ನಾಯಿಗಳ ದಾಳಿಗೆ ಬಲಿಯಾದ ಕಾಡು ಕುರಿಗಳು!

ಮಂಗಳೂರು: ನಾಯಿಗಳ ದಾಳಿಯಿಂದ ಸುಮಾರು 10 ಕಾಡುಕುರಿಗಳು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಡೆದಿದೆ. ಈ ಹಿಂದೆ ಜಿಂಕೆಗಳು ಸಾವನ್ನಪ್ಪಿವೆ ಎಂಬ ವದಂತಿ ಹಬ್ಬಿತ್ತು.

ಜಿಂಕೆಗಳ ಸಾವಿನ ವದಂತಿ ಕುರಿತು ಸ್ಪಷ್ಟನೆ ನೀಡಿದ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ಮರಬಿದ್ದು ನಿಸರ್ಗಧಾಮದ ಆವರಣ ಗೋಡೆ ಒಂದು ಕಡೆ ಕುಸಿದಿದೆ. ಇಲ್ಲಿಂದ ರಾತ್ರಿ ಒಳನುಗ್ಗಿರುವ ನಾಲ್ಕೈದು ನಾಯಿಗಳು ಕಾಡುಕುರಿಗಳ ಮೇಲೆ ದಾಳಿ‌ ನಡೆಸಿವೆ‌. ಬಾರ್ಕಿಂಗ್ ಡೀರ್ ಎಂದು ಕರೆಯಲ್ಪಡುವ ಕಾಡುಕುರಿಗಳ ಮೇಲೆ ದಾಳಿ‌ ನಡೆಸಿದೆ.

ಕಾಡು ಕುರಿಗಳು ಮೇಲ್ನೋಟಕ್ಕೆ ಜಿಂಕೆಗಳಂತೆ ಕಾಣುತ್ತವೆ. ಆದರೆ ದಾಳಿಗೊಳಗಾಗಿದ್ದು ಕಾಡುಕುರಿಗಳು. ಸುಮಾರು 40 ರಷ್ಟಿದ್ದ ಕಾಡುಕುರಿಗಳ ಪೈಕಿ 10 ಕಾಡುಕುರಿಗಳು ಸಾವನ್ನಪ್ಪಿವೆ. ದಾಳಿ ವೇಳೆ ಐದರಷ್ಟು ಕಾಡುಕುರಿಗಳು ಗಾಯಗೊಂಡಿವೆ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ಮಾಹಿತಿ ನೀಡಿದ್ರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯತ್ವಕ್ಕೆ ಭಾರೀ ಪೈಪೋಟಿ!

ಉಡುಪಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಸ್ಥಾನಗಳಿಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಜುಲೈ ತಿಂಗಳಲ್ಲಿ ಹೊಸ ವ್ಯವಸ್ಥಾಪನ ಸಮಿತಿ ರಚನೆಯಾಗಲಿದ್ದು, ಇರುವ 9 ಸ್ಥಾನಗಳಿಗಾಗಿ ನೂರಾರು ಅರ್ಜಿಗಳು ಬಂದಿವೆ.

ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಈಗಿನ ವ್ಯವಸ್ಥಾನಪ ಸಮಿತಿಯ ಅವಧಿ ಕಳೆದ ಎಪ್ರಿಲ್‌ ನಲ್ಲೇ ಮುಗಿದಿತ್ತು. ಈ ಮಧ್ಯೆ ಏಪ್ರಿಲ್ ನಿಂದ ಸರಕಾರ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಮುಂದಿನ ತಿಂಗಳು ಅಸ್ತಿತ್ವಕ್ಕೆ ಬರಲಿರುವ ಹೊಸ ಸಮಿತಿಯಲ್ಲಿ 5 ಸ್ಥಾನಗಳಿಗೆ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಸಮಿತಿಯಲ್ಲಿರುವ ಒಟ್ಟು 9 ಸದಸ್ಯರಲ್ಲಿ ಅರ್ಚಕರು, ಪರಿಶಿಷ್ಟ ಜಾತಿ ಹಾಗೂ ಮಹಿಳೆಯರಿಗೆ 4 ಸ್ಥಾನ ಮೀಸಲಿಡಲಾಗಿದೆ. ಉಳಿದ 5 ಸ್ಥಾನಗಳಿಗೆ 300ರಷ್ಟು ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ತಿಂಗಳು ಸರಕಾರವು ಐವರ ಹೆಸರನ್ನು ಅಂತಿಮಗೊಳಿಸಲಿದೆ. ಹಾಗಾಗಿ ಈ ಐದು ಸ್ಥಾನಗಳಿಗೆ ಪ್ರಭಾವಿಗಳು ಭಾರೀ ಲಾಭಿ ನಡೆಸುತ್ತಿದ್ದಾರೆ. ರಾಜಕೀಯ ಬಲ, ಧನಬಲ ಉಪಯೋಗಿಸಿ ಸಮಿತಿಯಲ್ಲಿ ಸ್ಥಾನ‌ಗಿಟ್ಟುಸಿಕೊಳ್ಳಲು ಭಾರೀ ಪೈಪೋಟಿ ನಡೆದಿದೆ.

ಎರಡನೇ ದಿನದ ಪರೀಕ್ಷೆ ಯಶಸ್ವಿ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಈ ಸಾಲಿನ ಎರಡನೇ ದಿನದ ಜೆಟಿಎಸ್ ಮತ್ತು ಅರ್ಥಶಾಸ್ತ್ರ ವಿಷಯದ ಪರೀಕ್ಷೆಗಳು ಶುಕ್ರವಾರ, ರಾಜ್ಯದ 94 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, 510 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎರಡನೇ ದಿನದ ಈ ಪರೀಕ್ಷೆಗಳಿಗೆ 528 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡನೇ ದಿನದ ಈ ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದೇ ಅಚ್ಚುಕಟ್ಟಾಗಿ ನಡೆದು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ನಿಗಾ ವಹಿಸಲಾಗಿತ್ತು. ಈ ದಿನ ಕಂಟೈನ್ಮೆಂಟ್ ವಲಯಕ್ಕೆ ಸೇರಿದ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. 438 ಮಂದಿ ಶಾಲಾ ವಿದ್ಯಾರ್ಥಿಗಳು ಮತ್ತು 83 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಮೂವರು ವಲಸೆ ವಿದ್ಯಾರ್ಥಿಗಳಾಗಿದ್ದು, ಮೂವರೂ ಇಂದಿನ ಪರೀಕ್ಷೆಗೆ ಹಾಜರಾಗಿದ್ದರು.

ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಅಭ್ಯರ್ಥಿಗಳು ಅಂದರೆ 70 ಅಭ್ಯರ್ಥಿಗಳು ಹಾಜರಾಗಿದ್ದರು. ಕಲಬುರ್ಗಿ-49, ಮಂಗಳೂರು-40, ರಾಮನಗರ-33, ಬೆಂಗಳೂರು ಉತ್ತರ-24, ಬೆಂಗಳೂರು ದಕ್ಷಿಣ ಜಿಲ್ಲೆ-26, ಚಿಕ್ಕೋಡಿ- 46, ಧಾರವಾಡ-50, ಬಳ್ಳಾರಿ-47 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಸಚಿವರು ವಿವರಿಸಿದ್ದಾರೆ.

