ಬೆಂಗಳೂರು: ಪ್ರಜ್ವಲ್ ವಿರುದ್ದ ಪ್ರತಿಷ್ಟೆಗಾಗಿ ನಾನು ಚುನಾವಣೆಗೆ ನಿಂತಿಲ್ಲ. ಲಕ್ಷಾಂತರ ಕಾರ್ಯಕರ್ತರ ಧ್ವನಿಯಾಗಿ ನಾನು ಮತ್ತು ಪ್ರಜ್ವಲ್ ಸ್ಪರ್ಧೆ ಮಾಡ್ತಾ ಇದ್ದೇವೆ. ಪ್ರಜ್ವಲ್ ಹಾಗೂ ನಾನು ಪಕ್ಷ ಕಟ್ಟಬೇಕಿದೆ, ಇಬ್ಬರೂ ಸೇರಿ ಪಕ್ಷಕ್ಕಾಗಿ ದುಡಿತೇವೆ. ಆದ್ರೆ, ಜನರ ತೀರ್ಪೇ ಅಂತಿಮ ಅದಕ್ಕೆ ನಾವು ತಲೆಬಾಗಲೇ ಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಭಾವ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ನಿಖಿಲ್, ಈಗ ತಾನೆ ರಾಜಕಾರಣಕ್ಕೆ ಹೆಜ್ಜೆ ಇಡ್ತಾ ಇದೀನಿ. ನನಗೆ ರಾಜಕೀಯದ ಅನುಭವ ಕಡಿಮೆ ಮಡ್ಯದಲ್ಲಿ ದೊಡ್ಡವರ ಮಟ್ಟದಲ್ಲಿ ಮೈತ್ರಿಯಾಗಿದೆ. ಮಂಡ್ಯ ಕಾಂಗ್ರೆಸ್ ನಾಯಕರ ಜೊತೆ ನಾನು ಪ್ರತ್ಯೇಕ ಮಾತುಕತೆ ಮಾಡುವ ಅವಶ್ಯಕತೆ ಇಲ್ಲ. ಸುಮಲತಾ ವಿರುದ್ಧ ನನ್ನ ಗೆಲುವು ನಿಶ್ಚಿತ ಎಂದರು.
ಮಂಡ್ಯದ ಏಳೂ ಜನ ಜೆಡಿಎಸ್ ಶಾಸಕರ ಒತ್ತಡದಿಂದ ನನಗೆ ಟಿಕೆಟ್ ಸಿಕ್ಕಿದೆ. ಮಂಡ್ಯ ಮತ್ತು ದೇವೇಗೌಡ, ಕುಮಾರಸ್ವಾಮಿ ಸಂಬಂಧವೇ ನನ್ನ ಗೆಲುವಿಗೆ ಶ್ರೀರಕ್ಷೆ . ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಒಬ್ಬರು 9 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಅದುವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆ ಆಗ್ತಿದೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ, ಕ್ಷೇತ್ರದ ಎಲ್ಲ ನಾಯಕರ ಬೆಂಬಲ ಇದೆ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.









