ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಐಸಿಯು ಘಟಕ ಸ್ಥಾಪನೆ ವೈದ್ಯರ ಜತೆ ಸಂವಾದ, ವಸ್ತು ಪ್ರದರ್ಶನ ಕೇಂದ್ರಕ್ಕೆ ಡಿಸಿಎಂ ಭೇಟಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್- 19 ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸರಕಾರ, ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲು ಮುಂದಾಗಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಮಾಡಲಾಗಿರುವ ಕೋವಿಡ್ ಬೆಡ್ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದ ವೇಳೆ ಈ ವಿಷಯ ತಿಳಿಸಿದರು.

ಜಿಕೆವಿಕೆ, ಹಜ್ ಭವನ ಮತ್ತು ರವಿಶಂಕರ್ ಗುರೂಜಿ ಆಶ್ರಮದಲ್ಲಿರುವ ಕೋವಿಡ್ ಕೇರ್ ಕೇಂದ್ರಗಳು ಈಗಾಗಲೇ ಆರಂಭವಾಗಿವೆ. ಇನ್ನು ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕೇರ್ ಸೆಂಟರುಗಳು ಇನ್ನಷ್ಟೇ ಆರಂಭವಾಗಬೇಕಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.

ಪ್ರತಿ ಕೋವಿಡ್ ಕೇರ್ ಕೇಂದ್ರದಲ್ಲೂ 10 ತುರ್ತು ನಿಗಾ ಘಟಕಗಳನ್ನು ತೆರೆಯಲಾಗುವುದು. ವಸ್ತು ಪ್ರದರ್ಶನ ಕೇಂದ್ರದಲ್ಲಿ 100 ಐಸಿಯು ಬೆಡ್ ಗಳನ್ನು ಮಾಡುತ್ತೇವೆ. ಇಲ್ಲಿ ಆಮ್ಲಜನಕ ವ್ಯವಸ್ಥೆ ಸೇರಿ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ನಗರದ ಎಲ್ಲೆಡೆ ಸೋಂಕಿತರು ತುಂಬಿದರೆ ಉಳಿದವರನ್ನು ವಸ್ತು ಪ್ರದರ್ಶನ ಕೇಂದ್ರಕ್ಕೆ ಶಿಫ್ಟ್ ಮಾಡುತ್ತೇವೆ. ಈ ಕೇಂದ್ರದಲ್ಲಿ ಸೋಮವಾರದ ಹೊತ್ತಿಗೆ 7,000 ಬೆಡ್ ಗಳು ಸಿದ್ಧವಾಗಲಿವೆ. ಉಳಿದ 3,000 ಬೆಡ್ ಗಳು ಮೂರು-ನಾಲ್ಕು ದಿನಗಳಲ್ಲಿ ಸಿದ್ಧವಾಗಲಿವೆ. ಅಷ್ಟರೊಳಗೆ ಈ ಕೇಂದ್ರವು ಸೋಂಕಿತರಿಗೆ ಲಭ್ಯವಾಗಲಿದೆ. ’ಎ’ ಸಿಂಪ್ಟಮೇಟಿಕ್ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ವಿವರ ನೀಡಿದರು.

ವೈದ್ಯರಿಗೆ ವೈದ್ಯಕೀಯೇತರ ಕೆಲಸವಿಲ್ಲ:

ಇನ್ನು ಮುಂದೆ ವೈದ್ಯರು ಮತ್ತು ನರ್ಸುಗಳಿಗೆ ಕೋವಿಡ್ ಕೇರ್ ಗಳಲ್ಲಿ ವೈದ್ಯಕೀಯೇತರ ಕೆಲಸಗಳು ಇರುವುದಿಲ್ಲ. ಅದಕ್ಕೆ ಪ್ರತ್ಯೇಕ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು. ವೈದ್ಯರು, ನರ್ಸುಗಳು ಸಂಪೂರ್ಣವಾಗಿ ತಮ್ಮ ಗಮನವನ್ನು ಸೋಂಕಿತರ ಚಿಕಿತ್ಸೆ, ಆರೈಕೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಹಜ್ ಭವನದ ಕೋವಿಡ್ ಕೇರ್ ವೈದ್ಯರ ಜತೆ ವಿಡಿಯೊ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ, ವೈದ್ಯರಿಗೆ ಈ ವಿಷಯವನ್ನು ತಿಳಿಸಿದರು. ಯಾವುದೇ ಕಾರಣಕ್ಕೆ ನಿಮಗೆ ಹೆಚ್ಚುವರಿ ಒತ್ತಡ ಹೇರುವುದಿಲ್ಲ. ನೀವು ರೋಗಿಗಳ ಮೇಲೆ ಗಮನ ಕೊಟ್ಟರೆ ಸಾಕು. ಸರಕಾರ ಎಲ್ಲ ರೀತಿಯ ನೆರವು ನಿಮಗೆ ನೀಡಲಿದೆ. ನಿಮ್ಮ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.

