ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

ಬೆಂಗಳೂರು: ಜೂ. 25ರಿಂದ ಜು. 3ರವರೆಗೆ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ವಿದ್ಯಾರ್ಥಿಗಳು, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆರನೇ ದಿನದ ಪರೀಕ್ಷೆಯ ನಂತರ ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಹೇಳಿದಂತೆ ನಮಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಆಗ್ರಹಿಸಿದರು. ನಮ್ಮ ಜಿಲ್ಲೆಗಳ ಅಧಿಕಾರಿಗಳು ಎಂತಹ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಪುನಃ ನಾನು ಬೆಂಗಳೂರಿಗೆ ವಾಪಾಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದೆ ಎಂದು ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ವಿವರಿಸಿದರು.

ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರಗಳನ್ನು ನಮಗಾಗಿ ರಚಿಸಿಕೊಟ್ಟಿತು. ಆ ಮಾರ್ಗದರ್ಶಿ ಸೂತ್ರಗಳ ಮೇಲೆ ನ್ಯಾಯಾಲಯವು ಭರವಸೆಯನ್ನಿಟ್ಟು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ಪರೀಕ್ಷೆಗಳನ್ನು ನಡೆಸಲು ಅವಕಾಶ ಕೊಟ್ಟಿತು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅಲ್ಲಿಯೂ ಸಹ ಸೂಕ್ತ ಆಕ್ಷೇಪಣಾ ಹೇಳಿಕೆಗಳನ್ನು ಸಲ್ಲಿಸಿದ ಬಳಿಕ ಸರ್ವೋಚ್ಛ ನ್ಯಾಯಾಲಯ ಪರೀಕ್ಷೆಗಳನ್ನು ನಡೆಸಲು ತನ್ನ ಹಸಿರು ನಿಶಾನೆ ತೋರಿಸಿತು ಎಂದು ಅವರು ಹೇಳಿದರು.

ನಂತರ ನಮ್ಮಲ್ಲಿ ಘಟಿಸಿದ್ದು ಇತಿಹಾಸ. ಪ್ರತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ಸುರಕ್ಷಿತ ವಾತಾವರಣವನ್ನು ನಾವು ಕಲ್ಪಿಸಬೇಕಾಗಿತ್ತು. ಪ್ರತಿ ಪೋಷಕರಿಗೆ ತಮ್ಮ ಮಗು ತಮ್ಮ ಮನೆಯಲ್ಲಿನ ಸುರಕ್ಷಿತ ವಾತಾವರಣದಷ್ಟೇ ಪರೀಕ್ಷಾ ಕೊಠಡಿ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಬೇಕಾಗಿತ್ತು. ನಮ್ಮ ಅಧಿಕಾರಿಗಳು ಪ್ರತಿ ಸೂಕ್ಷ್ಮ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಿತ್ತು. ನನ್ನ ಭರವಸೆಯನ್ನು ಅವರಾರು ಹುಸಿಗೊಳಿಸಲಿಲ್ಲ ಎಂದು ಸಚಿವರು ತಿಳಿಸಿದರು.

ಪ್ರತಿ ಪರೀಕ್ಷೆಗೆ ಸರಾಸರಿ ಶೇ. 98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ತೋರಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂದ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳು ಸೇರಿದಂತೆ ಬಹುಪಾಲು ರಾಜ್ಯ ಸರ್ಕಾರಗಳು ತಮ್ಮ ಮಂಡಳಿಗಳ ಪರೀಕ್ಷೆಗಳನ್ನು ಮಾಡದೇ ಹಿಂದೆ ಸರಿದವು. ನಾಡಿನ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟುಕೊಂಡು ಅವರ ಇಚ್ಛೆಯಂತೆ ನಾವು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ಕಾರಣಕ್ಕೆ ನಾವು ದೂರದರ್ಶನದ ಚಂದನ ವಾಹಿನಿಯಲ್ಲಿ ನಡೆಸಿದ ಪುನರ್ಮನನ ಕಾರ್ಯಕ್ರಮಗಳು ಆ ವಾಹಿನಿಯಿ ಸಾರ್ವಕಾಲೀಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದವು. ಲಕ್ಷಾಂತರ ವಿದ್ಯಾರ್ಥಿಗಳು ಆ ಪ್ರಯತ್ನದ ಫಲವನ್ನು ಪಡೆದವು. ಅದೇ ರೀತಿ ಆಕಾಶವಾಣಿಯಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳು ಬಿತ್ತರಗೊಂಡವು. ನಮ್ಮ ಮಕ್ಕಳವಾಣಿ ಯು-ಟ್ಯೂಬ್ ಚಾನೆಲ್‍ನಲ್ಲೂ ಸಹ ಪುನರ್ಮನನ ತರಗತಿಗಳು ಬಿತ್ತರಗೊಂಡು ಜನಪ್ರಿಯತೆ ಗಳಿಸಿದವು ಎಂದು ಅವರು ತಿಳಿಸಿದರು.

ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಯಾವುದೇ ಒಂದು ಸಣ್ಣ ಲೋಪವಾಗದಂತೆ ಅಳವಡಿಸಿಕೊಂಡು ನಾವು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿ ಅವರಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸುವವರಿದ್ದೇವೆ.

ಕೃತಜ್ಞತೆ:
ಬಹು ವಿಶೇಷವೆಂದರೆ ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಸಲಹೆ ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯದ ವಿಧಾನಸಭೆ, ವಿಧಾನಪರಿಷತ್‍ನ ಎಲ್ಲ ಸದಸ್ಯರು, ವಿರೋಧ ಪಕ್ಷಕದ ನಾಯಕರು, ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೆಯೇ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೀಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆಗಳನ್ನು ಸಲ್ಲಿಸಿದರು.

ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆ:
ಎಸ್‍ಒಪಿ ಪ್ರಕಾರ ಕೋವಿಡ್ ಸೋಂಕು ಇರುವ ಮನೆಗಳ ಮಕ್ಕಳಿಗೆ ಪರೀಕ್ಷೆಗೆ ಅವಕಾಶವಿರಲಿಲ್ಲ. ಅದರಂತೆ ಕೊನೆಯ ದಿನವಾದ ಇಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರಿಂದ ಇಂದು ಅವರ ಮನೆಯ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಲಾಯಿತು. ಈ ವಿಚಾರದಲ್ಲಿ ಕಳೆದ ಆರು ದಿನಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಯವಾಗದಂತೆ ನ್ಯಾಯಾಲಯಕ್ಕೆ ನೀಡಿದ ವಾಗ್ದಾನದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಂತಹ ಸಂಕಷ್ಟದ ಸಂದರ್ಭವನ್ನೂ ಸುಲಭವಾಗಿ ದಾಟಬಹುದು ಮತ್ತು ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿಯಾಗಿ ನಿಂತಿದೆ ಎಂದು ಅವರು ಹೇಳಿದರು.

ಪರೀಕ್ಷೆ ಆರಂಭವಾದ ಮೇಲೆ ತಾವು ಹಲವಾರು ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಹ ನ್ಯಾಯಾಲಯಕ್ಕೆ ನೀಡಿದ ಎಸ್‍ಒಪಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿ ಅತ್ಯಂತ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಪರೀಕ್ಷೆಯ ಯಶಸ್ಸು ಈ ಸಂದರ್ಭದಲ್ಲೂ ಧೈರ್ಯವಾಗಿ ಬಂದು ಪರೀಕ್ಷೆ ಬರೆದ ಮಕ್ಕಳು ಮತ್ತು ನಮ್ಮ ಮೇಲೆ ಭರವಸೆ ಇಟ್ಟು ಮಕ್ಕಳನ್ನು ಆಶೀರ್ವದಿಸಿ ಕಳಿಸಿದ ಪೋಷಕರಿಗೆ ಸಲ್ಲಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಡಾಕ್ಯೂಮೆಂಟರಿ ಪ್ರದರ್ಶನ:
ಪತ್ರಿಕಾಗೋಷ್ಠಿಗೂ ಮೊದಲು ಪರೀಕ್ಷೆಯ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತÀ ಪಡಿಸಲಾಯಿತು. ಈ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶ್ಲಾಘನೆ ವ್ಯಕ್ತಪಡಿಸಿದರು. ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು ಹಾಗೂ ತಾವು ಖುಷಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಂಡ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಡಾಕ್ಯೂಮೆಂಟರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವ್ಯಕ್ತಪಡಿಸಿದ ಅಭಿಪ್ರಾಯ ಇಂತಿದೆ:
ಇಡೀ ದೇಶ ಹಿಂದಿರುಗಿ ನೋಡುವ ರೀತಿಯಲ್ಲಿ ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಿ ಸೈ ಎನಿಸಿಕೊಂಡಿದೆ. ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಸಣ್ಣ ಸಮಸ್ಯೆಗೂ ಅವಕಾಶ ನೀಡದೇ 8.5 ಲಕ್ಷ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಾಗೂ 6.5 ಪಿಯುಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ದೇಶದ ಇತಿಹಾಸ ಪುಟಗಳಲ್ಲಿ ಸೇರಿ ಹೋಗುವ ಇಂತಹುದೊಂದು ಕ್ರಾಂತಿಕಾರಕ ಕೆಲಸವನ್ನು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ಎಸ್. ಸುರೇಶ್ ಕುಮಾರ್ ಮಾಡಿ ತಮ್ಮ ವೈಯಕ್ತಿಕ ದಕ್ಷತೆ ತೋರಿಸಿದ್ದಾರೆ. ರಾಜ್ಯಾದ್ಯಂತ ಓಡಾಡಿ ಮಕ್ಕಳನ್ನು, ಪೋಷಕರನ್ನು ಅವರು ಹುರಿದುಂಬಿಸಿದ್ದಾರೆ. ಅಧಿಕಾರಿಗಳು ಜಾಗರೂಕವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ. ಸುರೇಶ್ ಕುಮಾರ್ ಅವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
*ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ*.

ಇಂದಿನ ಪರೀಕ್ಷೆಯ ಅಂಕಿ-ಅಂಶಗಳು ಈ ಕೆಳಕಂಡಂತಿದೆ:
ಏಳನೇ ದಿನವಾದ ಶುಕ್ರವಾರ ನಡೆದ ತೃತೀಯ ಭಾಷಾ ಪರೀಕ್ಷೆಗೆ ನೊಂದಾಯಿತ 7,76,251 ವಿದ್ಯಾರ್ಥಿಗಳ ಪೈಕಿ 7,61,506 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.10ರಷ್ಟು ಇಂದು ಹಾಜರಾತಿ ಇದೆ. 14,745 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. (ಕಳೆದ 2018-19ನೇ ಸಾಲಿಗೆ 7,72,071 ವಿದ್ಯಾರ್ಥಿಗಳ ಪೈಕಿ 7,62,538 ವಿದ್ಯಾರ್ಥಿಗಳು ಹಾಜರಾಗಿದ್ದು, 9533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.76 ಹಾಜರಾತಿ ಇತ್ತು.)

ಮೊದಲ ಬಾರಿಗೆ 7,43,477 ಶಾಲಾ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 3911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,535 ವಿದ್ಯಾರ್ಥಿಗಳು ಹಾಜರಾಗಿದ್ದರೆ, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಭೇಟಿ: 
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಅತ್ತಿಬೆಲೆ, ದೊಮ್ಮಸಂದ್ರ, ಚಂದಾಪುರ, ಜಿಗಣಿ, ಹೆಬ್ಬಗೋಡಿ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು.

ಕೆಲ ಪ್ರಮುಖ ಸಂಗತಿಗಳು:
1. ಗದಗದಲ್ಲಿ ಮಕ್ಕಳನ್ನು ಮನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಕರೆತರುತ್ತಿದ್ದ ಆಟೋ ಚಾಲಕರನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
2. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರ್ಗ ಮಧ್ಯೆ ಮರ ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸುದ್ದಿ ತಿಳಿದ ಸಾಗರ ಬಿಇಒ ಮಕ್ಕಳನ್ನು ಕರೆತರಲು ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡಿದರು. ಹಾಗೆಯೇ ಆ ಮಾರ್ಗದ ಪರೀಕ್ಷಾ ಕೇಂದ್ರಗಳಿಗೆ ತಮ್ಮದೇ ವಾಹನದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸಿದರು.

