ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಕೋವಿಡ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಾರ್ವಜನಿಕರಿಗೆ ಮಾತ್ರವಲ್ಲ ಇದೀಗ ಜನಪ್ರತಿನಿಧಿಗಳನ್ನು ಕೊರೋನಾ ಕಾಡತೊಡಗಿದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಸುಮಲತಾ ಅಂಬರೀಶ್ ಅದನ್ನು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಪಾಸಿಟಿವ್ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರೋ ಸುಮಲತಾ ಅಂಬರೀಶ್, ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನೇಕಾರ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜುಲೈ 6-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು.

ಕೈಮಗ್ಗ ನೇಕಾರರಿಗೆ ಮೊದಲನೇ ಹಂತದಲ್ಲಿ 19,744 ಕೈಮಗ್ಗ ನೇಕಾರರಿಗೆ ನೇರ ನಗದು ವರ್ಗಾವಣೆ ಮಾಡುವ ಮುಖಾಂತರ ಪ್ರತಿ ನೇಕಾರರಿಗೆ ರೂ. 2,000/- ಗಳನ್ನು ವಾರ್ಷಿಕ ಆರ್ಥಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುತ್ತಿದೆ.

ನಾಲ್ಕನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 54,789 ಕೈಮಗ್ಗ ನೇಕಾರರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿನ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ 10.96 ಕೋಟಿ ರೂ. ವೆಚ್ಚವಾಗಲಿದೆ ಎಂದು ನುಡಿದರು..

ಕೈಮಗ್ಗ ಗಣತಿಯಲ್ಲಿ ನೇಕಾರರ ಮಾಹಿತಿಗಳ ಬಿಟ್ಟು ಹೋಗಿದ್ದರೆ ಅಂತಹವರಿಗೂ ಸಹ ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈವರೆಗೆ 40,634 ಕೈಮಗ್ಗ ನೇಕಾರರು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 37,314 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಮುಂದಿನ ದಿನಗಳಲ್ಲಿ ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು..

ಇದರೊಂದಿಗೆ ವಿದ್ಯುತ್ ಮಗ್ಗ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.25 ಲಕ್ಷ ಕೂಲಿ ಕೆಲಸಗಾರರಿಗೆ 2 ಸಾವಿರ ರೂ. ಒಂದು ಬಾರಿಯ ಪರಿಹಾರ ಧನವನ್ನು ವಿತರಿಸಲಾಗುತ್ತಿದ್ದು, ಈ ವರೆಗೆ ಅನುಮೋದಿಸಲಾದ, 8897 ಅರ್ಜಿದಾರರಿಗೆ ಡಿಬಿಟಿ ಮೂಲಕ ಪರಿಹಾರ ವಿತರಣೆಗೆ ಚಾಲನೆ ನೀಡಲಾಯಿತು.

ಜವಳಿ ಸಚಿವ ಶ್ರೀಮಂತ ಬಾಳಾಸಾಹೇಬ್ ಪಾಟೀಲ ಅವರು ಮಾತನಾಡಿ, ನೇಕಾರ ಸಮ್ಮಾನ್ ಯೋಜನೆಯಿಂದ ಸಂಕಷ್ಟಕ್ಕೊಳಗಾಗಿರುವ ನೇಕಾರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಂಎಸ್ಎಂಇ, ಕೈಮಗ್ಗ ಮತ್ತು ಜವಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು..

ಡಾ. ಬಾಬು ಜಗಜೀವನರಾಂ ಅವರ ವ್ಯಕ್ತಿತ್ವ, ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಲು ಸಿಎಂ ಕರೆ

ಬೆಂಗಳೂರು. ಜು.6: ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆ ನೀಡಿದರು.

ವಿಧಾನಸೌಧದ ಆವರಣದಲ್ಲಿಂದು ಡಾ. ಬಾಬುಜಗಜೀವನರಾಂ ಅವರ ಪುಣ್ಯಸ್ಮರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ನಂತರ ಮಾತನಾಡಿದ ಅವರು, ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕರಾದ ಡಾ. ಬಾಬುಜಗಜೀವನರಾಂ ಅವರು ಶೋಷಿತರ ಆಶಾಕಿರಣರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ ಅಪರಿಮಿತವಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಕೊರತೆ ಎದುರಾದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾಗಿದ್ದಾರೆ. ರಕ್ಷಣಾ ಸಚಿವರಾಗಿ ಗುರುತರವಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ಬೆನ್ನೆಲುಬು ರೈತ ಹಾಗೂ ಯೋಧ ಈ ಎರಡೂ ಸಮುದಾಯಕ್ಕೆ ಡಾ. ಬಾಬು ಜಗಜೀವನ ರಾಂ ಅವರ ಮಾರ್ಗದರ್ಶನ ಹಾಗೂ ನಾಯಕತ್ವ ಉಲ್ಲೇಖನಾರ್ಹವಾಗಿದೆ. ಅವರ ಸಾಮಾಜಿಕ ಕಳಾಕಳಿ ಹಾಗೂ ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಗೃಹಸಚಿಚ ಬಸವರಾಜ ಬೊಮ್ಮಾಯಿ, ಸಂಸದ ನಾರಾಯಣಸ್ವಾಮಿ, ಮಾಜಿ ಸಚಿವ ಆಂಜನೇಯ ಅವರು ಮಾಲಾರ್ಪಣೆ ಸಲ್ಲಿಸಿದರು.

 

ಕೃಷಿ,ತೋಟಗಾರಿಕಾ ವಿಶ್ವವಿದ್ಯಾಲಯಗಳು ಇರುವವರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಅಜರಾಮರ:ಬಿ.ಸಿ.ಪಾಟೀಲ್

ಶಿವಮೊಗ್ಗ,ಜು.6: ಕೃಷಿ,ತೋಟಗಾರಿಕಾ ವಿಶ್ವವಿದ್ಯಾಲಯಗಳು ಇರುವವರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಅಜರಾಮರವಾಗಿರುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕೆಲಸಗಳು ಮುನ್ನೋಟ ಹೆಸರನ್ನು ಶಾಶ್ವತವಾಗುವಂತೆ ಮಾಡಿವೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿಯಿಂದ ಕನಸು ಚಿಂತನೆಯಿಂದಾಗಿ ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿತವಾಗಿದ್ದು ಈ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ಮತ್ತು ಕಿರೀಟಪ್ರಾಯವಾಗಿದೆ.

ಸೆಪ್ಟೆಂಬರ್ ನಿಂದ ಅಕಾಡೆಮಿಕ್ ವರ್ಷ ಆರಂಭವಾಗಲಿದೆ.ಆರಂಭದಲ್ಲಿ ಅರವತ್ತು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು,ಆಗಸ್ಟ್ 10ರೊಳಗೆ ಕಾಮಗಾರಿ ಕೆಲಸ ಮುಗಿಸಿದಲ್ಲಿ ಆಗಸ್ಟ್ ಕೊನೆಯವಾರದಲ್ಲಿ ಉದ್ಘಾಟನೆ ನೆರವೇರಿಸಿ ಸೆಪ್ಟೆಂಬರ್ ಮೊದಲ ವಾರದಲ್ಲಿ ತರಗತಿಗಳನ್ನು ಆರಂಭಿಸುವುದಾಗಿ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹೆಚ್.ಹಾಲಪ್ಪ, ಜಿಲ್ಲಾಧಿಕಾರಿ ಶಿವಕುಮಾರ್ ,ಮಲೆನಾಡು ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಎಸ್ ಗುರುಮೂರ್ತಿ ,
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಖಾಸಗಿ ಶಿಕ್ಷಕರಿಗೆ ನೆರವು: ಸರ್ಕಾರಿ ಶಿಕ್ಷಕರಿಗೆ ಸುರೇಶ್ ಕುಮಾರ್ ಮನವಿ

ಬೆಂಗಳೂರು: ಕೊರೋನಾ ಕಾಲಘಟ್ಟದಲ್ಲಿನ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರ ದುಃಸ್ಥಿತಿಯಲ್ಲಿರವ ಸಾರ್ವಜನಿಕ ಶಿಕ್ಷಣ ಇಲಾಖೆಯ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಖಾಸಗಿ ಶಾಲಾ ಶಿಕ್ಷಕರು ತೀವ್ರ ಸಂಕಷ್ಟದಲ್ಲಿರುವುದನ್ನು ನಮ್ಮ ಇಲಾಖೆ ಗಮನಿಸಿದೆ. ಈ ಕುರಿತು ಸಾರ್ವಜನಿಕವಾಗಿಯೂ ಹೆಚ್ಚಿನ ಕಳಕಳಿ ವ್ಯಕ್ತವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ನೆರವಿಗೆ ನಾವು ಧಾವಿಸುವುದು ಅಗತ್ಯವೆಂಬುದನ್ನು ನಾವೆಲ್ಲರೂ ಕಂಡುಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದರು.

ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಸಹ ಆಗಿದೆ. ಹಾಗಾಗಿ ನಮ್ಮ ಶಿಕ್ಷಕ ಬಂಧುಗಳು ಒಂದು ಇಲ್ಲವೇ ಎರಡು ದಿನಗಳ ವೇತನವನ್ನು ನೀಡುವ ಮೂಲಕ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಹೇಗೆ ಬರಬಹುದೆಂಬ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚಿಂತನೆ ನಡೆದಿದೆ. ಇಲಾಖೆಯ ಲಭ್ಯ ಸಂಪನ್ಮೂಲಗಳ ಮೂಲಕವೂ ಕಷ್ಟದಲ್ಲಿರುವ ನಮ್ಮ ಶಿಕ್ಷಕರಿಗೆ ಇತಿಮಿತಿಗಳಲ್ಲಿ ಆರ್ಥಿಕ ಸಹಕಾರ ನೀಡಲು ಸರ್ಕಾರ ಸಹ ಅವಕಾಶಗಳನ್ನು ಅವಲೋಕಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಶಿಕ್ಷಕರಿಗೆ ನೆರವಾಗಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಾರಾಯಣಸ್ವಾಮಿಯವರು ತಮ್ಮ ಒಂದು ತಿಂಗಳ ವೇತನ ನೀಡಲು ಮುಂದಾಗಿದ್ದಾರೆ. ನಾನೂ ಸಹ ನನ್ನ ಪಾಲನ್ನು ನೀಡುವೆ ಎಂದು ಹೇಳಿರುವ ಸುರೇಶ್ ಕುಮಾರ್, ನಮ್ಮ ಶಿಕ್ಷಕರು ಉದಾರತೆ ಮೆರೆಯುವ ಮೂಲಕ ಸಮಾಜಕ್ಕೆ ಇಂದು ಅವಶ್ಯವಿರುವ ಸಕಾರಾತ್ಮಕ ಸಂದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರ ತನ್ನ ಕಠಿಣ ಪರಿಸ್ಥಿತಿಯಲ್ಲಿಯೂ ನಮ್ಮ ಶಿಕ್ಷಕರ ವೇತನ ಭ್ಯತ್ಯೆಗಳನ್ನು ನೀಡಲು ಯಾವುದೇ ವಿಳಂಬ ಮಾಡಿಲ್ಲ. ಈ ಸಂದರ್ಭದಲ್ಲಿ ನಾವೆಲ್ಲ ಮಾನವೀಯ ಗುಣವನ್ನು ಮರೆಯಬೇಕಿದೆ. ಆ ಮೂಲಕ ನಮ್ಮ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ನಮ್ಮ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಮುಂದೆ ಬರಬೇಕೆಂದು ಸುರೇಶ್ ಕುಮಾರ್ ಶಿಕ್ಷಕ ಸಮೂಹದಲ್ಲಿ ಮನವಿ ಮಾಡಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಹಲವಾರು ರೀತಿಯ ವೃತ್ತಿ ನಿರತರು ಸಂಕಷ್ಟದಲ್ಲಿದ್ದಾರೆ. ಆದರೆ ರಾಷ್ಟ್ರ ನಿರ್ಮಾತೃಗಳು ಹಾಗೂ ನಮ್ಮ ಮಕ್ಕಳಿಗಾಗಿ ದುಡಿಯುತ್ತಿರುವ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಮುಂದೆ ಬರುವುದು ಸಮಾಜದ ಜವಾಬ್ದಾರಿಯಾಗಿದ್ದು, ಅದನ್ನು ನಮ್ಮ ಶಿಕ್ಷಕ ಸಮುದಾಯ ಪ್ರದರ್ಶಿಸುವ ಸಮಯ ಇದಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬಹುಭಾಷಾ ನಟಿ,ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೂ ಕೊರೋನ ಪಾಸಿಟಿವ್

ಬೆಂಗಳೂರು: ಬಹುಭಾಷಾ ನಟಿ ಹಾಗು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ.ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ಅವರೇ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡು ಮಾಹಿತಿ ನೀಡಿದ್ದಾರೆ.

ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ.

ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ತಿಳಿಸಿದ್ದಾರೆ.