ಇದೇ ವೇಳೆ, ತಮಗೆ ಮತ್ತು ರೋಗಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂಬ ವಿಷಯವನ್ನು ವೈದ್ಯರು ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು. ಮರುಕ್ಷಣವೇ, ಆಹಾರ ಪೂರೈಕೆದಾರರಿಗೆ ಫೋನ್ ಕರೆ ಮಾಡಿದ ಡಿಸಿಎಂ, ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ತಾಕೀತು ಮಾಡಿದರಲ್ಲದೆ, ಮತ್ತೆ ದೂರು ಬಂದರೆ ನಿಮ್ಮ ಗುತ್ತಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಔಷಧ ಪೂರೈಕೆಗೆ ಆದೇಶ:
ಕೋವಿಡ್ ಕೇಂದ್ರಕ್ಕೆ ಔಷಧಿಗಳ ಕೊರತೆ ಇದೆ ಎಂಬ ಅಂಶವನ್ನು ವೈದ್ಯರು ಇದೇ ವೇಳೆ ಡಿಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೂಡಲೇ ತಮಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದರಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಈ ಬಗ್ಗೆ ಆದೇಶ ನೀಡಿದರು.

ನೈಸ್ ರಸ್ತೆ ಬಳಿಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಅಧಿಕಾರಿಗಳು ಡಿಸಿಎಂ ಜತೆಯಲ್ಲಿದ್ದರು.

ವಾರ್ಡ್ ಮಟ್ಟದಲ್ಲಿ ಕೊರೋನ ಸೋಂಕಿತರ ಸೇವೆಗೆ ಬಿಜೆಪಿ ಕಾರ್ಯಕರ್ತರ ದಂಡು: ಹುರುಪು ತುಂಬಿದ ಡಿಸಿಎಂ

ಬೆಂಗಳೂರು: ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಕೋವಿಡ್ 19 ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತಿರುವ ಬಿಜೆಪಿ ಕಾರ್ಯಕರ್ತರು, ಇನ್ನೆರಡು ದಿನಗಳಲ್ಲಿ ಕೊರೊನಾ ವಾರಿಯರ್ ಗಳಾಗಿ ನಗರದ ಪ್ರತಿ ವಾರ್ಡುಗಳಲ್ಲಿ ಜನ ಸೇವೆಗೆ ಮುಂದಾಗಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಲ್ಲೇಶ್ವರ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ವರ್ಚುವಲ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿವಾರ್ಡ್ ನಲ್ಲಿಯೂ ಆರೋಗ್ಯವಂಥ 50 ಕಾರ್ಯಕರ್ತರು ಈ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವೆರಲ್ಲರಿಗೂ ಸೂಕ್ತ ತರಬೇತಿ ಹಾಗೂ ಹಾಫ್ ಪಿಪಿಎ ಕಿಟ್ಟುಗಳನ್ನು ನೀಡಿ ನಿಯೋಜಿಸಲಾಗುವುದು ಎಂದು ನುಡಿದರು.

ಈ ಮೊದಲಿನಿಂದಲೂ ಪಕ್ಷದ ಕಾರ್ಯಕರ್ತರು ಕೊರೋನಾ ವಾರಿಯರ್ ಗಳಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಲಾಕ್ ಡೌನ್ ಸಮಯದಲ್ಲಿ ಈ ಪಡೆ ಜೀವದ ಹಂಗು ತೊರೆದು ಕೆಲಸ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಈ ಸೇವೆ ಇನ್ನೂ ಮುಂದುವರೆಯಬೇಕಾಗಿದ್ದು ನಮ್ಮ ಪಕ್ಷದ ಕಾರ್ಯಕರ್ತರು ಕೂಡಲೇ ಸನ್ನದ್ಧರಾಗಿ ಮುಂದೆ ಬರಬೇಕು ಎಂದು ಡಿಸಿಎಂ ಕರೆ ನೀಡಿದರು.

ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಕಾರ್ಯಕರ್ತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲಿದೆ. ಕಾರ್ಯಕರ್ತರು ಸ್ವ-ಇಚ್ಚೆಯಿಂದ ಹೆಸರು ನೋಂದಾಯಿಸಿಕೊಳ್ಳಬೇಕು. ಅವರವರ ವಾರ್ಡ್ ನ ಪ್ರತಿ ಪ್ರದೇಶದ ಮಾಹಿತಿಯ ಜತೆಗೆ ಸೋಂಕಿತರನ್ನು ಗುರುತಿಸುವುದು, ಅವರನ್ನು ಪ್ರಾಥಮಿಕ ಹಂತದ ತಪಾಸಣೆಗೆ ಕಳಿಸುವುದು, ಆಸ್ಪತ್ರೆ ಇಲ್ಲವೇ ಹೋಮ್ ಕೇರ್ ನಲ್ಲೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದೂ ಸೇರಿದಂತೆ ಅಗತ್ಯ ಎಲ್ಲ ಸೇವೆಗಳನ್ನು ಮಾಡಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.

ಎಲ್ಲಿ ಸೋಂಕು ಹೆಚ್ಚು ಹರಡುತ್ತಿದೆ ಎಂಬುದನ್ನು ಗುರುತಿಸಬೇಕು. ಪಾಲಿಕೆಗೆ ತಕ್ಷಣ ಮಾಹಿತಿ ನೀಡುವುದರ ಜತೆ, ಜನರು ಮತ್ತು ಪಾಲಿಕೆಯ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ಸೋಂಕು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಅದನ್ನು ಕಡಿಮೆ ಮಾಡಲು ನಮ್ಮ ಕಾರ್ಯಕರ್ತರ ಪಡೆ ಬಿಬಿಎಂಪಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಹೋಮ್ ಕೇರ್ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕು. ಇನ್ನು ಕನಿಷ್ಠ 4 ತಿಂಗಳಾದರೂ ಈ ಸಮಸ್ಯೆ ಇರುತ್ತದೆ. ಅಷ್ಟೂ ದಿನಗಳ ಕಾಲ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು ಎಂದು ಡಿಸಿಎಂ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಕೋವಿಡ್ ಸೋಂಕಿನ ಭೀಕರತೆ ಗೊತ್ತಾದ ಕೂಡಲೇ ಅನ್ಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಓಡಿಹೋಗಿ ಮನೆಗಳಲ್ಲಿ ಬಾಗಿಲು ಹಾಕಿಕೊಂಡರು. ಎಂಥ ಪರಸ್ಥಿತಿಯಲ್ಲೂ ಅವರು ಹೊರಬರಲೇ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಕೊರೋನಾ ವಾರಿಯರುಗಳಾಗಿ ಜೀವದ ಹಂಗು ತೊರೆದು ಕೆಲಸ ಮಾಡಿದರು ಎಂದು ಅವರು ಮಾಹಿತಿ ನೀಡಿದರು.

ಬೆಡ್ ಗಳಿಗೆ ಕೊರತೆ ಇಲ್ಲ:
ನಮ್ಮ ಪಕ್ಷದ ಜತೆಗೆ ನಮ್ಮ ಸರಕಾರವೂ ಸೋಂಕು ತಡೆಗಟ್ಟಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಚಿಕಿತ್ಸೆ, ಬೆಡ್ಡುಗಳು, ವೈದ್ಯರು, ನರ್ಸ್ ಗಳು ಹಾಗೂ ಪೂರಕ ಸಿಬ್ಬಂದಿ ಕೊರತೆಯಾಗದಂತೆ ಸರಕಾರ ನೋಡಿಕೊಂಡಿದೆ. ಖಾಸಗಿ ಆಸ್ಪತ್ರೆಗಳು ಸರಕಾರದ ಜತೆ ಕೈಜೋಡಿಸಿವೆ. ಈಗಾಗಲೇ ಸರಕಾರದಿಂದ 1500 ಬೆಡ್ ಸಿದ್ಧವಾಗಿವೆ. ಖಾಸಗಿ ಆಸ್ಪತ್ರೆಗಳಿಂದ 7 ಸಾವಿರ ಬೆಡ್ ಸಿಕ್ಕಿವೆ. ಕೋವಿಡ್ ಕೇರಿನಲ್ಲಿ 15000 ಬೆಡ್ ಗಳಿವೆ. ಇನ್ನು ಒಂದೇ ಕಡೆ 10 ಸಾವಿರ ಬೆಡ್ ಗಳನ್ನು ಹಾಕಿ ಅದನ್ನು ಸುಸಜ್ಜಿತ ಚಿಕಿತ್ಸಾ ಕೇಂದ್ರವನ್ನಾಗಿ ಮಾಡುತ್ತಿದ್ದೇವೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿನ ಮತ್ತಷ್ಟು ಬೆಡ್ ಗಳು ಸರಕಾರ ವಶಕ್ಕೆ ಪಡೆಯಲಿದೆ. ಈ ನಡೆವೆ ಶೇ. 80ರಷ್ಟು ಜನರಿಗೆ ಕೆಲ ಪ್ರಾಥಮಿಕ ಲಕ್ಷಣಗಳಷ್ಠ ಕಾಣಿಸಿಕೊಂಡಿದ್ದು, ಅವರಿಗೆ ಅವರವರ ಮನೆಗಳಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಬಂದಾಗ ಬೆಂಗಳೂರನಲ್ಲಿ ಕೇವಲ ಎರಡು ಲ್ಯಾಬುಗಳಷ್ಟೇ ಇದ್ದವು. ಈಗ ನೂರಾರು ಲ್ಯಾಬುಗಳಿವೆ. ಹೀಗಾಗಿ ಯಾರು ಹೆದರಬೇಕಾಗಿಲ್ಲ. ಪ್ರತಿಯೊಬ್ಬರೂ ದೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಡಿಸಿಎಂ ವಿವರ ನೀಡಿದರು.

ಹೆಬ್ಬಾಳದಿಂದ 300 ಕಾರ್ಯಕರ್ತರು:
ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ಬಾಳದ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಹೆಬ್ಬಾಳ ಕ್ಷೇತ್ರದಿಂದ ಕೊರೋನಾ ವಾರಿಯರುಗಳಾಗಿ ಕೆಲಸ ಮಾಡಲು 300ಕ್ಕೂ ಹೆಚ್ಚು ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಅಗತ್ಯಬಿದ್ದರೆ ಮತ್ತಷ್ಟು ಕಾರ್ಯಕರ್ತರು ಈ ಮಹಾ ಕಾರ್ಯಕ್ಕೆ ಕೈಜೋಡಿಸಲಿದ್ದಾರೆ ಎಂದರು. ಇದೇ ವೇಳೆ ಜಿಕೆವಿಕೆಯಲ್ಲಿ ತೆರೆಯಲಾಗಿರುವ 700 ಬೆಡ್ ಗಳ ಕೋವಿಡ್ ಚಿಕಿತ್ಸಾ ಕೇಂದ್ರದ ಉಸ್ತುವಾರಿಯನ್ನು ಡಿಸಿಎಂ ಅವರು ನಾರಾಯಣ ಸ್ವಾಮಿ ಅವರಿಗೆ ವಹಿಸಿಸದರು.

ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ಆಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಅನೇಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ, ಭಯಬೇಡ : ಸಚಿವ ಸುಧಾಕರ್‌

ಬೆಂಗಳೂರು : ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಕೆಲ ಮಾಧ್ಯಮಗಳ ವರದಿಗಳಿಂದ ಜನರು ಭಯಬೀತರಾಗಿದ್ದಾರೆ. ಇದೊಂದು ಮಾರಣಾಂತಿಕ ರೋಗ ಎಂಬ ಭೀತಿಯಲ್ಲಿ ಅನೇಕರು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಅಂತಹ ಆತಂಕಕಾರಿ ಪರಿಸ್ತಿತಿ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
ಜಗತ್ತಿನಾದ್ಯಂತ ೧,೧೩,೮೭,೪೯೯ ಮಂದಿ ಸೋಂಕಿತರಿದ್ದಾರೆ. ಇದರಲ್ಲಿ ೬೪,೪೫,೪೧೦ ಮಂದಿ ಗುಣಮುಖರಾಗಿದ್ದಾರೆ, ಶೇಕಡವಾರು ಪ್ರಮಾಣ ೫೬.೬೦ ಇದೆ. ೫,೩೩,೬೨೧ ಮಂದಿ ಸಾವಿಗೀಡಾಗಿದ್ದಾರೆ, ಸಾವಿನ ಶೇಕಡಾವಾರು ಪ್ರಮಾಣ ೪.೬೮ ರಷ್ಟಿದೆ. ಭಾರತದಲ್ಲಿ ೬,೭೪,೩೧೩ಸೋಂಕಿತರಿದ್ದು, ಶೇಕಡಾ ೬೦.೬೭ ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ ೨.೮೬ರಷ್ಟಿದೆ. ಆದರೆ ರಾಜ್ಯದಲ್ಲಿ ಇದು ರಾಷ್ಟ್ರದ ಪ್ರಮಾಣಕ್ಕಿಂತ ಕಡಿಮೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ ೧.೫೫ ರಷ್ಟಿದೆ. ಇನ್ನೂ ದೇಶದ ಮಹಾನಗರಗಳಾದ ದಿಲ್ಲಿ, ಮುಂಬಾಯಿ, ಚೆನ್ನೈಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಶೇಕಡಾ ೧.೪೬ರಷ್ಟು. ಹೀಗಾಗಿ ಯಾರೊಬ್ಬರು ಭಯ ಪಡಬೇಕಿಲ್ಲ ಎಂದು ವಿವರಿಸಿದರು.

ಕಳೆದ ಹತ್ತು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಮತ್ತು ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗಗರದ ವಾಡ್‌೯ನಿಂದ ಗ್ರಾಮದ ಹಂತದವರೆಗೆ ಕಾಯ೯ಪಡೆಗಳನ್ನು ರಚಿಸಲಾಗಿದೆ. ಇದರ ಉಸ್ತುವಾರಿಗಾಗಿಯೇ ಹಿರಿಯ ಅಧಿಕಾರಿ ಅತೀಕ್‌ ಅವರನ್ನು ನಿಯೋಜಿಸಲಾಗಿದೆ. ಈ ಸಮಿತಿಗಳು ಹೊಸದಾಗಿ ಹೊರಡಿಸಿರುವ ಮಾಗ೯ಸೂಚಿ ಅನ್ವಯ ರೋಗ ಲಕ್ಷಣ ಇಲ್ಲದ ರೋಗಿಗಳ ಕ್ವಾರಂಟೈನ್‌ ವ್ಯವಸ್ಥೆ, ಜ್ವರ ಲಕ್ಷಣ ಇರುವವರು, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರನ್ನು ಗುರುತಿಸಿ ಟೆಸ್ಟ್‌ಗೆ ಒಳಪಡಿಸುವ ಜವಾಬ್ದಾರಿ ನಿವ೯ಹಿಸಲಿದ್ದಾರೆ ಎಂದರು.

ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದರೆ ಕ್ರಿಮಿನಲ್‌ ಕೇಸ್‌ : ಸಚಿವ ಸುಧಾಕರ್‌

ಬೆಂಗಳೂರು : ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ವಿಧಾನಸೌಧಕ್ಕೆ ಮರಳಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿವರ ನೀಡಿದರು.

ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ಸಕಾ೯ರ ಮಾತುಕತೆ ನಡೆಸಿದೆ. ಸಭೆಯಲ್ಲಿ ತಮ್ಮಲ್ಲಿರುವ ಅಧ೯ದಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ತಕ್ಷಣದಿಂದಲೇ ೨,೭೩೪ ಹಾಸಿಗೆ ನೀಡುವುದಾಗಿ ಅವರು ಮಾತುಕೊಟ್ಟಿದ್ದರು. ಇದುವರೆಗೆ ನೀಡಿರುವುದು ಕೇವಲ ೧೧೬ ಮಾತ್ರ. ನಮಗೆ ಕೊಟ್ಟಿರುವ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಬಂದು ದಾಖಲಾಗಿರುವ ಕೋವಿಡ್‌ ರೋಗಿಗಳ ಸಂಖ್ಯೆ ೮೯೮ ಎಂದು ಗೊತ್ತಾಗಿದೆ. ಮಾತು ಕೊಟ್ಟಂತೆ ಸಕಾ೯ರಕ್ಕೆ ನೀಡಬೇಕಿರುವ ಹಾಸಿಗೆಗಳನ್ನು ಅವರು ಆದಷ್ಟು ಬೇಗ ಹಸ್ತಾಂತರಿಸಬೇಕು. ಇದರ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿಯೇ ಮುಖ್ಯಮಂತ್ರಿಯವರು ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾಯ೯ದಶಿ೯ ವಿಶ್ವನಾಥ್‌ ಅವರನ್ನು ನೇಮಕ ಮಾಡಿದ್ದಾರೆ. ಸೋಮವಾರದಿಂದಲೇ ಅವರು ಕಾಯೋ೯ನ್ಮುಖರಾಗಲಿದ್ದಾರೆ ಎಂದು ತಿಳಿಸಿದರು.