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದ ಸಚಿವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕೋವಿಡ್ 19; ಚನ್ನಪಟ್ಟಣ, ಮಾಗಡಿ ಆಸ್ಪತ್ರೆಗಳಿಗೆ ಭೇಟಿ: ಯಾವುದೇ ಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಆದೇಶಿಸಿದ ಡಿಸಿಎಂ

ರಾಮನಗರ: ಕೋವಿಡ್ 19 ಹಿನ್ನೆಲೆಯಲ್ಲಿ ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕು ಆಸ್ಪತ್ರೆಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಂತಹ ಪರಿಸ್ಥಿತಿ ಎದುರಾದರೂ ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅವರು, ತಾಲ್ಲೂಕು ವೈದ್ಯರ ಜತೆ ಚರ್ಚೆ ನಡೆಸಿದರಲ್ಲದೆ, ಅವರ ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಆದರೂ, ಎಚ್ಚರ ತಪ್ಪಬಾರದು ಎಂದು ಖಡಕ್ಕಾಗಿ ಸೂಚಿದರು. ಇದೇ ವೇಳೆ ವೈದ್ಯರು, ನರ್ಸ್ ಗಳು, ಪೂರಕ ಸಿಬ್ಬಂದಿ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.

ಉಳಿದಂತೆ, ಗಂಟಲು ದ್ರವ ಸಂಗ್ರಹ, ಆಂಬುಲೆನ್ಸ್ ಗಳು, ಔಷಧಿ, ಫೀವರ್ ಕ್ಲಿನಿಕ್ಕುಗಳು ಮುಂತಾದ ಅಂಶಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಅವರು, ಜಿಲ್ಲೆಯಲ್ಲಿ ಕೋವಿಡ್ ಎದುರಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಾಸಿಟೀವ್ ಬಂದಿರುವ ರೋಗಿಗಳಿಗೆ ಚನ್ನಪಟ್ಟಣ, ಮಾಗಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗದು. ಅವರನ್ನು ರಾಮನಗರ ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜ್, ದಯಾನಂದ ಸಾಗರ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲ್ಲಿ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

500 ಜನರಿಗೆ ಚಿಕಿತ್ಸೆ:
ಇಲ್ಲಿ500 ಜನರಿಗಾಗುವಷ್ಟು ಕೋವಿಡ್ ಕೇರ್ ಅನ್ನು ಪ್ರಾರಂಭಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ . ಜಿಲ್ಲೆಯಲ್ಲಿ ಎಷ್ಟೇ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೂ ಅದನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಚನ್ನಪಟ್ಟಣ ಆಸ್ಪತ್ರೆ ಉನ್ನತ ದರ್ಜೆಗೆ:
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ದರ್ಜೆಗೆ ಏರಿಸಲಾಗುವುದು. ಈ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ:
ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ನ ಚಿಕಿತ್ಸೆಗಾಗಿ ಇಂತಿಷ್ಟೆ ಪ್ರಮಾಣದ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ರೋಗಿಗಳನ್ನು ದಾಬಲಿಸಲಾಗುವುದು. ಸ್ಥಳೀಯ ಆಡಳಿತದ ವತಿಯಿಂದ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಲಾಗುವುದರ ಜೊತೆಗೆ, ಬಡವರು ಶ್ರೀಮಂತರು ಎನ್ನದೆ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಎಲ್ಲರಿಗೂ ಚಿಕಿತ್ಸೆ:
ಖಾಸಗಿ ಆಸ್ಪತ್ರೆಗೆ ದಾಖಲಾಗುವವರು ಅವರೇ ಆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕಾಗುತ್ತದೆ. ಸರ್ಕಾರದ ಮೀಸಲು ಖೋಟಾದ ಹಾಸಿಗೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಯ ವೆಚ್ಚದ ಹಾಸಿಗೆಗಳನ್ನು ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅದರ ವೆಚ್ಚವನ್ನು ಸಂಬಂಧಿಸಿದ ರೋಗಿಯೇ ಭರಿಸಬೇಕಾಗುತ್ತದೆ. ಎಲ್ಲರಿಗೂ ಚಿಕಿತ್ಸೆ ದೊರೆಯಬೇಕು ಅನ್ನುವ ಸದುದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮನೆಯಲ್ಲೇ ಚಿಕಿತ್ಸೆ:
ಕೋವಿಡ್-19ರ ರೋಗ ಲಕ್ಷಣವಿಲ್ಲದವರಿಗೆ ಆಸ್ಪತ್ರೆಯ ಬದಲು ಮನೆಯಲ್ಲೇ ಚಿಕಿತ್ಸೆ ನೀಡಲು ನಿಯಮ ರೂಪಿಸಲಾಗಿದೆ. ಮನೆಯಲ್ಲಿಯೇ ಸೌಲಭ್ಯಗಳಿದ್ದರೆ ಇಂತಹವರು ಅವರ ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದು. ಸದ್ಯಕ್ಕೆ ಕೋವಿಡ್-19 ನಿಯಂತ್ರಣದಲ್ಲಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಭಯಪಡುವ ಅಗತ್ಯವಿಲ್ಲ. ಕೋವಿಡ್ ಅನ್ನು ನಿಯಂತ್ರಿಸಲು ಸರ್ಕಾರ ಅಗತ್ಯವಿರುವ ಕ್ರಮ ಕೈಗೊಂಡಿದೆ. ಹಾಗೆಯೇ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ಪರೀಕ್ಷಾ ಸಂಖ್ಯೆ ಹೆಚ್ಚಳ:
ಶಂಕೆ ಇರುವವರಿಗೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ವಿದೇಶದಿಂದ ಬಂದವರು, ಹೊರರಾಜ್ಯದಿಂದ ಬಂದವರಿಗೂ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋವಿಡ್ ಮಾದರಿಗಳ ಪರೀಕ್ಷೆಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

ಡಿಸಿಎಂ ಜತೆ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತಿ ಸಿಇಓ ಇಕ್ರಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು. ಮಾಗಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಅ. ದೆವೇಗೌಡ ಜತೆಯಲ್ಲಿದ್ದರು.