ಈ ಪರೀಕ್ಷೆಗಳಿಗೆ ಕಳೆದ ವರ್ಷ 7 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ರಾಜಧಾನಿಯಲ್ಲಿ 18 ಪರೀಕ್ಷಾ ಕೇಂದ್ರಗಳು. ಮೈಸೂರು ಮತ್ತು ಮಂಗಳೂರಿನಲ್ಲಿ ತಲಾ 6, ಶಿವಮೊಗ್ಗದಲ್ಲಿ 7 ಪರೀಕ್ಷಾ ಕೇಂದ್ರಗಳಿದ್ದವು ಎಂದು ಸಚಿವರು ವಿವರಿಸಿದ್ದಾರೆ. ಯಾವುದೇ ಕೇಂದ್ರದಲ್ಲೂ ಪರೀಕ್ಷಾ ಅವ್ಯವಹಾರ ನಡೆದಿಲ್ಲ. ರಾಜ್ಯದ ವಿವಿಧೆಡೆಯ ಪರೀಕ್ಷಾ ಕೇಂದ್ರಗಳಲ್ಲಿ ನಿನ್ನೆ ಕೈಗೊಳ್ಳಲಾದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಶನಿವಾರ ಗಣಿತ ಪರೀಕ್ಷೆ ನಡೆಯಲಿದ್ದು, ನಿನ್ನೆಯಂತೆಯೇ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾಮಾಜಿಕ ಅಂತರ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಯುತ್ತಿರುವ ಪರೀಕ್ಷೆಯ ಯಶಸ್ಸಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕೆಂದು ಎಂದು ಸುರೇಶ್ ಕುಮಾರ್ ಕೋರಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ, ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಇಂದು ಸಿಎಂ ಭೂಮಿಪೂಜೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ 23 ಎಕರೆ ವಿಸ್ತೀರ್ಣದ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಭೂಮಿಪೂಜೆ ನೆರೆವೇರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್ 19 ಕಾರಣದಿಂದ ಈ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ನೆರೆವೇರಿಸಲಾಗುತ್ತಿದೆ. ಹೆಚ್ಚು ಜನರನ್ನು ಸೇರಿಸುತ್ತಿಲ್ಲ, ಸೇರುವ ಜನರಲ್ಲಿಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗೊಂದಲವಿಲ್ಲದೆ ಕಾರ್ಯಕ್ರಮವನ್ನು ನಡೆಸಲಾಗುವುದು. ಇದೇ ವೇಳೆ ಕೆಂಪೇಗೌಡರ ಮಾದರಿ ಪ್ರತಿಮೆಯನ್ನೂ ಮುಖ್ಯಮಂತ್ರಿಗಳು ಅನಾವರಣಗೊಳಿಸುವರು ಎಂದರು.

ಕಾರ್ಯಕ್ರಮವನ್ನು ವರ್ಚುವಲ್ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಯುಟ್ಯೂಬ್ ಸೇರಿ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳಲ್ಲಿಯೂ http://bit.ly/kdbkar ಲಿಂಕ್ ಅನ್ನು ಕ್ಲಿಕ್ ಮಾಡಿ ಪ್ರತಿಯೊಬ್ಬರೂ ವೀಕ್ಷಿಸಬಹುದು. ಎಲ್ಲ ಸಂಸದರು ಮತ್ತು ಶಾಸಕರೂ ಆನ್‌ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಹಾಗೆ ಮಾಡುತ್ತಿದೇವೆ. ಬದಲಿಗೆ ಸಚಿವರು, ಶಾಸಕರು, ಸಂಸದರಿಗೆ ಈ ಲಿಂಕನ್ನು ಕಳಿಸಿದ್ದೇವೆ. ಎಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲೇ ಕಾರ್ಯಕ್ರಮವನ್ನು ವೀಕ್ಷಿಸಿ ಕೆಂಪೇಗೌಡರಿಗೆ ನಮನ ಸಲ್ಲಿಸಬಹುದಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರೂ ಸೇರಿ ಪ್ರತಿಪಕ್ಷ ನಾಯಕರು, ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಭೂಮಿಪೂಜೆ ನೆರೆವೇರಿದ ಒಂದೇ ವರ್ಷದಲ್ಲಿ ಇಡೀ ಕಾಮಗಾರಿಯನ್ನು ಮುಗಿಸಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುವುದು. ಈ ಯೋಜನೆಗೆ ಒಟ್ಟು 78 ಕೋಟಿ ರೂಪಾಯಿ ವೆಚ್ಚವಾಗುತ್ತಿದದ್ದು, ಯೋಜನೆ ಪೂರ್ಣಗೊಂಡ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದವರೇ ನಿರ್ವಹಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಪ್ರತಿಮೆ ಎತ್ತರವನ್ನು ವೈಜ್ಞಾನಿಕವಾಗಿ 108 ಅಡಿಗೆ ನಿಗಧಿ ಮಾಡಲಾಗಿದೆ. ತಾಂತ್ರಿಕವಾಗಿಯೂ ತುಂಬಾ ಹೋಮ್ ವರ್ಕ್ ಮಾಡಿದ್ದೇವೆ. ಎತ್ತರ ವಿಷಯದಲ್ಲಿ ಯಾರೊಂದಿಗೂ ಪೈಪೋಟಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇಡೀ ಯೋಜನೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದಿಂದಲೇ ಖರ್ಚು ಮಾಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿರುವ ಬಗ್ಗೆಯೂ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸ್ಮಾರಕವನ್ನು ಸರಕಾರವೇ ಮಾಡಬೇಕು ಎಂದು ಸಿಎಂ ತೀರ್ಮಾನಿಸಿದ್ದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಈ ಕಾರ್ಯ ಆಗಬೇಕೆಂಬ ಇಚ್ಛೆ ಅವರದಾಗಿತ್ತು ಎಂದು ತಿಳಿಸಿದರು.

ವಿಧಾನಸೌಧ-ವಿಕಾಸಸೌಧ ನಡುವೆ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ, ಗುಜರಾತ್ ರಾಜ್ಯದ ನರ್ಮದಾ ನದಿ ತೀರದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ತಯಾರಿಸಿರುವ ಖ್ಯಾತ ಶಿಲ್ಪಿ ರಾಮಸುತಾರ ಅವರೇ ಕೆಂಪೇಗೌಡರ ಪ್ರತಿಮೆ ವಿನ್ಯಾಸ ಸಿದ್ಧಪಡಿಸುತ್ತಿದ್ದಾರೆ. ಜತೆಗೆ ಕೆಂಪೇಗೌಡರು ಮತ್ತು ಬೆಂಗಳೂರಿನ ಇತಿಹಾಸಕ್ಕೆ ಚ್ಯುತಿ ಬಾರದಂತೆ ಐಡೆಕ್ ಸಂಸ್ಥೆ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ತಮ್ಮ ಪ್ರಖರ ದೂರದೃಷ್ಟಿಯಿಂದ 500 ವರ್ಷಗಳ ಹಿಂದೆಯೇ ಎಲ್ಲ ಜಾತಿ ಧರ್ಮದವರಿಗೂ ಸಲ್ಲುವ ಬೆಂಗಳೂರಿನಂಥ ಆಧುನಿಕ ಮಹಾನಗರವನ್ನು ಕಟ್ಟಿದ ಮಹಾಪುರುಷನನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕೆಂಬ ಏಕೈಕ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನಗರವನ್ನು ಕಟ್ಟುವುದರ ಜತೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಈ ನಗರವನ್ನು ಜಾಗತಿಕ ಗಮನ ಸೆಳೆಯುಂತೆ ರೂಪಿಸಿದವರು ಕೆಂಪೇಗೌಡರು. ಪೇಟೆ, ಮಾರುಕಟ್ಟೆ, ಕೆರೆಕಟ್ಟೆ, ಕೋಟೆ, ನೀರನ ಪೂರೈಕೆಗೆ ನಾಲೆಗಳು, ನಗರಕ್ಕೆ ಗಡಿಗಳು.. ಹೀಗೆ ಎಲ್ಲ ರೀತಿಯಲ್ಲೂ ಸರ್ವಶ್ರೇಷ್ಟ ನಗರವನ್ನು ಕಟ್ಟಿದ ಹೆಗ್ಗಳಿಕೆ ಅವರದ್ದು ಎಂದ ಡಿಸಿಎಂ, ಇವೆಲ್ಲ ಅಂಶಗಳನ್ನು ಆಮೂಲಾಗ್ರವಾಗಿ ಸಂಶೋಧನೆ ಮಾಡಿ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ ಎಂದರು.