ಇದಲ್ಲದೆ, ತಮ್ಮ ಬಳಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಯಾವುದೇ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿ ಹಿಂದಕ್ಕೆ ಕಳುಹಿಸುವಂತಿಲ್ಲ. ಇದನ್ನು ಈಗಾಗಲೇ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟರ ಮೇಲೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಇದು ಆರೋಗ್ಯ ತುತು೯ ಪರಿಸ್ಥಿತಿ ಸಂದಭ೯ ಆಗಿರುವುದರಿಂದ ಈ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ದೂರು ಇದ್ದರೆ ಕರೆ ಮಾಡಿ : ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ ಗೊಂದಲ ಆಗಿರುವುದು ನಿಜ. ಅದನ್ನು ಸರಿಪಡಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಅದಕ್ಕಾಗಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಸೋಮವಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಎಲ್ಲಿಯಾದರೂ ಚಿಕಿತ್ಸೆಯಲ್ಲಿ, ದಾಖಲು ಮಾಡಿಕೊಳ್ಳುವಲ್ಲಿ, ಟೆಸ್ಟ್‌ ವರದಿಗಳಿಗೆ ಸಂಬಂಧಿಸಿದ ದೂರು ಇದ್ದಲ್ಲಿ, ಚಿಕಿತ್ಸೆ ನಿರಾಕರಿಸಿದರೆ ೧೯೧೨ ನಂಬರಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ. ಇದಕ್ಕಾಗಿಯೇ ದಿನದ ೨೪ ತಾಸು ಕಾಯ೯ ನಿವ೯ಹಿಸುವ ಕಾಲ್‌ ಸೆಂಟರ್‌ ಆರಂಭಿಸಲಾಗಿದೆ. ಆರಂಭದಲ್ಲಿ ಒಂದೆರಡು ದಿನ ಸಣ್ಣಪುಟ್ಟ ಸಮಸ್ಯೆ ಬರಬಹುದು, ಕ್ರಮೇಣ ಎಲ್ಲವೂ ಸರಿಯಾಗಲಿದೆ ಎಂದರು.
ನಗರದಲ್ಲಿ ಅಗತ್ಯ ಸಂಖ್ಯೆಯ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಹಾಲಿ ೧೦೮ ಸೇವೆಯಡಿ ಕಾಯ೯ ನಿವ೯ಹಿಸುತ್ತಿರುವ ಆಂಬ್ಯುಲೆನ್ಸ್‌ಗಳ ಹೊರತಾಗಿ ನಗರದ ಪ್ರತಿ ವಾಡಿ೯ಗೆ ಎರಡುರಂತೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತದೆ. ಯಾರಿಗೆ ಆಗಲಿ ಅಗತ್ಯವಿದ್ದಲ್ಲಿ ೧೦೮ ಸಂಖ್ಯೆಗೆ ಕರೆ ಮಾಡಿ ಸೌಲಭ್ಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಹೆಚ್ಚು ವಸೂಲಿ ಮಾಡುವಂತಿಲ್ಲ : ಕೆಲ ಮಾಧ್ಯಮಗಳಲ್ಲಿ ಕೋವಿಡ್‌ ಪರೀಕ್ಷೆಗೆ ನಾಲ್ಕು ಅಥವಾ ನಾಲ್ಕೂವರೆ ಸಾವಿರ ರೂ. ತೆಗೆದುಕೊಳ್ಳಲಾಗುತ್ತಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ. ಸಕಾ೯ರ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿಗೆ ಟೆಸ್ಟ್‌ ಮಾಡಲಾಗಿದೆ. ನಯಾ ಪೈಸೆ ತೆಗೆದುಕೊಂಡಿಲ್ಲ. ಸಕಾ೯ರದವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿಯವರಿಗೂ ದರ ನಿಗದಿ ಮಾಡಲಾಗಿದೆ, ನಮ್ಮಿಂದ ಕಳುಹಿಸದ ರೋಗಿಗಳಿಗೆ ೨,೨೦೦ ರೂ. ದರ ಪಡೆಯಬೇಕು ಎಂದು ನಿಗದಿಪಡಿಸಲಾಗಿದೆ. ಒಂದು ವೇಳೆ ಹೆಚ್ಚು ದರ ಪಡೆದರೆ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಮ್ಮಲ್ಲಿ ಒಟ್ಟು ೮೦ ಪ್ರಯೋಗಾಲಯಗಳಿವೆ. ಅವುಗಳ ಪೈಕಿ ಕೆಲ ಲ್ಯಾಬ್‌ಗಳ ಮೇಲೆ ಒತ್ತಡವಿದೆ. ಇದನ್ನು ನಿವಾರಿಸಿ ದಿನದ ೨೪ ತಾಸಿನಲ್ಲಿ ವರದಿ ನೀಡುವ ವ್ಯವಸ್ಥೆ ಜಾರಿಗೊಳಿಸುವ ಸಲುವಾಗಿ ಹಿರಿಯ ಅಧಿಕಾರಿ ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಟೆಸ್ಟ್‌ಗಳ ಸಂಖ್ಯೆಯನ್ನು ದಿನವೊಂದಕ್ಕೆ ೩೦ ಸಾವಿರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಖಾಸಗಿ ಲ್ಯಾಬ್‌ಗಳೂ ಕೂಡ ಪೂಣ೯ ಪ್ರಮಾಣದಲ್ಲಿ ಟೆಸ್ಟ್‌ಗಳನ್ನು ಮಾಡಲೇ ಬೇಕು. ಒಂದು ವೇಳೆ ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ಅಂತಹ ಖಾಸಗಿ ಮೆಡಿಕಲ್‌ ಕಾಲೇಜುಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆತಂಕ ಬೇಡ : ನಮ್ಮಲ್ಲಿ ಕೋವಿಡ್‌ ಕೇರ್‌ , ಸಕಾ೯ರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ೮೧೯ ಹಾಸಿಗೆಗಳ ಪೈಕಿ ೧೫೨ ಖಾಲಿಯಿವೆ, ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ೧೮೯೯ ಹಾಸಿಗೆ ಪೈಕಿ ೭೭೯ ಲಭ್ಯವಿವೆ, ಸಕಾ೯ರಿ ಆಸ್ಪತ್ರೆಗಳಲ್ಲಿ ೬೧೧ರಲ್ಲಿ ಇನ್ನೂ ೧೦೫ ಖಾಲಿಯಿವೆ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳಿವೆ. ಖಾಸಗಿ ಆಸ್ಪತ್ರೆಗಳು ನಮಗೆ ೨೭೩೪ ಹಾಸಿಗೆ ನೀಡಬೇಕಿದ್ದು ಇದುವರೆಗೆ ೧೧೬ ಮಾತ್ರ ನೀಡಿದ್ದಾರೆ. ಹೀಗಾಗಿ ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಹಂಚಿಕೆಯಲ್ಲಿನ ಗೊಂದಲ ನಿವಾರಣೆ ಆಗಿ ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಜನರು ಗೊಂದಲಕ್ಕೆ ಒಳಗಾಗುವ, ಆತಂಕಪಡುವ ಅಗತ್ಯವಿಲ್ಲ ಎಂದರು.

ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ನಿಜ. ಅದನ್ನು ನಿರೀಕ್ಷಿಸಲಾಗಿತ್ತು, ಇನ್ನೂ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಯವರು ಇದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ನಮ್ಮವೈದ್ಯರು ಮತ್ತು ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ಅವರು ನಾಲ್ಕು ತಿಂಗಳುಗಳಿಂದ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾಸ್ತವ ಸಂಗತಿ ಅಥ೯ ಮಾಡಿಕೊಂಡು ಸಾವ೯ಜನಿಕರು, ಪ್ರತಿ ಪಕ್ಷನಾಯಕರು ಸಕಾ೯ರದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾನೂನು ಜಾರಿಗೆ ಚಿಂತನೆ
ಹಿರಿಯ ನಾಗರೀಕರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವರನ್ ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ. ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ೬೦ ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣಗಳಿರುವ ಹಿರಿಯ ನಾಗರೀಕರನ್ನು ಟೆಸ್ಟ್‌ಗೆ ಒಳಪಡಿಸುವಂತೆ ಕಾಯ೯ಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ನಾಗರೀಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚಚಿ೯ಸಲಾಗುತ್ತಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

ಕೋವಿಡ್‌ ಆಸ್ಪತ್ರೆಗಳಿಗೆ ಸಚಿವ ಸುಧಾಕರ್‌ ದಿಢೀರ್‌ ಭೇಟಿ, ಪರಿಶೀಲನೆ
ಬೆಂಗಳೂರು : ಸಾವ೯ಜನಿಕವಾಗಿ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಭಾನುವಾರ ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾವುದೇ ಸೂಚನೆ ನೀಡದೆ ಸಚಿವರು ದಿಢೀರ್‌ ಭೇಟಿ ನೀಡಿ ರೋಗಿಗಳ ದಾಖಲು ವ್ಯವಸ್ಥೆ, ಟೆಸ್ಟ್‌ಗಳ ಪ್ರಮಾಣ, ಐಸಿಯು ಮತ್ತು ಇತರೆ ವಾಡು೯ಗಳಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಊಟ, ಪಿಪಿಇ ಕಿಟ್‌ ಹಾಗೂ ಇತರೆ ಉಪಕರಣಗಳ ಗುಣಮಟ್ಟ, ತಜ್ಷರು, ವೈದ್ಯರು ಮತ್ತು ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದರು.
ಐಸಿಯು ಮತ್ತು ಇತರೆ ವಾಡು೯ಗಳಲ್ಲಿರುವ ರೋಗಿಗಳ ಜತೆ ಸಂವಾದ ನಡೆಸಿದ ಸಚಿವರು ಚಿಕಿತ್ಸೆ ಗುಣಮಟ್ಟ ಮತ್ತು ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ನೇರವಾಗಿ ಮಾಹಿತಿ ಪಡೆದರು. ಜಯನಗರ ಆಸ್ಪತ್ರೆಯಲ್ಲಿ ನಿಗದಿತ ಸಂಖ್ಯೆ ತಜ್ಞರು ಇಲ್ಲದಿರುವುದು, ಟೆಸ್ಟ್‌ಗಳ ಮಾಹಿತಿ ಸರಿಯಾಗಿ ನಿವ೯ಹಣೆ ಮಾಡದಿರುವುದು, ಹೊರಗೆ ರೋಗಿಗಳು ಕಾಯುತ್ತಿದ್ದರೂ ದಾಖಲು ಮಾಡದಿರುವುದಕ್ಕೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ಸತತವಾಗಿ ಕೋವಿಡ್‌ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವುದನ್ನು ಮುಂದುವರಿಸಿ ರೋಗಿಗಳಿಂದ ನೇರವಾಗಿ ಮಾಹಿತಿ ಪಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು ಲೋಪಗಳಿದ್ದಲ್ಲಿ ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಹಿರೇಕೆರೂರು ಕೋವಿಡ್ ಪರಿಶೀಲನಾ ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ,ಜು.5: ಹಿರೇಕೆರೂರು ತಾಲೂಕಿನಲ್ಲಿ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗಳ ಸ್ಥಿತಿಗತಿ,ಲಭ್ಯ ವೈದ್ಯರ ಸೇವೆ ಇತ್ಯಾದಿ ಕುರಿತು ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಹಿರೇಕೆರೂರಿನ ನಿವಾಸದಲ್ಲಿಂದು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ಹಿರೇಕೆರೂರಿನಲ್ಲಿ ಕೋವಿಡ್ ಆಸ್ಪತ್ರೆ 16 ಕೊರೊನಾ ಸೋಂಕಿತರಿದ್ದು ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರೇ ಈ ಸೋಂಕಿತರ ಚಿಕಿತ್ಸೆ ಮಾಡುತ್ತಿದ್ದಯ,ಈ ವೈದ್ಯರು ಸಹ ಇದೀಗ ಕ್ವಾರೆಂಟೇನ್ ಹೋಗುತ್ತಿದ್ದು ಪರ್ಯಾಯ ವೈದ್ಯ ಸಿಬ್ಬಂದಿ ಒದಗಿಸಬೇಕು. “ಡಿ” ಗ್ರೂಪ್ ನೌಕರರ ಸೇವೆಯೂ ಸ್ವಚ್ಛತೆಗೆ ಅಗತ್ಯವಿದೆ.ಹೀಗಾಗಿ ಆದಷ್ಟು ಸಿಬ್ಬಂದಿಗಳನ್ನು ಶೀಘ್ರವಾಗಿ ಒದಗಿಸಬೇಕೆಂದು ಬಿ.ಸಿ.ಪಾಟೀಲ್ ಅವರು ಜಿಲ್ಲಾಧಿಕಾರಿ ಕೃಷ್ಣಾ ಬಾಜಪೆಯವರಿಗೆ ಕರೆ ಮಾಡಿ ಸೂಚಿಸಿದರು.ಅಂತೆಯೇ ಜಿಲ್ಲಾವೈದ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಅಂಬ್ಯಲ್ಯುನ್ಸ್ ಒದಗಿಸಬೇಕು ಎಂದರು.

ಹಿರೇಕೆರೂರು ತಹಶೀಲ್ದಾರ್ ಭಗವಾನ್ ರಟ್ಟಹಳ್ಳಿ ತಹಶೀಲ್ದಾರ್ ಗುರುಬಸವನಗೌಡ, ಸಿಪಿಐ ಮಂಜುನಾಥ್ ಪಂಡಿತ್,ಪಿಎಸ್‌ಐ
ಗಳಾದ ದೀಪಾ, ಆಶಾ,ವೈದ್ಯ ಡಾ.ಹೊನ್ನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಸಾರ್ವಜನಿಕರಿಗೆ ಒಂದು ಗಂಟೆ ಮಾತ್ರ ಪ್ರವೇಶ: ಟಿ.ಎಮ್ ವಿಜಯ ಭಾಸ್ಕರ್

ಬೆಂಗಳೂರು, ಜು 3: ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸಲಾಗಿದ್ದು, ಸಂಜೆ ಎರಡು ಗಂಟೆ ಬದಲು ಒಂದು ಗಂಟೆ ಮಾತ್ರ ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹೇಳಿದ್ದಾರೆ.

ಕೊರೋನಾ ಸೋಂಕಿನ ವಿರುದ್ಧ ಹೋರಾಟ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತು ಆಯುರ್ವೇದ ವೈದ್ಯ ಡಾ, ವಿನಯ್ ಎಸ್. ಸಿಂಗರಾಜಪುರ ಅವರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಂಕು ನಿಯಂತ್ರಣ ಭಾಗವಾಗಿ ಜನದಟ್ಟಣೆ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ಎರಡು ಗಂಟೆ ಬದಲು ಮಧ್ಯಾಹ್ನ 3.30 ರಿಂದ 4.30ರವರೆಗೆ ಆಡಳಿತ ಕೇಂದ್ರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ಕೊರೋನಾ ಸೋಂಕು ನಿವಾರಣೆಗೆ ಆಯುರ್ವೇದ ಔಷಧ ಅತ್ಯಂತ ಪರಿಣಾಮಕಾರಿಯಾಗಿದೆ. ಕೇಂದ್ರ ಆಯುಷ್ ಇಲಾಖೆ ಸೋಂಕು ನಿವಾರಣೆಗೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರಂತೆ ಪ್ರತಿಯೊಬ್ಬರೂ ಆಯುಷ್ ಔಷಧಿಗಳನ್ನು ಬಳಕೆ ಮಾಡಿ ಸೂಕ್ತ ಕ್ರಮಗಳನ್ನು ಅನುಸರಿಸಿ ಸೋಂಕಿನಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.