ಯೋಗೀಶ್ವರ್ ಮನೆಗೆ ಭೇಟಿ:
ಚನ್ನಪಟ್ಟಣ ಭೇಟಿಯ ವೇಳೆ ಡಿಸಿಎಂ ಅವರು ಬಿಜೆಪಿ ಹಿರಿಯ ಮುಖಂಡ ಸಿ.ಪಿ. ಯೋಗೀಶ್ವರ್ ಅವರ ಮನೆಗೆ ಭೇಟಿ ನೀಡಿದರಲ್ಲದೆ, ಅವರ ತಂದೆಯ ಯೋಗಕ್ಷೇಮ ವಿಚಾರಿಸಿದರು.

ಕೊರೊನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ : ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು ಮೂರು ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಯಾವುದಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಜೊತೆಗೆ ಕೊರೊನಾ ನಿರ್ವಹಣೆ, ಖರ್ಚು, ವೆಚ್ಚ ಕುರಿತು ನಿಗಾ ವಹಿಸಲು ಸರ್ವಪಕ್ಷಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಉಪಕರಣಗಳನ್ನು ಖರೀದಿಸಲಾಗಿದೆ. ಇಷ್ಟೂ ಹಣವನ್ನು ಲಪಟಾಯಿಸಲಾಗಿದೆ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವವರು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್‍ನಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ವಿವರ ನೀಡಬೇಕು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 290 ಕೋಟಿ ರೂ. ಬಂದಿದೆ. ಅದರಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಡಿರುವ ವೆಚ್ಚ ಎಷ್ಟು ಎಂಬುದರ ಕುರಿತು ಮಾಹಿತಿ ಒದಗಿಸಬೇಕು. ಜೊತೆಗೆ ಪಿಎಂ ಕೇರ್ಸ್‍ಗೆ 60 ಸಾವಿರ ಕೋಟಿ ರೂ. ಸಂದಾಯವಾಗಿದೆ. ಅದರಲ್ಲಿ ರಾಜ್ಯಕ್ಕೆ ಒದಗಿಸಿರುವ ನೆರವು ಎಷ್ಟು ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

ಪರತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದು :
ಯಾವಾಗ ಲಾಕ್‍ಡೌನ್ ಮಾಡಬೇಕಾಗಿತ್ತೋ ಆಗ ಮಾಡಲಿಲ್ಲ. ಈಗ ಮಾಡಿದರೂ ಪ್ರಯೋಜನವಿಲ್ಲ. ಇದೀಗ ಪರಿಸ್ಥಿತಿ ಕೈ ಮೀರಿದೆ. ಸೋಂಕು ಸಮುದಾಯದಲ್ಲಿ ಹರಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷರನ್ನು ಕರೆತಂದು ಮೆರವಣಿಗೆ ನಡೆಸದೇ ಕೊರೊನಾ ನಿಯಂತ್ರಣಕ್ಕೆ ಆಗಲೇ ಶ್ರಮಿಸಿದ್ದರೆ ಈ ದುಸ್ಥಿತಿ ದೇಶಕ್ಕೆ, ರಾಜ್ಯಕ್ಕೆ ಬರುತ್ತಿರಲಿಲ್ಲ. ಕೊರೊನಾ ಸೋಂಕಿನಿಂದ ಮೃತರಾದವರ ಶವ ಸಂಸ್ಕಾರವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೂ, ಸರ್ಕಾರ ಶವಗಳನ್ನು ಅಮಾನವೀಯವಾಗಿ ಎಸೆಯುತ್ತಿದೆ. ಮನುಕುಲಕ್ಕೆ ಅಗೌರವ ಆಗುವ ರೀತಿಯಲ್ಲಿ ಸರ್ಕಾರ ಬಳ್ಳಾರಿ, ಯಾದಗಿರಿ ಮತ್ತಿತರ ಕಡೆಗಳಲ್ಲಿ ಶವಗಳ ಅಂತ್ಯ ಸಂಸ್ಕಾರ ನಡೆಸಿದೆ. ಇದು ಸರ್ಕಾರದ ಬೇಜವಬ್ದಾರಿತನದಿಂದ ಆಗಿದೆ. ಶವ ಸಂಸ್ಕಾರ ಮಾರ್ಗಸೂಚಿ ಅನ್ವಯ ಮಾಡಬೇಕು ಎಂದು ಮೊದಲೇ ಏಕೆ ಹೇಳಿರಲಿಲ್ಲ. ಬಳ್ಳಾರಿಯಲ್ಲಿ ನಾಲ್ಕು ಶವಗಳನ್ನು ತಿಪ್ಪೆಗೆ ಎಸೆಯುವಂತೆ ಗುಂಡಿಗೆ ಎಸೆಯಲಾಗಿದೆ. ಆರೋಗ್ಯ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಈ ರೀತಿಯಾದರೆ ಹೇಗೆ ? ಇದಕ್ಕೆ ಸಚಿವರೇ ಜವಾಬ್ದಾರಿ ಹೊರಬೇಕು. ಈಗ ತಪ್ಪಾಗಿದೆ. ಮುಂದೆ ಸರಿ ಮಾಡಿಕೊಳ್ಳುತ್ತೇವೆ ಎಂಬುದು ಪರಿಹಾರ ಅಲ್ಲ.

