ದೇವೇಗೌಡರು ಪ್ರತಿಭಟನೆಗೆ ಮುಂದಾಗಬಾರದು : ಡಾ.ನಾರಾಯಣಗೌಡ

ಮಂಡ್ಯ: ಮಾಜಿ ಪ್ರಧಾನಿಯಾದ ದೇವೇಗೌಡರು ಪ್ರತಿಭಟನೆಗೆ ಮುಂದಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ನಾರಾಯಣಗೌಡ ಮನವಿ ಮಾಡಿದ್ದಾರೆ.

ದೇವೇಗೌಡರು ನನಗೆ ತಂದೆ ಸಮಾನ. ಅವರಿಂದಲೇ ರಾಜಕೀಯದಲ್ಲಿ ಬೆಳೆದವನು. ಅವರ ಮಾತನ್ನ ಆಶೀರ್ವಾದ ಎಂದು ಭಾವಿಸುತ್ತೇನೆ. ಆದರೆ ಕಲ್ಲುಗಣಿಗಾರಿಕೆ ವಿಚಾರದಲ್ಲಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತಕ್ಷಣ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಬಳಿಕ ದೇವೇಗೌಡರು ಸಮಯ ನೀಡಿದರೆ ಅವರ ಹೇಳಿದ ಸ್ಥಳಕ್ಕೆ ಹೋಗಿ ಮಾಹಿತಿ ಒದಗಿಸುತ್ತೇನೆ ಎಂದರು.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಗೆ ಭೇಟಿ ನೀಡಿದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ದೇವೇಗೌಡರು ಪ್ರತಿಭಟನೆ ಮಾಡಬಾರದು, ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮಂಜು ಎನ್ನುವವರು ಎರಡು ಕ್ವಾರಿಗೆ ಪರವಾನಿಗೆ ಪಡೆದಿದ್ದರು. ಆದ್ರೆ 9 ಕೋಟಿ ರೂ. ರಾಯಲ್ಟಿ ಬಾಕಿ ಉಳಿಸಿಕೊಂಡಿದ್ದಾರೆ. ಜೊತೆಗೆ ಕ್ವಾರಿಯಿಂದ ಸಾಹುಕಾರ್ ಚನ್ನಯ್ಯ ನಾಲೆಗೆ ಧಕ್ಕೆಯಾಗಿತ್ತು. ವಾರಗಳ ಕಾಲ ನೀರು ನಿಲ್ಲಿಸಿ, ನಾಳೆ ದುರಸ್ತಿ ಮಾಡಿಸಲಾಗಿತ್ತು. ಇದೆಲ್ಲವು ಕುಮಾರಸ್ವಾಮಿ ಅವರ ಸರಕಾರ ಇದ್ದಾಗಲೇ ಆಗಿತ್ತು. ಆ ಸಂದರ್ಭದಲ್ಲೇ ಕ್ವಾರಿಯನ್ನ ನಿಲ್ಲಿಸಲು ಆದೇಶ ಮಾಡಲಾಗಿತ್ತು. ಈ ಎಲ್ಲ ವಿಚಾರವನ್ನು ದೇವೇಗೌಡರ ಗಮನಕ್ಕೆ ತರಲಿಲ್ಲ. ಹಾಗಾಗಿ ದೇವೇಗೌಡರು ಆರೋಪ ಮಾಡಿದ್ದಾರೆ ಅಷ್ಟೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ವಿಚಾರ ತಿಳಿದಿದೆ. ಪುಟ್ಟರಾಜು ಅವರು ಉಸ್ತುವಾರಿ ಸಚಿವರಾಗಿದ್ದರು. ಅವರಿಗೂ ಮಾಹಿತಿ ಇದೆ. ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು ಮುಖ್ಯಮಂತ್ರಿಗಳಿಗೆ ನೀಡುತ್ತೇನೆ. ಗಣಿ ಇಲಾಖೆ ಸಚಿವರ ಗಮನಕ್ಕೂ ತರುತ್ತೇನೆ. ಬಳಿಕ ದೇವೇಗೌಡರಿಗೂ ಮಾಹಿತಿ ಒದಗಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಜಿಲ್ಲೆಯ ಅಭಿವೃದ್ಧಿಗೆ ನಾನು ಶ್ರಮಿಸುತ್ತಿದ್ದೇನೆ. ದೇವೇಗೌಡರು ತುಂಬಾ ಹಿರಿಯರು. ನಾನು ಈಗಷ್ಟೆ ರಾಜಕೀಯದಲ್ಲಿ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಏನು ಪ್ರಯೋಜನ: ಡಿ.ಕೆ ಶಿವಕುಮಾರ್