ಆದರೆ ಆಯುರ್ವೇದ ಔಷಧಗಳಲ್ಲಿ ಕಲೆ ಬೆರಕೆ ಇರಬಾರದು. ಸ್ಟೀರಾಯ್ಡ್ ಮತ್ತಿತರ ವಸ್ತುಗಳನ್ನು ಕಲ ಬೆರಕೆ ಮಾಡುವ ಕುರಿತ ಆರೋಪಗಳಿವೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ನಾನೂ ಸಹ ಕಳೆದ 15 ವರ್ಷಗಳಿಂದ ಚವನ್ ಪ್ರಾಶ್ ಸೇವಿಸುತ್ತೇನೆ. ಆಯುರ್ವೇದ ಔಷಧ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಆಯುರ್ವೇದ ವೈದ್ಯ ಡಾ. ವಿನಯ್ ಎಸ್. ಸಿಂಗರಾಜಪುರ ಉಪನ್ಯಾಸ ನೀಡಿ, ಮೈಸೂರಿನ ನಂಜನಗೂಡು, ಕನಕಪುರ, ಬೆಂಗಳೂರಿನ ಹಾಟ್ ಸ್ಪಾಟ್ ಗಳು, ಕಂಟೈನ್ಮೆಂಟ್ ವಲಯಗಳಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಉಚಿತವಾಗಿ ರೋಗ ನಿರೋಧಕ ಶಕ್ತಿಯುಳ್ಳ ಹತ್ತು ಸಾವಿರಕ್ಕೂ ಹೆಚ್ಚು ಕಿಟ್ ಗಳನ್ನು ವಿತರಿಸಿದ್ದೇನೆ. ಸೋಂಕು ಬಾರದಂತೆ ತಡೆಯಲು, ಸೋಂಕಿತರು ಗುಣಮುಖರಾಗಲು ಆಯುರ್ವೇದ ಔಷಧ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.

ಜನ ಸಾಮಾನ್ಯರು ಸಹ ಈ ಔಷಧಗಳನ್ನು ಬಳಸಿಕೊಂಡು ಕೊರೋನಾ ಸೋಂಕಿನಿಂದ ದೂರ ಇರಬೇಕು. ಉತ್ತಮ ಆಹಾರ, ವಿಹಾರ, ವಿಚಾರಗಳನ್ನು ರೂಢಿಸಿಕೊಂಡು ಆರೋಗ್ಯವಂತ ಜೀವನ ನಡೆಸಲು ಆಯುರ್ವೇದ ಅತ್ಯಂತ ಪರಿಣಾಮಕಾರಿಯಾಗಿದೆ. ಆಯರ್ವೇದ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.

ಕಳೆದ ಮೂರು ತಿಂಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಕೊರೋನಾ ನಿಯಂತ್ರಣ, ನಿವಾರಣೆಗಾಗಿ ಆಯುರ್ವೇದ ಔಷಧಗಳ ಪ್ರಯೋಗ ಮಾಡುತ್ತಿದ್ದು, ಇದಕ್ಕೆ ಉತ್ತಮ ಫಲಿತಾಂಶ ದೊರೆಯುತ್ತಿದೆ. ಔಷಧಿ ಬಳಕೆ ಮಾಡುತ್ತಿರುವರಲ್ಲಿ ಆರೋಗ್ಯ ಸುಧಾರಣೆಯಾಗುತ್ತಿದೆ. ಕರೋನಾ ಸಮಯದಲ್ಲಿ ಆಯುರ್ವೇದ ಔಷಧ ಬಳಕೆ ಕುರಿತು ಸಂಶೋಧನೆ ನಡೆಸುತ್ತಿದ್ದು, ಇದರ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಆಯುರ್ವೇದ ಔಷಧ ಬಳಕೆ ಕುರಿತು ಇನ್ನಷ್ಟು ರಚನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಡಾ. ವಿನಯ್ ಎಸ್ ಸಿಂಗರಾಜಪುರ ಹೇಳಿದರು.

ಆಯುಷ್ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಆಂಟಿ ವೈರಸ್ ಮತ್ತು ಇಮ್ಯೂನ್ ಬೂಸ್ಟರ್ ಗಳನ್ನು ಆಧಾರವಾಗಿಟ್ಟುಕೊಂಡು, ಕೇಂದ್ರದ ಆಯುಷ್ ಇಲಾಖೆಯ ಮಾರ್ಗಸೂಚಿಯನ್ವಯ ಶಾಸ್ತ್ರೀಯ ರೀತಿಯಲ್ಲಿ ಈ ಕಿಟ್ ಗಳನ್ನು ಸಿದ್ಧಪಡಿಸಲಾಗಿದೆ. ಶ್ವಾಸಕೋಶದ ತೊಂದರೆಗಳಿಗೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದರು.

ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಮಾತನಾಡಿ, ಕೊರೋನಾ ಸೋಂಕಿನ ನಡುವೆ ಬದುಕು ನಡೆಸಲು ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಔಷಧಗಳನ್ನು ಬಳಸಬೇಕು. ಸರ್ಕಾರಿ ನೌಕರರು ಕೊರೋನಾ ಸೇನಾನಿಗಳಾಗಬೇಕು ಎಂದರು.