ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪನೆಗೆ ಶೀಘ್ರದಲ್ಲೇ ಕ್ಯಾಬಿನೆಟ್‌ ಗೆ ಪ್ರಸ್ತಾಪ: ಸಚಿವ ಜಗದೀಶ ಶೆಟ್ಟರ್‌

ಬೆಂಗಳೂರು ಜೂನ್‌ 27: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ನಗರಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಟೌನ್‌ಶಿಪ್‌ಗಳ ನಿರ್ಮಾಣ ಆಗಬೇಕೆನ್ನುವ ಬಹುದಿನಗಳ ಬೇಡಿಕೆಯಿದೆ. ಇದುವರೆಗೂ ಕೇವಲ ಚರ್ಚೆಯಲ್ಲೇ ಇದ್ದ ಈ ವಿಷಯದ ಬಗ್ಗೆ ನಗರಾಭಿವೃದ್ದಿ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆಯನ್ನು ಮಾಡಿಕೊಟ್ಟಿದ್ದೇವೆ. ಅಲ್ಲದೆ, ರಾಜ್ಯದಲ್ಲಿ ಆಗಬೇಕಾದ ಕೈಗಾರಿಕಾ ಟೌನ್‌ ಶಿಪ್‌ಗಳ ಬಗ್ಗೆ ವರದಿಯನ್ನು ತಯಾರಿಸುವಂತೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಈ ಪ್ರಸ್ತಾಪಕ್ಕೆ ನಗರಾಭಿವೃದ್ದಿ ಇಲಾಖೆಯ ಒಪ್ಪಿಗೆ ಪಡೆದುಕೊಂಡು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಬೆಂಗಳೂರು ನಗರದ ಕಾಸಿಯಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಎಮ್‌ಎಸ್‌ಎಂಇ ದಿನಾಚರಣೆಯ ಅಂಗವಾಗಿ ಕೋವಿಡ್‌ – 19 ಉದ್ಯೋಗ ಸಹಾಯವಾಣಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಹಾಗೂ ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕರೋನಾ ಸಂಕಷ್ಟದಿಂದ ನಮ್ಮ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡುವ ಚೈತನ್ಯ ಈ ಸಂಸ್ಥೆಗಳಿಗೆ ಇದೆ. ಈ ಕ್ಷೇತ್ರಕ್ಕೆ ಕೇಂದ್ರ ಸರಕಾರದಿಂದಲೂ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯವನ್ನು ನಂ ೧ ಕೈಗಾರಿಕಾ ಸ್ನೇಹೀ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ರಾಜ್ಯವನ್ನು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಲು ಅಗತ್ಯವಿದ್ದ ಭೂಸುಧಾರಣೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗಿದ್ದ ಹಲವಾರು ನಿಯಮಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದರು.

ಕಳೆದ ಸಚಿವ ಸಂಪುಟದಲ್ಲಿ ಈಗಾಗಲೇ 2002 ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮಕ್ಕೆ ತಿದ್ದುಪಡಿಯನ್ನು ತರಲು ಒಪ್ಪಿಗೆಯನ್ನು ಪಡೆಯಲಾಗಿದೆ. ಕೇವಲ ಕೈಗಾರಿಕಾ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆಯ ಕಾರ್ಯವನ್ನು ಪ್ರಾರಂಭಿಸಲು ಈ ಅಧಿನಿಯಮ ಅವಕಾಶ ಒದಗಿಸಲಿದೆ. ಮೂರು ವರ್ಷಗಳು ಅಥವಾ ವಾಣಿಜ್ಯ ಉತ್ಪಾದನೆ ಪ್ರಾರಂಭವಾಗುವ ಮುನ್ನ ಬೇರೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆಯಲು ಅವಕಾಶ ಇದರಲ್ಲಿ ದೊರೆಯಲಿದೆ. ಈ ತಿದ್ದುಪಡಿಯನ್ನು ಶೀಘ್ರದಲ್ಲೇ ಸುಗ್ರೀವಾಜ್ಞೇಯ ಮೂಲಕ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ಅವಕಾಶವನ್ನು ನೀಡಿದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಾಡೆಲ್‌ ನ ಟೌನ್‌ ಶಿಪ್‌ ಗಳೂ ಬರಲಿವೆ ಎಂದು ನಗರಾಭಿವೃದ್ದಿ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಹಿನ್ನಲೆಯಲಿ ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಯಾವ ಭಾಗಗಳಲ್ಲಿ ಟೌನ್‌ ಶಿಪ್‌ ಗಳ ನಿರ್ಮಾಣ ಮಾಡಬೇಕು. ಹಾಗೂ, ಅದರ ಭೌಗೋಳಿಕ ಮ್ಯಾಪ್‌ ನ್ನ ಹೊಂದಿರುವಂತಹ ಒಂದು ಕಾಂಪ್ಯಾಕ್ಟ್‌ ಪ್ರಸ್ತಾವನೆಯನ್ನು ಸಿದ್ದಪಡಿಸುವಂತೆ ಸೂಚನೆ ನೀಡಿದ್ದೇನೆ. ಈ ಪ್ರಸ್ತಾವನೆಗೆ ನಗರಾಭಿವೃದ್ದಿ ಇಲಾಖೆಯ ಒಪ್ಪಿಗೆಯನ್ನು ಪಡೆದುಕೊಂಡು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಸಚಿವರ ಭರವಸೆ ನೀಡಿದರು.

ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಡಿಯಲ್ಲಿ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಹೊಸ ವೈಜ್ಞಾನಿಕ ನೀತಿಯನ್ನು ತರುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಅಲ್ಲದೆ, ನೂತನ ಕೈಗಾರಿಕಾ ನೀತಿ ಸಿದ್ದವಾಗಿದ್ದು, ಆರ್ಥಿಕ ಇಲಾಖೆಯ ಅನುಮತಿಗೆ ಕಾಯತ್ತಿದ್ದೇವೆ. ಈ ಕಾಯ್ದೆಯಲ್ಲಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಸಿಯಾ ಅಧ್ಯಕ್ಷ ಆರ್‌ ರಾಜು, ಉಪಾಧ್ಯಕ್ಷರಾದ ಕೆ.ಬಿ. ಅರಸಪ್ಪ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ಸಂಘದ ಸದಸ್ಯರು ಭಾಗವಹಿಸಿದ್ದರು. ಇದೇ ವೇಳೆ, ಕರ್ನಾಟಕ ಕೌಶಲ್ಯ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ವೆಬ್‌ನೀಯರ್‌ ಮೂಲಕ ಪಾಲ್ಗೊಂಡಿದ್ದರು