ಯಡಿಯೂರಪ್ಪ ಅವರ ನೇತೃತ್ವದ ಸರಕಾರವೇ ವಿಧಾನಮಂಡಲದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕೇಂದ್ರ ಸರಕಾರಕ್ಕೆ ಶೀಫಾರಸು ಮಾಡಿತ್ತು. ಈ ಶಿಫಾರಸನ್ನು ಅಂಗೀಕರಿಸಿದ್ದ ಕೇಂದ್ರವು ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ಹೆಸರನ್ನೇ ಇಟ್ಟಿತ್ತು. ಬಳಿಕ ಆ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಬೇಕೆಂಬ ಒತ್ತಾಯವಿತ್ತಾದರೂ ಬಹವರ್ಷಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಅವರು ಪ್ರತಿಮೆ ಸ್ಥಾಪನೆ ಸೇರಿದಂತೆ ಅಲ್ಲಿ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೂ ಅನುಮೋದನೆ ನೀಡಿ ಅನುದಾನವನ್ನೂ ಒದಗಿಸಿದರು ಎಂದು ಡಿಸಿಎ ಮಾಹಿತಿ ನೀಡಿದರು.

ಕೆಂಪಾಪುರ ಅಭಿವೃದ್ಧಿ:
ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು, ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ, ಕೆಂಪಾಪುರ ಕೆರೆಯ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಈ ತಾಣವನ್ನು ಸರ್ವಋತು ಪ್ರವಾಸಿತಾಣವನ್ನಾಗಿ ರೂಪಿಸಬೇಕೆಂಬ ಕನಸನ್ನು ಸಾಕಾರ ಮಾಡಲು ಪ್ರಯತ್ನಗಳನ್ನು ಆರಂಭಿಸಲಾಗಿದೆ. ಐಡೆಕ್ ತಜ್ಞರು ಈಗಾಗಲೇ ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದು, ಅವರು ವರದಿ ಕೊಟ್ಟ ನಂತರ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು. ಇದರ ಜತೆಯಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದರ ಜತೆಯಲ್ಲಿಯೇ ಆವತಿ, ಶಿವಗಂಗೆ, ಬೆಂಗಳೂರು, ಮಾಗಡಿ ಸೇರಿದಂತೆ ಕೆಂಪೇಗೌಡರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅವೆಲ್ಲ ಜಾಗಗಳನ್ನು ಗುರುತಿಸಿ ಅವರ ಹೆಸರಿನಲ್ಲಿಯೇ ಒಂದು ಸರ್ಕ್ಯೂಟ್ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಡಿಸಿಎಂ ಹೇಳಿದರು.

ವಸತಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ, ನಿರ್ವಹಣೆಗೆ 1365 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ : ಗೋವಿಂದ ಎಂ ಕಾರಜೋಳ

ಬೆಂಗಳೂರು. ಜೂ. 26: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳ ಗುಣಾತ್ಮಕ ಶಿಕ್ಷಣ, ಉತ್ತಮ ನಿರ್ವಹಣೆ, ಕಟ್ಟಡಗಳ ನಿರ್ಮಾಣ ಸೇರಿದಂತೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪೂರಕ ಇತರ ಕಾರ್ಯಚಟುವಟಿಕೆಗಳಿಗೆ ಪ್ರಸಕ್ತ ಸಾಲಿನಲ್ಲಿ 1365 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಕಾಸಸೌಧದಲ್ಲಿಂದು ನಡೆದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 74 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು, ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳ ಅನುಭವ ಸಾರವನ್ನು ಒಳಗೊಂಡ “ಸಮರ್ಥರ ಸಾಧನೆ’’, ಭೋದನಾ ಸಾಮಗ್ರಿ, ನೈಜ ಫಲಿತಾಂಶಗಳನ್ನು ಒಳಗೊಂಡ “ಸಾಧನ ದರ್ಪಣ’’ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಕಥನ “ ನಮ್ಮ ಪ್ರಯಾಣದ ಹೆಜ್ಜೆಗಳು’’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ, ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಇವರನ್ನು ಶೈಕ್ಷಣಿಕ ಸಲಹೆಗಾರರನ್ನಾಗಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀ ಬೆಳ್ಳಿಶೆಟ್ಟಿ ಅವರನ್ನು ಸಮಾಲೋಚಕರನ್ನಾಗಿ ನೇಮಿಸಲಾಗುವುದು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳೂರು, ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಬೆಳಗಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂದಾಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಮಾಚಿಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಕ್ರೀಡಾ ವಸತಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು.

ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಒದಗಿಸಲು ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಯಿತು. 12 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6 ರಿಂದ 12 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದ್ದು, ಸಿಬಿಎಸ್‍ಸಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಶಾಸಕರು,ಸಂಸದರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂನ್ 26, ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಸಚಿವರು, ಶಾಸಕರಗಳು ಹಾಗೂ ಸಂಸತ್ ಸದಸ್ಯರುಗಳ ಸಭೆ ನಡೆಸಲಾಯಿತು.

ನಂತರ ಕಂದಾಯ ಸಚಿವ ‌ಆರ್. ಅಶೋಕ್ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು ಬೆಂಗಳೂರಿನ ಸಚಿವರು, ಸಂಸದರು ಮತ್ತು ಶಾಸಕರ ಸಭೆಯ ಮುಖ್ಯಾಂಶಗಳು:

ಸಭೆಯಲ್ಲಿ ಬೆಂಗಳೂರು ನಗರದ ಕೋವಿಡ್ 19 ನಿರ್ವಹಣೆಯ ಸ್ಥಿತಿಗತಿಯ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಬೆಂಗಳೂರಿನಲ್ಲಿ ನಿನ್ನೆ ಸಂಜೆಯ ವರೆಗೆ 1207 ಸಕ್ರಿಯ ಪ್ರಕರಣಗಳಿದ್ದು, ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಇತರ ಮಹಾನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ, ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿರಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಎಲ್ಲರೂ ಭರವಸೆ ನೀಡಿದರು.

ಸಭೆಯಲ್ಲಿ ಎಲ್ಲ ಶಾಸಕರು, ಸಂಸದರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಭೆಯ ಮುಖ್ಯಾಂಶಗಳು:

· ಕೋವಿಡ್ ನಿರ್ವಹಣೆಗೆ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುವ ಕುರಿತು ಸಲಹೆ ವ್ಯಕ್ತವಾಯಿತು. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

· ಪ್ರತಿ ಕ್ಷೇತ್ರದಲ್ಲಿ ಗಂಟಲ ದ್ರವ ಪರೀಕ್ಷೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಯಿತು.

· ಕೋವಿಡ್ ನಿಂದ ಮೃತಪಟ್ಟವರ ಮೃತ ದೇಹ ಸಾಗಿಸಲು ಪ್ರತ್ಯೇಕ ಅಂಬ್ಯುಲೆನ್ಸ್ ವ್ಯವಸ್ಥೆ ಹೆಚ್ಚಿಸಲು ಕ್ರಮ ವಹಿಸಲಾಗುವುದು.

· ರೋಗಲಕ್ಷಣ ಇಲ್ಲದೆ ಇರುವವರನ್ನು ಕ್ವಾರಂಟೈನ್ ಮಾಡಲು, ಬೆಂಗಳೂರು ನಗರದ ಹೊರವಲಯದಲ್ಲಿರುವ ಬೃಹತ್ ಕಲ್ಯಾಣ ಮಂಟಪಗಳನ್ನು ಸಹ ಬಳಸಿಕೊಳ್ಳುವ ಕುರಿತು ಸಲಹೆ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗುತ್ತಿದ್ದು, ಹೋಟೆಲ್ ಗಳನ್ನು ಸಹ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

· ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವ ಕುರಿತು ಸೂಕ್ತ ಮೇಲ್ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

· ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ವಿತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

· ಕರೋನಾ ವಾರಿಯರ್ ಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆ.

· ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಇನ್ನಷ್ಟು ಮಹತ್ವ ನೀಡಲು ತೀರ್ಮಾನಿಸಲಾಯಿತು.