ಅಚ್ಚುಕಟ್ಟಾಗಿ ನಡೆದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷಾ ಪರೀಕ್ಷೆ : ಸುರೇಶ್ ಕುಮಾರ್

ಬೆಂಗಳೂರು: ಆರನೇ ದಿನವಾದ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷಾ ಪರೀಕ್ಷೆಗಳು ಸಾಮಾಜಿಕ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಂದಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ಅವರು, ಆರನೇ ದಿನವಾದ ಗುರುವಾರ ನಡೆದ ಕನ್ನಡ ಸೇರಿದಂತೆ ಪ್ರಥಮ ಭಾಷಾ ಪರೀಕ್ಷೆಗಳಿಗೆ ನೊಂದಾಯಿತ 7,78,618 ವಿದ್ಯಾರ್ಥಿಗಳ ಪೈಕಿ 7,64,006 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.12ರಷ್ಟು ಇಂದು ಹಾಜರಾತಿ ಇದೆ. 14,612 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಷಯದ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 7,75,988 ವಿದ್ಯಾರ್ಥಿಗಳ ಪೈಕಿ 7,67,756 ವಿದ್ಯಾರ್ಥಿಗಳು ಹಾಜರಾಗಿದ್ದು, 8232 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.93 ಹಾಜರಾತಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಮೊದಲ ಬಾರಿಗೆ 7,44,843 ಶಾಲಾ ವಿದ್ಯಾರ್ಥಿಗಳು ಹಾಗೂ 20,957 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್ಮೆಂ2ಟ್ ಪ್ರದೇಶಗಳ 3890 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 670 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 04 ಪ್ರಕರಣಗಳು ನಡೆದಿದ್ದು, ಅವರನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು 1448 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 45 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 594ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12540 ವಿದ್ಯಾರ್ಥಿಗಳು ಹಾಜರಾಗಿದ್ದರೆ, 104 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:

ಗುರುವಾರ ತುಮಕೂರು, ಮಧುಗಿರಿ, ಬೆಂಗಳೂರು ಗ್ರಾಮಾಂತರ ಶೈಕ್ಷಣಿಕ ವಿವಿಧ ತಾಲೂಕುಗಳ ತಾಲೂಕುಗಳ 13 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲೆಲ್ಲಾ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಂದಿನ ಪರೀಕ್ಷೆಯ ಪ್ರಮುಖ ಸಂಗತಿಗಳು:

ಇಂದಿನ ಸಮಾಜ ವಿಜ್ಞಾನ ಪರೀಕ್ಷೆಯ ಸಂದರ್ಭದಲ್ಲಿ ಅಲ್ಲಲ್ಲಿ ಕಂಡು ಬಂದ ಸಂಗತಿಗಳನ್ನು ಸಚಿವರು ವಿವರಿಸಿದರು:

• ಕೊಪ್ಪಳ ಜಿಲ್ಲೆಯ ಕಾರಟಗಿಯ ಶರಣಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಯಾಗಿದ್ದ ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಯೊಂದಿಗೆ ಆ ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 17 ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯಲ್ಲಿ ನೆಗೆಟೀವ್ ಫಲಿತಾಂಶ ಬಂದಿದ್ದು, ಅವರೆಲ್ಲ ಪ್ರತ್ಯೇಕ ಕೊಠಡಿಯಲ್ಲಿ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
• ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ನೂತನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ನಂದೀಶ್ ಕುಮಾರನ ತಾಯಿ ಕ್ಯಾನ್ಸರ್ ರೋಗದಿಂದಾಗಿ ದಿನಾಂಕ 30-06-2020ರಂದು ನಿಧನರಾಗಿದ್ದರು. ಆದರೂ ಆ ವಿದ್ಯಾರ್ಥಿ ಮುಂದಿನ ಎಲ್ಲ ಪರೀಕ್ಷೆಗಳಿಗೆ ಹಾಜರಾಗುವ ಮೂಲಕ ಧೈರ್ಯ ತೋರಿದ್ದಾನೆ ಎಂದು ಸಚಿವರು ವಿವರಿಸಿದರು.
• ಕಲಬುರಿಗಿ ಜಿಲ್ಲೆಯ ಜೇವರ್ಗಿ ಬಳಿ ಸೇತುವೆ ಕುಸಿದಿದ್ದು, ಪರೀಕ್ಷೆಗೆ ಬರಬೇಕಾಗಿದ್ದ ಮಕ್ಕಳಿಗೆ ತೊಂದರೆಯಾಗಿ ಆಚೆಯೇ ನಿಲ್ಲುವಂತಾಗಿತ್ತು. ಈ ಸಂದರ್ಭದಲ್ಲಿ ಸಕಾಲಕ್ಕೆ ಅಗ್ನಿಶಾಮಕ ದಳದವರು ಬಂದು ತಾವೇ ತಮ್ಮ ಅಲ್ಯೂಮಿನಿಯಂನ ದೊಡ್ಡ ಏಣಿ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರು ಎಂದು ಅವರು ಹೇಳಿದರು.

2879 ಪರೀಕ್ಷಾ ಕೇಂದ್ರಗಳು:
ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷಾ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ.
ಆರು ದಿನಗಳ ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ತೃತೀಯ ಭಾಷಾ ಪತ್ರಿಕೆಗಳ ಪರೀಕ್ಷೆ ಮಾತ್ರವೇ ಬಾಕಿಯಿರುತ್ತವೆ. ಮಕ್ಕಳು ಯಾವುದೇ ಆತಂಕವಿಟ್ಟುಕೊಳ್ಳದೇ ಮುಂದಿನ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದಲೇ ಬರೆಯಲೆಂದು ಸಚಿವರು ಆಶಿಸಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯಿಂದ ಡಿಕೆ ಶಿವಕುಮಾರ್ ಗೆ ಶುಭಾಶಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರದ ಮೂಲಕ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಕಾರ್ಯಕ್ರಮದ ವೇಳೆ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದರು.

ಸೋನಿಯಾ ಗಾಂಧಿ: ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ತಂತ್ರಜ್ಞಾನದ ಮೂಲಕ ಸಂಘಟಿಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿದು, ಉತ್ತಮ ಸಮಾಜಕ್ಕಾಗಿ ಜನರ ಆಂದೋಲನವಾಗಿದೆ. ಸದ್ಯ ಕರ್ನಾಟಕ ಸೇರಿದಂತೆ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕಿದೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಿದೆ ಎಂಬ ನಂಬಿಕೆ ಇದೆ. ಈ ಮಹತ್ವದ ಸಮಯದಲ್ಲಿ ಕೆಪಿಸಿಸಿಯ ಎಲ್ಲ ಸದಸ್ಯರಿಗೂ ಶುಭ ಕೋರುತ್ತೇನೆ.