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳ-ಪೋಷಕರ ಗಟ್ಟಿತನದ ಪ್ರತೀಕ- ಸುರೇಶ್‍ಕುಮಾರ್

ಬೆಂಗಳೂರು: ಮೂರನೇ ದಿನವಾದ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯ ಪರೀಕ್ಷೆಯು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿರುವುದು ಮಕ್ಕಳ ಮತ್ತು ಪೋಷಕರ ಗಟ್ಟಿತನವನ್ನು ಎತ್ತಿತೋರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಯ ನಂತರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆ ಕುರಿತ ಮಾಹಿತಿ ನೀಡಿದ ಅವರು, ಮೂರನೇ ದಿನವಾದ ಶನಿವಾರ ನಡೆದ ಗಣಿತ ವಿಷಯ ಪರೀಕ್ಷೆಗೆ ನೊಂದಾಯಿತ 8,08,650 ವಿದ್ಯಾರ್ಥಿಗಳ ಪೈಕಿ 7,91,987 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 97.93ರಷ್ಟು ಇಂದು ಹಾಜರಾತಿ ಇದೆ. 16,663 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.

ಈ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 8,03,949 ವಿದ್ಯಾರ್ಥಿಗಳ ಪೈಕಿ 7,93,353 ವಿದ್ಯಾರ್ಥಿಗಳು ಹಾಜರಾಗಿದ್ದು, 10,596 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.68 ಹಾಜರಾತಿ ಇತ್ತು ಎಂದು ಅವರು ಹೇಳಿದರು.

ಮೊದಲ ಬಾರಿಗೆ 7,44,901 ಶಾಲಾ ವಿದ್ಯಾರ್ಥಿಗಳು ಹಾಗೂ 20,923 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 2048 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 292 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 6 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 659 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ -600 ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,539 ವಿದ್ಯಾರ್ಥಿಗಳು ಹಾಜರಾಗಿದ್ದರೆ, 105 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಹೋಂ ಕ್ವಾರಂಟೈನಲ್ಲಿ 57 ವಿದ್ಯಾರ್ಥಿಗಳಿದ್ದಾರೆ. ಕೋವಿಡ್ ಪಾಸಿಟೀವ್ ಎಂದು 25 ವಿದ್ಯಾರ್ಥಿಗಳು ಗುರುತಿಸಲ್ಪಟ್ಟಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:

ಬೆಂಗಳೂರು ಪೂರ್ವ ಹಾಗೂ ದಕ್ಷಿಣ ಜಿಲ್ಲೆಗಳಿಗೆ ಸೇರಿದ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು ಎಂದು ಸುರೇಶ್ ಕುಮಾರ್ ತಿಳಿಸಿದ ಅವರು ಇಂದಿನ ಪರೀಕ್ಷೆಗೆ ಸಂಬಂಧಿಸಿದ ಹಲವಾರು ಪ್ರಮುಖ ಅಂಶಗಳನ್ನು ವಿವರಿಸಿದರು.

ಧಾರವಾಡ ತಾಲೂಕಿನ ಕಾಶಿನಹಟ್ಟಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಅದೇ ತಾಲೂಕಿನ ಆಳ್ನಾವರ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಬೇಕಿತ್ತು. ಕೊರೋನಾ ಸೋಂಕು ಪ್ರಸರಣದ ಭಯದಿಂದ ಪೋಷಕರು ಮೊದಲ ದಿನದ ಪರೀಕ್ಷೆಗೆ ಆಕೆಯನ್ನು ಕಳಿಸಿರಲಿಲ್ಲ. ಇದನ್ನು ಅರಿತ ಇಲಾಖೆಯ ಅಧಿಕಾರಿಗಳು ಪೋಷಕರ ಮನವೊಲಿಸಿ ಇಂದಿನಿಂದ ಪರೀಕ್ಷೆಗೆ ಅವಳನ್ನು ಹಾಜರಾಗುವಂತೆ ಮಾಡಿದ್ದಾರೆ.

ಮಂಗಳೂರಿನ ಬಳಿಯ ಕಸಬಾ ಬೇಂಗ್ರೆ ದ್ವೀಪ ಪ್ರದೇಶದಿಂದ ಪ್ರತಿದಿನ ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ 25 ವಿದ್ಯಾರ್ಥಿಗಳನ್ನು ಮಂಗಳೂರು ನಗರದ ಪರೀಕ್ಷಾ ಕೇಂದ್ರಗಳಿಗೆ ಪ್ರತಿದಿನ ಬೋಟ್ ಚಾಲಕ ಬಶೀರ್ ಮಂಗಳೂರು ಬಂದರಿಗೆ ಉಚಿತವಾಗಿ ಕರೆತರುವ ಮತ್ತು ಸಂಜೆ ಅದೇ ರೀತಿ ಬೇಂಗ್ರೆಗೆ ತಲುಪಿಸುವ ಮೂಲಕ ಮಕ್ಕಳಿಗೆ ನೆರವಾಗಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರೊಂದಿಗೆ ಭರವಸೆ ಮೂಡಿಸುವ ಕ್ರಮವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕರಕೋಣ ಗ್ರಾಮದಲ್ಲಿ ನಿನ್ನೆ ರಾತ್ರಿ ಒಂದು ಕೊರೋನಾ ಪಾಸಿಟೀವ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಒಂದು ಪ್ರದೇಶವನ್ನು ದಿಢೀರಾಗಿ ಕಂಟೈನ್‍ಮೆಂಟ್ ವಲಯವಾಗಿ ಘೋಷಿಸಲಾಗಿತ್ತು. ಆ ಸ್ಥಳದಿಂದ ಕುಮಟಾದ ಬಂಕಿಕೂಡ್ಲ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಕಲಿಯುವ ಎಂಟು ವಿದ್ಯಾರ್ಥಿಗಳು ಗೋಕರ್ಣದ ಭದ್ರಕಾಳಿ ಪ್ರೌಢಶಾಲೆ ಹಾಗೂ ಮಿರ್ಜಾನ ಉರ್ದು ಮಾಧ್ಯಮ ಶಾಲಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಿದ್ದು, ಈ ಹಿಂದೆ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಈ ಎಂಟು ವಿದ್ಯಾರ್ಥಿಗಳನ್ನು ಎರಡು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಯಿತು.

ಮೈಸೂರಿನ ಬನುಮಯ್ಯ ಪರೀಕ್ಷಾ ಕೇಂದ್ರಕ್ಕೆ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಒಬ್ಬಳೇ ವಿದ್ಯಾರ್ಥಿನಿಗಾಗಿ ಒಂದು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆ ತಂದು ಪರೀಕ್ಷೆ ಬರೆಸಲಾಗುತ್ತಿದೆ.

