ಹಂತಹಂತವಾಗಿ ಸಮಗ್ರ ಗ್ರಾಮೀಣಾಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ, ಅಕ್ಟೋಬರ್ 16: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಘೋಷಿಸಿದ ಅಮೃತ ಯೋಜನೆಗಳ ಮೂಲಕ ಹಂತ ಹಂತವಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಮೃತ ಯೋಜನೆಯಡಿ 2 ಕೋಟಿ ರೂ.ಗಳನ್ನು ಪ್ರತಿ ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಒದಗಿಸಲಾಗುತ್ತಿದೆ. 7500 ಸ್ತ್ರೀ ಶಕ್ತಿ ಸಂಘಗಳಿಗೆ 1.00 ಲಕ್ಷ ನೀಡುವ ಯೋಜನೆ, 75000 ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದ ಅವರು, ಕರ್ನಾಟಕದ ಇತಿಹಾಸದಲ್ಲಿ ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಇದೇ ಮೊದಲು ಎಂದರು. ಅರ್ಹರಿಗೆ ಸವಲತ್ತುಗಳನ್ನು ನೀಡಿ, ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸರ್ಕಾರದ ಸೇವೆಗಳು ಮನೆ ಬಾಗಿಲಿಗೆ ತಲುಪಿಸಲು ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ 227 ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಂದರೆ, ಸರ್ಕಾರವೇ ಬಂದಂತೆ. ಮುಂದಿನ ದಿನಗಳಲ್ಲಿ ಎಲ್ಲಾ ಸೇವೆಗಳು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಜನರಿಂದ ಬಂದ ಅಧಿಕಾರ, ನಿಮಗೋಸ್ಕರವೇ ಉಪಯೋಗವಾಗಬೇಕು ಎಂಬ ಸಂಕಲ್ಪದಿಂದ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದರು.

ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ರೈತ ವಿದ್ಯಾನಿಧಿ ಕಾರ್ಯಕ್ರಮವನ್ನು ಅಧಿಕಾರಕ್ಕೆ ಬಂದ ಕೂಡಲೇ ಘೋಷಣೆ ಮಾಡಿದ್ದು, ದೇಶದ ಇನ್ಯಾವುದೇ ಭಾಗದಲ್ಲಿ ಇಂತಹ ಯೋಜನೆ ಇಲ್ಲ ಎಂದ ಮುಖ್ಯಮಂತ್ರಿಗಳು ಇದಕ್ಕಾಗಿ 1000 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟು ನೀಡಿ 20 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಯೋಜನೆ ಜಾರಿಗೆ ತಂದಿದೆ ಎಂದರು.

ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಸಂಧ್ಯಾ ಸುರಕ್ಷಾ, ವಿಧವಾ ವೇತನ, ದಿವ್ಯಾಂಗರ ವೇತನವನ್ನು ಹೆಚ್ಚಿಸಿ ಮೊದಲನೇ ಸಚಿವ ಸಂಪುಟ ಸಭೆಯಲ್ಲಿಯೇ ಅನುಮೋದನೆ ನೀಡಲಾಗಿದೆ ಎಂದ ಅವರು, ನಾಲ್ಕು ಲಕ್ಷ ಗ್ರಾಮೀಣ ಮನೆಗಳನ್ನು ವಸತಿ ರಹಿತರಿಗೆ ನೀಡಲಾಗಿದೆ.

ಹೊನ್ನಾಳಿ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡಲಾಗುವುದೆಂದರು. ತಾಲ್ಲೂಕಿನ ಕುಂದೂರಿನ ಶಾಲೆಗೆ ನೂತನ ಕಟ್ಟಡವನ್ನು ನಿರ್ಮಿಸಲು ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಮೀಸಲಿಡಲಾಗುವುದು ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಸರ್ಕಾರ ನಿಮ್ಮ ಬದುಕಿನಲ್ಲಿ ಬದಲಾವಣೆ ಹಾಗೂ ಬೆಳಕನ್ನು ತರುವಂತಹ ಕೆಲಸವನ್ನು ಮಾಡಲಿದೆ ಎಂದರು.

