ಕೋವಿಡ್ ನಿಯಂತ್ರಣಕ್ಕಾಗಿ ತಜ್ಞರೊಂದಿಗೆ ಸಭೆ ನಡೆಸಿದ ಸಿಎಂ

ಬೆಂಗಳೂರು:ಬೆಂಗಳೂರು ಮಹನಾಗರದಲ್ಲಿ‌ ಕೋವಿಡ್ – 19 ಸೋಂಕು ಹೆಚ್ವುತ್ತಿರುವ ಹಿನ್ನಲೆಯಲ್ಲಿ ‌ಅದನ್ನು ನಿಯಂತ್ರಿಸಲು‌ ಕೈಗೊಳ್ಳಬೇಕಾದ ತುರ್ತು ಕ್ರಮಗಳ ತಜ್ಞರೊಂದಿಗೆ‌ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು

ವಿಧಾನಸೌಧದಲ್ಲಿ ನಡೆದ ಕೋವಿಡ್ 19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗಿನ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ,ಆರೋಗ್ಯ ಸಚಿವ ಶ್ರೀರಾಮುಲು,ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಗಳು ನಡೆಸಿದ ಸಭೆಯ ಮುಖ್ಯಾಂಶಗಳು

1. ಸಭೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ನಿಗದಿ ಪಡಿಸುವ ಕುರಿತು ಚರ್ಚಿಸಲಾಯಿತು.

2. ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು..

3. ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ಮಾಡಿದರು.

4. ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಮುಚ್ಚಿದ ಸ್ಥಳಗಳು, ನಿಕಟ ಸಂಪರ್ಕ ಹಾಗೂ ಜನಸಂದಣಿಯ ಸ್ಥಳಗಳಲ್ಲಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

5. ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದ್ದಾರೆ.

6. ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಅಗತ್ಯವಿದೆ. ಸಂಪರ್ಕ ಪತ್ತೆ ಹಚ್ಚಲು ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಇತರ ಇಲಾಖೆಯ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು ಎಂಬ ಸಲಹೆಯೂ ಬಂದಿದೆ..

7. ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯ.

8. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು.

9. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ.

10. ತಜ್ಞರ ಈ ಅಭಿಪ್ರಾಯಗಳ ಕುರಿತು ಸರ್ಕಾರದ ಹಂತದಲಲ್ಲಿ ವಿವರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಪ್ರಾಣಿಗಿಂತಲೂ ಕೀಳಾದ ಕೋವಿಡ್ ಸೋಂಕಿತನ ಅಂತ್ಯಕ್ರಿಯೆ!

ರಾಯಚೂರು: ಬಳ್ಳಾರಿಯಲ್ಲಿ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ನಡೆಸಿದ ಅಮಾನವೀಯ ವರ್ತನೆ ಮಾಸುವ ಮುನ್ನವೇ, ಯಾದಗಿರಿಯಲ್ಲಿ ನಿನ್ನೆ ನಡೆದ ಈ ಪ್ರಕರಣ ನಿಜಕ್ಕೂ ಮನುಷ್ಯತ್ವವನ್ನೇ ಮರೆತಂತೆನಿಸಿದೆ.

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಭಾನುವಾರ ಮಗಳ ಮದುವೆ ಮುಗಿಸಿದ ನಂತರ, ಸೋಮವಾರ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ, ಕೋವಿಡ್ -19 ಸೋಂಕಿತ, ಯಾದಗಿರಿ ಜಿಲ್ಲೆಯ ಹೋನಗೆರಾ ತಾಲೂಕಿನ ವ್ಯಕ್ತಿಯ ಮೃತದೇಹವನ್ನು ನಿನ್ನೆ ಜಮೀನು ಒಂದರಲ್ಲಿ ಅಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ‌.

ಯಾದಗಿರಿ ಸಮೀಪದ ಹೊನಗೆರ ಗ್ರಾಮದ ಮೃತನ ಸಹೋದರನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಮೃತನ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅಂತ್ಯಸಂಸ್ಕಾರದ ವೇಳೆ, ಮೃತನ ಕಿರಿಯ ಸಹೋದರನನ್ನು ಹೊರತುಪಡಿಸಿದರೆ ಉಳಿದ ಸಂಬಂಧಿಕರು ಯಾರೂ ಉಪಸ್ಥಿತರಿರಲಿಲ್ಲ.
ಆದರೆ, ಪಶು ಗಳಿಗಿಂತಲೂ ಕೀಳಾಗಿ ಮೃತಪಟ್ಟ ಸೋಂಕಿತನ ಅಂತ್ಯಕ್ರಿಯೆ ನಡೆಸಿದ ಪರಿ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ.

ಜಾತಿ ರಾಜಕಾರಣಕ್ಕೆ ವೇದಿಕೆಯಾದ ಅಂಬೇಡ್ಕರ್ ಬಯಲು ರಂಗ ಮಂದಿರ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಹಾಲಿ ಮಾಜಿಗಳ ನಡುವಿನ ದ್ವೇಷದ ರಾಜಕೀಯಕ್ಕೆ ಡಾ.ಬಿಆರ್ ಅಂಬೇಡ್ಕರ್ ಬಯಲು ರಂಗ ಮಂದಿರ ವೇದಿಕೆಯಾಗಿದೆ.

2016ರಲ್ಲಿ ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ 3ಕೋಟಿ 12ಲಕ್ಷ ವೆಚ್ವದಲ್ಲಿ ಅಂಬೇಡ್ಕರ್ ಬಯಲು ರಂಗ ಮಂದಿರ ನಿರ್ಮಾಣ ಮಾಡಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೆಚ್.ಆಂಜನೇಯ ಸೋತಿದ್ದಾರೆ. ಅವರ ವಿರುದ್ದ ವಿಜಯ ಸಾಧಿಸಿ ಶಾಸಕರಾಗಿರುವ ಬಿಜೆಪಿಯ ಎಂ.ಚಂದ್ರಪ್ಪ ಹೆಚ್ಚುವರಿ ಅನುದಾನದಲ್ಲಿ ಬಯಲು ರಂಗ ಮಂದಿರದ ಅಭಿವೃದ್ಧಿಗೆ ಮುಂದಾಗಿದ್ದು, ಬಯಲು ರಂಗ ಮಂದಿರಕ್ಕೆ ಅಂಬೇಡ್ಕರ್ ಹೆಸರು ಬದಲಾಯಿಸಿ ವಾಲ್ಮೀಕಿ ಹೆಸರಿಡಲು ತೀರ್ಮಾನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಅಂಬೇಡ್ಕರ್ ಹೆಸರು ಬದಲಾಯಿಸುವ ವಿಚಾರ ತಿಳಿದ ದಲಿತ ಮುಖಂಡರುಗಳು ಇಂದು ಶಾಸಕ ಚಂದ್ರಪ್ಪಗೆ ಮುತ್ತಿಗೆ ಹಾಕಲು ಮುಂದಾದ್ರು. ಈ ವೇಳೆ ದಲಿತ ಮುಖಂಡರನ್ನು ವಶಕ್ಕೆ ಪಡೆದ ಹೊಳಲ್ಕೆರೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು. ಅದೇ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಆಂಜನೇಯ ಹಾಗು ಕಾಂಗ್ರೆಸ್ ಮುಖಂಡರು ಹೆಚ್ಚುವರಿ ಕಾಮಗಾರಿಗೆ ತೆಗೆಯಲಾಗಿದ್ದ ಗುಂಡಿಗಳನ್ನು ಮುಚ್ಚಿಸಿ, ಅಂಬೇಡ್ಕರ್ ಹೆಸರು ಬದಲಾಯಿಸಲು ಬಂದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಹಿರೇಕೆರೂರು ಸೀಲ್ಡೌನ್ ಮಾಡಲು ಬಿ.ಸಿ.ಪಾಟೀಲ್ ಮನವಿ

ಹಾವೇರಿ,ಜೂನ್.30:ಹಿರೇಕೆರೂರು ಕ್ಷೇತ್ರದಲ್ಲಿ ಕೊರೊನಾ ಮಹಾಮಾರಿ ಲಗೆಯಿಟ್ಟಿದ್ದು,ಹಿರೆಕೆರೂರನ್ನು ಸೀಲ್ಡೌನ್ ಮಾಡುವಂತೆ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ

ಕೊರೊನಾದಿಂದ ಬಚಾವ್ ಆಗಲು ಸಾಮಾಜಿಕ ಅಂತರ ಕಡ್ಡಾಯ ಮಾಸ್ಕ್ ಧರಿಸುವುದರ ಜೊತೆಗೆ ಜನತೆ ಎಚ್ಚೆತ್ತುಕೊಂಡಿರುವಂತೆ ಜನತೆಗೆ ಸೂಚಿಸಿದ್ದಾರೆ.ಕೊರೊನಾ ಮಹಾಮಾರಿ ತಮ್ಮ ಮತಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದು,ಕೋವಿಡ್-19ಸಾಮೂದಾಯಿಕವಾಗಿ ಪಸರಿಸುತ್ತಿದೆ. ಕ್ಷೇತ್ರದ ಗ್ರಾಮೀಣ ಭಾಗಗಳಾದ ಗುಡ್ಡದಮಾದಾಪುರ,ಕೋಡ,ಸುತ್ಕೋಟೆ,ಎಮ್ಮಿಗನೂರು ಸೇರಿದಂತೆ ವಿವಿಧ ಭಾಗಗಳಿಗೂ ವ್ಯಾಪಿಸಿದೆ.ಪ್ರತಿಯೊಬ್ಬರ ಜೀವ ಅವರವರ ಕೈಯಲ್ಲಿಯಿದೆ.ಜನತೆ ಆದಷ್ಟು ಎಚ್ಚೆತ್ತುಕೊಂಡಿರಬೇಕು.ಯಾರಿಗಾದರೂ ಸೋಂಕು ತಗುಲಿದ ಶಂಕೆ ವ್ಯಕ್ತವಾದಲ್ಲಿ ಅಥವಾ ಶೀತ,ಜ್ವರ,ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೊಳಪಡಬೇಕು.ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು.ನಮ್ಮ ಜೀವಕ್ಕೆ‌ನಾವೇ ಹೊಣೆ.ಆದಷ್ಟು ಸುರಕ್ಷತಾ ಕ್ರಮ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸರ್ಕಾರದ ಜತೆ ಕೈಜೋಡಿಸಲು ಖಾಸಗಿ ಮೆಡಿಕಲ್ ಕಾಲೇಜುಗಳ ಸಮ್ಮತಿ: ಸಚಿವ ಸುಧಾಕರ್

ಬೆಂಗಳೂರು : ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಬೆಂಗಳೂರು ನಗರದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳು ಸಮ್ಮತಿಸಿವೆ.

ತಕ್ಷಣವೇ ಎರಡು ಸಾವಿರದಷ್ಟು ಹಾಸಿಗೆಗಳನ್ನು ನೀಡಲಿದ್ದು, ಒಂದು ವಾರದಲ್ಲಿ ಇದನ್ನು ನಾಲ್ಕೂವರೆ ಸಾವಿರಕ್ಕೆ ಹೆಚ್ಚಿಸುವುದಾಗಿ ಆಡಳಿತ ಮಂಡಳಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಆಡಳಿತ ಮಂಡಳಿಗಳು ಸರ್ಕಾರದ ನಿರ್ಧಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದವು.

ನಗರದಲ್ಲಿ ಒಟ್ಟು 11 ಖಾಸಗಿ ಮತ್ತು 3 ಸರ್ಕಾರಿ ಮೆಡಿಕಲ್ ಕಾಲೇಜ್ ಗಳಿವೆ. ಇವುಗಳಿಂದ ಕೋವಿಡ್ ಚಿಕಿತ್ಸೆಗಾಗಿ ಆರು ಸಾವಿರ ಹಾಸಿಗೆಗಳು ಲಭ್ಯವಾಗಲಿವೆ ಎಂದು ಸಭೆಯ ಬಳಿಕ ಸಚಿವ ಸುಧಾಕರ್ ಮಾಧ್ಯಮಗಳಿಗೆ ತಿಳಿಸಿದರು.

ಒಂದು ವಾರದಲ್ಲಿ ಈಗ ತಳಿಸಿರುವ ಹಾಸಿಗೆ, ವೈದ್ಯರು ಮತ್ತು ಸಿಬ್ಬಂದಿ ಸೌಲಭ್ಯಗಳನ್ನು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ನೀಡಲಿವೆ. ಅದನ್ನು ಬಿಬಿಎಂಪಿಯ ಕೇಂದ್ರೀಕೃತ ವ್ಯವಸ್ಥೆ ಮೂಲಕ ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಂಚಿಕೆ ಮಾಡಲಾಗುವುದು ಎಂದರು.

ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಸರ್ಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವಿಮೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಪ್ರಕಟಿಸಿದರು.

ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಸಗಿ ಕಾಲೇಜು ಪಿಜಿ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿಯನ್ನು ಕೂಡ ಬಳಸಿಕೊಳ್ಳಲಾಗುವುದು. ಇನ್ನು ಮುಂದೆ ಚಿಕಿತ್ಸೆ ವಿಧಿ – ವಿಧಾನಗಳಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಜೆ ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕೊರೋನಾ ಸೋಂಕು ತಗುಲಿದವರ ಪೈಕಿ ರೋಗ ಲಕ್ಷಣಗಳು ಇದ್ದವರು, 60 ಕ್ಕೂ ಹೆಚ್ಚು ವಯಸ್ಸಿನ ಮತ್ತು ಡಯಾಬಿಟಿಸ್, ಬ್ಲಡ್ ಪ್ರೆಷರ್, ಕಿಡ್ನಿ, ಲಂಗ್ಸ್ ಗಳಂತಹ ಗಂಭೀರ ಕಾಯಿಲೆ ಇದ್ದವರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ರೋಗಲಕ್ಷಣ ಇಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇಟ್ಟು ನಿಗಾವಹಿಸಲಾಗುವುದು ಎಂದರು.

ಈ ಎಲ್ಲಾ ಮಾಹಿತಿ ಇರುವ ಚಿಕಿತ್ಸಾ ವಿಧಾನದ ವಿಧಿ – ವಿಧಾನಗಳ ಮಾರ್ಗಸೂಚಿ ಯನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದರು.ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಉನ್ನತ ಶಿಕ್ಷಣ ಡಿಜಿಟಲೀಕರಣ ಆನ್‌ಲೈನ್‌ ಸಂಯೋಜನೆಗೆ ಚಾಲನೆ ನೀಡಿದ ಡಿಸಿಎಂ

ಬೆಂಗಳೂರು:ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಸಂಪೂರ್ಣ ಡಿಜಿಟಲೀಕರಣದತ್ತ ಹೆಜ್ಜೆ ಇಟ್ಟಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಜುಲೈ ೧೫ರಿಂದ ಎಲ್ಲ ವಿಶ್ವವಿದ್ಯಾಲಯಗಳೂ ಸರ್ಕಾರದ ಜತೆ ಇ-ಆಫೀಸ್‌ (ಆನ್‌ಲೈನ್‌) ಮೂಲಕವೇ ವ್ಯವಹರಿಸಬೇಕು ಎನ್ನುವ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ, ಎನ್‌ಐಸಿ ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್‌ಲೈನ್‌ ಸಂಯೋಜನೆ (ಅಫಿಲಿಯೇಷನ್‌)ಯ ಪೋರ್ಟಲ್‌ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಡಿಯೊ ಸಂವಾದದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇ-ಅಫೀಸ್‌ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ? ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು ಎಂದು ಅವರು ಹೇಳಿದರು.

ಯಾವುದೇ ಕಾಲೇಜು ಅಥವಾ ಕೋರ್ಸ್‌ಗಳಿಗೆ ಮಾನ್ಯತೆ ನೀಡಬೇಕಾದರೂ ಆದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುತ್ತದೆ; ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು ಎಂದು ಅವರು ಹೇಳಿದರು.

ಮಾನ್ಯತೆ ನೀಡುವುದಕ್ಕೂ ಮುನ್ನ ಎಲ್ಲ ರೀತಿಯ ಮಾನದಂಡಗಳನ್ನು ಸರಿಯಾಗಿ ವಿಶ್ವವಿದ್ಯಾಲಯಗಳು ಪರಿಶೀಲಿಸಿರಬೇಕು. ಸರ್ಕಾರಕ್ಕೆ ಕಳುಹಿಸುವ ಎಲ್ಲ ಪ್ರಸ್ತಾವನೆಗಳು ಕಾನೂನುಬದ್ಧವಾಗಿಯೇ ಇರಬೇಕು. ಮೂಲಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳಿಗೇ ವಿಶ್ವವಿದ್ಯಾಲಯಗಳು ಮಾನ್ಯತೆ ನೀಡಬೇಕು. ಒಟ್ಟಾರೆ ಸರ್ಕಾರಕ್ಕೆ ಕಳಹಿಸುವ ಕಡತಗಳು ದೋಷರಹಿತವಾಗಿರಬೇಕು. ಒಂದು ವೇಳೆ ಲೋಪಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರನ್ನೇ ಹೊಣೆಗಾರರನ್ನಾಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಸಂಯೋಜನೆ ವಿಷಯದಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲ. ಮೂಲಸೌಲಭ್ಯ ಇರುವ ಸಂಸ್ಥೆಗೆ ಸಂಯೋಜನೆ ನೀಡಿದರೆ ಗುಣಮಟ್ಟದ ಶಿಕ್ಷಣ ತನ್ನಿಂತಾನೆ ಬರುತ್ತದೆ. ಈ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಇದುವರೆಗೂ ಸಂಯೋಜನೆ ಹೆಸರಲ್ಲಿ ಬರೀ ಕಾಲಹರಣವಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರಲ್ಲದೆ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿತ್ತು. ಹೊಸ ವ್ಯವಸ್ಥೆಯಿಂದ ಎಲ್ಲವೂ ಪಾರದರ್ಶಕ. ಶಿಕ್ಷಕರ ಸಂಖ್ಯೆ, ಅವರ ಕಾರ್ಯದಕ್ಷತೆ, ವಿದ್ಯಾರ್ಥಿಗಳ ಪ್ರಮಾಣ, ಸೌಲಭ್ಯಗಳು ಸೇರಿ ಎಲ್ಲ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ಸರ್ಕಾರಕ್ಕೆ ಇರುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಪದವಿ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಏನಿದು ಆನ್‌ಲೈನ್ ಸಂಯೋಜನೆ?
* ಇದುವರೆಗೂ ವಿವಿಗಳು ಮತ್ತು ಸರಕಾರದ ನಡುವೆ ಎಲ್ಲ ವ್ಯವಹಾರಗಳು ಕಡತ, ಟಪಾಲು ಇಲ್ಲವೇ ಪತ್ರ ಮುಕೇನ ನಡೆಯುತ್ತಿದ್ದವು. ಇನ್ನು ಮುಂದೆ ಇವೆಲ್ಲವೂ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯಲಿವೆ.
* ಮ್ಯೂನುವಲ್ ಮಾಡುತ್ತಿದ್ದ ಪ್ರಕ್ರಿಯೆಯಲ್ಲಿ ಬಹಳಷ್ಟು ಲೋಪಗಳಿದ್ದವು. ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದ್ದವು. ಇದೆಲ್ಲವನ್ನೂ ಆನ್‌ಲೈನ್ ಸಂಯೋಜನೆ ನಿವಾರಿಸಲಿದೆ.
* ಇದನ್ನು “ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ” ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆ ತುಂಬಾ ಆಧುನಿಕವಾಗಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್.ಐ.ಸಿ) ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ. ಸಂಪೂರ್ಣ ದೋಷರಹಿತವಾಗಿದೆ.
* ವಿವಿಗಳು ಹೊಸ ಕಾಲೇಜುಗಳಿಗೆ ಅನುಮತಿ, ಕೋರ್ಸುಗಳಿಗೆ ಒಪ್ಪಿಗೆಯೂ ಸೇರಿದಂತೆ ಮಾನ್ಯತೆ ನೀಡುವ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಇದರ ಮೂಲಕವೇ ಮಾಡಬೇಕು.
* ಈ ವ್ಯವಸ್ಥೆಯಿಂದ ವಿವಿ ಮತ್ತು ಕಾಲೇಜುಗಳ ನಡುವಿನ ವ್ಯವಹಾರ ಸುಲಭ, ಸರಳವಾಗಿರುತ್ತದೆ.
* ಈ ವ್ಯವಸ್ಥೆಯು ಕಾಲೇಜುಗಳಿಗೆ ಡೇಟಾ ಮತ್ತು ಡಾಕ್ಯುಮೆಂಟ್‌ಗಳನ್ನು ಅಫಿಲಿಯೇಶನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಎಲ್ಲ ಮಾಹಿತಿ ಪಾರದರ್ಶಕ. ಪೋರ್ಟಲ್‌ನಲ್ಲಿ ವಿವಿಗಳು ಕಳುಹಿಸಿದ ಅಧಿಸೂಚನೆಗಳನ್ನು ಕಾಲೇಜುಗಳು ವೀಕ್ಷಿಸಬಹುದು.

ಆನ್‌ಲೈನ್ ಸಂಯೋಜನೆ ಉದ್ದೇಶ:
* ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ
* ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಣೆ
* ಆಡಳಿತಕ್ಕೆ ತ್ವರಿತ ನಿರ್ಧಾರ ಬೆಂಬಲದ ವ್ಯವಸ್ಥೆ
* ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸ್ತುತ ತಂತ್ರಜ್ಞಾನ ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ
* ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಫಲಿತಾಂಶಗಳ ಬಗ್ಗೆ ಮಾಹಿತಿ ಸಂಗ್ರಹ ಸುಲಭ