ಶಿವಮೊಗ್ಗ ಸಾಗರ ತಾಲೂಕಿನ ನಾಗವಳ್ಳಿ ಸರ್ಕಾರಿ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಅದೇ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಪರೀಕ್ಷೆ ಬರೆಯಬೇಕಿದ್ದು, ನಿನ್ನೆಯ ಮಳೆಯ ಕಾರಣ ಮಾರ್ಗಮಧ್ಯೆ ಮರವೊಂದು ಉರುಳಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆಳಗಿನ ಜಾವದಿಂದಲೇ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮೀಸಲಿಟ್ಟ ವಾಹನಗಳ ಮೂಲಕ ಈ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ಕರೆತರುವ ವ್ಯವಸ್ಥೆ ಮಾಡಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೊಪ್ಪದ ಸರ್ಕಾರಿ ಪದವಿಪೂರ್ವಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಸರ್ವೋದಯ ಸಂಯುಕ್ತ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ನಕಲಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಯಿತು. ಅಲ್ಲಿ ಅಂತಹ ಯಾವುದೇ ಪ್ರÀಕರಣಗಳು ಕಂಡುಬರಲಿಲ್ಲವಾದರೂ ತಕ್ಷಣವೇ ಆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರನ್ನು ಬದಲಿ, ಹೆಚ್ಚುವರಿಯಾಗಿ 2 ಸಿಟಿಂಗ್ ಸ್ಕ್ವಾಡ್ ಹಾಗೂ ಒಬ್ಬ ವೀಕ್ಷಕರನ್ನು ನಿಯೋಜಿಸಲಾಗಿದೆ. ಈ ಕುರಿತು ಯಾವುದೇ ಆತಂಕಕ್ಕೆ ಅವಕಾಶವಿಲ್ಲ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ. ದತ್ತಿ ಕಿವುಡ ಮತ್ತು ಮೂಕ ಮಕ್ಕಳ ವಸತಿಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಎರಡು ದಿನದ ಹಿಂದೆ ಕೊರೋನಾ ಪಾಸಿಟೀವ್ ದೃಢಪಟ್ಟ ಹಿನ್ನೆಲೆಯಲ್ಲಿ ಗದಗದ ಕೊರೋನಾ ಡೆಸಿಗ್ನೇಟೆಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆತನ ಪ್ರಥಮ ಸಂಪರ್ಕದ ಇಬ್ಬರು ವಿದ್ಯಾರ್ಥಿ ಸಹಪಾಠಿಗಳು ಹಾಗೆಯೇ ದ್ವಿತೀಯ ಸಂಪರ್ಕದ 19 ವಿದ್ಯಾರ್ಥಿಗಳನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ಎಲ್ಲರೂ ಸುರಕ್ಷಿತವಾಗಿದ್ದು, ಪೂರಕ ಪರೀಕ್ಷೆಯಲ್ಲಿ ಅವರ ಸ್ಥಿತಿಗನುಗುಣವಾಗಿ ಅವಕಾಶ ಕಲ್ಪಿಸಲಾಗುವುದು.

ಬೆಂಗಳೂರಿನ ‘ಕೋತ್ಯಾಲ್ ಶಾಲೆ’ಗೆ ಸೇರಿದ 13 ವಿಶೇಷಚೇತನ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಯಾವುದೇ ಸಮಸ್ಯೆಯಿಲ್ಲದೇ ಜೀವನಭೀಮಾನಗರದ ಭಾಗದ ಕೈರಾಳಿ ನಿಲಯಂ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ವರ್ತೂರಿನ ಪರೀಕ್ಷಾ ಕೇಂದ್ರದಲ್ಲಿ ಅಪಘಾತದಲ್ಲಿ ಕಾಲು ಮುರಿದುಕೊಂಡಿರುವ ಅರ್ಷದ್ ಪಾಷಾ ಎಂಬ ವಿದ್ಯಾರ್ಥಿ ತನ್ಮಯತೆಯಿಂದ ಇಂದು ಪರೀಕ್ಷೆಗೆ ಹಾಜರಾಗಿದ್ದಾನೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕಬ್ಬನ್‍ಪೇಟೆಯಲ್ಲಿರುವ LOURDE ಪ್ರೌಢಶಾಲೆ ಹಾಗೂ ಕಿಲಾರಿ ರಸ್ತೆಯಲ್ಲಿರುವ ಭಂಡಾರಿ ಶಾಲೆಗಳು ಪರೀಕ್ಷಾ ಕೇಂದ್ರಗಳಾಗಿದ್ದು, ಬಿಬಿಎಂಪಿ ಈ ಶಾಲೆಗಳಲ್ಲಿ ಪರೀಕ್ಷೆ ನಡೆಸಲು ಯಾವುದೇ ತೊಂದರೆಯಿಲ್ಲವೆಂದು ದೃಢೀಕರಣ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಬೆಂಗಳೂರಿನ ಮೂಡಲಪಾಳ್ಯದಲ್ಲಿ ಸೇಂಟ್ ಕ್ಸೇವಿಯರ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 289 ವಿದ್ಯಾರ್ಥಿಗಳು ಇಂದು ಸುರಕ್ಷಿತವಾಗಿ ಪರೀಕ್ಷೆ ಬರೆದು ಹಿಂದಿರುಗಿದ್ದಾರೆ. ಈ ಶಾಲೆಯಿಂದ ಸುಮಾರು 80 ಅಡಿ ದೂರದಲ್ಲಿರುವ ತಿರುವಿನ ರಸ್ತೆಯೊಂದರಲ್ಲಿರುವ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ ಮನೆಯನ್ನು ಮಧ್ಯರಾತ್ರಿ ಸೀಲ್‍ಡೌನ್ ಮಾಡಲಾಗಿದೆ. ಇಂದು ಎಸ್‍ಒಪಿ ಆಧಾರದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಿ ಮಕ್ಕಳನ್ನು ಹಿಂದಿರುಗಿಸಲಾಗಿದೆ. ಮುಂದಿನ ಪರೀಕ್ಷೆಗಳನ್ನು ಪ್ರತ್ಯೇಕ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಎಲ್ಲ ಮಕ್ಕಳಿಗೂ ಆ ಕೇಂದ್ರಕ್ಕೆ ಹೋಗಿ ಬರಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗುವುದು.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚೆಂಗಟಿ ತಾಂಡಾಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆ ವಿದ್ಯಾರ್ಥಿನಿ ಚಿಂಚೋಳಿ ತಾಲೂಕಿನ ಚಂದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊನ್ನೆಯ ಆಂಗ್ಲ ಭಾಷೆ ಮತ್ತು ಗಣಿತ ಪರೀಕ್ಷೆಗೆ ಹಾಜರಾಗಿದ್ದಾಳೆ. ಆಕೆಯ ಧೈರ್ಯಕ್ಕೆ ಅಭಿನಂದನೆ.

ಮುನಿಸಿಪಲ್ ಪ್ರೌಢಶಾಲೆ ಗದಗ ಇಲ್ಲಿ ಪರೀಕ್ಷೆ ಬರೆಯುತ್ತಿದ್ದ 6 ಖಾಸಗಿ (ರಿಪೀಟರ್ಸ್) ವಿದ್ಯಾರ್ಥಿಗಳನ್ನು ಅಹಿತರಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಡಿಬಾರ್ ಮಾಡಲಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇಂದಿನ ಪರೀಕ್ಷೆಗೆ ವಿದ್ಯಾರ್ಥಿಯೊಬ್ಬನಿಗೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ ಈ ಮೊದಲು ಆತ ಡೆಂಗ್ಯೂ ಜ್ವರದ ತಪಾಸಣೆಗೊಳಗಾಗಿದ್ದ. ಅದೇ ಸಂದರ್ಭದಲ್ಲಿ ಕೊರೋನಾ ಸ್ಯಾಂಪಲ್ ಪಡಯಲಾಗಿದ್ದು, ಇಂದು ಪರೀಕ್ಷೆ ಬರೆಯುತ್ತಿದ್ದಾಗ, ಸ್ವೀಕೃತವಾದ ವೈದ್ಯಕೀಯ ವರದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೂಡಲೇ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಗೆ ಸ್ಥಳಾಂತರಿಸಲಾಯಿತು. ಆತನ ಜೊತೆ ಆ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಇತರೆ 19 ವಿದ್ಯಾರ್ಥಿಗಳನ್ನು ಸಹ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಅಭಿಪ್ರಾಯದ ಮೇರೆಗೆ ಈ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವಲ್ಲಿ ಹಾಗೂ ಆ ಎಲ್ಲ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ವಹಿಸುವಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬಳ ಅಜ್ಜಿಗೆ ಕೊರೋನಾ ಪಾಸಿಟೀವ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿನಿಗೆ ಈ ಪರೀಕ್ಷೆಯಿಂದ ವಿನಾಯ್ತಿ ನೀಡಿ ಮುಂದಿನ ಪರೀಕ್ಷೆಗೆ ಅವಕಾಶ ಕಲ್ಪಿಸಲು ನಿರ್ಣಯಿಸಲಾಗಿದೆ. ಈ ವಿದ್ಯಾರ್ಥಿನಿ ಮೊದಲದಿನದ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದಳು.

25.06.2020ರಂದು ನಡೆದ ಎಸ್‍ಎಸ್‍ಎಲ್‍ಸಿ ದ್ವಿತೀಯ ಆಂಗ್ಲ ಭಾಷಾ ಪರೀಕ್ಷೆಯಲ್ಲಿ ಜಿಲ್ಲಾಡಳಿತ ನೇಮಿಸಿದ ಹಿಂದುಳಿದ ವರ್ಗಗಳ ಇಲಾಖಾ ವಿಸ್ತರಣಾಧಿಕಾರಿ ವೀಕ್ಷಕರಾಗಿದ್ದರು. ಅವರು ಪಾವಗಡ ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಗೆ ಪರಿಶೀಲನೆಗೆ ಹೋದಾಗ ಕೇಂದ್ರದ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕುಳಿತು ಚರ್ಚಿಸಿ ವಾಪಾಸಾಗಿದ್ದರು. ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿರಲಿಲ್ಲ. ಅವರಿಗೆ ಜೂ. 26ರ ಶುಕ್ರವಾರ ಸಂಜೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಆ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಯಿತು. ಮುಖ್ಯ ಅಧೀಕ್ಷಕರ ಕಚೇರಿ ಸೇರಿದಂತೆ ಎಲ್ಲ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ.

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಗಣಿತ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇ ರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ವಿಶ್ವಾಸವಿಟ್ಟುಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.

ಈ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆದ ಇಂದಿನ ಪರೀಕ್ಷೆಯ ಹಾಜರಾತಿ, ಯಶಸ್ಸು ಎಲ್ಲವೂ ಸಹ ನಮ್ಮ ಪೋಷಕರ ಮತ್ತು ಮಕ್ಕಳ ಗಟ್ಟಿತನದ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು-ಪೋಷಕರಲ್ಲಿ ಮನವಿ: ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯ ಹೆಚ್ಚಿನ ಸಹಕಾರದಿಂದ ಇಂದೂ ಸಹ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಮುಂದೆಯೂ ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಆ ರೀತಿ ಗುಂಪುಗೂಡದೇ ಪೋಷಕರು, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿ ಪರೀಕ್ಷೆಯ ಯಶಸ್ಸಿಗೆ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು

ಸಮರೋಪಾದಿಯಲ್ಲಿ ಕಾರ್ಯ ನಿವ೯ಹಿಸಲು ಅಧಿಕಾರಿಗಳಿಗೆ ತಾಕೀತು, ಬೆಂಗಳೂರಿನಲ್ಲಿ ಹತ್ತು ಸಾವಿರ ಹಾಸಿಗೆ ಸೌಲಭ್ಯಕ್ಕೆ ಕ್ರಮ : ಸಚಿವ ಸುಧಾಕರ್

ಬೆಂಗಳೂರು : ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಸಂಜೆಯೊಳಗಾಗಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಕನಿಷ್ಟ ಹತ್ತು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಬೆಂಗಳೂರು ನಗರದಾದ್ಯಂತ ಚಿಕಿತ್ಸೆಗೆ ಅಗತ್ಯವಿರುವ ಸಕಾ೯ರಿ ಮತ್ತು ಖಾಸಗಿ ಪ್ರದೇಶಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ಸೋಮವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಶನಿವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸಕಾ೯ರಿ ಮತ್ತು ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲದೆ, ಬಿಡಿಎ, ವಸತಿ ಇಲಾಖೆ ಮತ್ತು ಖಾಸಗಿ ನಿಮಾ೯ಣ ಸಂಸ್ಥೆಗಳು ನಿಮಿ೯ಸಿರುವ ವಸತಿ ಸಮುಚ್ಚಯಗಳು, ಸಕಾ೯ರಿ ಮತ್ತು ಖಾಸಗಿ ಕ್ರೀಡಾ ಸಂಕಿಣ೯ಗಳು, ಕ್ರೀಡಾಂಗಣಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳನ್ನು ಕೋವಿಡ್‌ ಚಿಕಿತ್ಸೆ ಉದ್ದೇಶಕ್ಕೆ ಬಳಸಿಕೊಳ್ಳಲು ನಿಧ೯ರಿಸಲಾಗಿದೆ. ಇವುಗಳನ್ನು ಸೌಲಭ್ಯಗಳ ಆಧಾರದ ಮೇಲೆ ಕೋವಿಡ್‌ ಚಿಕಿತ್ಸಾ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವತಿ೯ಸಲಾಗುವುದು ಎಂದರು.