ಬೆಂಗಳೂರು:ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾದ ಸರ್ಕಾರ ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಏನು ಪ್ರಯೋಜನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.

ಗಡಿಯಲ್ಲಿ ಚೀನಾ ದಾಳಿ ವೇಳೆ ಹುತಾತ್ಮರಾದ ವೀರ ಯೋಧರಿಗೆ ಶುಕ್ರವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಮಾಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಈ ವಿಚಾರವಾಗಿ ನಮ್ಮ ಶಾಸಕರು ಹಾಗೂ ನಮ್ಮ ವಿರೋಧ ಪಕ್ಷದ ನಾಯಕರು ಕೂತು ಚರ್ಚಿಸಿದ್ದು, ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಸರ್ಕಾರ ನೀಡುವ ಆದೇಶ ಪಾಲಿಸುತ್ತೇವೆ. ಈ ವಿಚಾರದಲ್ಲಿ ನಮಗೆ ಈವರೆಗೂ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ.

ಕೋವಿಡ್ ವಿಚಾರ ನಿಭಾಯಿಸಲು ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ. ಜನರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಎರಡು ಮೂರು ತಿಂಗಳ ಕಾಲಾವಕಾಶವನ್ನು ಬಳಸಿಕೊಳ್ಳಲು ಸರ್ಕಾರ ಎಡವಿದೆ. ಪರಿಣಾಮವಾಗಿ ಸೋಂಕು ಹೆಚ್ಚಾಗಿದ್ದು, ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ.

ನಾನು ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡರೆ ಡಿಸಿಎಂ ಅವರು, ಡಿ.ಕೆ ಶಿವಕುಮಾರ್ ಯಾರು? ಅಂತಾ ಕೇಳುತ್ತಾರೆ. ಡಿ.ಕೆ ಶಿವಕುಮಾರ್ ಯಾರು ಅಂತಾ ಕೇಳಿದವರು ಈಗ ಯಾಕೆ ಶಾಸಕರ ಜತೆ ಚರ್ಚೆ ಮಾಡುತ್ತಿದ್ದಾರೆ? ಕನಕಪುರ ಲಾಕ್ ಡೌನ್ ಕುರಿತಯ ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿ, ಆಯುಕ್ತರನ್ನು ಒಳಗೊಂಡಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಿದ್ದೆ.

ಈಗ ಶಾಸಕರನ್ನು ಕರೆದಿದ್ದು, ಅವರ ವಿವೇಚನೆಗೆ ತಕ್ಕಂತೆ ತಮ್ಮ ಅಭಿಪ್ರಾಯ ನೀಡಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ.

ಸರ್ಕಾರ ನಮ್ಮ ಮಾತನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ:

ಕೊರೋನಾ ವಿಚಾರವಾಗಿ ಚರ್ಚೆ ನಡೆಸಲು ವಿಶೇಷ ಅಧಿವೇಶನ ನಡೆಸಿ ಎಂದು ನಾವು ಕೇಳಿದ್ದೇವೆ. ಅಧಿವೇಶನದಲ್ಲಿ ಸರ್ಕಾರ ತನ್ನ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಹೇಳಿದ್ದೇವೆ. ಈ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಬಹುದು. ಆದರೆ ಸರ್ಕಾರ ನಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಧಿವೇಶನ ಕರೆಯುತ್ತಿಲ್ಲ.

