ಬೆಂಗಳೂರು:ನನಗೆ ಇಡಿಯಿಂದ ನೊಟೀಸ್ ಬಂದಿಲ್ಲ.ಆದರೆ ಕೇಂದ್ರ ಸರ್ಕಾರದ ವಿಶೇಷ ಸಂಸ್ಥೆಯೊಂದರಿಂದ ನೊಟೀಸ್ ಬಂದಿದೆ.ಆ ಸಂಸ್ಥೆ ಯಾವುದು ಎಂಬುದನ್ನು ಇಷ್ಟರಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವರು,ಅವರು ಯಾವುದೇ ಸಂಸ್ಥೆಯಿಂದ ನೊಟೀಸ್ ಕೊಟ್ಟರೂ ಎದುರಿಸುವ ಶಕ್ತಿ ನನಗಿದೆ.ಕಳೆದ ಎರಡೂವರೆ ವರ್ಷದಿಂದ ಈ ರೀತಿ ಕಿರುಕುಳಕೊಡುತ್ತಲೇ ಇದ್ದಾರೆ. ಅದರಲ್ಲೂ ಉಪಚುನಾವಣೆ ಆದನಂತರ ಇದು ಹೆಚ್ಚಾಗಿದೆ.ಇದು ರಾಜಕೀಯ ಪ್ರೇರಿತ ಹೌದೋ ಅಲ್ಲವೋ ಎಂಬುದನ್ನು ಬಳ್ಳಾರಿಯ ನಮ್ಮ ಅಣ್ಣನೇ ಸ್ಪಷ್ಟ ಮಾಡಬೇಕು.ಈ ಮೊದಲು ಅವರು ನನಗೆ ಅಕ್ಟೋಬರ್ 30ರ ಗಡುವು ಕೂಡ ಕೊಟ್ಟಿದ್ದರು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ನವೆಂಬರ್ 19ರಂದು ಬಳ್ಳಾರಿಯಲ್ಲಿ ಕೆಡಿಪಿ ಸಭೆ ಇದೆ,22ರಂದು ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಾರೆ.ನವೆಂಬರ್ 23ರಂದು ಜಮಖಂಡಿಯಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದ್ರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ವರ್ಗಾವಣೆ ಮಾಡಿದ್ರೂ ಹೋಗಿ ಅಧಿಕಾರ ಸ್ವೀಕರಿಸದ ಜಲಸಂಪನ್ಮೂಲ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ನರಸಿಂಹ ರಾಜು ಸೇರಿದಂತೆ ಆರು ಇಂಜಿನಿಯರ್ ಗಳ ಅಮಾನತು ಮಾಡಲಾಗಿದೆ ಎಂದ್ರು.