ಶವ ಸಂಸ್ಕಾರ ಯಾವ ರೀತಿ ಮಾಡಬೇಕು ಎಂಬುದನ್ನು ಸರ್ಕಾರ ಅಧಿಕಾರಿಗಳಿಗೆ ಏಕೆ ಹೇಳಿಕೊಡಲಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಇದೆಲ್ಲ ಆಗಿದೆ. ಶವ ಸಂಸ್ಕಾರದ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ಮಾಧ್ಯಮಗಳೇ ಜನತೆಗೆ ತೋರಿಸಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯ್ಯಲ್ಲಿ ಏನೂ ಆಗದು. ಮಂತ್ರಿಗಳೂ ಅವರ ಮಾತು ಕೇಳುವುದಿಲ್ಲ. ಸಚಿವರೇ ಪರಸ್ಪರ ಕಿತ್ತಾಡುತ್ತಿದ್ದಾರೆ. ಇದುವರೆಗೆ ಸಚಿವ ಸುಧಾಕರ್ ಅವರು ಕೊರೊನಾ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ದರು. ಮತ್ತೆ ಸುರೇಶ್ ಕುಮಾರ್ ಅವರಿಗೆ, ಅದಾದ ಬಳಿಕ ಅಶೋಕ್ ಅವರಿಗೆ ಇದೀಗ ಮತ್ತೆ ಸುಧಾಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಸುಧಾಕರ್ ವೈದ್ಯಕೀಯ ಪದವೀಧರರು. ಅವರಿಗೆ ತಿಳಿವಳಿಕೆ ಇರುತ್ತದೆ. ಸರ್ಕಾರದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ.

ಸೋಂಕಿತರ ಪರೀಕ್ಷೆ ಪ್ರಮಾಣ ಬೇರೆ ದೇಶ, ರಾಜ್ಯಗಳಲ್ಲಿ ಹೆಚ್ಚಾಗಿದೆ. ಆದರೆ, ನಮ್ಮ ದೇಶದಲ್ಲಿ ಹತ್ತು ಲಕ್ಷ ಮಂದಿಯಲ್ಲಿ 6943, ರಾಜ್ಯದಲ್ಲಿ 9741 ಮಂದಿಗೆ ಮಾತ್ರ ಪರೀಕ್ಷೆ ನಡೆಯುತ್ತಿದೆ. ಈಗ ರಾಜ್ಯದಲ್ಲಿ 13 ಸಾವಿರದವರೆಗೂ ಪರೀಕ್ಷೆ ನಡೆಯುತ್ತಿದೆ. ಆದರೂ ಕೊರೊನಾ ನಿಯಂತ್ರಣದಲ್ಲಿ ಪ್ರಧಾನಿ ಮೋದಿಯವರು ಅಗ್ರಗಣ್ಯರು ಎಂದು ಹೇಳುತ್ತಾರೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ತುಮಕೂರಿನ ಒಬ್ಬ ಮಹಿಳೆ ಬೆಡ್ ಸಿಗದೆ ಪರದಾಡಿದ್ದಾರೆ. ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ಡು, ಫುಡ್ಡು ಸಿಗುತ್ತಿಲ್ಲ. ಆರೈಕೆಯಂತೂ ಮೊದಲೇ ಇಲ್ಲ. ಅನೇಕ ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ವಾಟ್ಸಪ್ ಮೆಸೇಜ್ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಕೊರೊನಾ ಸೋಂಕಿತರಿಗೆ 4663 ಬೆಡ್‍ಗಳು ನಿಗದಿಯಾಗಿದೆ. ಈ ವರೆಗೆ 2694 ಹಾಸಿಗೆಗಳನ್ನು ಸೋಂಕಿತರಿಗೆ ಒದಗಿಸಲಾಗಿದೆ. ಹೀಗಿರುವಾಗ ಸೋಂಕಿತರು ಬೆಡ್ ಸಿಗದೆ ಏಕೆ ಪರದಾಡಬೇಕು ?
ನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ನಿಗದಿ ಮಾಡಿರುವ ಬೆಡ್‍ಗಳ ಸಂಖ್ಯೆ ಯಾವುದಕ್ಕೂ ಸಾಕಾಗುವುದಿಲ್ಲ. ಇದನ್ನು ಹೇಳಿದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಎಲ್ಲಿವೆ ಬೆಡ್‍ಗಳು. ಅವುಗಳ ಮಾಲೀಕರು ಸರ್ಕಾರದ ಮಾತು ಕೇಳುತ್ತಿಲ್ಲ. ಯುದ್ಧ ಕಾಲದ ಶಸ್ತ್ರಾಭ್ಯಾಸ ಇವರದ್ದು. ಕೆಲವು ಖಾಸಗಿ ಆಸ್ಪತ್ರೆಗಳು ಮುಚ್ಚುತ್ತಿವೆ. ವಿಕ್ರಮ್ ಆಸ್ಪತ್ರೆಗೆ ಸರ್ಕಾರವೇ ನೋಟೀಸ್ ನೀಡಿದೆ. ಬೆಡ್‍ಗಳು ಬೇಡಿಕೆಗೆ ತಕ್ಕಂತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಬೆಂಗಳೂರು ನಗರದಲ್ಲೇ ಒಂದೂವರೆಗೆ ತಿಂಗಳಲ್ಲಿ 40 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುತ್ತದೆ ಎಂದು ಡಾ. ಸುದರ್ಶನ್ ಬಲ್ಲಾಳ್ ಅವರು ಹೇಳಿದ್ದಾರೆ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸೋಂಕು ವ್ಯಾಪಕವಾಗಲಿದೆ ಎಂದು ತಜ್ಞರು ಹೇಳಿದ್ದರೂ ಸರ್ಕಾರವೇಕೆ ಸನ್ನದ್ಧವಾಗಲಿಲ್ಲ. ಇಷ್ಟಕ್ಕೂ ರಾಜ್ಯದಲ್ಲಿ ಸರ್ಕಾರ ಇದೇಯೇ ?
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ಕೇಳಿದರೂ ಕೊಡುವುದಿಲ್ಲ. ಇದು ಹಕ್ಕುಚ್ಯುತಿ ಅಲ್ಲವೇ ? ಪಿಎಂ ಕೇರ್ಸ್‍ಗೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಬಂದಿರುವ ಹಣ ಎಷ್ಟು ಎಂದು ಪತ್ರ ಬರೆದು ಕೇಳಿದರೂ ಮಾಹಿತಿ ಒದಗಿಸಲಿಲ್ಲ. ಪ್ರತಿಪಕ್ಷ ನಾಯಕರು ಮಾಹಿತಿಯನ್ನೂ ಕೇಳಬಾರದೆ ?

ಕೇಂದ್ರ ಸರ್ಕಾರ 33 ಸಾವಿರ ವೆಂಟಿಲೇಟರ್ ಒದಗಿಸುವುದಾಗಿ ಹೇಳಿ 90 ಕೊಟ್ಟಿದೆ. ಅಂಬುಲೆನ್ಸ್‍ಗಳಂತೂ ಇಲ್ಲಿ ಇಲ್ಲವೇ ಇಲ್ಲ. ಸೋಂಕಿತರೂ ಗೋಗರೆದರೂ ಅಂಬುಲೆನ್ಸ್‍ಗಳು ಬರುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿಯೇ ಸುದ್ದಿಗಳು ಬಿತ್ತರವಾಗಿದೆ.
ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳರು, ನೇಕಾರರಿಗೆ ಲಾಕ್‍ಡೌನ್ ಸಂದರ್ಭದಲ್ಲೇ ಪರಿಹಾರ ನೀಡಬೇಕಿತ್ತು. ಪರಿಹಾರ ನೀಡಲು 108 ನಿಬಂಧನೆಗಳನ್ನು ವಿಧಿಸಲಾಗಿದೆ. ಡ್ರೈವಿಂಗ್ ಲೆಸೆನ್ಸ್ ಇರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಕೊಟ್ಟಿದ್ದರೆ ಆಗುತ್ತಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಈ ವರೆಗೆ 3320 ಕೋಟಿ ರೂ. ಖರ್ಚು ಮಾಡಿದೆ. ಆದರೆ, 815 ಕೋಟಿಗೆ ಲೆಕ್ಕವೇ ಇಲ್ಲ. ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಹಣ ನೀಡಿ ಖರೀದಿ ಮಾಡಲಾಗಿದೆ. ಇದಕ್ಕೆ ಕಾರಣವೇನು ? ಇದನ್ನು ಅವ್ಯವಹಾರ ಎನ್ನದೆ ಏನೆಂದು ಕರೆಯಬೇಕು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆ ಸಮಿತಿಯ ಅಧ್ಯಕ್ಷರಾದ ಎಚ್.ಕೆ. ಪಾಟೀಲರು ಈ ಕುರಿತು ಮಾತನಾಡಿದರೆ ಸಭಾಧ್ಯಕ್ಷರು ಅವರಿಗೆ ಪತ್ರ ಬರೆಯುತ್ತಾರೆ. ತಪಾಸಣೆ ಮಾಡಬಾರದು ಎಂದು ತಡೆಯಾಜ್ಞೆ ಕೊಡುತ್ತಾರೆ. ಇದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ.
ಉಪಕರಣಗಳ ಖರೀದಿ ಕುರಿತು ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ದರ ನೀಡಿ ಏಕೆ ಉಪಕರಣಗಳನ್ನು ಖರೀದಿ ಮಾಡಿದಿರಿ ಎಂದು ಪ್ರಶ್ನೆ ಮಾಡಿದೆ. ಕೊರೊನಾದಿಂದ ಜನ ನರಳುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಇವರು ಮನುಷ್ಯರೇ ? ಅಧಿಕಾರ ನಡೆಸುತ್ತಿರುವವರಿಗೆ ಮಾನವೀಯತೆ ಎಂಬುದು ಏನಾದರೂ ಇದೆಯೇ ? ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಪ್ರತಿಪಕ್ಷದ ಮುಖ್ಯ ಸಚೇತರಕಾದ ಡಾ. ಅಜಯಸಿಂಗ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪುರ, ಕಂಪ್ಲಿ ಗಣೇಶ್, ಮಾಜಿ ಶಾಸಕ ಅಶೋಕ್ ಪಟ್ಟಣ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಲಡಾಖ್ ನ ನಿಮು ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ

ದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಲಡಾಖ್‌ನ ನಿಮು ಪ್ರದೇಶಕ್ಕೆ ಭೇಟಿ ನೀಡಿ ಭೂಸೇನೆ, ವಾಯುಸೇನೆ ಮತ್ತು ಐಟಿಬಿಪಿ ಯೋಧರೊಂದಿಗೆ ಮಾತುಕತೆ ನಡೆಸಿದರು.

ಭದ್ರತಾ ಪರಿಸ್ಥಿತಿಗಳ ಖುದ್ದು ಪರಿಶೀಲನೆ, ವೀರ ಯೋಧರೊಂದಿಗೆ ಚರ್ಚೆ, ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸೈನಿಕರ ಮನೋಬಲ ವೃದ್ಧಿಸುತ್ತಿದ್ದಾರೆ.

ಭಾರತ ಚೀನಾ ನಡುವಿನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವ ನಡುವೆ ಚೀನಾ ವಿರುದ್ಧ ತಿರುಗಿಬಿದ್ದಿರುವ ಭಾರತ ಡಿಜಿಟಲ್ ವಾರ್ ಆರಂಭಿಸಿದೆ, ಚೀನಾ ಆ್ಯಪ್ ಗಳನ್ನು ನಿಷೇಧಿಸಿದೆ ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ನಡುವಿನ ಗಡಿರೇಖೆಯ ಸಮೀಪದ ಯುದ್ದ ಭೂಮಿಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾದೆ.ಪ್ರಧಾ‌ನಿಗಳ ಜೊತೆ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಭೇಟಿ ನೀಡಿದ್ದಾರೆ.

ಐಸಿಯೂ ಟೆಲಿಕಾರ್ಡ್ ಗೆ ಸಚಿವ ರಾಮುಲು ಚಾಲನೆ

ಬೆಂಗಳೂರು: ಸಿಸ್ಕೊ ಅಭಿವೃದ್ಧಿಪಡಿಸಿರುವ ವೈದ್ಯರು ದೂರದಿಂದಲೇ ರೋಗಿಗೆ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಬಹುದಾದ ಐಸಿಯು ಟೆಲಿಕಾರ್ಡ್ ಗೆ ರಿಮೋಟ್ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ ನೀಡಿದರು.