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕ್ಷೇತ್ರದಲ್ಲಿ ಹೇರಳ ಸಾಮರ್ಥ್ಯವಿದೆ: ಸಚಿವ ಡಿ.ವಿ. ಸದಾನಂದ ಗೌಡ

ನವದೆಹಲಿ: ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದು, ಕೈಗಾರಿಕೆಗಳು, ಕೋವಿಡ್ -19ನಿಂದ ಬಾಧಿತವಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮ ನಿರ್ಭರ ಭಾರತ ವಿಶೇಷ ಪ್ಯಾಕೇಜ್ ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು (ಜೂನ್ 25,2020) ನಡೆದ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಸಲಹಾ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಭಾರತ ಸರ್ಕಾರ ಕಳೆದ 2014ರಿಂದಲೂ ದೇಶದಲ್ಲಿ ಸುಗಮ ವಾಣಿಜ್ಯ ನಡೆಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಇದರ ಫಲವಾಗಿ ವಿಶ್ವ ಬ್ಯಾಂಕ್ ವರದಿಯಲ್ಲಿ ಭಾರತ 2017ರಲ್ಲಿದ್ದ 130ನೇ ಸ್ಥಾನದಿಂದ 63ನೇ ಶ್ರೇಯಾಂಕ ಪಡೆದಿದೆ ಎಂದು ತಿಳಿಸಿದರು.

ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಲಯದ ಕ್ರಮಬದ್ಧ ಅಭಿವೃದ್ಧಿಗೆ ಬೆಂಬಲ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಬಿಐಎಸ್ ಮಾನದಂಡವನ್ನು 19 ರಾಸಾಯನಿಕ ಮತ್ತು 5 ಪೆಟ್ರೋ ರಾಸಾಯನಿಕಗಳಿಗೆ ಕಡ್ಡಾಯಗೊಳಿಸಲಾಗಿದೆ, ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ, ಅತಿ ಹೆಚ್ಚಿನ ಮೌಲ್ಯ ರಾಸಾಯನಿಕ ಇತ್ಯಾದಿಗಳ ಮಾರಾಟಕ್ಕೆ ಪ್ರತ್ಯೇಕ ಎಚ್.ಎಸ್. ಕೋಡ್ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಸೂಕ್ತ ಪ್ರೋತ್ಸಾಹಕಗಳ ಮಿಶ್ರಣದೊಂದಿಗೆ ಈ ಕೈಗಾರಿಕಾ ಸಮೂಹಗಳ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಇಲಾಖೆ ಪರಿಷ್ಕರಿಸಿದ ಪಿಸಿಪಿಐಆರ್ ನೀತಿಯನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದರು. ಮತ್ತೊಂದೆಡೆ, ಕೈಗಾರಿಕೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಚಟುವಟಿಕೆ ಮತ್ತು ವೆಚ್ಚದ ಹೆಚ್ಚಳವನ್ನು ಪರಿಗಣಿಸಬೇಕು, ಆಗ ಭಾರತ ಹತ್ತಿರದ ಭವಿಷ್ಯದಲ್ಲಿ ತಂತ್ರಜ್ಞಾನದ ರಫ್ತುದಾನಾಗಿ ಹೊರಹೊಮ್ಮುತ್ತದೆ ಎಂದರು. ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡಲು, ಸುರಕ್ಷಿತ ದ್ರಾವಣಗಳನ್ನು ಬಳಸಲು ಮತ್ತು ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕಗಳ ಕ್ಷೇತ್ರವನ್ನು ಪರಿಸರಾತ್ಮಕವಾಗಿ ಸುಸ್ಥಿರ ವಲಯವಾಗಿ ಅಭಿವೃದ್ಧಿ ಮಾಡಲು ಪುನರ್ಬಳಕೆಯ ಪೂರಕ ವಸ್ತು ಬಳಸಲು ಸುಸ್ಥಿರ ಕೆಮಿಸ್ಟ್ರಿ ಎಂದು ಕರೆಯಲಾಗುವ ಹಸಿರು ಕೆಮಿಸ್ಟ್ರಿಯನ್ನು ಕೈಗಾರಿಕೆಗಳು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ಸುಖ್ ಮಾಂಡವೀಯ, ನಮ್ಮ ಉತ್ಪಾದನಾ ನೆಲೆಯನ್ನು ಬಲಪಡಿಸಲು ಮತ್ತು ಹೊಸ ಹೂಡಿಕೆಗಳನ್ನು ಆಕರ್ಷಿಸಲು ಪಿಸಿಪಿಐಆರ್‌.ಗಳ ಅಭಿವೃದ್ಧಿ ಪ್ರಮುಖ ಪೂರ್ವಾಪೇಕ್ಷಿತವಾಗಿದೆ ಎಂದು ತಿಳಿಸಿದರು.

ಕಾರ್ಯದರ್ಶಿ (ರಾಸಾಯನಿಕ), ಆರ್.ಕೆ. ಚೌಧರಿ ಉದ್ಯಮದ ಸಲಹೆಗಳು ಮತ್ತು ಕುಂದುಕೊರತೆಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರದ ಇತರ ಇಲಾಖೆಗಳೊಂದಿಗೆ ಸಮನ್ವಯ ಹೊಂದಿರುವವರ ಜೊತೆ ಇಲಾಖೆ ಕೆಲಸ ಮಾಡುತ್ತದೆ ಎಂದು ಹೇಳಿದರು.

ವೇದಿಕೆಯ ಸಭೆಯ ಪ್ರಧಾನ ಕಾರ್ಯಸೂಚಿ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನವಾದ “ಆತ್ಮ ನಿರ್ಭರ ಭಾರತ’ (ಸ್ವಾವಲಂಬಿ ಭಾರತ) ನಿರ್ಮಾಣದ ಸಾಕಾರಕ್ಕಾಗಿ ಸಾಧ್ಯ ಮಾರ್ಗೋಪಾಯಗಳನ್ನು ಚರ್ಚಿಸುವುದಾಗಿತ್ತು. ಇದು ವೇದಿಕೆಯ 2ನೇ ಸಭೆಯಾಗಿದ್ದು, ಮೊದಲ ಸಭೆ 2029ರ ಆಗಸ್ಟ್ ನಲ್ಲಿ ನಡೆದಿತ್ತು. ಈ ವೇದಿಕೆ ಕೈಗಾರಿಕೆಗಳಿಗೆ ಸರ್ಕಾರದೊಂದಿಗೆ ತೊಡಕುಗಳ ನಿವಾರಣೆಗೆ, ಸುಗಮ ವಾಣಿಜ್ಯ ಹೆಚ್ಚಳಕ್ಕೆ ಮತ್ತು ವಲಯದಲ್ಲಿ ಹೂಡಿಕೆಗೆ ಅವಕಾಶ ನೀಡುವ ಕುರಿತಂತೆ ನೇರ ಸಂವಾದ ನಡೆಸಲು ಶಾಶ್ವತ ವೇದಿಕೆ ಕಲ್ಪಿಸಿದೆ.ವೇದಿಕೆಯ ಎರಡನೇ ಸಭೆಯಲ್ಲಿ, ವಿವಿಧ ಸಂಘಟನೆಗಳು ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಒತ್ತಿ ಹೇಳಿದವು, ದೇಶೀಯ ಉತ್ಪನ್ನ ಮತ್ತು ರಫ್ತು ಉತ್ತೇಜನಕ್ಕೆ ಮತ್ತು ಆಮದು ಅವಲಂಬನೆ ತಗ್ಗಿಸಲು ಸಲಹೆಗಳನ್ನೂ ನೀಡಿದವು.

ಸಭೆಯಲ್ಲಿ ಸಹಾಯಕ ಸಚಿವ ಮತ್ತು ವೇದಿಕೆಯ ಉಪಾಧ್ಯಕ್ಷ ಮನ್ಸುಖ್ ಮಾಂಡವೀಯ, ಕಾರ್ಯದರ್ಶಿ (ರಾಸಾಯನಿಕ) ಆರ್.ಕೆ. ಚೌಧರಿ, ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕೈಗಾರಿಕಾ ಸಂಸ್ಥೆಗಳಾದ ಸಿಪಿಎಂಎ, ಐಸಿಸಿ, ಎ.ಎಂ.ಎ.ಐ., ಎಐಪಿಎಂಎ, ಸಿಸಿಎಫ್.ಐ., ಪಿಎಂಎಫ್.ಎ.ಐ, ಓಪಿಪಿಐ, ಪ್ಲಾಸ್ಟ್ ಇಂಡಿಯಾ, ಎಎಸ್.ಎಫ್.ಐ, ಎಫ್.ಐ.ಸಿ.ಸಿ.ಐ, ಸಿಐಐ, ಪೆಕ್ಸ್ ಕೌನ್ಸಿಲ್ ಮತ್ತು ಕೆಮೆಕ್ಸಿಲ್ ಪ್ರತಿನಿಧಿಗಳು ಭಾಗಿಯಾಗಿದ್ದರು.

ಎಲ್ಲ ಕೊರೋನಾ ಸೋಂಕಿತರಿಗೂ ಉಚಿತ ಚಿಕಿತ್ಸೆ ನೀಡಲು ಸರಕಾರಕ್ಕೆ ಡಿ.ಕೆ ಶಿವಕುಮಾರ್ ಆಗ್ರಹ

ಬೆಂಗಳೂರು:ಕೊರೋನಾ ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯ ಜನರು ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್, ಕೊರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಿಡಿ ಕಾರಿದರು. ಈ ವೇಳೆ ಅವರು ಹೇಳಿದ್ದಿಷ್ಟು:

‘ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬ ದೃಷ್ಟಿಯಿಂದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ತಂದಿದೆ. ಇವೆಲ್ಲ ಇದ್ದರೂ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಸರ್ಕಾರ ಶಿಫಾರಸ್ಸು ಮಾಡುವ ಸೋಂಕಿತರಿಗೆ ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 8500, ವೆಂಟಿಲೇಟರ್ ಇರುವ ವಾರ್ಡ್ ಗೆ 10 ಸಾವಿರ ಜತೆಗೆ ವೈಯಕ್ತಿಕ ವಾರ್ಡ್ ಗೆ ಶೇ.25 ರಷ್ಟು ಹೆಚ್ಚುವರಿ ಶುಲ್ಕ ನಿಗದಿಪಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗೆ ನೇರ ದಾಖಲಾಗುವ ರೋಗಿಗಳಿಗೆ 25 ಸಾವಿರ ನಿಗದಿ ಮಾಡಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜನ ಈ ಹಣವನ್ನು ಎಲ್ಲಿಂದ ತರಬೇಕು? ಸರಕಾರ ಅವರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ.

ಕೋವಿಡ್ ವಿಚಾರದಲ್ಲಿ ಸರ್ಕಾರ ಯಾವ ಕಾರಣಕ್ಕೆ ಬಡವರು, ಶ್ರೀಮಂತರು ಎಂಬ ಬೇಧ ಭಾವ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರೇನಾದರೂ ಈ ರೋಗ ತಂದಿದ್ದರಾ? ಅವರಿಗೇಕೆ ಶಿಕ್ಷೆ?ಹೊರ ದೇಶಗಳಿಂದ ಬಂದವರನ್ನು ಸರಿಯಾಗಿ ನಿಯಂತ್ರಿಸದೆ, ತನ್ನ ವೈಫಲ್ಯಗಳಿಂದ ಜನರಿಗೆ ಸೋಂಕು ಹರಡಿರುವ ಸರಕಾರವೇ ಈಗ ಪ್ರತಿಯೊಬ್ಬ ಸೋಂಕಿತರಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.

ದೇಶದ ಜನರು, ಉದ್ಯಮಿಗಳು, ಕೈಗಾರಿಕೆಗಳು, ಸಂಸದರು ಪಿಎಂ ಕೇರ್ ನಿಧಿಗೆ ಹಣ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಸರ್ಕಾರದ ಬಳಿ ಹಣ ಇದೆ. ಹೀಗಾಗಿ ಅವರ ತಪ್ಪಿನಿಂದ ಹಬ್ಬಿರುವ ಸೋಂಕಿಗೆ ಅವರೇ ಉಚಿತ ಚಿಕಿತ್ಸೆ ನೀಡಲಿ.

ಕುಮಾರಕೃಪಾ ಅತಿಥಿ ಗೃಹದಲ್ಲಿ ಜನಪ್ರತಿನಿಧಿಗಳು, ಹಿರಿಯವಾಧಿಕಾರಿಗಳಿಗೆ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಾಮಾನ್ಯ ಜನರಿಗೂ ಅವರಂತೆಯೇ ವ್ಯವಸ್ಥೆ ಕಲ್ಪಿಸಬೇಕು.

ಬೀದಿಗಿಳಿದು ಹೋರಾಟ:

ನಮ್ಮ ಜನರ ರಕ್ಷಣೆಗೆ ಈಗ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಬೀದಿಗಿಳಿದು ಪ್ರತಿಭಟಿಸುತ್ತೇವೆ. ಇದೇ 29 ರಂದು ಹೋರಾಟ ಮಾಡುತ್ತೇವೆ.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸರ್ಕಾರ ಘೋಷಿಸಿದ ಪರಿಹಾರ ಇನ್ನು ತಲುಪಿಲ್ಲ. ಸರ್ಕಾರ ಕೇಳಿರುವ ದಾಖಲೆ ಒದಗಿಸಲು ಜನರಿಂದ ಸಾಧ್ಯವಾಗುತ್ತಿಲ್ಲ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಪರದಾಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಹಾಗೂ ಅವರ ಕುಂದು ಕೊರತೆಗೆ ಧ್ವನಿಯಾಗಲು ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ನಮ್ಮ ಪಕ್ಷದಿಂದ ವಿಶೇಷ ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ. ವೃತ್ತಿಪರ ಚಾಲಕರ ನೇತೃತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು.

ಇನ್ನು ಶಿಕ್ಷಣ ವಿಚಾರಕ್ಕೆ ಬಂದರೆ, ಪೋಷಕರು ತಮ್ಮ ಮಕ್ಕಳ ಭವಿಷ್ಯ ವಿಚಾರದಲ್ಲಿ ಬಹಳ ಚಿಂತಿತರಾಗಿದ್ದಾರೆ. ಕೆಲವರಿಗೆ ಆನ್ ಲೈನ್ ತರಗತಿ, ಮತ್ತೆ ಕೆಲವರಿಗೆ ಇಲ್ಲ. ಸರಕಾರ ಒಂದು ಸಾರಿ ತೆಗೆದುಕೊಂಡ ನಿರ್ಧಾರ ಮರುಕ್ಷಣ ಬದಲಾಗಿ ಹೋಗುತ್ತದೆ. ಯಾವುದೇ ಯೋಜನೆಯಾಗಲಿ, ಚಿಂತನೆಯಾಗಲಿ ಇಲ್ಲವೇ ಇಲ್ಲ.

ಬಡವರು ತಮ್ಮ ಕಷ್ಟಕ್ಕೆ ನಿವೇಶನ ಮಾರಿದರೆ ಅದಕ್ಕೂ ಜಿಎಸ್ ಟಿ ಕಟ್ಟಬೇಕಂತೆ. ಇಂತಹ ಪದ್ಧತಿ ಎಲ್ಲಾದರೂ ಇದೆಯಾ? ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇನ್ನು ಉದ್ಯೋಗ ಇಲ್ಲದೆ ನಿರುದ್ಯೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಈ ಎಲ್ಲ ವಿಚಾರವಾಗಿ ನಾವು ಹೋರಾಟ ಮಾಡಲಿದ್ದೇವೆ.

ಸೈನಿಕರಿಗೆ ಗೌರವ:

ಚೀನಾ ಜತೆ ಸಂಘರ್ಷ ವಿಚಾರದಲ್ಲೂ ದೇಶದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವ ವೀರ ಯೋಧರಿಗೆ ಗೌರವ ಸಲ್ಲಿಸಲು ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೂ ಮೌನಾಚಾರಣೆ ಮಾಡಲಾಗುವುದು. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ನಮ್ಮ ಯೋಧರಿಗೆ ಗೌರವ ಸಲ್ಲಿಸಲಾಗುವುದು.
ನಮ್ಮ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ನಿನ್ನೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರಾದ್ಯಂತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಎದುರು ಪ್ರತಿಭಟನೆ: ಎಚ್ಡಿಡಿ ಎಚ್ಚರಿಕೆ

ಬೆಂಗಳೂರು: ಜೆಎಎಸ್ ಕಾರ್ಯಕರ್ತನಿಗೆ ರಾಜಕೀಯ ದ್ವೇಷದಿಂದ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡರು ಇದೇ 29 ರಂದು ಸಿಎಂ ಗೃಹ ಕಚೇರಿ ಕೃಷ್ಣ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ಪೇಟೆಯ ಜೆಡಿಎಸ್ ಮುಖಂಡರೊಬ್ಬರಿಗೆ ಸೇರಿದ ಸ್ಟೋನ್‌ ಕ್ರಷರ್ ಗೆ ಎಲ್ಲಾ ಇಲಾಖೆಯ ಅನುಮತಿ ದೊರೆತಿದೆ. ಅಲ್ಲದೆ ಕಾನೂನು ಬದ್ದವಾಗಿಯೂ ಇದೆ. ರಾಜಕೀಯ ವೈಷಮ್ಯದಿಂದ ಸಚಿವ ನಾರಾಯಣಗೌಡರು ದ್ವೇಷ ಸಾಧಿಸಿ ಕ್ರಷರ್ ನಿಲ್ಲಿಸಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಿಎಂ ಸೇರಿದಂತೆ ಹಲವು ಮಂತ್ರಿಗಳಿಗೆ ನ್ಯಾಯ ಕೊಡಿಸುವಂತೆ ಗೌಡರು ವಿನಂತಿಸಿದ್ರು.

ಇಷ್ಟೇಲ್ಲಾ ಅದ್ರೂ ಈವರೆಗೆ ನ್ಯಾಯ ದೊರೆತಿಲ್ಲ. ಇದರಿಂದಾಗಿ ಇದೇ ತಿಂಗಳ 29 ರವರೆಗೆ ಗಡುವು ನೀಡಿದ್ದು, ಅಷ್ಟರೊಳಗೆ ನ್ಯಾಯ ಸಿಗದಿದ್ದರೆ ನ್ಯಾಯಕ್ಕಾಗಿ ಒತ್ತಯಿಸಿ 29 ರಂದು ಸಿಎಂ ಗೃಹ ಕಚೇರಿ ಕೃಷ್ಣ ಮುಂದೆ ಧರಣಿ ನಡೆಸಲಾಗುವುದೆಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಕೈಗಾರಿಕಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿರುವ ಕೈಗಾರಿಕಾ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

ಬೆಂಗಳೂರು ಜೂನ್‌ 25: ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಿಸುವ ಮೂಲಕ ಮೂರು ವರ್ಷ ಅಥವಾ ವಾಣಿಜ್ಯ ಉತ್ಪಾದನೆ ಪ್ರಾರಂಭದವರೆಗೂ ಬೇರೆ ಅನುಮತಿಗಳನ್ನು ಪಡೆಯುವುದಕ್ಕೆ ಕಾಲಾವಕಾಶ ನೀಡುವ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮದ ತಿದ್ದುಪಡಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಕೈಗಾರಿಕಾ ಸ್ನೇಹೀ ರಾಜ್ಯವನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ಹಲವಾರು ಕ್ರಮಗಳನ್ನು ಸರಳೀಕರಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ 2002ಕ್ಕೆ ತಿದ್ದುಪಡಿಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮತಿಯನ್ನು ನೀಡಲಾಗಿದೆ. ಇದಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪನವರು ಹಾಗೂ ಇನ್ನಿತರೆ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಕವಾದ ನಿರ್ಣಯವಾಗಿದೆ. ಇನ್ನು ಮುಂದೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವ ಕೈಗಾರಿಕೋದ್ಯಮಿಗಳು ತಮ್ಮ ಯೋಜನೆಯನ್ನು ರಾಜ್ಯದಲ್ಲಿರುವ ಎಸ್‌.ಹೆಚ್‌.ಎಲ್.ಸಿ.ಸಿ/ಎಸ್‌.ಎಲ್‌.ಎಸ್‌.ಡಬ್ಯೂ.ಸಿ.ಸಿ/ಡಿ.ಎಲ್‌.ಎಸ್‌.ಡಬ್ಲೂ.ಸಿ.ಸಿ ಸಮಿತಿಗಳಿಂದ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕು. ನಂತರ ಈ ಅನುಮತಿಯ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಕಟ್ಟಡ ಕಾಮಗಾರಿ, ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಪ್ರಾರಂಭಿಸಬಹುದಾಗಿದೆ. ಮೂರು ವರ್ಷಗಳು ಅಥವಾ ತಮ್ಮ ವಾಣಿಜ್ಯ ಉತ್ಪಾದನೆ ಪ್ರಾರಂಭ ಮಾಡುವ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆಯುವುದು ಅಗತ್ಯವಾಗಿದೆ. ಅಲ್ಲದೆ, ಯಾವುದೇ ಕಾನೂನು ಅಥವಾ ನಿಯಮಗಳನ್ನು ಉಲ್ಲಂಘಿಸದೇ ಇರುವ ಬಗ್ಗೆ ಸ್ವಯಂಧೃಢೀಕರಣ ಮಾಡುವುದು ಕಡ್ಡಾವಾಗಿದೆ ಎಂದು ಸಚಿವರು ವಿವರಿಸಿದರು.

ದೇಶದಲ್ಲಿ ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಸ್ಥಾಪನೆ ಮತ್ತು ಕಾರ್ಯಾಚರಣೆಯ ಸೌಲಭ್ಯ) ಅನುಕೂಲಕ್ಕಾಗಿ ಇಂತಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನು ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗಲಿದೆ. ನಮ್ಮ ಇಲಾಖೆಯ ವತಿಯಿಂದ ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳ ಮೇಲ್ಕಂಡ ಅಧಿನಿಯಮಗಳನ್ನು ಅಧ್ಯಯನ ಮಾಡಿದ್ದು, ವಿವಿಧ ಇಲಾಖೆಗಳೊಂದಿಗೆ ರಾಜ್ಯದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ, 2002 ತಿದ್ದುಪಡಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ ಎಂದು ಹೇಳಿದರು.

ಕೈಗಾರಿಕೋದ್ಯಮಿಗಳು ಉತ್ಪಾದನೆ ಮಾಡುವ ಪೂರ್ವದಲ್ಲಿ ಸಂಬಂಧಪಟ್ಟ ಅಗತ್ಯ ಅನುಮತಿ ಹಾಗೂ ಅನುಮೋದನೆಗಳನ್ನು ಪಡೆದು ಕೈಗಾರಿಕೆಗಳನ್ನು ಪ್ರಾರಂಭಿಸುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಪಾಲಿಸದೇ ಇರುವ ಕೈಗಾರಿಕೆಗಳಿಗೆ ದಂಡ ವಿಧಿಸುವ ಅವಕಾಶವನ್ನೂ ಈ ಕಾಯ್ದೆಯಲ್ಲಿ ನೀಡಲಾಗಿದೆ.

ಈ ಕ್ರಾಂತಿಕಾರಕ ತಿದ್ದುಪಡಿಯನ್ನು ಸುಗ್ರೀವಾಜ್ಞೇ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಹೆಜ್ಜೆಯ ಮೂಲಕ ನಾವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕೈಗಾರಿಕೋದ್ಯಮಿಗಳಿಗೆ ಉದ್ಯಮ ಸ್ನೇಹಿ ರಾಜ್ಯದ ಸೂಚನೆಯನ್ನು ನೀಡಿದ್ದೇವೆ ಎಂದು ತಿಳಿಸಿದರು.