ಜನರ ಮನೆ ಬಾಗಿಲಿಗೆ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ, ಅಕ್ಟೋಬರ್ ೧೬:
ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಂಪರ್ಕ ಇರುವ ಎಲ್ಲ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜನಪರ ಸರ್ಕಾರ ಆಗುತ್ತದೆ. ಈ ತತ್ವದ ಹಿನ್ನೆಲೆಯಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮಾತ್ರವಲ್ಲ, ಇಡೀ ಸರ್ಕಾರವೇ ಗ್ರಾಮಗಳ ಕಡೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ- ಗ್ರಾಮ ವಾಸ್ತöವ್ಯ ಕಾರ್ಯಕ್ರಮ ಹಾಗೂ ವಿವಿಧ ಸೌಲಭ್ಯಗಳ ವಿತರಣೆ, ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಅಭಿವೃದ್ಧಿ ಜನರ ಸುತ್ತಲೂ ಆಗಬೇಕು. ಜನರ ಬಳಿ ಅಭಿವೃದ್ಧಿ ಹೋದಾಗ ಓಡಾಟ ನಿಂತ ಸ್ಥಿರವಾದ ಬದುಕು ಸಿಗುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಮನೆ ಬಾಗಿಲಿಗೆ ಪಡಿತರ:
ಜನವರಿ 26 ರ ನಂತರ ಪಡಿತರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದ ಮುಖ್ಯಮಂತ್ರಿಗಳು, ಸಾಮಾಜಿಕ ಭದ್ರತೆ ಮನೆ ಬಾಗಿಲಿಗೆ ಬರಬೇಕು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎಲ್ಲ ಸೌಲಭ್ಯಗಳು ದೊರಕಲು ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ನವೆಂಬರ್ 1 ರಂದು ಜನಸೇವಕ ಕಾರ್ಯಕ್ರಮವನ್ನು ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಸೌಲಭ್ಯಗಳನ್ನು ಮೊಬೈಲ್ ಮೂಲಕ ದೊರಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪಿಂಚಣಿ ಸೌಲಭ್ಯ ಆನ್‌ಲೈನ್ ನಲ್ಲಿ ಈಗಾಗಲೇ ಲಭ್ಯವಿದೆ. ಇದು ಲಭ್ಯವಾಗುವಲ್ಲಿ ತೊಂದರೆಯಾದರೆ, ತಾಲ್ಲೂಕು ಕಚೇರಿಗೆ ಹೋಗಬೇಕಾಗಿಲ್ಲ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇರುವ ಕೇಂದ್ರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜನರ ಸೇವೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು, ಗ್ರಾಮ ಪಂಚಾಯತಿಯ ಅಧಿಕಾರಿಗಳು ಭಾಗವಹಿಸಬೇಕು ಎಂದರು.

ಅಧಿಕಾರ ಹೆಪ್ಪುಗಟ್ಟಿ ವಿಧಾನಸಭೆಯಲ್ಲಿ ಕುಳಿತುಕೊಳ್ಳದೆ, ಜೇನುತುಪ್ಪವಾಗಿ ಗ್ರಾಮೀಣ ಪ್ರದೇಶಕ್ಕೆ ಹರಿಯಬೇಕೆನ್ನುವ ಕಲ್ಪನೆ ನಮ್ಮದು. ಕಾಲ ಬದಲಾಗಿದ್ದು, ಜನರು ಜಾಗೃತರಾಗಿದ್ದಾರೆ. ಸ್ಪಂದನಶೀಲ ಸರ್ಕಾರ ಕರ್ನಾಟಕದಲ್ಲಿದೆ. ಸ್ವಚ್ಚ, ದಕ್ಷ, ಜನಪರ ಆಡಳಿತವನ್ನು ನಾವು ಕೊಡುತ್ತೇವೆ. ಅದರ ಲಾಭವನ್ನು ಜನ ಪಡೆಯಬೇಕು ಎಂದು ತಿಳಿಸಿದರು.

ನಮ್ಮ ಸರ್ಕಾರ ಬಡವರಿಗೆ 4 ಲಕ್ಷ ಮನೆಗಳನ್ನು ಕೇವಲ ಒಂದೂವರೆ ವರ್ಷದಲ್ಲಿ ಕಟ್ಟಿದ್ದು, ನಗರಗಳ ಕೊಳಗೇರಿಯಲ್ಲಿರುವವರಿಗೆ 1 ಲಕ್ಷ ಮನೆಗಳನ್ನು ಕಟ್ಟಿ ಕೊಡಲಾಗುತ್ತಿದೆ. ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು 2 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆಯಲ್ಲದೆ, ಅಮೃತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸಮಗ್ರ ಅಭಿವೃದ್ಧಿಯ ಕಲ್ಪನೆಯನ್ನು ಸರ್ಕಾರ ಹೊಂದಿದ್ದು, ಉದ್ಯಮ, ಉದ್ಯೋಗಕ್ಕೆ ಸಮಾನ ಮಹತ್ವವನ್ನು ನೀಡಿದೆ. ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.

ದಾವಣೆಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ ಎಂದ ಅವರು ನ್ಯಾಮತಿಗೆ ಮಿನಿ ವಿಧಾನಸೌಧವನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

Video-ಸವದತ್ತಿ ಯಲ್ಲಮ್ಮನ ದೇವಾಲಯದಲ್ಲಿ ಮುಜರಾಯಿ ಸಚಿವರ ವಿಶೇಷ ಪೂಜೆ

ಬೆಂಗಳೂರು: ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಆಚರಿಸುವ ವಿಜಯದಶಮಿಯ ಸುಸಂಧರ್ಭದಲ್ಲಿ , ಕೋವಿಡ್ ಸೋಂಕಿನಿಂದ ನಮ್ಮ ನಾಡಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಲು ರಾಜ್ಯದ ದೇವಾಲಯಗಳಲ್ಲಿ ವಿಜಯದಶಮಿಯ ಶುಭದಿನಂದು ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ರಾಜ್ಯದ ಪ್ರಮುಖ ಶ್ರದ್ಧಾಕೇಂದ್ರವಾದ ಬೆಳಗಾವಿ ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ಶ್ರೀ ಯಲ್ಲಮ್ಮದೇವಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯದ ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆಯವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಿದರು.

ಪ್ರಾತಃಕಾಲ ಆರು ಗಂಟೆಗೆ ಯಲ್ಲಮ್ಮನ ದೇವಾಲಯಕ್ಕೆ ಆಗಮಿಸಿದ ಸಚಿವರು ದೇವಾಲಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ನಾಡಿನ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೊಳಗಾಗಿದ್ದು, ನಮ್ಮ ಮಕ್ಕಳು ಶಾಲೆಯತ್ತ ಮುಖ ಮಾಡದೇ ಮನೆಯಲ್ಲೇ ಇರುವಂತಾಗಿದೆ. ಈಗ ಮಕ್ಕಳು ಶಾಲೆಯತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ದೇವಿ ಆರ್ಶೀವದಿಸಬೇಕೆಂದು ಕೋರಿದರು. ಕೋವಿಡ್ ಸೋಂಕಿನಿಂದ ತೊಂದರೆಯಾಗಿರುವ ನಾಡಿನ ಜನರು ಸುಭಿಕ್ಷ ವಾತಾವರಣದಲ್ಲಿ ಜೀವಿಸುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥನೆ ಸಲ್ಲಿಸಿದರು.

ನಂತರ ದೇವಾಲಯದ ಅಧಿಕಾರಿಗಳು ಹಾಗೂ ಅರ್ಚಕರೊಂದಿಗೆ ಚರ್ಚಿಸಿದ ಅವರು, ದೇವಾಲಯದ ಅಗತ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಸವದತ್ತಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಲೋಚನೆ ನಡೆಸಿ ವಿಸ್ತೃತ ಪ್ರಸ್ತಾವನೆ ಮತ್ತು ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಶುಕ್ರವಾರ ವಿಜಯ ದಶಮಿ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ , ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಎಲ್ಲ ದೇವಾಲಯಗಳಲ್ಲಿ ಶ್ರದ್ಧಾಳು ಭಕ್ತ ಸಮೂಹಕ್ಕೆ ಅತ್ಯುತ್ತಮ ಸೌಕರ್ಯ ಒದಗಿಸುವುದು ಹಾಗೂ ಉತ್ತಮ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ತಾವು ಸಚಿವರಾದ ನಂತರ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದು, ಮತ್ತು ತ್ವರಿತಗತಿಯಲ್ಲಿ ದೇವಾಲಯಗಳ ಸೇವೆ ದೊರೆಯುವಂತೆ ಮಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಶಿಕಲಾ ಜೊಲ್ಲೆಯವರು ಹೇಳಿದರು.

ವಿಶೇಷ ಪೂಜೆಗೆ ಸಚಿವರನ್ನು ದೇವಾಲಯದ ಅಧಿಕಾರಿಗಳು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಸ್ಥಳೀಯ ಶಾಸಕರಾದ ಆನಂದ ಮಾಮನಿ, ದೇವಾಲಯದ ಪ್ರಮುಖರಾದ ಕೋಟರಗಸ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ಅಕ್ಟೋಬರ್‌ 18 ಮತ್ತು 19 ರಂದು ಬೇಸಿಕ್‌ ಲೈಫ್ ಸಪೋರ್ಟ್‌ ಮತ್ತು ಫಸ್ಟ್‌ ಏಡ್‌ ಟ್ರಾಮಾ ತರಬೇತಿ ಆಯೋಜನೆ

ಬೆಂಗಳೂರು ಅಕ್ಟೋಬರ್‌ 15: ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳಿಗೆ ಹಠಾತ್ತಾಗಿ ಹೃದಯಾಘಾತ, ಅಫಫಾತ ಅಥವಾ ಇನ್ನು ಯಾವುದಾದರೂ ಅವಘಡಗಳಾಗಿ ಆಘಾತಕ್ಕೀಡಾದಾಗ ಏನು ಮಾಡುವುದು ಎನ್ನುವುದು ತೋಚುವುದೇ ಇಲ್ಲ. ಪ್ರಾಥಮಿಕ ಚಿಕಿತ್ಸೆಯಿಂದ ದೊಡ್ಡ ತೊಂದರೆ ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ಜನರಿಗೆ ಸರಿಯಾದ ತಿಳುವಳಿಕೆಯೇ ಇರುವುದಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಕೊಂಡೊಯ್ಯುವ ವರೆಗಿನ ಅಮೂಲ್ಯ ಸಮಯ ಉಳಿಸುವ ನಿಟ್ಟಿನಲ್ಲಿ ಸಾಮಾನ್ಯವಾದ ತುರ್ತು ಜೀವರಕ್ಷಕ ಚಿಕಿತ್ಸೆಗಳ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯ.

ತುರ್ತು ಸಂಧರ್ಭಗಳಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುವ ಹಾಗೂ ಆಫಾತಗಳನ್ನು ಹೇಗೆ ನಿಭಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಯುನೈಟೆಡ್‌ ಆಸ್ಪತ್ರೆ ವಿಶ್ವ ಟ್ರಾಮಾ ದಿನದ ಅಂಗವಾಗಿ ಅಕ್ಟೋಬರ್‌ 18 ಮತ್ತು 19 ರಂದು ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೇಸಿಕ್‌ ಲೈಫ್‌ ಸಪೋರ್ಟ್‌ ತರಬೇತಿ: ಈ ತರಬೇತಿಯಲ್ಲಿ ಫಸ್ಟ್‌ ರೆಸ್ಪಾಂಡರ್‌ ಸಿಪಿಆರ್‌, ವಯಸ್ಕರಿಗೆ ಸಿಪಿಆರ್‌, ಮಕ್ಕಳು ಹಾಗೂ ಶಿಶುಗಳಿಗೆ ಸಿಪಿಆರ್‌, ಆಟೋಮೇಟೆಡ್‌ ಎಕ್ಟ್ರನಲ್‌ ಡೀಫ್ರಿಬ್ಲಿಏಟರ್‌ (ಏಇಡಿ) ಬಳಕೆ ಹಾಗೂ ಹೆಐಮಕ್ಲಿಚ್‌ ಮನ್ಯೂಯರ್‌ ಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು.

ಫಸ್ಟ್‌ ಏಡ್‌ ಟ್ರಾಮಾ ಟ್ರೈನಿಂಗ್‌: ಈ ತರಬೇತಿಯಲ್ಲಿ ಅಪಘಾತಗಳು ಮತ್ತು ಬಿದ್ದಾಗ, ಬೆಂಕಿಯ ಅವಘಢಗಳ ಸಂಧರ್ಭದಲ್ಲಿ, ಪ್ರಾಣಿಗಳು ಕಚ್ಚಿದ ಸಂಧರ್ಭದಲ್ಲಿ, ಹೃದಯಾಘಾತ ಮತ್ತು ಸ್ಟ್ರೋಕ್‌ ಗಳಾದಾಗ ನೀಡಬೇಕಾದಂತ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ನೀಡಲಾಗುವುದು.

ಈ ರೀತಿಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಅಮೇರಿಕನ್‌ ಹಾರ್ಟ್‌ ಅಸೋಸಿಯೇಷನ್‌ – ಅಡ್ವಾನ್ಸ್‌ಡ್‌ ಕಾರ್ಡಿಯಾಕ್‌ ಲೈಪ್‌ ಸಪೋರ್ಟ್‌ ನಿಂದ ತರಬೇತಿಯನ್ನು ಪಡೆದುಕೊಂಡಿರುವ ಡಾ. ಲೋರಿಯಾ ರಹಮಾನ್‌ ಅವರು ಈ ತರಬೇತಿಯನ್ನು ನಡೆಸಿಕೊಡಲಿದ್ದಾರೆ.

ತುರ್ತು ಸಂಧರ್ಭಗಳಲ್ಲಿ ರೋಗಿಗಳಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ ಅವರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಬಹಳ ಸಹಕಾರಿ. ಅದರಲ್ಲೂ ವೈದ್ಯಕೀಯ ಸೌಲಭ್ಯಕ್ಕೆ ಅವರನ್ನು ಸಾಗಿಸುವ ಮುನ್ನ ಅಮೂಲ್ಯ ಸಮಯದಲ್ಲಿ ನೀಡುವ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹಾಗೂ ಅವರಿಗೆ ಜೀವರಕ್ಷಕ ಪ್ರಾಥಮಿಕ ಚಿತ್ಸೆಯ ಬಗ್ಗೆ ಸುಲಭವಾಗಿ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ತರಬೇತಿಯನ್ನು ಪಡೆದುಕೊಂಡವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿಗಾಗಿ ವಾಟ್ಸ್‌ಆಪ್‌ +91 70223 16664 ಅಥವಾ ದೂರವಾಣಿ ಸಂಖ್ಯೆ 08045666666 / 080 69333333 ಗೆ ಸಂಪರ್ಕಿಸಬಹುದಾಗಿದೆ.

Live-ಮೈಸೂರಿನಿಂದ ದಸರಾ ಉತ್ಸವದ ನೇರ ಪ್ರಸಾರ

ಕೃಪೆ: ಮೈಸೂರು ವಾರ್ತೆ, ವಾರ್ತಾ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ

ಮೈಸೂರಿನಿಂದ ದಸರಾ ಉತ್ಸವದ ನೇರ ಪ್ರಸಾರ…

ಟ್ರಾವೆಲ್‌ ಕಾಮಿಡಿ ಡ್ರಾಮಾ ರತ್ನನ್ ಪ್ರಪಂಚ ಟ್ರೇಲರ್ ಬಿಡುಗಡೆ ಮಾಡಿದ ಪ್ರೈಮ್ ವೀಡಿಯೋ

ಬೆಂಗಳೂರು: ಪ್ರೈಮ್ ವಿಡಿಯೋ ತನ್ನ ಮುಂಬರುವ ಟ್ರಾವೆಲ್ ಕಾಮಿಡಿ ಡ್ರಾಮಾ ರತ್ನನ್ ಪ್ರಪಂಚ ಬಿಡುಗಡೆಯನ್ನು ಅಕ್ಟೋಬರ್ 22, 2021 ರಂದು ಸೇವೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಸಿನಿಮಾದಲ್ಲಿ ಕನ್ನಡದ ಜನಪ್ರಿಯ ನಟ ಧನಂಜಯ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ರೆಬಾ ಮೋನಿಕಾ ಜಾನ್, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ.