ರಾಹುಲ್ ಗಾಂಧಿ: ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವು ಇದನ್ನು ಮಾಡುವ ವಿಶ್ವಾಸ ನನಗಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ.

ಪ್ರಿಯಾಂಕ ಗಾಂಧಿ: ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ನೀವು ಧೈರ್ಯದಿಂದ ಮುನ್ನುಗ್ಗಿ. ಪಕ್ಷವನ್ನು ಸದೃಢವಾಗಿ ಸಂಘಟಿಸಿ. ನಿಮಗೆ ಅಭಿನಂದನೆಗಳು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಪದಗ್ರಹಣ ಮಾಡಿದರು. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡರು.

ಪದಗ್ರಹಣ ಸಮಾರಂಭಕ್ಕೂ ಮುನ್ನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು.ನಂತರ ಪಕ್ಷದ ನಾಯಕರ ಸಮ್ಮುಖದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಆನ್ ಲೈನ್ ವೀಕ್ಷಣಯೊಂದಿಗೆ ಪದಗ್ರಹಣ ಮಾಡಿದರು.

ಅಧಿಕಾರಿ ಸ್ವೀಕರಿಸಿ ಭಾಷಣ ಮಾಡಿದ ಡಿ.ಕೆ ಶಿವಕುಮಾರ್
ಇದೊಂದು ಐತಿಹಾಸಿಕ ದಿನ. ನನ್ನ ಪಾಲಿಗೆ, ರಾಜ್ಯದ ಎಲ್ಲ ಕಾಗ್ರೆಸಿಗರು, ಕನ್ನಡ ನಾಡಿನ ಜನರಿಗೆ ಇದೊಂದು ವಿಶೇಷ ದಿನ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಿಸುತ್ತಿರುವ ಎಲ್ಲ ಸ್ವಾಮೀಜಿ, ನಾಯಕರು, ನಮ್ಮ ಪೂಜ್ಯ ಅಜ್ಜಯ್ಯನವರಿಗೆ ನಮಿಸುತ್ತಾ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಕೋರುತ್ತೇನೆ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದವಿರಲಿ ಎಂದು ಬೇಡಿಕೊಂಡರು.

ನಮ್ಮ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಅವರ ಜತೆ ಸುದೀರ್ಘ ಚರ್ಚೆ ಮಾಡಿ, ರಾಜ್ಯದ ಎಲ್ಲ ನಾಯಕರ ಬಳಿ ಸಲಹೆ ಪಡೆದು ನನಗೆ ಈ ಜವಾಬ್ದಾರಿಯನ್ನು ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ ಸವಾಲು ಎದುರಿಸಲು ಉತ್ಸಾಹವಿದೆ. ಸೋನಿಯಾ ಗಾಂಧಿ ಅವರು ಯಾವ ಸಂದರ್ಭದಲ್ಲಿ ನನಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಡಿ.ಕೆ ಶಿವಕುಮಾರ್ ರಾಜಕೀಯ ಬದುಕು ಮುಗಿಯಿತು. ಬಿಜೆಪಿಯವರು ಕುತಂತ್ರ ಮಾಡಿ ಶಿವಕುಮಾರ್ ಅವರ ಕುಟುಂಬಕ್ಕೆ ನೀಡುತ್ತಿರುವ ಕಿರುಕುಳಕ್ಕೆ ಅವರ ರಾಜಕೀಯ ಅಂತ್ಯವಾಯಿತು ಎನ್ನುವ ಮಾತು ಕೇಳಿಬಂದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ತಮ್ಮ ಸಹೋದರನಂತೆ ಕಂಡು, ಒಂದು ಗಂಟೆಗಳ ಕಾಲ ಧೈರ್ಯ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಹೈಕಮಾಂಡ್ ಗೆ ಧನ್ಯವಾದ ಸಲ್ಲಿಸಿದರು.

ನಾನು ಅಧ್ಯಕ್ಷನಾದರೂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ನಾನು ವೈಯಕ್ತಿಕ ನಾಯಕತ್ವಕ್ಕಿಂತ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬುದನ್ನು ನಂಬಿರುವವನು.ನಾನು ವಿದ್ಯಾರ್ಥಿ ನಾಯಕನಾಗಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಒಂದು ಮಾತು ಹೇಳಿದ್ದರು. ಅವಕಾಶಗಳು ಸಿಗುವುದಿಲ್ಲ. ಅದನ್ನು ನೀವೇ ಸೃಷ್ಟಿಸಿಕೊಳ್ಳಬೇಕು ಎಂದು ಯುವಕರಿಗೆ ಸಂದೇಶ ಕೊಟ್ಟರು. ನಂತರ ನಾನು ರಾಜೀವ್ ಗಾಂಧಿ ಅವರ ಕಣ್ಣಿಗೆ ಬಿದ್ದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದ, ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಪಕ್ಷದ ಟಿಕೆಟ್ ಕೊಟ್ಟು ಸನ್ಮಾನ್ಯ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಅವಕಾಶ ನೀಡಿದರು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ನನ್ನ ಹಾಗೂ ಕಾಂಗ್ರೆಸ್ ಪಕ್ಷದ ನಡುವಣ ಬೆಸುಗೆ ಆರಂಭವಾದ ಬಗೆ ಇದು ಎಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಬಂಗಾರಪ್ಪನವರು, ಎಸ್.ಎಂ ಕೃಷ್ಣ, ಧರಂ ಸಿಂಗ್, ಸಿದ್ದರಾಮಯ್ಯನವರು ಹಾಗೂ ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಕುಮಾರಸ್ವಾಮಿ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಆದರೆ ನಾನು ಯಾರಿಗೂ ದ್ರೋಹ ಬಗೆದಿಲ್ಲ. ನಾನು ಹಲವು ತೊಂದರೆ ಅನುಭವಿಸಿದ್ದೇನೆ. ಎಲ್ಲವೂ ಪಕ್ಷಕ್ಕೊಸ್ಕರ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ ಶಿಕ್ಷೆ ಸ್ವೀಕರಿಸಲು ಸಿದ್ಧ. ನನಗೆ ಅಧಿಕಾರ ಕೊಡದಿದ್ದಾಗಲೂ ಪಕ್ಷದ ಬಗ್ಗೆ ಚಕಾರ ಎತ್ತಲಿಲ್ಲ. ಇದೇ ನನ್ನ ಬದ್ಧತೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೊಟ್ಟಿರುವ ಶಕ್ತಿ ನನ್ನ ರಕ್ತದ ಕಣ, ಕಣದಲ್ಲಿದ್ದು ನಾನು ಬದುಕಿರುವವರೆಗೂ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಪಕ್ಷಕ್ಕೆ ದಶ ದೀಪಗಳ ಶಕ್ತಿ:

ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಐದು ಬೆರಳು ಸೇರಿದರೆ ಮಾತ್ರ ಹಸ್ತ. ವಿದ್ಯಾರ್ಥಿ ದಳ, ಮಹಿಳಾ ಕಾಂಗ್ರೆಸ್, ಸೇವಾದಳ, ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲ ಘಟಕಗಳನ್ನು, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಎಂಥಾ ಸಂದರ್ಭದಲ್ಲಿ ನಾವು ದೀಪ ಬೆಳಗಿದ್ದೇವೆ ಎಂದರೆ ಬುದ್ಧ ಬಸವ ಮನೆಬಿಟ್ಟ ಘಳಿಗೆ, ಯೇಸುಕ್ರಿಸ್ತ ಶಿಲುಬೆಗೇರಿದ ಘಳಿಗೆ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಘಳಿಗೆ, ಬಾಬಾಸಾಹೇಬ್ ಅಂಬೇಡ್ಕರ್ ಜನ್ಮತಳೆದ ಘಳಿಗೆ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಚುಕ್ಕಾಣಿ ಹಿಡಿದ ಘಳಿಗೆ ನಾವು ಹತ್ತು ಮಂದಿ ಸೇರಿ ದಶಜ್ಯೋತಿಯನ್ನು ಹತ್ತು ಬೆರಳುಗಳಿಂದ ಬೆಳಗಿದ್ದೇವೆ. ಇದು ಒಗ್ಗಟ್ಟಿನ ಜ್ಯೋತಿ.

ಮುಂದಿನ ದಿನಗಳಲ್ಲಿ ಈ ಜ್ಯೋತಿಗೆ ಇನ್ನಷ್ಟು ಶಕ್ತಿ ಬರಬೇಕು. ಈ ಎಲ್ಲ ಸಂಘಟನೆಗಳಿಗೆ ನಾವು ಶಕ್ತಿ ನೀಡದಿದ್ದರೆ ಗುರಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸಬೇಕಿದೆ. ಯಾವುದೇ ನಾಯಕನಾದರೂ ಆತ ತನ್ನ ಬೂತ್ ಮಟ್ಟದಿಂದ ಪ್ರತಿನಿಧಿಸಬೇಕು. ಇದಕ್ಕೆ ಕೇರಳ ಮಾಡೆಲ್ ಪ್ರೇರಣೆ. ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ ಎಂದರು.

ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ:

ನಾನು ಯಾವುದೇ ನಿರ್ಧಾರ ಕೈಗೊಂಡರೂ ಸಾಮೂಹಿಕವಾಗಿ ಚರ್ಚಿಸಿ, ನಂತರ ತೀರ್ಮಾನಿಸುತ್ತೇನೆ. ವೈಯಕ್ತಿಕ ತೀರ್ಮಾನ ಕೈಗೊಳ್ಳುವುದಿಲ್ಲ. ಯಾವುದೇ ಗುಂಪುಗಾರಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಯಾವುದೇ ಧರ್ಮ, ಜಾತಿ ಬೇಧ-ಭಾವ ನನಗಿಲ್ಲ. ನಾನು ನಂಬುವುದು ಕೇವಲ ಕಾಂಗ್ರೆಸ್ ಧರ್ಮವನ್ನು ಮಾತ್ರ. ಈ ನಿಟ್ಟಿನಲ್ಲಿ ನಾವೆಲ್ಲರು ಹೆಜ್ಜೆ ಹಾಕಬೇಕು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಸದಸ್ಯರಾಗಿರುವುದಕ್ಕೆ ನೀವು ಹೆಮ್ಮೆಪಡಬೇಕು. ನಾವು ಇಂದು ರಾಷ್ಟ್ರದ ಧ್ವಜವನ್ನು ಹೊತ್ತಿದ್ದೇವೆ. ಇದನ್ನು ಬಳಸಿಕೊಳ್ಳಲು ಬಿಜೆಪಿ, ಜನತಾದಳದವರಿಗೆ ಸಾಧ್ಯವೇ? ಖಂಡಿತಾ ಇಲ್ಲ. ನಾವು ವ್ಯಕ್ತಿ ಪೂಜೆ ಬಿಡೋಣ, ಪಕ್ಷ ಪೂಜೆ ಮಾಡೋಣ. ಯಾವ ಹಿಂಬಾಲಕರೂ ನನಗೆ ಬೇಡ. ನಾವು ನಮ್ಮ ನೆರಳನ್ನೇ ನಂಬಲು ಆಗುಗುವುದಿಲ್ಲ. 20, 30 ವರ್ಷ ತಯಾರು ಮಾಡಿದ ನಾಯಕರು ಏನು ಮಾಡಿದರು ಅಂತಾ ನಾವು ನೋಡಿದ್ದೇವೆ.

ರಾಜೀವ್ ಗಾಂಧಿ ಅವರು ಯುವ ಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ನಾಯಕರನ್ನು ನಿರ್ಮಿಸುವವನೇ ನಿಜವಾದ ನಾಯಕ. ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿಯಿಂದ ಸಂಸತ್ತಿನವರೆಗೆ ನಾಯಕರ ಅಗತ್ಯವಿದೆ. ಹೀಗಾಗಿ ಪಂಚಾಯತ್ ಕಾಯ್ದೆ ತಿದ್ದುಪಡಿ ತಂದಿದ್ದೇವೆ ಎಂದು ರಾಜೀವ್ ಗಾಂಧಿ ಸಾರಿದ್ದರು. ರಾಜೀವ್ ಗಾಂಧಿ ಅವರು ಮತದಾನದ ವಯಸ್ಸನ್ನು 18ಕ್ಕೆ ಇಳಿಸಿದಾಗ, ಬೇರೆ ಪಕ್ಷದವರು ಇದನ್ನು ಪ್ರಶ್ನಿಸಿದ್ದರು. ಆಗ 16ನೇ ವಯಸ್ಸಿಗೆ 10ನೇ ತರಗತಿ ಪಾಸಾದವರನ್ನು ದೇಶ ಕಾಯಲು ಕಳುಹಿಸುತ್ತೇವೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಪರಿಗಣಿಸದಿದ್ದರೆ ಅವರಿಗೆ ಅನ್ಯಾಯ ಮಾಡಿದಂತೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆ ಮೂಲಕ ಯುವ ಶಕ್ತಿ ಮೇಲೆ ಅಪಾರ ನಂಬಿಕೆ, ವಿಶ್ವಾಸ ಇಟ್ಟಿದ್ದರು. ಇಂದು ತಂತ್ರಜ್ಞಾನವನ್ನು ನಾವು ಬಹಳ ದೊಡ್ಡ ಮಟ್ಟದಲ್ಲಿ ಬಳಸುತ್ತಿದ್ದೇವೆ. ಇದಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ ಅವರು. ಅವರ ಪ್ರೇರಣೆಯಿಂದ ನಾನು ಇಂದು ಇಲ್ಲಿ ನಿಂತಿದ್ದೇನೆ.

ಪಕ್ಷ ಅಧಿಕಾರಕ್ಕೇರಲು ಮೆಟ್ಟಿಲಾಗುವ ಆಸೆ:
ನನಗೆ ಯಾರು ಎಷ್ಟೇ ತೊಂದರೆ ಕೊಡಲಿ, ಆಮಿಷ ಒಡ್ಡಲಿ, ಕೇಸ್ ಹಾಕಲಿ, ಜೈಲಿಗೆ ಹಾಕಲಿ ಯಾವುದಕ್ಕೂ ನಾನು ಬೆದರುವುದಿಲ್ಲ. ಈ ಡಿ.ಕೆ ಶಿವಕುಮಾರ್ ಜಗ್ಗುವ ಮಗ ಅಲ್ಲ. ಕೆಲವರು ನನ್ನನ್ನು ಕನಕಪುರ ಬಂಡೆ ಅಂತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಹುಳಿ ಪೆಟ್ಟು ಬಿದ್ದರೆ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ಚಪ್ಪಡಿಯಾಗುತ್ತದೆ. ಇನ್ನು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ದೇವರ ಶಿಲೆಯಾಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ. ನೀವು ಆ ಕಲ್ಲಿನ ಮೇಲೆ ನಡೆದುಕೊಂಡು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಸಾಕು. ಅದರಲ್ಲಿ ತೃಪ್ತಿ ಪಡುತ್ತೇನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಪ್ರಮುಖ ಗುರಿ ಎಂದರು.

ಕಾಂಗ್ರೆಸ್ ದೇಶಕ್ಕೆ ಅನಿವಾರ್ಯ:

ಅನೇಕ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಈ ದೇಶಕ್ಕೆ, ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಈ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾರಂಗದ ಬಗ್ಗೆ ಮಾತನಾಡುತ್ತೇವೆ. ಇವುಗಳನ್ನು ಆಧಾರ ಸ್ತಂಭ ಎನ್ನುತ್ತೇವೆ. ಅದೇ ರೀತಿ ರೈತರು, ಯೋಧರು, ಕಾರ್ಮಿಕರು, ಶಿಕ್ಷಕರು ಈ ದೇಶಕ್ಕೆ ಪ್ರಮುಖ ಸ್ತಂಭಗಳು. ಇಂದು ಅವರ ಪರಿಸ್ಥಿತಿ ಹದಗೆಟ್ಟಿದೆ. ಅವರ ಉದ್ಧಾರಕ್ಕೆ ಶ್ರಮಿಸೋಣ.

ಕೊರೋನಾ ಸಂದರ್ಭದಲ್ಲಿ ನಾವು ಮುಕ್ತ ಮನಸ್ಸಿನಿಂದ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದ್ದೇವೆ. ಅವರ ಬೆನ್ನೆಲುಬಾಗಿ ನಿಂತೆವು. ಬೇರೆಯವರು ಕೋವಿಡ್ ವಿಚಾರಕ್ಕೂ ಕೋಮು ಲೇಪ ಹಚ್ಚಿದರು. ನಾನು ಹೇಳಿದೆ. ಕೊರೋನಾ ಯಾವುದೋ ಒಂದು ಜಾತಿ, ಧರ್ಮದವರಿಗೆ ಬಂದಿಲ್ಲ ಅಂತಾ. ಇಂದು ರೈತ ಅನ್ನ ಬೆಳೆಯುತ್ತಾನೆ. ಅದಕ್ಕೆ, ಅದನ್ನು ತಿನ್ನುವವರಿಗೆ ಜಾತಿ ಇದೆಯಾ. ಸಿದ್ದರಾಮಯ್ಯ ಅವರು ಅನ್ನ ಭಾಗ್ಯ ಕೊಟ್ಟರು, ಅದನ್ನು ಒಂದು ಜಾತಿಯವರಿಗೆ ಮಾತ್ರ ಕೊಟ್ಟರೆ? ನೇಕಾರರು ಬಟ್ಟೆ ನೇಯುತ್ತಾರೆ. ಅವರು ಜಾತಿ ಆಧಾರದ ಮೇಲೆ ನೇಯುತ್ತಾರಾ? ಸಂಕಷ್ಟದ ಸಂದರ್ಭದಲ್ಲಿ ನನ್ನ ಕರೆಗೆ 5700 ಎನ್ಎಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ. ಅವರಿಗೆ ಸೆಲ್ಯೂಟ್ ಮಾಡುತ್ತೇನೆ. ಅವರು ಕೊಟ್ಟ ರಕ್ತಕ್ಕೆ ಜಾತಿ ಇದೆಯಾ? ನಿರ್ದಿಷ್ಟ ಜಾತಿಯವರ ದೇಹವನ್ನು ಮಾತ್ರ ಆ ರಕ್ತ ಸೇರಿದೆಯಾ?

ರೈತ ಬೆಳೆದ ಬೆಲೆ, ಮಾರುಕಟ್ಟೆ ಕಲ್ಪಿಸಲು ಸಾಧ್ಯವಾಗಲಿಲ್ಲವಲ್ಲ ಮುಖ್ಯಮಂತ್ರಿಗಳೇ, ನಾವು 100 ಕೋಟಿ ರೂಪಾಯಿ ತರಕಾರಿ ಖರೀದಿಸಿದೆವು. ನಮ್ಮ ಕಾರ್ಯವನ್ನು ರೈತ ಸಂಘಗಳು ಶ್ಲಾಘಿಸಿವೆ. ದೇಶ ಕಟ್ಟುತ್ತಿರುವ ಕಾರ್ಮಿಕ ಸಮುದಾಯದವರನ್ನು ನೀವು ನಡೆಸಿಕೊಂಡ ರೀತಿ ಎಷ್ಟು ಹೀನಾಯವಾಗಿತ್ತು. ನಿಮ್ಮಿಂದ ಅವರಿಗೆ ಸಮರ್ಪಕ ಹಣ, ಆಹಾರ, ಆರೋಗ್ಯ ಕಿಟ್ ನೀಡಲಾಗಲಿಲ್ಲ. ಬದಲಿಗೆ ಅವರಿಗೆ ನೀಡಬೇಕಾದ ಪರಿಹಾರ ವಸ್ತುಗಳ ಮೇಲೆ ನಿಮ್ಮ ಪಕ್ಷದ, ನಾಯಕರ ಫೋಟೋ ಹಾಕಿಕೊಂಡು ನಿಮ್ಮ ಕಾರ್ಯಕರ್ತರಿಗೆ ಹಂಚಿಕೊಂಡಿರಿ. ಇಲ್ಲದಿದ್ದರೆ ಅವರೇಕೆ ಬೆಂಗಳೂರು ಬಿಟ್ಟು ಹೋಗುತ್ತಿದ್ದರು? ನಾವು ಶ್ರಮಿಕರ ಪರವಾಗಿ, ಅಸಂಘಟಿತ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದೆವು. ನಾವು ಅವರಿಗೆ ಮಾಸಿಕ 10 ಸಾವಿರ ರುಪಾಯಿ ಕೊಡಲು ಕೇಳಿದೆವು. 5 ಸಾವಿರ ಘೋಷಿಸಿದಿರಿ. ಈವರೆಗೂ ಅದನ್ನೂ ನೀಡಿಲ್ಲ. ಅವರು ಸತ್ತ ಮೇಲೆ ಪರಿಹಾರ ಕೊಡುತ್ತೀರಾ? ಆಪ್, ದಾಖಲೆ ಅಂತಾ ಇಲ್ಲದ ಗೊಂದಲ ಸೃಷ್ಟಿಸಿ ಅವರಿಗೆ ಪರಿಹಾರ ಸಿಗದಂತೆ ಮಾಡಿದ್ದೀರಿ. ಇದರ ವಿರುದ್ಧ ಧ್ವನಿ ಎತ್ತಲು ನಾವಿದ್ದೇವೆ.

ಬಿಜೆಪಿ ಮುಕ್ತ ರಾಜ್ಯ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದ ಮೇಲೆ ನಾವು ಸಾಗೋಣ. ಆಪರೇಷನ್ ಕಮಲದ ಮೂಲಕ ಹೋದವರು, ಹೋಗುವವರು ಹೋಗಲಿ, ಸಂತೋಷದಿಂದ ಕಳುಹಿಸಿಕೊಡುತ್ತೇವೆ. ಈ ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಕಟ್ಟುವ ಶಕ್ತಿ ಇದೆ.

ನೀವು ಇಟ್ಟಿರುವ ಭರವಸೆ ಉಳಿಸಿಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮ ಮಗನೆಂದು ಭಾವಿಸಿ ನನ್ನನ್ನು ಸ್ವೀಕರಿಸಿ, ಆಶೀರ್ವಾದ ಮಾಡಿ. ಮಾನವ ಧರ್ಮಕ್ಕೆ ಜಯವಾಗಲಿ. ಈ ಸಮಯದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಮುಂದೆ ಸಾಗೋಣ. ಪಕ್ಷ ಕಟ್ಟೊಣ. ಪಕ್ಷಕ್ಕಾಗಿ ಹಗಲಿರುಳು ದುಡಿದ ಎಲ್ಲರಿಗೂ ನಮಿಸುತ್ತೇನೆ. ಕಾರ್ಯಕರ್ತರು ಶಕ್ತಿಯಾದರೆ ನಾವು ಶಕ್ತಿಶಾಲಿಯಾಗುತ್ತೇವೆ. ನೀವು ದುರ್ಬಲರಾದರೆ ನಾವು ದುರ್ಬಲರಾಗುತ್ತೇವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದುಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ರೆಹಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ ಮತ್ತಿತರ ನಾಯಕರು, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.

ರಾಜ್ಯದ 19,000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಡಿಜಿಟಲ್ ಜಾಲತಾಣ ಝೂಮ್ ಸಂಪರ್ಕ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ 40 ಲಕ್ಷಕ್ಕೂ ಹೆಚ್ಚು ಜನರು ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಇದಲ್ಲದೆ, ಕನ್ನಡದ ಎಲ್ಲ ಟಿವಿ ಚಾನೆಲ್ಗಳು ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿದವು.

ಕೋವಿಡ್ ನಿರ್ವಹಣೆ ಕುರಿತಂತೆ ತಜ್ಞರೊಂದಿಗೆ ಸಿಎಂ ಮಹತ್ವದ ಸಭೆ:ಶೀಘ್ರದಲ್ಲೇ ನೂತನ ಮಾರ್ಗಸೂಚಿ ಬಿಡುಗಡೆ 

ಬೆಂಗಳೂರು – ಜುಲೈ 1, 2020: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ವಿವಿಧ ರಂಗಗಳ ತಜ್ಞ ವೈದ್ಯರುಗಳು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಸಚಿವರಾದ ಬಸವರಾಜ್ ಬೊಮ್ಮಾಯಿ ಹಾಗೂ ಶ್ರೀರಾಮುಲು ಸೇರಿದಂತೆ ಅನೇಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ವಿವಿಧ ತಜ್ಞರುಗಳು ಹಲವು ಉಪಯುಕ್ತ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ತಜ್ಞರುಗಳ ಸಲಹೆಯನ್ನು ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಮತ್ತೊಂದು ಸಭೆ ಕರೆದಿದ್ದಾರೆ. ಮುಂದಿನ ಮಾರ್ಗಸೂಚಿಗಳ ಕುರಿತಂತೆ ಸಧ್ಯದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವಸಂಸ್ಕಾರ ಕುರಿತ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಘಟನೆ ಸಂಭವಿಸಿದ ದಿನದಂದೇ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು ಅಲ್ಲಿನ ಜಿಲ್ಲಾಧಿಕಾರಿಯವರು ಈ ಘಟನೆಗಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಗೆ ಕಾರಣರಾದ 6 ಮಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ವಿವಿಧ ತಜ್ಞರುಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು. ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ಮಾಡಿದರು. ಅಲ್ಲದೆ ಟೆಲಿ ಮೆಡಿಸಿನ್ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಿಬ್ಬಂದಿ ಹಾಗೂ ಪರಿಕರಗಳ ಅವಶ್ಯಕತೆಯನ್ನೂ ಕೂಡ ವ್ಯಕ್ತಪಡಿಸಿದರು.

ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು.. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಸುದ್ದಿ ಬಿತ್ತರಿಸಬೇಕು ಎಂದು ಅವರುಗಳು ಮನವಿ ಮಾಡಿದರು.

ತಜ್ಞರುಗಳ ಸಲಹೆಗಳನ್ನು ಸರ್ಕಾರ ಉನ್ನತಮಟ್ಟದಲ್ಲಿ ವಿವರವಾಗಿ ಚರ್ಚಿಸಿ ಕ್ರಮಕೈಗೊಳ್ಳುವುದೆಂದು ಸಚಿವ ಸುಧಾಕರ್ ತಿಳಿಸಿದರು. ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಶ್ರೀ ಆಶಿಶ್ ಸತ್ಪತಿ, ಕಿ ಕಿಮ್ಸ್‌ನ ಡಾ.ಲೋಕೇಶ್, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುಧಾಕರನ್ ಬಲ್ಲಾಳ್, ಡಾ.ಅಂಜನಪ್ಪ, ಡಾ.ಶರಣ್ ಪಾಟೀಲ್, ಡಾ.ಪ್ರಭುದೇವ್, ಡಾ.ಪ್ರದೀಪ್ ರಂಗಪ್ಪ, ಡಾ.ಪ್ರಕಾಶ್, ಡಾ.ಕುಮಾರ್, ಡಾ.ಗಿರಿಧರ್ ಬಾಬು, ಡಾ.ಷರೀಫ್, ಡಾ.ರಂಗನಾಥ, ಡಾ.ಸತೀಶ್, ಡಾ.ಭುಜಂಗ ಶೆಟ್ಟಿ ಸೇರಿದಂತೆ ಅನೇಕ ತಜ್ಞರು ಭಾಗವಹಿಸಿದ್ದರು.

ಬೆಂಗಳೂರು ವಿವಿಯಲ್ಲಿ ಪತ್ರಿಕಾ ದಿನಾಚರಣೆ: ಕೋವಿಡ್ 19: ಮಾಧ್ಯಮಗಳ ಬದ್ಧತೆಯನ್ನು ಕೊಂಡಾಡಿದ ಡಿಸಿಎಂ

ಬೆಂಗಳೂರು: ಕೋವಿಡ್ 19 ದಂತಹ ಸಮರಸ್ಥಿತಿಯಲ್ಲೂ ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಸಮಾಜದ ಎಲ್ಲರಿಗೂ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯಿಂದ ವರ್ತಿಸಿ ಈ ಮಹಾಮಾರಿಯನ್ನು ತೊಲಗಿಸಬೇಕು ಎಂದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಎಲ್ಲರಿಗೂ ಹಿತವಚನ ಹೇಳಿದರು.

ಪತ್ರಿಕಾ ದಿನಾಚರಣೆ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನಾ ಹಾಗೂ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಅದರಲ್ಲೂ ಎಲ್ಲ ರೀತಿಯ ಮಾಧ್ಯಮಗಳು ಹೊಣೆಗಾರಿಕೆಯಿಂದ ಈ ಮಹಾಮಾರಿಯ ವಿರುದ್ಧ ಸೆಣಸಲು ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಿವೆ. ಅದರಲ್ಲೂ ಪತ್ರಕರ್ತ ಸಮುದಾಯ ತನ್ನ ಆರೋಗ್ಯವನ್ನು ಪಕ್ಕಕ್ಕಿಟ್ಟು ಜನರ ಕ್ಷೇಮಕ್ಕಾಗಿ ಹಗಲಿರುಳು ಕಾರ್ಯನಿರ್ವಹಿಸಿದ್ದು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ ಎಂದು ಹೇಳಿದರು.

ನಮ್ಮ ದೇಶವೂ ಎಲ್ಲ ಕ್ಷೇತ್ರಗಳಲ್ಲಿಯೂ ವೇಗವಾಗಿ ದಾಪುಗಾಲಿಡುತ್ತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಆರ್ಥಿಕವಾಗಿ, ರಾಜಕೀಯವಾಗಿ ಬಳಷ್ಟು ಪ್ರಭಾವಶಾಲಿ ದೇಶವಾಗಿದೆ. ಹೊಸ ಶತಮಾನದಲ್ಲಿ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ನಿರ್ವಹಿಸುತ್ತಿರುವ ಪಾತ್ರ ಅವರ್ಣನೀಯ ಎಂದು ಉಪ ಮುಖ್ಯಮಂತ್ರಿಗಳು ನುಡಿದರು.

ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಾವು ಮಾಧ್ಯಮವನ್ನು ಸ್ಮರಿಸಬೇಕು. ಕನ್ನಡದ ಮೊದಲ ಪತ್ರಿಕೆ ’ಮಂಗಳೂರು ಸಮಾಚಾರ್’ ಪತ್ರಿಕೆಯನ್ನು ಮಂಗಳೂರಿನಲ್ಲಿ 1843 ಜುಲೈ 1ರಂದು ಆರಂಭಿಸಲಾಗಿತ್ತು. ಜರ್ಮನಿಯ ಹರ್ಮನ್ ಫ್ರೆಡಿರಿಕ್ ಈ ಪತ್ರಿಕೆಯ ಪ್ರಥಮ ಸಂಪಾದಕರು. ಈ ಘಟನೆ ಚರಿತ್ರಾರ್ಹವೆಂದೇ ಪರಿಗಣಿಸಿ ಮಾಧ್ಯಮ ಅಕಾಡೆಮಿಯ ವತಿಯಿಂದ ಜುಲೈ 1ನ್ನು ಕನ್ನಡ ಪತ್ರಿಕೋದ್ಯಮದ ಪಾಲಿನ ಜನ್ಮದಿನವೆಂದು ಆಚರಿಸಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ 177 ವರ್ಷಗಳ ಭವ್ಯ ಇತಿಹಾಸವಿದೆ. ಈ ರೀತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಅವರು ನುಡಿದರು.

ದೇಶದ ಹೊರಗಿನ ಮತ್ತು ಒಳಗಿನ ಶತ್ರುಗಳನ್ನು ಸೆದೆಯಡಿಯುವಲ್ಲಿ ನಮ್ಮ ಮಾಧ್ಯಮಗಳು ನಿಷ್ಠುರವಾಗಿ ವರ್ತಿಸಿವೆ. ಚೀನಾ, ಪಾಕಿಸ್ತಾನ ಉಂಟು ಮಾಡುತ್ತಿರುವ ಉಪಟಳವನ್ನು ಕಾಲಕಾಲಕ್ಕೆ ಮಾಧ್ಯಮಗಳು ಚಾಕಚಕ್ಯತೆಯಿಂದ ವರದಿ ಮಾಡುತ್ತಿವೆ. ಆ ದೇಶಗಳ ಕುಟಿಲತೆಯನ್ನು ಬಟಾಬಯಲು ಮಾಡುತ್ತಿವೆ. ಅಷ್ಟೇ ಅಲ್ಲದೆ, ಚೀನಾ ವಿರುದ್ಧ ಎಲ್ಲ ಬಗೆಯ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇದಕ್ಕಾಗಿ ಮಾಧ್ಯಮಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ ಮಾಧ್ಯಮ ಜಗತ್ತು ಬಹಳ ಗಟ್ಟಿಯಾಗಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತಿರುವ ಕ್ಷೇತ್ರವು ನಮ್ಮ ಶ್ರೇಷ್ಟ ಸಂವಿಧಾನದ ನಾಲ್ಕನೇ ಆಧಾರ ಸ್ತಂಭ. ಈ ನಿಟ್ಟಿನಲ್ಲಿ ಭಾರತದ ಮಟ್ಟಿಗೆ ಮಾಧ್ಯಮಕ್ಕೆ ಬಹಳ ಪೂಜನೀಯ ಸ್ಥಾನಮಾನವಿದೆ. ಭಾರತದ ಮಾಧ್ಯಮ, ಜಗತ್ತಿನಲ್ಲಿಯೇ ಅತಿ ದೊಡ್ಡ ಮಾಧ್ಯಮ ಕ್ಷೇತ್ರವಾಗಿದೆ. ಸಂವಿಧಾನದ ನಾಲ್ಕನೇ ಅಂಗ. ನಮ್ಮ ದೇಶದಲ್ಲಿ 5,000ಕ್ಕೂ ಹೆಚ್ಚು ಸುದ್ದಿಪತ್ರಿಕೆಗಳಿವೆ. 1000ಕ್ಕೂ ಹೆಚ್ಚು ಮ್ಯಾಗಝಿನ್ ಗಳಿವೆ, 450 ಸುದ್ದಿ ವಾಹಿನಿಗಳಿವೆ. 200 ಕ್ಕೂ ಹೆಚ್ಚು ನ್ಯೂಸ್ ಪೋರ್ಟಲ್ಲುಗಳಿವೆ. ಒಂದು ಅಂದಾಜಿನ ಪ್ರಕಾರ 72,000 ಕೋಟಿಯಷ್ಟು ವಾರ್ಷಿಕ ಜಾಹೀರಾತು ಆದಾಯವಿದೆ. ಹೀಗಾಗಿ ನಮ್ಮಲ್ಲಿ ಮಾಧ್ಯಮ ಕ್ಷೇತ್ರ ಬಲಿಷ್ಠವಾಗಿದ್ದು, ಅದು ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಡಿಸಿಎಂ ಆಶಿಸಿದರು.

ವೆಬಿನಾರಿನಲ್ಲಿ ಬೆಂಗಳೂರು ವಿವಿ ಉಪ ಕುಲಪತಿ ಪ್ರೊ. ಜಾಫೆಟ್, ಹಿಂದು ಪತ್ರಿಕೆಯ ಬೆಂಗಳೂರು ಬ್ಯೂರೋ ಮುಖ್ಯಸ್ಥೆ ಎಸ್. ಬಾಗೇಶ್ರೀ, ವಿವಿಯ ಸಂವಹನಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.

ಉತ್ತಮವಾಗಿ ನಡೆದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ : ಸುರೇಶ್ ಕುಮಾರ್

ಬೆಂಗಳೂರು: ಐದನೇ ದಿನವಾದ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಸಮಾಜವಿಜ್ಞಾನ ಪರೀಕ್ಷೆ ಸಾಮಾಜಿಕ ಸುರಕ್ಷಿತ ವಾತಾವರಣದಲ್ಲಿ ಉತ್ತಮವಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬುಧವಾರದ ಪರೀಕ್ಷೆ ನಂತರ ಸುದ್ದಿಗೋಷ್ಠಿಯಲ್ಲಿ ಇಂದಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ಅವರು, ಐದನೇ ದಿನವಾದ ಬುಧವಾರ ನಡೆದ ಸಮಾಜವಿಜ್ಞಾನ ಪರೀಕ್ಷೆಗೆ ನೊಂದಾಯಿತ 7,84,287 ವಿದ್ಯಾರ್ಥಿಗಳ ಪೈಕಿ 7,68,341 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 97.96ರಷ್ಟು ಇಂದು ಹಾಜರಾತಿ ಇದೆ. 15,946 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಷಯದ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 7,77858 ವಿದ್ಯಾರ್ಥಿಗಳ ಪೈಕಿ 7,68,374 ವಿದ್ಯಾರ್ಥಿಗಳು ಹಾಜರಾಗಿದ್ದು, 9484 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.78 ಹಾಜರಾತಿ ಇತ್ತು ಎಂದು ಅವರು ಹೇಳಿದರು.
ಮೊದಲ ಬಾರಿಗೆ 7,45,070 ಶಾಲಾ ವಿದ್ಯಾರ್ಥಿಗಳು ಹಾಗೂ 20, 991 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್ಮೆಂರಟ್ ಪ್ರದೇಶಗಳ 3363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 613 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ಪ್ರಕರಣಗಳು ನಡೆದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 52 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 593ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12541 ವಿದ್ಯಾರ್ಥಿಗಳು ಹಾಜರಾಗಿದ್ದರೆ, 103 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:

ಬುಧವಾರ ರಾಮನಗರ ಜಿಲ್ಲೆಯ ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕುಗಳ 13 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಪರೀಕ್ಷೆಯ ಪ್ರಮುಖ ಸಂಗತಿಗಳು:

ಇಂದಿನ ಸಮಾಜ ವಿಜ್ಞಾನ ಪರೀಕ್ಷೆಯ ಸಂದರ್ಭದಲ್ಲಿ ಅಲ್ಲಲ್ಲಿ ಕಂಡು ಬಂದ ಸಂಗತಿಗಳನ್ನು ಸಚಿವರು ವಿವರಿಸಿದರು:

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯ ಗ್ರಾಮದ ವಿದ್ಯಾರ್ಥಿನಿ ಕಲ್ಪನಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಕಾಲಿಗೆ ಸುಟ್ಟಗಾಯಗಳಾಗಿರುವುದನ್ನು ಲೆಕ್ಕಿಸದೆ ಪರೀಕ್ಷೆಕಗೆ ಹಾಜರಾಗಿದ್ದಾಳೆ. ಈಕೆಯನ್ನು ನಮ್ಮ ಇಲಾಖೆ ಅಧಿಕಾರಿಗಳು ತಮ್ಮ ವಾಹನದಲ್ಲಿ 22 ಕಿಮೀ. ದೂರದಿಂದ ಕರೆತಂದು ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆಸಿದ್ದಾರೆ. ಆ ವಿದ್ಯಾರ್ಥಿನಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಅವರು ತಿಳಿಸಿದರು.

ಇಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಬಂಕೇಶ್ವರ ಗ್ರಾಮದ ಪ್ರೌಢಶಾಲೆಯ ತಾರಾ ಎಂಬ ವಿದ್ಯಾರ್ಥಿನಿಯ ತಂದೆ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದರಿಂದ ವಾಹನವಿಲ್ಲದೇ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಅವರ ಸ್ವಂತ ವಾಹನದಲ್ಲಿ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ಕರೆತಂದು ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಆಕೆಯ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲೂಕಿನ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ಕುಲಗೋಡು ಎಂಬ ವಿದ್ಯಾರ್ಥಿ ಪರೀಕ್ಷೆಗೆಂದು ಸಂಬಂಧಿಕರ ವಾಹನದಲ್ಲಿ ಬರುತ್ತಿದ್ದಾಗ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮಾನಸಿಕ ಆಘಾತಕ್ಕೊಳಗಾಗಿದ್ದರಿಂದ ಇಂದಿನ ಪರೀಕ್ಷೆಗೆ ವಿನಾಯ್ತಿ ಕಲ್ಪಿಸಿ ವೈದ್ಯಕೀಯ ಶುಶ್ರೂಷೆ ನೀಡಲಾಗಿದೆ. ಮುಂದಿನ ಪರೀಕ್ಷೆಗಳಿಗೆ ಈತ ಹಾಜರಾಗಲಿದ್ದಾನೆ. ಇಂದಿನ ವಿಷಯಕ್ಕೆ ಸಂಬಂಧಿಸಿದಂತೆ ಆತನಿಗೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರದ ಸೀಲ್ ಡೌನ್ ಪ್ರದೇಶದಿಂದ ಇಬ್ಬರು ವಿದ್ಯಾರ್ಥಿಗಳನ್ನು ವಿಶೇಷ ವಾಹನದ ಮೂಲಕ ಕರೆತಂದು ಯಲ್ಲಾಪುರದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿದೆ.

ಇಂದಿನ ಮಾಧ್ಯಮಗಳಲ್ಲಿ ವರದಿಯಾದಂತೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಗಳನ್ನು ನಿರ್ಬಂಧಿಸಿ ಪರೀಕ್ಷಾ ಅಕ್ರಮಗಳನ್ನು ಪ್ರೋತ್ಸಾಹಿಸುವ ಪ್ರಕರಣಗಳು ವರದಿಯಾಗಿದ್ದು, ಯಾವದೇ ಕೇಂದ್ರದ ಮುಖ್ಯಸ್ಥರು, ಪ್ರತಿದಿನದ ಪರೀಕ್ಷೆ ಮುಗಿದ ಬಳಿಕ ಸಿಸಿ ಟಿವಿ ಫುಟೇಜ್ ಗಳನ್ನು ಮೇಲಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಹಾಗೂ ಅದನ್ನು ಪರಾಮರ್ಶಿಸುವುದನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದ್ದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರದ ಸಿಸಿ ಟಿವಿ ಫುಟೇಜ್ ದಾಖಲೆಗಳು ಸಂಪೂರ್ಣ ಲಭ್ಯವಾಗದಿದ್ದಲ್ಲಿ ಅಥವಾ ತಿರುಚಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಈಗಾಗಲೇ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಜೂನ್ 27ರ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಗೆ ಹಳೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ ಎಂಬ ವರದಿಯನ್ನು ಇಂದು ಪತ್ರಿಕೆಗಳಲ್ಲಿ ಗಮನಿಸಲಾಗಿದ್ದು, ಈ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ಅಂತಹ ಐದು ಪರಿಕ್ಷಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ಅಚಾತುರ್ಯವಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ , ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಕೊಠಡಿ ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ನಿರ್ಮಲಾ ರಾಣಿ ಪ್ರೌಢಶಾಲೆಯ ವಿದ್ಯಾರ್ಥಿ ರಕ್ಷಿತಾ ಸುರೇಶ್ ಅಪೆಂಡಿಸೈಟಿಸ್ ತೊಂದರೆಯಿಂದ ಬಳಲುತ್ತಿದ್ದು, ಇಂದು ಮಲ್ಲೇಶ್ವರದ ಕೆಪಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದು, ಅಕೆಯನ್ನು ವೈದ್ಯಕೀಯ ಶುಶ್ರೂಷೆಗೆ ಕಳಲುಹಿಸಿ ಕೊಡಲಾಗಿದೆ. ಮುಂದಿನ ಪೂರಕ ಪರೀಕ್ಷೆಯಲ್ಲಿ ಆಕೆಗೆ ಬರೆಯುವ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇ ರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ವಿಶ್ವಾಸವಿಟ್ಟುಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.

ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಿದ್ದು ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೇ ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಓದಿನ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಯಾವುದೇ ಪೋಷಕರು ಆತಂಕಕ್ಕೊಳಗಾಗದೇ, ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದ ಕುರಿತು ಭರವಸೆಯೊಂದಿಗೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ. ಐದು ದಿನಗಳ ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಪ್ರಥಮ ಮತ್ತು ತೃತೀಯ ಭಾಷೆಗಳು ಮಾತ್ರವೇ ಬಾಕಿಯಿರುತ್ತವೆ. ಮಕ್ಕಳು ಯಾವುದೇ ಆತಂಕವಿಟ್ಟುಕೊಳ್ಳದೇ ಮುಂದಿನ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದಲೇ ಬರೆಯಲೆಂದು ಸಚಿವರು ಆಶಿಸಿದ್ದಾರೆ.