ವಿಂಗಡಣೆ : ವೆಂಟಿಲೇಟರ್‌, ಹೈ ಪ್ಲೊ ಆಕ್ಸಿಜನ್‌ ಮತ್ತು ಇತರೆ ಅಗತ್ಯ ಸೌಲಭ್ಯಗಳಿರುವ ಕಡೆ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವತಿ೯ಸಲಾಗುವುದು. ನಗರದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಕೊರೋನಾ ಸೋಂಕಿತರ ಪೈಕಿ ಶೇಕಡಾ ಮುವತ್ತರಿಂದ ಐವತ್ತರವರೆಗೆ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸೋಂಕಿತರ ಲಕ್ಷಣ ಆಧರಿಸಿ ಲಘು ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ವಿಂಗಡಿಸಿ ಚಿಕಿತ್ಸೆ ನೀಡಲು ನಿಧ೯ರಿಸಲಾಗಿದೆ. ಇದಕ್ಕಾಗಿ ಚಿಕಿತ್ಸಾ ವಿಧಾನದ ವಿಧಿ -ವಿಧಾನಗಳನ್ನು ಅಂತಿಮಗೊಳಿಸಲು ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ಐವತ್ತರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಮಾಲೀಕರ ಜತೆ ಸೋಮವಾರ ಮಾತುಕತೆ ನಡೆಸಲಾಗುವುದು. ಅವರಿಗೆ ನಿಗದಿತ ದರ ನೀಡಲಾಗುವುದು. ಆ ಕುರಿತು ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಹಾಗೆಯೇ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳನ್ನು ಬಹುತೇಕ ಪೂಣ೯ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಪರಿಶೀಲನೆ : ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಹೆಚ್ಚಿನ ಸೌಲಭ್ಯ ಅಗತ್ಯವಿಲ್ಲ. ಹೀಗಾಗಿ ಬಿಡಿಎ, ವಸತಿ ಇಲಾಖೆ ನಿಮಿ೯ಸಿ ಸಿದ್ಧಗೊಂಡಿರುವ ಬಹುಮಹಡಿ ವಸತಿ ಸಮುಚ್ಛಯಗಳನ್ನು ಬಳಸಲಾಗುವುದು. ಬಿಡಿಎ ಬಳಿ ೧೭೦೦ ಫ್ಲಾಟ್‌ಗಳಿವೆ. ಅವುಗಳಲ್ಲಿ ಬಳಕೆಗೆ ಲಭ್ಯವಿರುವ ನಿಖರ ಸಂಖ್ಯೆಯನ್ನು ಸೋಮವಾರ ತಿಳಿಸುವುದಾಗಿ ಆಯುಕ್ತ ಮಹದೇವ್‌ ತಿಳಿಸಿದ್ದಾರೆ. ಅದರ ಜತೆ ವಸತಿ ಇಲಾಖೆ, ರೇರಾದಲ್ಲಿ ನೋಂದಣಿಯಾಗಿರುವ ಖಾಸಗಿ ವಲಯದ ಮೂರು ಸಾವಿರ ಪ್ರಾಜೆಕ್ಟ್‌ಗಳಲ್ಲಿ ಲಭ್ಯವಾಗುವ ವಸತಿ ಸಮುಚ್ಛಯದ ವಿವರಗಳು ಲಭ್ಯವಾಗಲಿವೆ. ಎಲ್ಲವನ್ನೂ ಅಧಿಕಾರಿಗಳು ಖುದ್ದು ಪರಿಶೀಲಿಸಿ ಅಂತಿಮ ನಿಧಾ೯ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದರ ಜತೆಗೆ ಕ್ರೀಡಾ ಇಲಾಖೆ ಮತ್ತು ಖಾಸಗಿ ಅವರ ಒಡೆತನದಲ್ಲಿರುವ ಕ್ರೀಡಾಂಗಣ, ಕ್ರೀಡಾ ಸಮುಚ್ಛಯಗಳು, ಹಾಸ್ಟೆಲ್‌ಗಳು ಮತ್ತು ಬೃಹತ್‌ ವಾಣಿಜ್ಯ ಸಮುಚ್ಛಯಗಳ ಮಾಹಿತಿ ಕೂಡ ಕಲೆ ಹಾಕಲಾಗುತ್ತಿದೆ. ಒಟ್ಟಾರೆ ಕನಿಷ್ಟ ಹತ್ತು ಸಾವಿರ ಹಾಸಿಗೆಗಳ ಸೌಲಭ್ಯವನ್ನು ಸಿದ್ಧಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾಯ೯ ನಿವ೯ಹಿಸುತ್ತಿದ್ದಾರೆ. ತಾವು ಕೂಡ ಅದನ್ನು ಉಸ್ತುವಾರಿ ನೋಡುತ್ತಿರುವುದಾಗಿ ಹೇಳಿದರು.

