ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳನ್ನು ತಣ್ಣಗೆ ಮಾಡಲು ಮಾಡಿದ ಬಿಎಸ್ವೈ ಪ್ಲಾನ್ ಉಲ್ಟಾ ಹೊಡೆದಿದೆ. ಶಾಸಕರ ಜೊತೆ ಕಾರ್ಯಕರ್ತರ ಕೆಂಗಣ್ಣಿಗೂ ರಾಜಾಹುಲಿ ಗುರಿಯಾಗಿದ್ದಾರೆ. ತಮ್ಮ ಖುರ್ಚಿ ಭದ್ರ ಪಡಿಸಿಕೊಳ್ಳಲು ಸಿಎಂ ಹೆಣಗಾಡ್ತಿದ್ರೆ, ಬಿಎಸ್ವೈ ಖುರ್ಚಿಗೆ ಕುತ್ತು ತರೋಕೆ ದೆಹಲಿಯಲ್ಲೇ ಮೆಗಾ ಪ್ಲಾನ್ ರೆಡಿಯಾಗ್ತಿದೆ.
ಹೌದು, ಬಿಎಸ್ವೈ ಸರ್ಕಾರದಲ್ಲಿ ಮಂತ್ರಿಗಳಾಗ್ಬೇಕು ಅಂತಾ ಕನಸು ಕಾಣ್ತಿದ್ದೊರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಕೊಟ್ಟು ತಣ್ಣಗೆ ಮಾಡಲು ಬಿಎಸ್ವೈ ಪ್ಲಾನ್ ಮಾಡಿದ್ರು. ಆದ್ರೆ, ಸಿಎಂ ಈ ಪ್ಲಾನ್ ಅವರಿಗೆ ಉಲ್ಟಾ ಹೊಡೆದಿದೆ. ಹಲವು ಶಾಸಕರು ತಮಗೆ ನಿಗಮ ಮಂಡಳಿ ಬೇಡ ಅಂತಾ ತಿರಸ್ಕರಿಸಿದ್ದಾರೆ. ಒಂದ್ಕಡೆ ಶಾಸಕರು ನಿಗಮ ಮಂಡಳಿ ಬೇಡ ಅಂತಾ ಬಂಡಾಯದ ಬಾವುಟ ಹಾರಿಸಿದ್ರೆ, ಇನ್ನೊಂದ್ಕಡೆ ತಮಗೆ ನೀಡಬೇಕಾದ ನಿಗಮ ಮಂಡಳಿ ಸ್ಥಾನಗಳನ್ನ ಶಾಸಕರಿಗೆ ನೀಡಿದ್ದೀರಾ ಅಂತಾ ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಶಾಸಕರನ್ನ ತೃಪ್ತಿಗೊಳಿಸಿ ಸ್ಥಾನ ಭದ್ರ ಪಡಿಸಿಕೊಳ್ಳೋಕೆ ಮುಂದಾದ ಬಿಎಸ್ವೈ ಕಾರ್ಯಕರ್ತರ ಬೇಗುದಿಯನ್ನು ಎದುರಿಸಬೇಕಾಗಿದೆ.
ಬಿಎಸ್ವೈ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆ ಕುರಿತು ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಒಂದು ವರ್ಷದ ಸಂಭ್ರಮಾಚರಣೆ ದಿನವೇ ದೆಹಲಿ ಪ್ರವಾಸ ಕೈಗೊಂಡಿದ್ದು, ಬಿಎಸ್ವೈ ಆಜನ್ಮ ಶತ್ರು ಬಿ.ಎಲ್.ಸಂತೋಷ್ ಭೇಟಿ ಮಾಡಿ ಚರ್ಚೆ ನಡೆಸಿರೋದು ಕುತೂಹಲ ಕೆರಳಿಸಿದೆ. ಕೊರೋನಾ, ನೆರೆ ಹಾವಳಿ ಸೇರಿದಂತೆ ಸರ್ಕಾರದ ಒಂದು ವರ್ಷದ ವೈಫಲ್ಯಗಳನ್ನು ವಿರೋಧ ಪಕ್ಷಗಳಿರಲಿ ಸ್ವಪಕ್ಷದವರೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಬಗೆಹರಿಯದ ಸಂಪುಟ ವಿಸ್ತರಣೆ ಕಸರತ್ತು, ಸಚಿವಾಕಾಂಕ್ಷಿಗಳ ಬಂಡಾಯ, ನಿಗಮ ಮಂಡಳಿ ಅಸಮಧಾನ ಬಿಎಸ್ವೈಗೆ ಹೊಸ ತಲೆ ನೋವು ತಂದಿವೆ.









