ನವೆಂಬರ್ ವರೆಗೂ ಉಚಿತ ರೇಷನ್, ಪ್ರಧಾನಿ ನರೇಂದ್ರ ಮೋದಿ ಘೋಷಣೆ

ದೆಹಲಿ:ಬಡವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದ​ವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು ಎಂದಿದ್ದಾರೆ.

ಕರೊನಾ ವಿರುದ್ಧ ನಾವು ಹೋರಾಡುತ್ತಲೇ ಅನ್​ಲಾಕ್​ ಎರಡನೇ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿದೆ. ಪಿಎಂ ಗರಿಬ್ ಆನ್ನ ಯೋಜನೆ ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ 80 ಕೋಟಿ ಜನರಿಗೆ ಪ್ರಯೋಜನಗಳನ್ನು ನೀಡುವ ಈ ಯೋಜನೆ ನವೆಂಬರ್ ವರೆಗೆ ಮುಂದುವರಿಯುತ್ತದೆ ಅಂತ ಹೇಳಿದರು.

ಪ್ರತಿ ಕುಟುಂಬಕ್ಕೆ 5 ಅಕ್ಕಿ ಮತ್ತು ಗೋಧಿ 1 ಕೆಜಿ ಸಕ್ಕರೆ 1 ಕೆಜಿ ಬೇಳೆ ವಿತರಿಸಲಾಗುವುದು, ಲಾಕ್​ಡೌನ್​ ಬೆನ್ನಲ್ಲೇ ಗರೀಬ್​ ಕಲ್ಯಾಣ ಯೋಜನೆ ಜಾರಿಗೊಳಿಸಲಾಯಿತು ಎಂದರು.

ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಿಎಂ ಸಭೆ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದರು.ಕೋವಿಡ್ ಸೋಂಕಿತರಿಗೆ ಹಾಸಿಗೆಗಳ ಮೀಸಲಿರಿಸುವ ಸಂಬಂಧ ಮಾತುಕತೆ ನಡೆಸಿದರು.

ಸಭೆಯ ಮುಖ್ಯಾಂಶಗಳು:

· ಬೆಂಗಳೂರಿನಲ್ಲಿ ಎರಡು ಸರ್ಕಾರಿ ಸಂಸ್ಥೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ನಗರದ 11 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 2200 ಹಾಸಿಗೆಗಳನ್ನು ಅಧಿಸೂಚಿಸಲಾಗಿದೆ.

· ಆದರೆ ಪ್ರಸ್ತುತ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, 4500 ಹಾಸಿಗೆಗಳನ್ನು ಖಾಸಗಿ ಕಾಲೇಜುಗಳಿಂದ ಸರ್ಕಾರ ನಿರೀಕ್ಷಿಸುತ್ತಿದೆ.

· ಕಳೆದ ನಾಲ್ಕು ತಿಂಗಳಿಂದ ಹತ್ತು ವೈದ್ಯಕೀಯ ಕಾಲೇಜುಗಳು ಹೊರತು ಪಡಿಸಿ, ಇತರ ಎಲ್ಲ ಕಾಲೇಜುಗಳು ಪ್ರಯೋಗಾಲಯ ವ್ಯವಸ್ಥೆ ಮಾಡಿವೆ.

· ಸರ್ಕಾರಿ ಕಾಲೇಜುಗಳಲ್ಲಿ 2000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4500 ಸೇರಿದಂತೆ ಸುಮಾರು 6500 ಹಾಸಿಗೆಗಳು ಬೆಂಗಳೂರಿನ ವೈದ್ಯಕೀಯ ಕಾಲೇಜುಗಳಲ್ಲಿಯೇ ಲಭ್ಯವಾಗುತ್ತಿವೆ. ಇದಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹಕರಿಸುವಂತೆ ಮನವಿ ಮಾಡಿದರು.

· ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಕೈಜೋಡಿಸಿ, ಕೋವಿಡ್ ಚಿಕಿತ್ಸೆಗೆ ಸಹಕರಿಸುವ ಭರವಸೆಯನ್ನು ನೀಡಿದರು. ಇದಕ್ಕೆ ಸಿದ್ಧತೆಗಳು ಮಾಡಿಕೊಳ್ಳಬೇಕಾಗಿರುವುದರಿಂದ ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

· ಕೋವಿಡ್ ಚಿಕಿತ್ಸೆ ನೀಡುವ ಖಾಸಗಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಕೂಡ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

· ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಕುರಿತಂತೆ ಕೇಂದ್ರೀಕೃತ ವ್ಯವಸ್ಥೆಯನ್ನು ಈಗಾಗಲೇ ಬಿಬಿಎಂಪಿ ಯಲ್ಲಿ ಮಾಡಲಾಗಿದ್ದು, ಎರಡು ಮೂರು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಕೋವಿಡ್ ಚಿಕಿತ್ಸೆ ನೀಡುವ ಎಲ್ಲ ಆಸ್ಪತ್ರೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

· ಖಾಸಗಿಯವರೊಂದಿಗೆ ಸಮನ್ವಯಕ್ಕೆ ಸಮಿತಿ ರಚನೆ ಮಾಡಲಾಗುವುದು.

· ಇದಲ್ಲದೆ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಲು ಸಹ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

· ಇದಲ್ಲದೆ ಕೋವಿಡ್ ಕೇರ್ ಸೆಂಟರ್ ಗಳಿಗೆ ಅಗತ್ಯ ಸಿಬ್ಬಂದಿ ಒದಗಿಸುವಂತೆ ಮನವಿ ಮಮಾಡಿದರು.

· ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಮನಗರ ಕೋವಿಡ್ ರೋಗಿಗಳ ಜತೆ ವಿಡಿಯೊ ಸಂವಾದ ನಡೆಸಿದ ಡಿಸಿಎಂ

ರಾಮನಗರ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್- 19 ಸೋಂಕಿನಿಂದ ಎದುರಾಗುವ ಯಾವುದೇ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ರಾಮನಗರ ಜಿಲ್ಲಾಡಳಿತ ಸರ್ವಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭಾನುವಾರ ಜಿಲ್ಲೆಯ ರೋಗಿಗಳಿಗೆಗೆ ಮೀಸಲಾಗಿರುವ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಂಗೇರಿಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ, ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ ತಕ್ಷಣಕ್ಕೆ ಎರಡೂ ಆಸ್ಪತ್ರೆಗಳಲ್ಲಿ 660 ಬೆಡ್ ಗಳನ್ನು ಸಜ್ಜುಗೊಳಿಸಿದರು.

ಇವೆರಡೂ ಆಸ್ಪತ್ರೆಗಳನ್ನು ರಾಮನಗರ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಜಿಲ್ಲೆಯ ರೋಗಿಗಳ ಸೇವೆಗೆ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್ ಗಳ ಸೇವೆ ಲಭ್ಯವಾಗಲಿದೆ.

ಜಿಲ್ಲೆಯಲ್ಲಿ ಕೊರೊನ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಈ ಆಸ್ಪತ್ರೆ ಸರ್ವರೀತಿಯಲ್ಲೂ ಸಜ್ಜಾಗಿದೆ. ತಮ್ಮಲ್ಲಿರುವ ಸೌಲಭ್ಯಗಳನ್ನು ಜಿಲ್ಲೆ ರೋಗಿಗಳಿಗೆ ಮೀಸಲಿಡುವ ಭರವಸೆಯನ್ನು ಆಡಳಿತ ಮಂಡಳಿ ನೀಡಿದೆ ಎಂದು ಅವರು ಹೇಳಿದರು.

ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಮಧ್ಯಾಹ್ನ ರಾಮನಗರಕ್ಕೆ ಭೇಟಿ ನೀಡಿದ ಡಿಸಿಎಂ ಅವರು ಅಲ್ಲಿಯೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ‌ ನಡೆಸಿದರು.

ಕೋವಿಡ್ ಗೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿ. ಮೈಮರೆಯಬೇಡಿ. ಚಿಕಿತ್ಸೆ ನೀಡುವ ವೈದ್ಯರ ಸುರಕ್ಷತೆಗೂ ಆದ್ಯತೆ ನೀಡಬೇಕು. ಕ್ವಾರಂಟೈನ್ ಸಲುವಾಗಿ ಅಗತ್ಯ ಬಿದ್ದರೆ ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿಯೂ ವ್ಯವಸ್ಥೆ ಮಾಡಿ ಎಂದು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಕ್ಷಣಕ್ಕೆ ನಾಲ್ಕು ಆಂಬುಲೆನ್ಸ್ ಅಗತ್ಯ ಇದ್ದು ಖರೀದಿ‌ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಎರಡೂ ಆಸ್ಪತ್ರೆಗಳು ಟೆಲಿ ಮೆಡಿಸಿನ್‌ ಗೆ ಆದ್ಯತೆ ನೀಡಲು ಒಪ್ಪಿವೆ ಎಂದರು.

ರಾಜರಾಜೇಶ್ವರಿ ಮೆಡಿಕಲ್ ಕಾಲೇಜು:
ಮೊದಲು ‌ಈ ಕಾಲೇಜಿಗೆ ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಓ ಇಕ್ರಂ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ ಅವರ ಜತೆ ಭೇಟಿ ನೀಡಿದ ಡಿಸಿಎಂ, ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಜತೆ ಮಾತುಕತೆ ನಡೆಸಿದರು. ಇಲ್ಲಿ ಜಿಲ್ಲೆಯ 600 ರೋಗಿಗಳಿಗೆಗೆ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಒಪ್ಪಂದ ಮಾಡಕೊಳ್ಳಲಿದೆ ಎಂದು ತಿಳಿದರು.

ಸದ್ಯಕ್ಕೆ ಕಾಲೇಜಿನ ಆಸ್ಪತ್ರೆಯಲ್ಲಿರುವ 1600 ಬೆಡ್ಡುಗಳ ಪೈಕಿ 600 ಬೆಡ್ಡುಗಳನ್ನು ಜಿಲ್ಲೆಯ ರೋಗಿಗಳಿಗೆ ಮೀಸಲಿಡಲಾಗಿದೆ. ಐಸಿಯುನಲ್ಲೂ 110 ಬೆಡ್ಡುಗಳನ್ನು ನಿಗದಿ ಮಾಡಲಾಗಿದ್ದು, ಇಲ್ಲಿ ವೆಂಟಿಲೇಟರ್ ವ್ಯವಸ್ಥೆಯೂ ಇದೆ. ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ತಮ್ಮಲ್ಲಿರುವ 150 ವೈದ್ಯರನ್ನು ರಾಮನಗರ ಜಿಲ್ಲೆಗೆ ಒದಗಿಸಲು ತಯಾರಿದ್ದಾರೆ. 400 ನರ್ಸ್ ಗಳ ಪೈಕಿ 200 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದು, 20 ಮಂದಿಯ ಸೇವೆಯನ್ನೂ ಜಿಲ್ಲೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರೆಂದು ಡಿಸಿಎಂ ಹೇಳಿದರು.

ಸದ್ಯಕ್ಕೆ 34 ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ ಪೈಕಿ 17 ಮಂದಿ ರಾಮನಗರ ಜಿಲ್ಲೆಯವರು ಎಂದ ಅವರು, ಆಸ್ಪತ್ರೆಯ ಸುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಮರ್ಪಕವಾಗಿ ಸ್ಯಾನಿಟೈಸ್ ಮಾಡಿ ಸ್ವಚ್ಛತೆ ಕಾಪಾಡಬೇಕು. ಕೂಡಲೇ ನೋಡೆಲ್ ಅಧಿಕಾರಿಯನ್ನು ನೇಮಿಸಿ ಆಸ್ಪತ್ರೆ ಬಳಿ ಪೋಲೀಸ್ ಔಟ್ ಪೋಸ್ಟ್ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದಯಾನಂದ ಸಾಗರ್ ಆಸ್ಪತ್ರೆ:
ಬಳಿಕ ತಮ್ಮ ತಂಡದೊಂದಿಗೆ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗೆ ಭೇಟಿ‌ ನೀಡಿ ಅಲ್ಲಿನ ತಯಾರಿಯನ್ನು ಪರಿಶೀಲಿಸಿದರು. ಆಸ್ಪತ್ರೆ ಅಧ್ಯಕ್ಷ ಡಾ. ಹೇಮಚಂದ್ರ ಸಾಗರ್ ಅವರೊಂದಿಗೆ ಚರ್ಚೆ ನಡೆಸಿದ ಡಿಸಿಎಂ, ರೋಗಿಗಳಿಗೆ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಸದ್ಯಕ್ಕೆ ಆಸ್ಪತ್ರೆಯಲ್ಲಿ 60 ಬೆಡ್ ಗಳಿದ್ದು, ಇವು ತಕ್ಷಣಕ್ಕೆ ಲಭ್ಯವಿವೆ. ಇಲ್ಲಿ 30 ಕೋವಿಡ್ ರೋಗಿಗಳು ಇದ್ದರು. ಈ ಪೈಕಿ 23 ಜನ ಭಾನುವಾರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 4 ವಾರಗಳ ಬಳಿಕ 40 ಬೆಡ್ ಗಳು ಹೆಚ್ಚುವರಿಯಾಗಿ ಸಿದ್ಧವಾಗಲಿವೆ. ನಮ್ಮಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಸರ್ಕಾರದ ಸೂಚನೆಯಂತೆ ಒದಗಿಸಲು ಸಿದ್ಧ ಎಂದು ಹೇಮಚಂದ್ರ ಸಾಗರ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ಗಂಭೀರ, ತದನಂತರ ಹಂತದ ರೋಗಿಗಳನ್ನು ಕೂಡಲೇ ಈ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಉಳಿದಂತೆ ಕನಕಪುರ ತಾಲ್ಲೂಕಿಗೆ ಅಗತ್ಯವಾಗಿರುವ ವೈದ್ಯಕೀಯ ಸಿಬ್ಬಂದಿಯನ್ನು ತಮ್ಮ ಆಸ್ಪತ್ರೆಯಿಂದಲೇ ಒದಗಿಸಲಾಗುವುದು. ಮೂವರು ನುರಿತ ವೈದ್ಯರು, 10 ನರ್ಸ್ ಗಳು ಹಾಗೂ 3 ಆಂಬುಲೆನ್ಸ್ ಗಳ ಸೇವೆಯನ್ನು ನೀಡಲಾಗುವುದು ಎಂದು ಹೇಮಚಂದ್ರ ಸಾಗರ್ ಅವರು ಡಿಸಿಎಂಗೆ ತಿಳಿಸಿದರು.

ಕನಕಪುರ‌ ತಾಲ್ಲೂಕಿನ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ದಯಾನಂದ ಸಾಗರ್ ಆಸ್ಪತ್ರೆ ಮುಂದೆ ಬಂದಿದೆ. ಅಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ ಡಿಸಿಎಂ ಹೇಳಿದರು.

ಚಿಕಿತ್ಸಾ ವೆಚ್ಚ ಸರಕಾರದ್ದೇ:
ಸರಕಾರದ ನಿಯಮದಂತೆ ರೋಗಿಗಳ ವೆಚ್ಚವನ್ನು ಸರಕಾರವೇ ಭರಸಲಿದೆ. ಆ ಮೊತ್ತವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಲಿದೆ. ಯಾವುದೇ ಕಾರಣಕ್ಕೂ ಸೋಂಕಿತರಿಗೆ ತೊಂದರೆಯಾಗಲು ಬಿಡುವುದಿಲ್ಲ. ಸದ್ಯದ ಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತಯಾರಿ‌ ಮಾಡಿಕೊಳ್ಳುವಂತೆ ಎಂದು ಡಿಸಿಎಂ ಸೂಚಿಸಿದರು.

ರೋಗಿಗಳೊಂದಿಗೆ ಡಿಸಿಎಂ ಸಂವಾದ

ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಧೈರ್ಯ ತುಂಬಿದರು. ಅಡ್ಮಿನ್ ಬ್ಲಾಕಿನಲ್ಲಿ ಕೂತು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಶೇಖರ್ ಮತ್ತು ದೇವಿ ಎಂಬುವವರ ಜತೆ ಮಾತನಾಡಿದ ಅವರು, ರೋಗಕ್ಕೆ ಹೆದರಬೇಡಿ. ನಿಮಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಸರಕಾರ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದರು.

ಕನಕಪುರದ ದೇವಿ ಅವರು 7 ತಿಂಗಳ ಗರ್ಭಿಣಿಯಾಗಿದ್ದು, ತಮಗಿಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಮತ್ತು ನರ್ಸ್ ಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಡಿಸಿಎಂ ಅವರಿಗೆ ತಿಳಿಸಿದರು. ಹಾಗೆಯೇ ರಾಜಶೇಖರ್ ಅವರು ಕೂಡ ಚಿಕಿತ್ಸೆಯ ಬಗ್ಗೆ ಸಂತಸ ವ್ಕಕ್ತಪಡಿಸಿದರಲ್ಲದೆ, ತಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು.

ಇದೊಂದು ಸೋಂಕಿನ ಕಾಯಿಲೆಯಾಗಿದ್ದು, ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಎದೆಗುಂದಬಾರದು. ವೈದ್ಯರು ಹೇಳುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಜನರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಹಿತವಚನ ಹೇಳಿದರು.

ಕೊರೊನಾ ನಿಯಂತ್ರಣದಲ್ಲಿ ಜನರ ಜವಾಬ್ದಾರಿಯೂ ಮಹತ್ವದ್ದು: ಬಿ.ಸಿ ಪಾಟೀಲ್

ಹುಬ್ಬಳ್ಳಿ,ಜೂನ್.28:ಸರ್ಕಾರ ಖಾಸಗಿ‌ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮುಂದಾಗಬೇಕು.ಸರ್ಕಾರ ಈಗಾಗಲೇ ದರ ನಿಗದಿಪಡಿಸಿದ್ದು,ಅದರಂತೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳಬೇಕು.ಕೊರೊನಾ ನಿಯಂತ್ರಣದಲ್ಲಿ ಜನರ ಜವಾಬ್ದಾರಿಯೂ ಬಹಳಯಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಾಕ್ಡೌನ್ ನಿರ್ಬಂಧ ತೆರವುಗೊಂಡಿದೆಯೇ ಹೊರತು ಕೊರೊನಾ ಹೋಗಿಲ್ಲ.ಕೊರೊನಾ ಸೋಂಕು ಪಸರಿಸದಂತೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡು ಜವಾಬ್ದಾರಿಯಿಂದ ನಡೆಯುತ್ತಿದೆ.ಕೊರೊನಾ ಸೋಂಕು ಪಸರಿಸದಂತೆ
ಜನರು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಸೇರಿದಂತರ ತಿಳುವಳಿಕೆಯಿಂದ ಜಾಗೃತಿಯಿಂದ ನಡೆದುಕೊಳ್ಳಬೇಕು ಎಂದರು.
ಭಾನುವಾರ ಮಾತ್ರ ಲಾಕ್ಡೌನ್‌ಗೆ ಸರ್ಕಾರ ಕ್ರಮಕೈಗೊಂಡಿದ್ದು ಒಳ್ಳೆಯದೇ.ಸಂಪೂರ್ಣ‌ ಲಾಕ್ ಡೌನ್ ಮಾಡಬಾರದು ಎನ್ನುವುದು ಕೂಡ ತಮ್ಮ ಅಭಿಪ್ರಾಯವಾಗಿತ್ತು ಎಂದರು.

ಸೋಯಾಬಿನ್ ಬಿತ್ತನೆ ಬೀಜದ ಬಗ್ಗೆ ಸಾಕಷ್ಟು ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿವೆ.
ಯಾವುದೇ ಕಂಪನಿಯ ಬೀಜ ಇರಲಿ.ಮೊಳಕೆ ಬರದೇ ನಷ್ಟವಾಗಿದ್ದರ ಬಗ್ಗೆ ಇಲಾಖೆ ಕ್ರಮಕೈಗೊಳ್ಳುತ್ತಿದೆ.ರಸಗೊಬ್ಬರದ ಕೊರತೆಯಾಗಲೀ ಬಿತ್ತನೆಬೀಜಕ್ಕೆ ತೊಂದರೆಯಾಗಲೀ ಯಾವುದೇ ‌ಸಮಸ್ಯೆಯಿಲ್ಲ.ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಇದೆ ಎಂದು ಬಿ.ಸಿ.ಪಾಟೀಲರು ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಪಾರದರ್ಶಕ ರೀತಿಯಲ್ಲಿ ಕ್ರಮಕೈಗೊಳ್ಳದೆ ಇರುವ ಕಾರಣಕ್ಕೆ ಜನರಲ್ಲಿ ಅನುಮಾನ, ಅಸುರಕ್ಷತೆ, ಅಭದ್ರತೆ ಹುಟ್ಟಿಕೊಂಡಿವೆ. ರಾಜ್ಯ ಸರ್ಕಾರ ತಕ್ಷಣ ತಾನು ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಸಂಪೂರ್ಣ ವಿವರವನ್ನು ಜನತೆಯ ಮುಂದಿಟ್ಟು ಅವರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸುತ್ತಿದ್ದೇನೆ.

ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್ ಆಮ್ಲಜನಕ ಸಿಲಿಂಡರ್, ಮಾಸ್ಕ್,ಸಾನಿಟೈಸರ್ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? – ಈ ಎಲ್ಲ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕಾಗಿದೆ.

ನಾನು ಹಲವಾರು ಪತ್ರಗಳನ್ನು ಬರೆದು ವಿವರವನ್ನು ಕೇಳಿದರೂ ಇಲಾಖೆಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈ ರೀತಿ ಮಾಹಿತಿಯನ್ನು ನಿರಾಕರಿಸುವುದು ನನ್ನ ಹಕ್ಕುಚ್ಯುತಿಯಾಗುತ್ತದೆ. ಇಷ್ಟು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಶ್ವೇತಪತ್ರದ ಮೂಲಕ ಜನರ ಮುಂದಿಡಬೇಕು ಎಂದು‌ ಒತ್ತಾಯಿಸಿದ್ದಾರೆ.

ರಾಜ್ಯದ 9 ಜಿಲ್ಲೆಗಳಲ್ಲಿ ದೇಶಕ್ಕೆ ಒಂದು ದಿನ ಮೊದಲು ಮಾರ್ಚ್ 23ರಂದು ಲಾಕ್ ಡೌನ್ ಘೋಷಿಸಲಾಯಿತು. ಆಗ ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರು ಮಾತ್ರ ಇದ್ದರು. ಇಂದಿನ ವರದಿಯ ಪ್ರಕಾರ ರಾಜ್ಯದ ಸೋಂಕಿತರ ಸಂಖ್ಯೆ 11,923, ಸಾವಿಗೀಡಾದವರ ಸಂಖ್ಯೆ 191 ದಾಟಿದೆ. ಆಗ ಬೆಂಗಳೂರು ಮತ್ತು ಕೆಲವು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಈಗ ಹಳ್ಳಿ-ಊರುಗಳೆನ್ನದೆ ವ್ಯಾಪಕವಾಗಿ ಹರಡಿದೆ. ಕೊರೊನಾ ದಿಡೀರನೇ ಬಂದೆರಗಿಲ್ಲ, ಹಂತಹಂತವಾಗಿ ಕಾಣಿಸಿಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್ ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ರಾಜ್ಯ ಸರ್ಕಾರ ಅದನ್ನು ಎದುರಿಸಲು ಯಾವ ತಯಾರಿಯನ್ನೂ ನಡೆಸಿಲ್ಲ. ಮೂರು ತಿಂಗಳ ಅಮೂಲ್ಯ ಸಮಯವನ್ನು ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿತನದಿಂದ ವ್ಯರ್ಥಮಾಡಿದೆ. ಈ ನಿಷ್ಕ್ರೀಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಯಾವ ನಿಯಂತ್ರಣವೂ ಇಲ್ಲದೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಲಾಕ್ ಡೌನ್ ನಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲೂ ಈಗ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದೆ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿರುವ ರಾಜ್ಯದ ಜನತೆ ಕೊರೊನಾ ಭೀತಿಯಿಂದ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ತಮ್ಮನ್ನು ಕೊರೊನಾ ಮಾರಿಯಿಂದ ರಕ್ಷಿಸಬಹುದೆಂಬ ವಿಶ್ವಾಸ ಅವರಿಗಿಲ್ಲದಂತಾಗಿದೆ.
ಈಗಾಗಲೇ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ಒಪ್ಪಿಕೊಂಡಿರುವ ಚಿಕಿತ್ಸಾ ಶುಲ್ಕಕ್ಕೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಸರ್ಕಾರ ಅವರನ್ನು ಒಪ್ಪಿಸಬೇಕು, ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡನ್ನೂ ಮಾಡದೆ ಕೈಕಟ್ಟಿ ಕುಳಿತರೆ ಜನರೇನು ಮಾಡಬೇಕು? ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000 ಗಳಿಗೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ರಾಜ್ಯದಲ್ಲಿ 9200 ವೆಂಟಿಲೇಟರ್‍ ತುರ್ತಾಗಿ ಅಗತ್ಯವಿದ್ದರೆ ಈಗ ಲಭ್ಯಇರುವುದು ಕೇವಲ 1500 ಮಾತ್ರ. ಕೇಂದ್ರವನ್ನು 33000 ವೆಂಟಿಲೇಟರ್ ಕಳಿಸಿ ಎಂದು ಕೇಳಿಕೊಂಡರೆ ಅವರು ಇಲ್ಲಿಯ ವರೆಗೆ ಕಳಿಸಿರುವುದು ಕೇವಲ 90 ಮಾತ್ರ. ಆಕ್ಸಿಜನೇಟೆಡ್ ವೆಂಟಿಲೇಟರ್ ಕೇವಲ 7000 ಮಾತ್ರ ಇವೆ. ಅಗತ್ಯ ಇರುವುದು 20000 ವೆಂಟಿಲೇಟರ್ ಎಂದು ಹೇಳಲಾಗಿದೆ.

ಮೆಡಿಕಲ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ, ಮಾರುಕಟ್ಟೆ ದರಗಳಿಗಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ ಎಂದು ಆರ್ಥಿಕಇಲಾಖೆ ಟಿಪ್ಪಣಿ ಇದೆ. ಈ ರೀತಿಯ ಹಣದ ಮೊತ್ತ ಸುಮಾರು 3300 ಕೋಟಿಗಳೆಂಬ ಆರೋಪ ಕೇಳಿಬರುತ್ತಿದೆ.
ರಾಜ್ಯ ಸರ್ಕಾರ ತಕ್ಷಣ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ಶ್ವೇತಪತ್ರವನ್ನು ಹೊರಡಿಸಿ ನಿಜ ಪರಿಸ್ಥಿತಿಯನ್ನು ಜನರ ಮುಂದಿಟ್ಟು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನ-ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಸಲಹೆಯಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಿರಾತಂಕವಾಗಿ ನಡೆಯಲಿವೆ – ಸುರೇಶ್ ಕುಮಾರ್

ಬೆಂಗಳೂರು: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನೆನ್ನೆಯ ದಿನ ಗಣಿತ ಭಾಷಾ ಪರೀಕ್ಷೆಗೆ ಹಾಜರಾದ ಕೊವಿಡ್ ಸೋಂಕಿತ ವಿದ್ಯಾರ್ಥಿಯೊಬ್ಬನ ಜೊತೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳು ಹಾಗೂ ಒಬ್ಬ ಪರೀಕ್ಷಾ ಮೇಲ್ವಿಚಾರಕರಿಗೆ ಯಾವುದೇ ಕೋವಿಡ್ ಸೋಂಕು ತಗುಲಿಲ್ಲವೆಂದು ವೈದ್ಯಕೀಯ ತಪಾಸಣೆ ವರದಿಯಿಂದ ದೃಢಪಟ್ಟಿದೆ, ಯಾವುದೇ ಪೋಷಕರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದ ಕೊಠಡಿಯನ್ನು ಮುಚ್ಚಲಾಗಿದ್ದು, ಸೋಂಕು ನಿವಾರಕ ಕ್ರಮಗಳನ್ನು ಈಗಾಗಲೇ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲಾಗಿದೆ, ಸೋಂಕಿತ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಶುಶ್ರೂಶೆ ಮುಂದುವರೆದಿದ್ದು, ಆತನೂ ಸಹ ಸ್ವಲ್ಪ ಜರದ ಹೊರತುಪಡಿಸಿ ಬೇರಾವ ಗುಣಲಕ್ಷಣಗಳನ್ನೂ ತೋರದೇ ಸುರಕ್ಷಿತವಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಹಾಗಾಗಿ, ಈ ಕೇಂದ್ರದಲ್ಲಿ ಕೋವಿಡ್ ಸೋಂಕಿತ ವಿದ್ಯಾರ್ಥಿಯನ್ನು ಹೊರತುಪಡಿಸಿ ಆ ಕೊಠಡಿಯಲ್ಲಿ ನೆನ್ನೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳೆಲ್ಲರೂ ನಾಳೆಯಿಂದ ಎಂದಿನಂತೆ ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

ಆರೋಗ್ಯ ಇಲಾಖೆ ಸ್ಪಷ್ಟನೆ:
ಈಗಾಗಲೇ ರಾಜ್ಯಾದ್ಯಾಂತ ಕೋವಿಡ್ ಸೋಂಕು ಹೊಂದಿದ 25 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಪ್ರಸ್ತುತ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಬರೆಯಲು ಇವರೆಲ್ಲರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಯಾವುದೇ ರೋಗ ಲಕ್ಷಣಗಳಲ್ಲಿದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ನಡೆಸುವ ರಾಂಡಮ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಲ್ಲಿ ಅಂತಹ ವಿದ್ಯಾರ್ಥಿಯ ಸುತ್ತಮುತ್ತ ಕುಳಿತು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಬಾಕಿ ಉಳಿದ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ ಕೋರಲಾಗಿತ್ತು. ಆರೋಗ್ಯ ಇಲಾಖೆ ಕೆಳಕಂಡಂತೆ ಸ್ಪಷ್ಟೀಕರಣ ನೀಡಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Since the SOPs (Thermal screening, physical distancing of over one meter, use of face mask, sanitizer etc.,) is strictly followed in the examination center, the other students in the hall cannot be considered as contacts.
Hence the following opinion:
1. That the room shall be closed and disinfected (using 1% sodium hypochlorite solution and reused from the next day).
2. The other students in that room may be allowed to write the examination for the remaining period in another room or permitted to take the supplementary examination.
3. There is a precedence of a PUC student (close contact, exposed to covid case at home, father) was permitted to write the examination in a health centre and she remained healthy even thereafter.
4. Based on this necessary action at your end can be taken.

ಈ ಹಿನ್ನೆಲೆಯಲ್ಲಿ, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದಲ್ಲಿ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಆತ/ಆಕೆಯ ಜೊತೆ ಪರೀಕ್ಷೆ ಬರೆದಿದ್ದ ಇತರೆ ವಿದ್ಯಾರ್ಥಿಗಳಿಗೆ ಎಂದಿನಂತೆ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪ್ರತಿ ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಡೆಸ್ಕ್ ಗಳ ನಡುವೆ ಆರು ಅಡಿ ಅಂತರವಿರುವಂತೆ ಕ್ರಮ ವಹಿಸಿ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಿರುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಿದ್ದು ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೇ ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಓದಿನ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಬೇಕೆಂದು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ. ಯಾವುದೇ ಪೋಷಕರು ಆತಂಕಕ್ಕೊಳಗಾಗದೇ, ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದ ಕುರಿತು ಭರವಸೆಯೊಂದಿಗೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅವರು ಕೋರಿದ್ದಾರೆ.