ಹೈದರಾಬಾದ್: ತೆಲಂಗಾಣದ ನಲ್ಗೊಂಡಾ ಅನ್ನೆಪರ್ತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜಕೀಯ ಮುತ್ಸದ್ಧಿ, ನಟ ನಂದಮೂರಿ ಹರಿಕೃಷ್ಣ (61) ಅವರು ದುರ್ಮರಣ ಹೊಂದಿದ್ದಾರೆ.
ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು
ಹೈದರಾಬಾದ್ನಿಂದ ನೆಲ್ಲೂರ್ಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದ್ದು, ಕಾರನ್ನು ಹರಿಕೃಷ್ಣ ಅವರೇ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಪಘಾತವಾದ ತಕ್ಷಣ ಸ್ಥಳೀಯರು ಹರಿಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಹರಿಕೃಷ್ಣ ಅವರ ನಿಧನದ ವಿಚಾರ ತಿಳಿದ ಬಳಿಕ ಬಾವ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ತೆಲುಗು ಚಿತ್ರರಂಗದ ಹಲವು ಗಣ್ಯರು, ರಾಜಕಾರಣಿಗಳು ಆಸ್ಪತ್ರೆ ಕಡೆಗೆ ಧಾವಿಸುತ್ತಿದ್ದಾರೆ.
ಹರಿಕೃಷ್ಣ ಮೊದಲ ಪತ್ನಿಯ ಮೂವರು ಮಕ್ಕಳಾದ ನಟ ಕಲ್ಯಾಣ್ ರಾಮ್, ಪುತ್ರಿ ಸುಹಾಸಿನಿ ಮತ್ತು 2ನೇ ಪತ್ನಿಯ ಪುತ್ರ ಜ್ಯೂನಿಯರ್ ಎನ್ಟಿಆರ್ ಅವರನ್ನು ಹರಿಕೃಷ್ಣ ಅಗಲಿದ್ದಾರೆ.