ಟ್ರೇಲರ್ ರತ್ನಾಕರ ಅವರ ಭಾವನಾತ್ಮಕ ಮತ್ತು ಮನೋರಂಜನೆಯ ಪ್ರಯಾಣದ ಒಂದು ಸೂಕ್ಷ್ಮ ನೋಟವನ್ನು ನೀಡುತ್ತದೆ. ಅವರು ತಮ್ಮ ಪ್ರಸ್ತುತ ಜೀವನದ ಅಪಾಯಗಳನ್ನು ದಾಟುವಾಗ ತನ್ನ ಬೇರುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಈ ಚಿತ್ರವು ಒಂದು ಅನನ್ಯ ಕಥೆಯನ್ನು ಬಿಚ್ಚಿಡುತ್ತದೆ ಮತ್ತು ರತ್ನಾಕರನ ಸಂತೋಷದ ಅನ್ವೇಷಣೆಯಲ್ಲಿ, ಆತನು ತನ್ನ ಜಗತ್ತನ್ನು ಮರುಶೋಧಿಸುವಾಗ ಉಂಟಾಗುವ ಆಘಾತ, ನಗು ಮತ್ತು ಸಂದಿಗ್ಧತೆಗಳಿಂದ ತುಂಬಿದ ಸವಾರಿಯಲ್ಲಿ ಆತ ಸಾಗುತ್ತಾನೆ. ಈ ಪ್ರಯಾಣದಲ್ಲಿ, ಆತನ ಜೊತೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಥೆಯನ್ನು ಬ್ರೇಕ್ ಮಾಡಲು ಪತ್ರಕರ್ತೆ ಮಯೂರಿ ಜೊತೆಯಾಗುತ್ತಾರೆ.

“ರತ್ನನ್ ಪ್ರಪಂಚ ಬಹಳ ಸಾಪೇಕ್ಷವಾದ ಸನ್ನಿವೇಶದ ಸುತ್ತ ಸುತ್ತುತ್ತದೆ. ಈ ಕಥೆಯ ಸರಳತೆ ನನ್ನನ್ನು ಸೆಳೆಯುತ್ತದೆ ಮತ್ತು ಪ್ರೈಮ್ ವಿಡಿಯೋ ಮೂಲಕ ರತ್ನಾಕರನ ಈ ಕಥೆ ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ನಾನು ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ನೀವು ಎಲ್ಲಿಯವರೇ ಆಗಿದ್ದರೂ, ನೀವು ಈ ಮನುಷ್ಯನ ಪ್ರಯಾಣಕ್ಕೆ ನೀವೂ ಸಂಬಂಧವನ್ನು ಹೊಂದುತ್ತೀರಿ. ನಟ ಧನಂಜಯ್ ಹೇಳುವಂತೆ, “ಈ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಹೇಗೆ ಸ್ವಯಂ ಅನ್ವೇಷಣೆಯ ಪ್ರಯಾಣದಲ್ಲಿದ್ದಾನೆ ಮತ್ತು ಅಂತಿಮ ಸಂತೋಷವನ್ನು ಕಂಡುಕೊಳ್ಳುತ್ತಾನೆ ಎಂಬ ವಾಸ್ತವವನ್ನು ಚಿತ್ರವು ಅನ್ವೇಷಿಸುತ್ತದೆ. ರತ್ನಾಕರನ ಪ್ರಯಾಣವು ಎತ್ತರ, ತಗ್ಗು ಮತ್ತು ಗುಂಡಿಗಳ ರಸ್ತೆಗಳಿಂದ ತುಂಬಿದೆ. ಅವನು ತನ್ನ ಜೀವನಕ್ಕಾಗಿ ಒಂದು ಯೋಜನೆಯನ್ನು ಹೊಂದಿದ್ದಾನೆ ಮತ್ತು ಜೀವನವು ಅವನಿಗೆ ಹೇಗೆ ವಿಭಿನ್ನ ಪಥವನ್ನು ತೋರಿಸಿದೆ ಎಂಬುದನ್ನು ಚಿತ್ರದಲ್ಲಿ ಸುಂದರವಾಗಿ ಪ್ರದರ್ಶಿಸಲಾಗಿದೆ.

ಟ್ರೇಲರ್ ಅನ್ನು ಇಲ್ಲಿ ವೀಕ್ಷಿಸಿ: