ಮಂಡ್ಯ,ಮೇ-23:ಮಾತನಾಡುವವರು ಮಾತಾಡಿಕೊಳ್ಳಲಿ. ಕೆಲಸ ಇಲ್ಲದವರು ಮಾತಾಡುತ್ತಾರೆ. ನಮಗೆ ಮಾಡಲು ಬೇಕಾದಷ್ಟು ಕೆಲಸವಿದೆ. ಕೋವಿಡ್ -19 ತಡೆಗಟ್ಟುವ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಐಬಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದ್ರು. ನಮ್ಮ ಮೇಲೆ ಆರೋಪ ಮಾಡಿದವರ ಕ್ಷೇತ್ರಕ್ಕೇ ಮುಂಬೈನಿಂದ ಹೆಚ್ಚಿನ ಜನ ಬರುತ್ತಿದ್ದಾರೆ. ಇದಕ್ಕೆ ಅವರು ಏನು ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಬಂದವರಿಗೆ ಕ್ವಾರಂಟೈನ್ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ಆ ಕೆಲಸ ಮಾಡುತ್ತಿದ್ದೇವೆ. ಹಣದ ಕೊರತೆ ಇಲ್ಲ. ಎಲ್ಲ ತಾಲೂಕಿಗೆ ಅಗತ್ಯಕ್ಕೆ ತಕ್ಕಂತೆ ಹಣ ನೀಡುತ್ತಿದ್ದೇವೆ. ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವರು ಕಣ್ ತಪ್ಪಿಸಿ ಹೊರ ರಾಜ್ಯದಿಂದ ಜಿಲ್ಲೆಗೆ ಬಂದ ಕಾರಣ ಸ್ವಲ್ಪ ಕಷ್ಟ ಆಗಿತ್ತು. ಈಗ ಎಲ್ಲವು ನಿಯಂತ್ರಣಕ್ಕೆ ಬಂದಿದೆ.
ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ಸಡಿಲಿಕೆ ಅನಿವಾರ್ಯವಾಗಿತ್ತು. ಜನಜೀವನ ಕಷ್ಟ ಆಗುತ್ತೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಆದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜಾಗೃತೆಯಿಂದ ಇರಬೇಕು. ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಯಾವುದೆ ವಿಚಾರ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರೂ ಜಿಲ್ಲೆಯಲ್ಲಿ ಓಡಾಟ ಮಾಡಿ ಪರಿಶೀಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವರು ಮಾತಾಡಿದರೆ ಏನು ಮಾಡಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಆರೋಪಿಸುವವರಿಗೆ ಸಚಿವರು ತಿರುಗೇಟು ನೀಡಿದ್ದಾರೆ.
ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್, ಡಿಸಿ, ಎಸ್ಪಿ ಪಾಲ್ಗೊಂಡಿದ್ದರು.









