ಉಡುಪಿ: ತಿಂಡಿ ತಿನ್ನಲು ಹೋಗಿ ನಾಪತ್ತೆಯಾದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಹೆಬ್ರಿಯ ಅರಣ್ಯ ಪ್ರದೇಶದಲ್ಲಿ ಯುವಕನ ಮೃತ ದೇಹ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದೆ.
ಯುವಕನ ಮೃತ ದೇಹ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮುದ್ರಾಡಿ ಗ್ರಾಮದ ಜಕ್ಕನಾಡಿ ನಿವಾಸಿ ಶಿವಕುಮಾರ್ (28 ) ನಾಪತ್ತೆಯಾಗಿ ಶವವಾದ ದುರ್ದೈವಿ. ಹೆಬ್ರಿ ಗ್ರಾಮದ ಜರವತ್ತು ಅರಣ್ಯ ಪ್ರದೇಶದ ನಡುವೆ ಈತನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಭೆ ಸಮಾರಂಭಗಳಿಗೆ ಧ್ವನಿವರ್ಧಕ ಜೋಡಿಸುವ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್, ಇತ್ತೀಚೆಗೆ ಲಾಕ್ ಡೌನ್ ನಿಂದಾಗಿ ಮನೆಯ ಬಳಿಯ ಹೊಲೋ ಬ್ಲಾಕ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ .ಮೇ13 ರಂದು ಬೆಳಿಗ್ಗೆ ಕೆಲಸದ ಸ್ಥಳದಿಂದ ಹೊಟೇಲ್‌ಗೆ ತಿಂಡಿ ತಿನ್ನಲು ಹೋದವ ನಾಪತ್ತೆಯಾಗಿದ್ದ. ಈತನ
ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿ, ಕುತ್ತಿಗೆಯಲ್ಲಿ ಬೈರಾಸು ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಕುಮಾರ್ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿರುವ ಸಹೋದರ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.









