ಬೆಂಗಳೂರು: ನೆರೆ ಪ್ರವಾಹದಿಂದ ನಲುಗಿರುವ ಕೊಡಗಿನ ಜನತೆಗೆ ಭರಪೂರವಾಗಿ ಆಹಾರ ನೀಡುತ್ತಿರುವ ಜನರು ಒಂದೆಡೆಯಾದರೆ, ಮತ್ತೊಂದೆಡೆ ಕೈತುಂಬಾ ಹಣ ಸಹಾಯವನ್ನು ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ಸುಮಾರು ಕೋಟ್ಯಾಂತರ ರೂಪಾಯಿಗಳನ್ನು ಹಲವರು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
ರಾಜ್ಯದ ಹಲವೆಡೆ ಪ್ರವಾಹ ಹಿನ್ನೆಲೆಯಲ್ಲಿ ಹಲವರು ಇಂದು ಸಿಎಂ ಗೃಹ ಕಚೇರಿ ಕೃಷ್ಣಗೆ ತೆರಳಿ ಸಿಎಂ ಪರಿಹಾರ ನಿಧಿಗೆ ಚೆಕ್ ನೀಡಿದರು. ಒಂದೇ ದಿನದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಎಂ ಪರಿಹಾರ ನಿಧಿಗೆ ಬಂದಿದ್ದು, ನೆರವಿನ ಮಹಾಪೂರವೇ ಹರಿದು ಬಂದಿದೆ.
ಪರಿಹಾರ ನಿಧಿಗೆ ಹರಿದು ಬರುತ್ತಿರುವ ದೇಣಿಗೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕುಮಾರಸ್ವಾಮಿ, ಬೃಹತ್ ಕೈಗಾರಿಕೆ ಇಲಾಖೆಯ ಕೈಗಾರಿಕೆ ಸಂಘ ಸಂಸ್ಥೆಯಿಂದ 3.75 ಕೋಟಿ ದೇಣಿಗೆಯನ್ನು ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕೊಡಗಿನ ಜನರ ಕಷ್ಟಕ್ಕೆ ಸ್ಪಂದಿಸಿರುವ 74 ವರ್ಷದ
ನಿವೃತ್ತ ಅರಣ್ಯ ಇಲಾಖೆ ನೌಕರ ಕೋಲಾರದ ವೆಂಕಟರಮಣಯ್, ತಮ್ಮ ಮೂರು ತಿಂಗಳ ಪೆನ್ಷನ್ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. 50 ಸಾವಿರ ರೂಪಾಯಿ ಚೆಕ್ನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.









