ಸಿಗಬೇಕೆಂಬುದು ನಮ್ಮ ಬೇಡಿಕೆ ಅಷ್ಟೇ. ಆ ಭಾಗದ ಜನರಿಗೆ ನೀರು ಸಿಗಬೇಕು ಅದಿಕ್ಕೆ ನೀರು ಕೊಡಿ ಎಂದು ಕೇಳ್ತಿದ್ದೇವೆ. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಲಿ. ಅದನ್ನು ತಪ್ಪು ಅಂತಾ ಹೇಳುವುದಿಲ್ಲ ಎಂದು ಹೇಳಿದರು.
ನಾನು ಕೂಡ ಸೈಟ್ ವಿಸಿಟ್ ಮಾಡಲು ಅಲ್ಲಿಗೆ ಹೋಗಿದ್ದೆ. ಆದರೆ, ಸೈಟ್ ವಿಸಿಟ್ ಮಾಡಿದ್ರೆ ಬೇರೆ ಅಪಾರ್ಥಕ್ಕೆ ಕಾರಣವಾಗುತ್ತದೆ ಎಂದು ಧಾರವಾಡಕ್ಕೆ ಹೋಗಿದ್ದವನು ವಾಪಸ್ ಬಂದಿದ್ದೇನೆ. ಆಗಸ್ಟ್ ನಲ್ಲಿ ಒಳ್ಳೆಯ ತೀರ್ಪು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