ಬಾಲಬ್ರೂಹಿ ಅತಿಥಿ ಗೃಹದಲ್ಲಿ ಯೋಜನೆಗೆ ಚಾಲನೆ ನೀಡಿದ ರಾಮುಲು ನಂತರ ಪತ್ರಿಕಾಗೋಷ್ಠಿ ನಡೆಸಿದರು.ವೈದ್ಯರ ಆರೋಗ್ಯ ಉಳಿಸಬೇಕು ಅಂದ್ರೆ
ಈ ತಂತ್ರಜ್ಞಾನದ ಅವಶ್ಯಕತೆ ಇದೆ. ಇದನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಮಾಡಬೇಕು.ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಚರ್ಚೆ ಮಾಡಿ, ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಇದನ್ನು ಬಳಕೆ ಮಾಡಲು ಚರ್ಚೆ ಮಾಡುತ್ತೇವೆ.ಸದ್ಯ ಈಗ ಒಂದನ್ನು ವಿಕ್ಟೋರಿಯ ಹಾಗು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಾಕಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಶವಗಾರದಲ್ಲಿ ಕೊರೋನಾ ಟೆಸ್ಟ್ ಆಗದೆ ಶವ ಕೊಡ್ತಾ ಇಲ್ಲ ಅನ್ನೋ ದೂರು ಇದೆ.ಇದಕ್ಕೆ ಟೆಸ್ಟಿಂಗ್ ಲೋಡ್ ಜಾಸ್ತಿಯಾಗ್ತಾ ಇರೋದು ಕಾರಣ.ತಜ್ಞರೂ ಈ ಬಗ್ಗೆ ನಿನ್ನೆ ಸಿಎಂ ಜತೆ ಚರ್ಚೆಯಲ್ಲಿ ತಿಳಿಸಿದ್ದಾರೆ.ಅದಕ್ಕೆ ಇನ್ನೂ ಹೆಚ್ಚಿನ ಲ್ಯಾಬ್ ಮಾಡಲು ಸಿಎಂ ಆದೇಶ ನೀಡಿದ್ದಾರೆ.ಇನ್ನು ಮುಂದೆ ಈ ಸಮಸ್ಯೆ ಆಗೋದಿಲ್ಲ ಎಂದರು.

ಪ್ಲಾಸ್ಮಾ ಥೆರಪಿ ಎಲ್ಲಾ ಜಿಲ್ಲೆಗಳನ್ನು ಮಾಡಲು ತೀರ್ಮಾನ ಮಾಡುತ್ತಿದ್ದೇವೆ.ವಾರ್ಡ್ ಗೆ 2 ಅಂಬ್ಯುಲೆನ್ಸ್ ಮೀಸಲಿಡಲು ಸಿಎಂ ಸಭೆಯಲ್ಲಿ ತೀರ್ಮಾನ ಆಗಿದೆ.ಇನ್ನು ಮುಂದೆ ಯಾವುದೇ ಸಮಸ್ಯೆ ಯಾಗುವುದಿಲ್ಲ
ಕಡಿಮೆಯಾದ್ರೆ ಬಾಡಿಗೆಗೆ ತೆಗೆದು ಕೊಳ್ಳುತ್ತೇವೆ ಎಂದರು.

ಬಳ್ಳಾರಿಯಲ್ಲಿ ಎಲ್ಲೆಂದರಲ್ಲಿ ಶವಗಳನ್ನು ಎಸೆದವರನ್ನು ಸಸ್ಪೆಂಡ್ ಮಾಡಲಾಗಿದೆ.ಯಾದಗಿರಿಯಲ್ಲಿ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ಈ ಸಮಸ್ಯೆ ಆಗುವುದಿಲ್ಲ.
ಗುತ್ತಿಗೆ ವೈದ್ಯರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಸೇವೆ ಮುಂದುವರೆಸಿ.ಅವರದ್ದು ಎರಡು ಡಿಮ್ಯಾಂಡ್ ಇದೆ ಒಂದು ಸಂಬಳದ್ದು ಇನ್ನೊಂದು ಖಾಯಂ ಆಗಬೇಕು ಎನ್ನುವಂತದ್ದು.
ನಿನ್ನೆ ಸಿಎಂ ಕೂಡ ಕರೆದು ಹೇಳಿದ್ದಾರೆ. ಬೇಡಿಕೆ ಬಗ್ಗೆಯು ಮಾತನಾಡಿದ್ದಾರೆ.ಸಂಬಳ ಹೆಚ್ಚು ಮಾಡಲು ಸಿಎಂ ಕೂಡ ಒಪ್ಪಿದ್ದಾರೆ. ಆದರೆ ಈ ವಿಚಾರ ಕ್ಯಾಬಿನೆಟ್ ಗೆ ಹೋಗಬೇಕಿದೆ. ನಾನು ವೈದ್ಯರ ಜೊತೆ ಇದ್ದೇನೆ. ಅವರ ಬೇಡಿಕೆ ಈಡೇರಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

Wifi networks and Cisco Health ಪ್ಲಾಟ್ಫಾರ್ಮ್ ನಿಂದಾಗಿ , ಕೋವಿಡ್ ಸೋಂಕಿತರೊಂದಿಗೆ ವ್ಯವಹರಿಸುವ ಇಡೀ ವೈದ್ಯಕೀಯ ತಂಡವನ್ನು ರಕ್ಷಿಸಲು ಸಹಾಯ ಮಾಡುವ ಒಂದು ವೇದಿಕೆಯಾಗಿದೆ.ಹಾಗು ಸೋಂಕಿತರಿಗೆ, ಮಾನಸಿಕ ಸಲಹೆಗಾರರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುವುದನ್ನು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲು ಸಿಸ್ಕೋ ವೇದಿಕೆ ಸಹಾಯ ಮಾಡುತ್ತದೆ ಎಂದರು.

