ಮಂಡ್ಯ – 21:ಮಂಡ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣ ಗೌಡ ಅವರು ಇಂದು ಸಂಜೆ ದಿಢೀರ್ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಮಾಡಿರುವ ವ್ಯವಸ್ಥೆಯನ್ನ ಪರಿಶೀಲಿಸಿದರು.
ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡುವ ಸಂಬಂಧ
ಅಧಿಕಾರಿಗಳು ತಮ್ಮ ಆದೇಶವನ್ನ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಖುದ್ದು ಸಚಿವರೆ ಭೇಟಿ ನೀಡಿ ಪರಿಶೀಲಿಸಿದರು. ಕೆ ಆರ್ ಪೇಟೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಇನ್ನೂ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರನ್ನ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿದ್ದಾರೆ ಅವರಿಗೆ ಹಾಲು, ಹಣ್ಣಿನ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಕೆಲವೆಡೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಆರೋಪ ಬಂದಿದೆ. ಅಂತಹ ಆರೋಪ ಮತ್ತೆ ಬರಕೂಡದು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ದೂರು ಬಂದರೆ ಸುಮ್ಮನಿರಲ್ಲ ಎಂದು ಸಚಿವ ನಾರಾಯಣ ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಕ್ರಮವಹಿಸಲು ಮೊನ್ನೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ನಿನ್ನೆ ಆದಿಚುಂಚನಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿದ್ದರು. ಇಂದು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