ಊಟ – ಶುಚಿತ್ವ : ಹೀಗೆ ಗುರುತಿಸಿದ ಪ್ರದೇಶಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳನ್ನು ಖಾಸಗಿ ನೆರವಿನಲ್ಲಿ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಸ್ವಚ್ಛತೆಗೆ ನಗರದಲ್ಲಿರುವ ನೂರಾರು ಖಾಸಗಿ ಕಂಪನಿಗಳ ನೆರವನ್ನೂ ಪಡೆಯಲಾಗುವುದು. ಸುರಕ್ಷತೆಗೆ ರಾಜ್ಯ ಮೀಸಲು ಪೋಲೀಸ್‌, ನಗರ ಸಶಸ್ತ್ರ ಮೀಸಲು ಪಡೆಗಳಲ್ಲದೆ, ಗೃಹ ರಕ್ಷಕ ದಳ, ಎನ್‌ಸಿಸಿ ಕೆಡೆಟ್‌ಗಳಲ್ಲದೆ, ನಗರದಲ್ಲಿ ಕೇಂದ್ರ ಹೊಂದಿರುವ ಅರೆ ಮಿಲಿಟರಿ ಪಡೆಗಳ ನೆರವು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿಡಿಯೋ ಸಂವಾದದಲ್ಲಿ ಅಪರ ಮುಖ್ಯ ಕಾಯ೯ದಶಿ೯ ಜಾವೇದ್‌ ಅಖ್ತರ್‌, ಬಿಡಿಎ ಆಯುಕ್ತ ಡಾ. ಎಂ. ಮಹದೇವ್‌, ವೈದ್ಯಕೀಯ ಶಿಕ್ಷಣ ಇಲಾಖೆ ಕಾಯ೯ದಶಿ೯ ಟಿ.ಕೆ. ಅನಿಲ್‌ ಕುಮಾರ್‌, ರೇರಾ ಕಾಯ೯ದಶಿ೯ ಲತಾಕುಮಾರಿ, ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿದೇ೯ಶಕ ಡಾ. ಗಿರೀಶ್‌ ಮತ್ತು ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಭಯ ಬೇಡ, ಮುನ್ನೇಚ್ಚರಿಕೆ ಅಗತ್ಯ…
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೧,೦೦೫ ಇದ್ದರೆ ಗುಣಮುಖರಾಗುತ್ತಿರುವ ಸಂಖ್ಯೆ ೬,೯೧೬ರಷ್ಟಿದೆ. ಸಕ್ರೀಯ ಪ್ರಕರಣಗಳು ೩,೯೦೫ ಇವೆ. ಇದುವರೆಗೆ ೧೮೦ ಮಂದಿ ಕೋವಿಡ್‌ ಸಂಬಂಧ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಮರಣ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ರಾಜ್ಯದ ಮರಣ ಪ್ರಮಾಣ ಶೇಕಡಾ ಐದರಷ್ಟು ಕಡಿಮೆಯಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಸೋಂಕಿತರಾಗುವವರಲ್ಲಿ ಅಧ೯ದಷ್ಟು ಮಂದಿಗೆ ರೋಗ ಲಕ್ಷಣ ಕಾಣಿಸುತ್ತಿದೆ. ಹವಾಮಾನ ಬದಲಾವಣೆ ಇದಕ್ಕೆ ಕಾರಣವಿರಬಹುದು. ರೋಗದಿಂದ ಸಾವಿಗೀಡಾಗುವ ಪ್ರಮಾಣ ಇತರೆ ಸೋಂಕುಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿ ಜನತೆ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಳ್ಳುವ ಅವಶ್ಯವಿದೆ. ಸಕಾ೯ರ ಪ್ರಮಾಣಿಕವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಂತದಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ಸಚಿವ ಸುಧಾಕರ್‌ ಮನವಿ ಮಾಡಿದರು.

ಕೋವಿಡ್ 19 ವಿರುದ್ಧ ಡ್ರೋಣ್ ಮೂಲಕ ಹೋರಾಟ

ಬೆಂಗಳೂರು: ಮಾರಕ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನವೀನ ರೀತಿಯ ಹೋರಾಟ ಆರಂಭವಾಗಿದೆ.

ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ರೋಣ್ ಮೂಲಕ ಸಾವಯವ ಔಷಧವನ್ನು ಸಿಂಪರಣೆ ಮಾಡುವ ಕಾರ್ಯಕ್ಕೆ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಾಲನೆ ನೀಡಿದರು.

ಭಾನುವಾರದಿಂದ ಪೂರ್ಣ ಪ್ರಮಾಣದಲ್ಲಿ ಇಡೀ ಕ್ಷೇತ್ರದಾದ್ಯಂತ ಈ ಔಷಧವನ್ನು ಡ್ರೋನ್‌ ಮೂಲಕ ಸಿಂಪಡಣೆ ಮಾಡಲಾಗುವುದು. ಇದರಿಂದ ಕೋವಿಡ್ ಹರಡುವುದನ್ನು ತಡೆಯಬಹುದು ಎಂದು ಡಿಸಿಎಂ ಹೇಳಿದರು.

ಟೀಮ್‌ ದಕ್ಷ ಮತ್ತು ಸುಗಾರ್ಧನ ಸಂಸ್ಥೆ ಜಂಟಿಯಾಗಿ ಡ್ರೋಣ್‌ಗಳನ್ನು ಒದಗಿಸಿದ್ದು, ಔಷಧ ಸಿಂಪಡಣೆಗೆ ನೆರವಾಗಿವೆ. ಇದನ್ನು ಡಿಸಿಎಂ ಅಶ್ವತ್ಥನಾರಾಯಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಾಳೆ ಇಡೀ ದಿನ ಮಲ್ಲೇಶ್ವರ ಕ್ಷೇತ್ರದ ಜನಸಂದಣಿ ಹೆಚ್ಚು ಇರುವ ಪ್ರದೇಶದಲ್ಲಿ ಸಿಂಪಡಣೆ ನಡೆಯಲಿದೆ.

ಇದು ಸೋಂಕಿನ ಕಾಯಿಲೆ ಆಗಿರುವುದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಮುಕ್ತವಾಗಿ ಪ್ರಯತ್ನಿಸಬೇಕು ಎಂದು ಅವರು ನುಡಿದರು.

ಕೆಂಪೇಗೌಡರ 511ನೇ ಜಯಂತಿ: ವಿಮಾನ ನಿಲ್ದಾಣದಲ್ಲಿ ನಾಡಪ್ರಭುಗಳ ಪ್ರತಿಮೆಗೆ ಶಿಲಾನ್ಯಾಸ, ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಭೂಮಿಪೂಜೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ಮಹಾನಗರ, ಶನಿವಾರ ಐತಿಹಾಸಿಕ ಮತ್ತು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು.

ನಾಡಪ್ರಭುಗಳ 511ನೇ ಜಯಂತಿ ಅಂಗವಾಗಿ ಸರಳ, ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮದಲ್ಲಿ ಅಖಂಡ ವೇದ ಮಂತ್ರಘೋಷಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ವಿಧ್ಯುಕ್ತವಾಗಿ ಭೂಮಿಪೂಜೆ ನೆರವೇರಿಸಿದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಶ್ರೀಗಳು, ವಿಶ್ವ ಒಕ್ಕಲಿಗರ ಪೀಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾದಾರ ಚೆನ್ನಯ್ಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದವರು ಮುಖ್ಯಮಂತ್ರಿಗಳ ಜತೆ ಭೂಮಿಪೂಜೆಯಲ್ಲಿ ಪಾಲ್ಗೊಂಡು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದ ದೃಶ್ಯವು ನಾಡಿನ ಗಮನ ಸೆಳೆಯಿತು.