ಸಿಸ್ಕೋ ಪರಿಹಾರವು ಕೇವಲ ಐಟಿ ಅಪ್ಲಿಕೇಶನ್‌ ಆಗಿರದೆ, ಇದು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ
1) ಸ್ಕ್ರೀನಿಂಗ್,
2) ಹೋಮ್ ಕ್ಯಾರೆಂಟೈನ್,
3) ಇನ್ಸ್ಟಿಟ್ಯೂಷನ್ ಕ್ವಾರಂಟೈನ್,
4) ಐಸೋಲೇಷನ್
5) ಐಸಿಯು ಕಾರ್ಟ್ ಮತ್ತು ಎಲ್ಲಾ ಐಸಿಯು ಸಲಕರಣೆಗಳಿಗೆ ದೈಹಿಕ ಸಂಪರ್ಕ,
6) ಇದು ರೋಗಿಗಳಿಂದ ತ್ವರಿತ ವೈದ್ಯಕೀಯ ಸೂಚ್ಯಂಕಗಳು (Live Vitals) (ECG, Tempareture, Pulse, ಇತ್ಯಾದಿ) ತೆಗೆದುಕೊಳ್ಳುತ್ತದೆ ಮತ್ತು ಲೈವ್ ವಿಡಿಯೋ ಮೂಲಕ, ರೋಗಿಯ ಪ್ರತಿಯೊಂದು ಅಂಗಗಳ ವಿಶ್ಲೇಷ ನಿಗ್ರಹಣೆ ತ್ವರಿತ ಮತ್ತು ನಿಖರ ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ವೈದ್ಯರಿಗೆ ಸಹಾಯ ಮಾಡುತ್ತದೆ
7) ಲೈವ್ ವಿಡಿಯೋ ಸೇರಿದಂತೆ ಎಲ್ಲಾ ಹಂತಗಳಲ್ಲಿ ಸಮಾಲೋಚನೆ. ಮತ್ತು ಅಗತ್ಯ ಸಲಕರಣೆಗಳೊಂದಿಗೆ ಆನ್‌ಲೈನ್ ಚಿಕಿತ್ಸೆಯನ್ನು ಸಿಸ್ಕೋ ಮಾಡುತ್ತದೆ ಎಂದರು.

ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸಲು ಸರ್ಕಾರ ಸಿದ್ಧತೆ:ಸಚಿವ ಸುಧಾಕರ್

ಬೆಂಗಳೂರು – ಜುಲೈ 2, 2020: ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಗುರುವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ನೂತನ ಮಾರ್ಗಸೂಚಿಗಳು ನಾಳೆಯೇ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಸಚಿವರು ಹೇಳಿದರು.

ಖಾಸಗಿ ಆಸ್ಪತ್ರೆಗಳೂ ಕೋವಿಡ್ ಸೋಂಕಿತರಿಗಾಗಿ ಹಾಸಿಗೆಗಳನ್ನು ಮೀಸಲಿಡಲು ಒಪ್ಪಿಕೊಂಡಿವೆ. ತಜ್ಞರುಗಳ ಸಲಹೆಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಸೋಂಕಿನ ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಕುರಿತಂತೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದ್ದು ಎಲ್ಲಾ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗದುಗಿನ ಮೆಡಿಕಲ್ ಕಾಲೇಜಿನಲ್ಲಿ ರಾಜ್ಯದ 79ನೇ ಕೋವಿಡ್ ಪ್ರಯೋಗಾಲಯಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬೆಂಗಳೂರಿನಿಂದಲೇ ಆನ್‌ಲೈನ್ ಮೂಲಕ ಲ್ಯಾಬ್‌ಗೆ ಚಾಲನೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಗದುಗಿನ ವೈದ್ಯಕೀಯ ಕಾಲೇಜು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಪ್ರಾರಂಭವಾದ 5 ವರ್ಷ ಅವಧಿಗೂ ಮುನ್ನವೇ ಪಿಜಿ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಪಡೆದ, ದೇಶದಲ್ಲೇ ಮೊದಲ ಮೆಡಿಕಲ್ ಕಾಲೇಜು ಇದಾಗಿದೆ ಎಂದು ಬಣ್ಣಿಸಿದರು.

ಕಳೆದ 4-5 ತಿಂಗಳಿನಿಂದ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಲಿದೆ. ಗದಗಿನ ಆರ‍್ಟಿಪಿಸಿಆರ್ ಪ್ರಯೋಗಾಲಯ ಸೇರಿದಂತೆ ಇಂದು ರಾಜ್ಯದಲ್ಲಿ 44 ಸರ್ಕಾರಿ ಹಾಗೂ 35 ಖಾಸಗಿ ಲ್ಯಾಬ್‍ಗಳು ಕೆಲಸ ಮಾಡುತ್ತಿವೆ. ದಿನವೊಂದಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದುವರೆಗೆ ಸುಮಾರು ಐದೂವರೆ ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವರು ಹೇಳಿದರು. ಅಲ್ಲದೆ ರೋಗ ಲಕ್ಷಣ ರಹಿತ ಸೋಂಕಿತರನ್ನು ಪತ್ತೆ ಹಚ್ಚಲು ಸುಮಾರು 1.5 ಕೋಟಿ ಮನೆಗಳನ್ನು ಭೌತಿಕ ಹಾಗೂ ದೂರವಾಣಿ ಸಮೀಕ್ಷೆ ನಡೆಸಲಾಗಿದೆ. ಮುಂದಿನ ರೂಪುರೇಷೆಗಳು ಶೀಘ್ರದಲ್ಲೇ ಪ್ರಕಟವಾಗಲಿವೆ ಎಂದು ಸುಧಾಕರ್ ತಿಳಿಸಿದ್ದಾರೆ.

ಗದುಗಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್, ಮಾಜಿ ಸಚಿವರಾದ  ಹೆಚ್.ಕೆ.ಪಾಟೀಲ್, ಸಂಸದರಾದ  ಶಿವಕುಮಾರ್ ಉದಾಸಿ, ಗದ್ದಿ ಗೌಡರ್, ಶಾಸಕರಾದ  ಕಳಕಪ್ಪ ಬಂಡಿ,  ರಾಮಣ್ಣ ಲಮಾಣಿ,  ಬಸವರಾಜ್ ಹೊರಟ್ಟಿ,  ಶ್ರೀನಿವಾಸ್ ಮಾನೆ,  ಎಸ್.ವಿ.ಸಂಕನೂರ,  ಪ್ರದೀಪ್ ಶೆಟ್ಟರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು