ಬೆಂಗಳೂರು: ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.
ದೆಹಲಿಯಿಂದ ಹಿಂದಿರುಗಿದ ಬಳಿಕ ಸದಾಶಿವನಗರದಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿಯವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದೆ. ನನಗೆ ವೈಯಕ್ತಿಕವಾಗಿ ಅನ್ಯಾಯ ಆಗಿರುವುದರ ಕುರಿತು ಮಾತ್ರ ಚರ್ಚೆ ನಡೆಸಿದೆ ಎಂದರು.
ಪಕ್ಷಕ್ಕೆ ನಾನು ಮಾಡಿರುವ ಸೇವೆ, ನೀರಾವರಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆಯೇ ಹೊರತು ನಾನು ರಾಹುಲ್ ಗಾಂಧಿ ಬಳಿ ಯಾವ ಹುದ್ದೆಯನ್ನೂ ಕೇಳಲಿಲ್ಲ, ಮಂತ್ರಿ ಸ್ಥಾನ, ಡಿಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳನ್ನು ನಾನು ಕೇಳಲಿಲ್ಲ ನಾನು ನನ್ನ ಭಾವನೆಗಳನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದೇನೆ ರಾಜ್ಯದ ವಿದ್ಯಮಾನಗಳನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ ಆದರೆ ಮಾಧ್ಯಮಗಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಸ್ಥಾನ ಕೇಳಿದ್ದೇನೆ ಎಂದು ತಪ್ಪು ವರದಿಗಳು ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಪಕ್ಷ ಬಿಟ್ಟು ಹೋಗಲ್ಲ, ಕಾಂಗ್ರೆಸ್ ನಲ್ಲೇ ಇರ್ತೇನೆ,ಯಾವುದೇ ಹುದ್ದೆ ನನಗೆ ಬೇಕಿಲ್ಲ,
ಶಾಸಕ ಸ್ಥಾನವೇ ನನಗೆ ಸಾಕು ಶಾಸಕ ಸ್ಥಾನದಲ್ಲೇ ನನಗೆ ತೃಪ್ತಿ ಇದೆ ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಅಸಮಧಾನ ಹೊರಹಾಕಿದರು.