ಈ ಕಾರ್ಯಕ್ರಮ ಆನ್‌ಲೈನ್ ನಲ್ಲಿ ನೇರ ಪ್ರಸಾರವಾಗಿ ಲಕ್ಷಾಂತರ ಕನ್ನಡಿಗರು ತಾವಿದ್ದ ಸ್ಥಳದಲ್ಲಿಯೇ ಆ ಸುಂದರ ಕ್ಷಣಗಳನ್ನುಕಣ್ತುಂಬಿಕೊಂಡರಲ್ಲದೆ, ನಾಡಪ್ರಭುವಿಗೆ ಇದ್ದಲ್ಲಿಂದಲೇ ನಮನ ಸಲ್ಲಿಸಿದರು. ಶಾಸಕರು, ಸಂಸದರು ಮತ್ತು ರಾಜ್ಯದ ಕೇಂದ್ರ ಸಚಿವರು ಕೂಡ ದೂರದಿಂದಲೇ ಕಣ್ತುಂಬಿಕೊಂಡರು.

ಮನಮುಟ್ಟಿದ ಭೂಮಿಪೂಜೆ:‌
ಮುಖ್ಯವಾಗಿ ಭೂಮಿಪೂಜೆ ಎಲ್ಲರ ಮನಸೂರೆಗೊಂಡಿತು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಮಸ್ತ ಪೂಜಾ ಕೈಂಕರ್ಯವನ್ನು ಸಾಂಗೋಪಾಂಗವಾಗಿ ನೆರೆವೇರಿಸಲು ಮುಂದೆ ನಿಂತು ಮಾರ್ಗದರ್ಶನ ನೀಡಿದರಲ್ಲದೆ, ಇತರೆ ಎಲ್ಲ ಶ್ರೀಗಳೂ ಭಾಗಿಯಾಗಿ ಶುಭಹಾರೈಸಿದರು. ಇವರೆಲ್ಲರೂ ಹಾರೆ-ಗುದ್ದಲಿ ಹಿಡಿದು ಒಟ್ಟಾಗಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಯೋಜನೆ ಯಶಸ್ವಿಯಾಗಿ ಮುಗಿಯಲಿ ಎಂದು ಪ್ರಾರ್ಥಿಸಿದರು.

ಮೇಲೆದ್ದು ಬಂದ ಕೆಂಪೇಗೌಡರು:
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಂಪೇಗೌಡರ ಮಾದರಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಭೂಗರ್ಭದಿಂದ ಮೇಲೆದ್ದು ಬರುವಂತೆ ಅನಾವರಣ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿತ್ತು. ಸಿಎಂ ತಮ್ಮ ಕೈಯ್ಯಲ್ಲಿದ್ದ ಬಟನ್ ಒತ್ತಿದ ಕೂಡಲೇ ಮೇಲೆದ್ದು ಬಂದ ನಾಡಪ್ರಭುಗಳ ತೇಜೋಪ್ರಭೆಯ ವಿರಾಜಮಾನ ಪ್ರತಿಮೆಯನ್ನು ಕಂಡು ಪ್ರತಿಯೊಬ್ಬರೂ ಪುಳಕಿತರಾದರು. ನೆರೆದಿದ್ದ ಎಲ್ಲ ಗಣ್ಯರು ಆ ಕ್ಷಣ ಮೈಮರೆತರಲ್ಲದೆ, ನಾಡಪ್ರಭುವಿಗೆ ಮೌನ ನಮನ ಸಲ್ಲಿಸಿದರು. ಎಲ್ಲೆಲ್ಲೂ ಕೆಂಪೇಗೌಡರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ನೆರೆದಿದ್ದ ಗಣ್ಯರೆಲ್ಲರೂ ಮಾದರಿ ಪ್ರತಿಮೆ ಅದ್ಭುತವಾಗಿದೆ ಎಂದು ಕೊಂಡಾಡಿದರು.

ನಾಡಪ್ರಭುಗಳ ದಾರಿಯಲ್ಲೇ ನಮ್ಮ ಹೆಜ್ಜೆ: ಸಿಎಂ
ಐದು ಶತಮಾನಗಳ ಹಿಂದೆ ವೈಜ್ಞಾನಿಕವಾಗಿ ಬೆಂಗಳೂರು ಮಹಾನಗರವನ್ನು ಕಟ್ಟಿದ ಕೆಂಪೇಗೌಡರಿಗೆ ಈ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದಕ್ಕೆ ಖುಷಿಯಾಗಿದೆ. ಒಂದು ವರ್ಷದಲ್ಲಿಯೇ ಈ ಯೋಜನೆಯನ್ನು ಮುಗಿಸಿ ಲೋಕಾರ್ಪಣೆ ಮಾಡಲಾಗುವುದು. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಸರಕಾರ ಮುಂದೆ ನಿಂತು ಮಾಡಲಿದೆ ಎಂದು ಯಡಿಯೂರಪ್ಪ ಹೇಳಿದರು.

ಬೆಂಗಳೂರು ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾಲಿನ್ಯ ನಿಯಂತ್ರಣ, ಸಂಚಾರ ದಟ್ಟಣಿ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುವುದು. ಜತೆಗೆ, ನಾಡಪ್ರಭುಗಳ ಪರಿಕಲ್ಪನೆಯಂತೆ ಇಡೀ ನಗರವನ್ನು ಮತ್ತಷ್ಟು ಉತ್ತಮಪಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರಲ್ಲದೆ, ಇವೆಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಅಭಿನಂದಿಸಿದರು.

ಇದು ಮಹತ್ಕಾರ್ಯ ಎಂದ ಗೌಡರು:
ಪ್ರತಿಮೆ ಸ್ಥಾಪನೆ, ಸೆಂಟ್ರಲ್ ಪಾರ್ಕ್ ನಿರ್ಮಾಣ ಕೆಂಪೇಗೌಡರ ಹೆಸರಿನಲ್ಲಿ ಆಗುತ್ತಿರುವ ಮಹತ್ಕಾರ್ಯಗಳು ಎಂದು ಶ್ಲಾಘಿಸಿದ ಮಾಜಿ ಪ್ರಧಾನಿ ದೇವೇಗೌಡರು, ಸರಕಾರವನ್ನು ಮುಕ್ತಕಂಠದಿಂದ ಹಾಡಿಹೊಗಳಿದರು. ಜತೆಗೆ, ಪಕ್ಷಾತೀತವಾಗಿ ಇಷ್ಟೆಲ್ಲ ನಾಯಕರು, ಸ್ವಾಮೀಜಿಗಳೆಲ್ಲರೂ ಇಲ್ಲಿ ಸೇರಿರುವುದಕ್ಕೆ ಬಹಳ ಸಂತೋಷವಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ ನಮ್ಮ ಕಾಲದಲ್ಲಿಯೇ ಉದ್ಘಾಟನೆಯೂ ಅಗಬೇಕು ಎಂದು ಅವರು ಆಶಿಸಿದರು.

ಶ್ಲಾಘನೀಯ ಕಾರ್ಯ ಎಂದ ಡಿಕೆಶಿ:
ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂಥ ಮಹಾನ್ ನಾಯಕನಿಗೆ ಸಲ್ಲುತ್ತಿರುವ ಗೌರವದ ವೇಳೆ ದೇವನಹಳ್ಳಿ ಸುತ್ತಮುತ್ತಲಿನ ರೈತರನ್ನು ಸ್ಮರಿಸಲೇಬೇಕು. ಆ ದಿನ ಅವರೆಲ್ಲರೂ ಕಡಿಮೆ ಮೊತ್ತಕ್ಕೆ ಭೂಮಿ ನೀಡದಿದ್ದರೆ ಈ ವಿಮಾನ ನಿಲ್ದಾಣವೇ ಬರುತ್ತಿರಲಿಲ್ಲ ಎಂದರು.

ಹೃದಯ ತುಂಬಿಬಂದಿದೆ ಎಂದ ಡಿಸಿಎಂ:
108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಮತ್ತು ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕಾಗಿ ಶನಿವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ನಾಯಕರು, ಸ್ವಾಮೀಜಿಗಳೆಲ್ಲರೂ ಧರ್ಮಾತೀತ ಮತ್ತು ಜಾತ್ಯತೀತವಾಗಿ ಭಾಗಿಯಾಗಿದ್ದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ ಎಂದು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಭೂಮಿಪೂಜೆ ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹುದಿನಗಳ ಕನಸು ನನಸಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ಹೆಸರನ್ನು ನಾಮಕರಣ ಮಾಡಿದ ನಂತರ ಇದೇ ನಿಲ್ದಾಣದ ಮುಂದೆ ಇಷ್ಟು ವಿಶಾಲವಾದ ಜಾಗದಲ್ಲಿ ನಾಡಪ್ರಭುಗಳ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಈ ಕ್ಷಣದಲ್ಲಿ ನಾನು ಭಾವುಕನಾಗಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ವರ್ಚುವಲ್ ಲಿಂಕ್ ಮೂಲಕ ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

ಇದು ನನ್ನ ಪಾಲಿಗೆ ಪುಣ್ಯಕ್ಷಣ. ನಾಡಪ್ರಭುಗಳ ಆಳಿದ, ಜೀವಿಸಿದ್ದ ಪುಣ್ಯಭೂಮಿಯಲ್ಲಿ ಇದ್ದೇವೆ. 500 ವರ್ಷಗಳ ಹಿಂದೆ ತಮ್ಮ ದಾರ್ಶನಿಕತೆಯಿಂದ ನಮ್ಮ ರಾಜ್ಯಕ್ಕೆ ಸುಸಜ್ಜಿತ ರಾಜಧಾನಿ ಕಟ್ಟಿಕೊಟ್ಟ ಕೆಂಪೇಗೌಡರು ಓರ್ವ ನಗರ ನಿರ್ಮಾತೃವಾಗಿ ಮಾತ್ರವಲ್ಲ, ಆಡಳಿತಗಾರರಾಗಿ, ಜನಪರ ಪಾಳೆಯಗಾರರಾಗಿ ಅದೆಷ್ಟೋ ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ. ಅವರು ಪ್ರಖರ ದೂರದೃಷ್ಟಿಯವರು, ಅಪ್ರತಿಮ ಆಡಳಿತಗಾರರೂ ಆಗಿದ್ದ ಅವರು ಪ್ರಜೆಗಳ ಪ್ರಭುಗಳಾಗಿದ್ದರು. ಜತೆಗೆ, ಅವರು ನಮ್ಮ ಬೆಂಗಳೂರಿನ ಆಸ್ಮಿತೆ. ನಮ್ಮ ಸ್ಫೂರ್ತಿ. ಅವರು ಹಾಕಿಕೊಟ್ಟ ಅಭಿವೃದ್ಧಿ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮುಂದಿನ ತಲೆಮಾರುಗಳಿಗೆ ಅವರನ್ನು ಪರಿಚಯಿಸಿ ಅವರ ಸಾಧನೆಗಳನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸರಕಾರದ ಬಹುದೊಡ್ಡ ಕನಸು. ಇಡೀ ಸ್ಮಾರಕವನ್ನು ಕೆಂಪೇಗೌಡರ ಆಶಯ, ನಾಡಿನ ಬಯಕೆಗೆ ತಕ್ಕಂತೆ ವ್ಯಾಪಕವಾಗಿ ಸಂಶೋಧನೆ ನಡೆಸಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕನಿಗೆ ಕೊರೋನಾ ಪಾಸಿಟಿವ್: ವಿದ್ಯಾರ್ಥಿಗಳಲ್ಲಿ ಮನೆ ಮಾಡಿದ ಆತಂಕ

ತುಮಕೂರು:  ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕನಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು, ಇದೀಗ ಪಾವಗಡ ತಾಲೂಕಿನ ಅರಸೀಕೆರೆ ಪ್ರೌಢಶಾಲೆಯ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ.

ಪರೀಕ್ಷಾ ಕೇಂದ್ರ ಒಟ್ಟು 132 ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪ್ರತಿ ವಿದ್ಯಾರ್ಥಿಯನ್ನು ಮಾತನಾಡಿಸಿಯೇ ಮೇಲ್ವಿಚಾರಕರು ಒಳಗಡೆ ಕಳಿಸಿದ್ದರು. ಜೂನ್ 22 ರಂದೇ ಕೋವಿಡ್ 19 ಟೆಸ್ಟ್ ಗೆ ಕೊಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಿಚಾರಕ ವರದಿಗೂ ಮುನ್ನವೇ ಕೆಲಸಕ್ಕೆ ಹಾಜರಾಗಿ ಮಹಾ ಎಡವಟ್ಟು ಎಸಗಿದ್ದಾರೆ. ಅಲ್ಲದೆ ಕರ್ತವ್ಯದ ವೇಳೆ ಸಿಬ್ಬಂದಿ ಜೊತೆಗೆ ಊಟವನ್ನು ಮಾಡಿದ್ದಾರೆ.

ಸದ್ಯ ಪರೀಕ್ಷಾ ಕೇಂದ್ರ ಮತ್ತು ಸಿಬ್ಬಂದಿಗಳನ್ನ ಬದಲಾಯಿಸುವುದಾಗಿ ಡಿಡಿಪಿಇ ರೇವಣ್ಣಸಿದ್ದಪ್ಪ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಬದಲಾವಣೆ ಬಳಿಕ 125 ವಿದ್ಯಾರ್ಥಿಗಳನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ.