Live-ಆರ್‌ಎಸ್‌ಎಸ್ ವಿಜಯ ದಶಮಿ ನೇರಪ್ರಸಾರ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಸ್ಥಾಪನಾ ದಿನವಾದ ಇಂದು ವಿಜಯದಶಮಿ ಉತ್ಸವ
ಯುಗಾಬ್ದ 5123 ಆಚರಿಸಲಾಯಿತು. ಉತ್ತರ ಪ್ರದೇಶದ ನಾಗಪುರದ ಸ್ಮೃತಿ ಮಂದಿರ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಆರ್‌ಎಸ್‌ಎಸ್ ಸರ ಸಂಘಚಾಲಕ ಡಾ.ಮೋಹನ್ ಭಾಗವತ್ ಮಾತನಾಡಿದರು.

ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತರ ವಿಜಯದಶಮಿ ಭಾಷಣದ ಮುಖ್ಯ ಅಂಶಗಳು

ಸ್ವಾತಂತ್ರ್ಯ ಸಂಗ್ರಾಮ:

ಹಲವಾರು ಜಾತಿ ಸಮುದಾಯಗಳಿಗೆ ಸೇರಿದ, ವಿವಿಧ ಪ್ರದೇಶಗಳಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ.
ಇರುಳು ಕಳೆದು ಹಗಲು ಆಗುವುದರೊಳಗಾಗಿ ನಮಗೆ ಸ್ವಾತಂತ್ರ್ಯ್ರ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ವಿಧಾನಗಳು ಅಂತಿಮವಾಗಿ ಸ್ವಾತಂತ್ರ್ಯದ ಗುರಿ ಸಾಧಿಸುವಲ್ಲಿ ಪರ್ಯವಸನಗೊಂಡವು.

ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶ ವಿಭಜನೆಯ ಗಾಯದ ಗುರುತು ಉಳಿದುಹೋಗಿದೆ. ಭಾರತದ ಏಕತೆ ಮತ್ತು ಸಮಗ್ರತೆಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ನಮ್ಮ ಇಡೀ ಸಮಾಜ, ಮುಖ್ಯವಾಗಿ ತರುಣ ಜನಾಂಗವು, ಈ ಚರಿತ್ರೆಯನ್ನು ಗಮನಿಸಿ, ಅರ್ಥೈಸಿ ನೆನೆಪಿಟ್ಟುಕೊಳ್ಳಬೇಕಾಗಿದೆ.

ಸಾಮಾಜಿಕ ಸಾಮರಸ್ಯ:

ಸಮಾನತೆಗೆ ಬದ್ಧವಾದ ಮತ್ತು ತಾರತಮ್ಯರಹಿತ ಸಮಾಜವು ದೇಶದ ಏಕತೆ ಮತ್ತು ಸಮಗ್ರತೆಗೆ ಒಂದು ಪೂರ್ವಭಾವೀ ಅಗತ್ಯವಾಗಿದೆ. ಸಂಘದ ಸ್ವಯಂಸೇವಕರು ಇಂಥಹ ಸಮಾಜದತ್ತ ಕಾರ್ಯತತ್ಪರರಾಗಿದ್ದಾರೆ.
ಭಾರತದ ಐಕ್ಯತೆ ಮತ್ತು ಸಮಗ್ರತೆಯ ಮೂಲಕ ಮಾನವರೆಲ್ಲರಿಗೂ ಸ್ವಾತಂತ್ರ್ಯವನ್ನು ಒದಗಿಸುವುದೇ ಅನಾದಿಕಾಲದಿಂದಲೂ ಭಾರತೀಯ ಜೀವನದ ಮುಖ್ಯ ಅಂಶವಾಗಿದೆ. ಇಲ್ಲಿಯ ಜನರು ಈ ಗುರಿಗಾಗಿ ಅಕ್ಷರಶಃ ನೆತ್ತರನ್ನು ಬೆವರಾಗಿಸಿದ್ದಾರೆ.

ಭಾರತದ ಪ್ರಗತಿ ಮತ್ತು ಅದಕ್ಕೆ ದಕ್ಕಬೇಕಾದ ಮಾನ್ಯತೆಗಳು ಪ್ರಪಂಚದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಕವಾಗಿವೆ. ಈ ಹಿತಾಸಕ್ತಿಗಳು ಹಲವಾರು ದೇಶಗಳಲ್ಲಿ ಪ್ರಭಾವಿಯಾಗಿವೆ. ಸನಾತನ ಮೌಲ್ಯಗಳು ಭಾರತದಲ್ಲಿ ಪ್ರತಿಷ್ಠಾಪಿತವಾಗುವುದರೊಂದಿಗೆ ಸ್ವಾರ್ಥೀ ಶಕ್ತಿಗಳ ದುರ್ವರ್ತನೆಗಳು ಕೊನೆಗೊಳ್ಳುತ್ತವೆ.
ಭಾರತವು ಧಾರ್ಮಿಕ ದೃಷ್ಟಿಕೋನದಿಂದ ಸಮುದಾಯಗಳನ್ನು ಪ್ರಭಾವಿಸಲಿದ್ದು ಜಗತ್ತಿನ ಸಮತೋಲನವನ್ನು ಪುನಃ ತರುವ, ಸಹಕಾರ ಪ್ರವೃತ್ತಿಯನ್ನು ಉತ್ತೇಜಿಸುವ ಮತ್ತು ಹರ್ಷದ ವಾತಾವರಣವನ್ನು ನಿರ್ಮಾಣಮಾಡುವ ಸಾಮರ್ಥ್ಯ ಹೊಂದಿದೆ.

ಪ್ರಪಂಚದಲ್ಲಿ ಭಾರತದ ಬಗ್ಗೆ ಗೊಂದಲ ಸೃಷ್ಟಿಸುವ ಮತ್ತು ಭಾರತೀಯರನ್ನು ಹಾದಿತಪ್ಪಿಸುವ ಪ್ರಯತ್ನಗಳನ್ನು ಅಪಪ್ರಚಾರದ ಮೂಲಕ ಮಾಡಲಾಗುತ್ತಿದೆ. ಬಹಿರಂಗವಾಗಿ ಮತ್ತು ಗೌಪ್ಯವಾಗಿ ಹಲವಾರು ಸಮಾಜವಿರೋಧೀ ಹಿತಾಸಕ್ತಿಗಳು ಒಳ ಒಪ್ಪಂದಗಳೊಂದಿಗೆ ಸಕ್ರಿಯವಾಗಿವೆ.
ಕಾಲ-ಕಾಲಕ್ಕೆ ಭಾರತ ವಿರೋಧೀ ಹಿತಾಸಕ್ತಿಗಳು ಉದ್ದೇಶ ಬದಲು ಮಾಡಿಕೊಳ್ಳದೇ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾ ಜನ ಸಮುದಾಯಗಳನ್ನು ರುಪಯೋಗಪಡಿಸಿಕೊಳ್ಳುತ್ತಾ ಪರಿಸ್ಥಿತಿಯನ್ನು ಉದ್ರಿಕ್ತಗೊಳಿಸುತ್ತಿದ್ದಾರೆ. ಈ ರೀತಿಯ ಹಲವು ಪ್ರವೃತ್ತಿಗಳು / ಯೋಜನೆಗಳು ಇತ್ತೀಚೆಗೆ ಬಯಲಾಗಿವೆ.
ಮೋಸದ ಮತ್ತು ಕುತಂತ್ರದ ಯೋಜನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸಮಾಜವು ಬಲಿಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಸ್ವಾತಂತ್ರ್ಯ ಹಾಗೂ ನೈತಿಕತೆ:

ಹೊಸ ತಂತ್ರಜ್ಞಾನಾಧಾರಿತ ಸರ್ಕಾರೀ ನಿಯಂತ್ರಣಕ್ಕೊಳಪಡದ ಬಿಟ್ ಕಾಯಿನ್ ರೂಪದ ಹಣವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಂಭವಗಳು ಕಂಡುಬರುತ್ತಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
ಮಾಧ್ಯಮ ಮತ್ತು ಸಿನಿಮಾ ರಂಗದಲ್ಲಿ ಓ.ಟಿ.ಟಿ (ಓವರ್ ದಿ ಏರ್ – ಅಥವಾ ಅಂತರ್ಜಾಲ ಪ್ರಸರಣ ) ವೇದಿಕೆಗಳು ಬಂದಿದ್ದು ವಿವೇಚನಾರಹಿತ ವೀಕ್ಷಣೆ ಸಾಧ್ಯವಾಗಿದೆ. ಸರ್ಕಾರವು ಇದರ ಬಗ್ಗೆ ಕಾನೂನು ರಚಿಸಬೇಕಾಗಿದೆ.
ಕರೋನಾ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಶಿಕ್ಷಣವು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು ಈ ವಿಚಾರದಲ್ಲಿ ವ್ಯಾವಹಾರಿಕ ವಿವೇಚನೆ ಬೇಕಾಗಿದೆ. ಸರ್ಕಾರವು ಈ ವಿಚಾರಗಳ ಬಗ್ಗೆ ಕಾನೂನು ಮತ್ತು ಮಾರ್ಗದರ್ಶೀ ಸೂತ್ರಗಳನ್ನು ರಚಿಸಬೇಕಾಗಿದೆ.

ನಮಗೆ ಯಾವುದೇ ಭಾಷೆಯ ಬಗ್ಗೆಯೂ ದ್ವೇಷವಿಲ್ಲ. ಆದರೆ, ಸಾಧ್ಯವಾದಷ್ಟರ ಮಟ್ಟಿಗೆ ಮಾತೃಭಾಷೆ ಬಳಕೆಯನ್ನು ಪ್ರಯತ್ನಿಸಬಹುದೇ? ಹಸ್ತಾಕ್ಷರವನ್ನು ಮಾತೃಭಾಷೆಯಲ್ಲಿ ಮಾಡುವ ಪ್ರಯತ್ನ ಮಾಡಬಹುದೇ? ಸ್ವ ಭಾಷಾ,ಸ್ವ ಭೂಷ,ಸ್ವ ಭಜನ್,ಸ್ವ ಭೋಜನ, ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ.

ಕುಟುಂಬ ಪ್ರಬೋಧನ್:

ಸರಿ-ತಪ್ಪುಗಳನ್ನೂ, ನೀತಿ-ಅನೀತಿಗಳನ್ನೂ ನಿಖರವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕಾಗಿದೆ. ಸಾಮಾಜಿಕವಾಗಿ ಹಲವಾರು ಧಾರ್ಮಿಕ/ಸಾಮಾಜಿಕ ನೇತಾರರು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಟುಂಬಗಳಲ್ಲಿ ಸಹ ಈ ಚರ್ಚೆಯನ್ನು ಗಮನಿಸಿ ಸರಿ-ತಪ್ಪುಗಳ ಬಗ್ಗೆ ಕುಟುಂಬದ ಸದಸ್ಯರೆಲ್ಲರಲ್ಲಿ ಒಮ್ಮತ ಮೂಡುವ ಅಗತ್ಯ ಇದೆ.
ಕೋರೋನ ವಿರುದ್ಧ ಸಮರ

ಕರೋನಾದ ಎರಡನೇ ಅಲೆ ಅನಾಹುತಕಾರಿಯಾಗಿತ್ತು. ಆದರೆ, ಸಮಾಜ ಅದನ್ನು ಯಶಸ್ವಿಯಾಗಿ ಎದುರಿಸಿತು. ಈಗ ನಾವು ಬರಬಹುದಾದ ಮೂರನೇ ಅಲೆಯನ್ನು ನಿರ್ವಹಿಸಲು ಸಜ್ಜಾಗುತ್ತಿದ್ದೇವೆ.ಸಂಘದ ಸ್ವಯಂಸೇವಕರು ಮತ್ತು ಇತರ ಸ್ವಯಂಸೇವ ಸಂಸ್ಠೆಗಳು ಕರೋನಾ ವಿರುದ್ಧದ ದೇಶದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ
ಸರ್ಕಾರ ಮತ್ತು ಸಮಾಜದ ಪ್ರಯತ್ನಗಳಿಂದ ಕರೋನಾ ಅಲೆಗಳಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳುವ ಹಾದಿಯಲ್ಲಿ ಭಾರತ ಇದೆ.ಕೋವಿಡ್ ಸಾಂಕ್ರಾಮಿಕವು ನಮ್ಮ ಸ್ವ ಅಥವಾ ಸ್ವಾವಲಂಬನೆಯನ್ನು ಪುನಃ ಪಡೆಯಲು ಒಂದು ಅವಕಾಶವನ್ನೂ ಒದಗಿಸಿ ಕೊಟ್ಟಿದೆ.
ಆಯುರ್ವೇದದಂಥ ದೇಶೀಯ ವೈದ್ಯಕೀಯ ಪದ್ದತಿಗಳ ಮಹತ್ವವನ್ನು ಗಮನಿಸಿ, ಆರೋಗ್ಯ ವ್ಯವಸ್ಥೆಯನ್ನು ಪುನರ್ನಿಮಾಣ ಮಾಡುವ ಅಗತ್ಯ ಕೋವಿಡ್ ನಂತರದಲ್ಲಿ ನಮ್ಮ ಮುಂದೆ ಇದೆ.

ಆರೋಗ್ಯ: ಭಾರತೀಯ ದೃಷ್ಟಿಕೋನ

ಆಹಾರದ ಸಮತೋಲನತೆ, ದೈಹಿಕ ಮತ್ತುಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ವಿಶ್ರಾಂತಿ ಗಳು ಭಾರತೀಯ ದೃಷ್ಟಿಕೋನದಲ್ಲಿ ಸ್ವಾಸ್ಥ್ಯಕ್ಕೆ ಮೂಲ ಸೂತ್ರಗಳಾಗಿವೆ.
ಕೋವಿಡ್ ನಂತರದ ಸಂದರ್ಭದಲ್ಲಿ ಪರಿಸರ ಸ್ನೇಹೀ, ಸಂತುಲಿತ ಆರೋಗ್ಯದ ಪರಿಕಲ್ಪನೆಯನ್ನು ನಾವು ಪ್ರೋತ್ಸಾಹಿಸಬೇಕಾಗಿದೆ.
ಸಂಘದ ಸ್ವಯಂಸೇವಕರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಜಲಸಂರಕ್ಷಣೆ, ಸಸ್ಯಗಳ ಅಭಿವೃದ್ಧಿ ಮತ್ತು ಪ್ಲಾಸ್ಟಿಕ್ ಬಳಕೆಯ ತ್ಯಜಿಸುವಿಕೆಯ ಬಗ್ಗೆ ಜನಾಭಿಪ್ರಾಯ ರೂಪಿಸುತ್ತಿದ್ದಾರೆ.

ಅರ್ಥಶಾಸ್ತ್ರ:

ಧಾರ್ಮಿಕ ನೆಲೆಯಲ್ಲಿ ಭಾರತದ ನೇತೃತ್ವವನ್ನು ಜಗತ್ತು ನಿರೀಕ್ಷಿಸುತ್ತಿದೆ.
ಧರ್ಮ, ಸಂಪನ್ಮೂಲಗಳು ನ್ಯಾಸವೆಂದು ಪರಿಗಣನೆ, ನಿಯಂತ್ರಿತ ಉಪಯೋಗ, ಎಲ್ಲರಿಗೂ ಉದ್ಯೋಗ, ಎಲ್ಲಾ ಹಿತಾಸಕ್ತಿಗಳ ಪರಿಗಣನೆ – ಇವು ಭಾರತೀಯ ದೃಷ್ಟಿಕೋನದ ಕೇಂದ್ರ ಬಿಂದು.ದೇಶೀಯ ಸಾಮಾಜಿಕ-ಆರ್ಥಿಕ ಮಾದರಿಯನ್ನು ನಮ್ಮ ‘ ಸ್ವ’ದ ಅರ್ಥೈಸುವಿಕೆಯ ಮೇಲೆ ಮಾಡಬೇಕಿದೆ.ಸಂಪನ್ಮೂಲಗಳ ಕೊರತೆಯನ್ನು ಉಂಟುಮಾಡುವ ಜನಸಂಖ್ಯೆಯ ಬೆಳವಣಿಗೆ ಮತ್ತು ಅಸಮತೋಲನವನ್ನು 2015 ರ ಅಖಿಲ ಭಾರತೀಯ ಕಾರ್ಯಕಾರೀ ಮಂಡಳಿಯ ನಿರ್ಣಯವು ಉದ್ದೇಶಿಸಿತ್ತು.

ಜನಸಂಖ್ಯೆ:

ಜನಸಂಖ್ಯಾ ಅಸಮತೋಲನವು ಸರ್ಕಾರಗಳನ್ನು ತುಷ್ಟೀಕರಣ ನೀತಿಯೆಡೆ ತಳ್ಳುತ್ತದೆ ಎಂಬುದನ್ನೂ, ಅದರಿಂದ ಕೆಲವು ಸಮುದಾಯಗಳು ತೊಂದರೆಗೆ ಒಳಗಾಗುತ್ತವೆ ಎಂಬುದನ್ನೂ ಬೆಂಗಾಲದ ಹಿಂದೂಗಳ ಉದಾಹರಣೆಯ ಮೂಲಕ ನೋಡಬಹುದಾಗಿದೆ.

ಭಯೋತ್ಪಾದನೆ:

ಇಸ್ಲಾಂ ಹೆಸರಿನಲ್ಲಿ ಅಸಹಿಷ್ಣುತೆ, ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸುತ್ತಿರುವ ತಾಲೀಬಾನ್ ಗೆ ಪಾಕಿಸ್ತಾನ, ಟರ್ಕಿ ಮತ್ತು ಚೀನಾ ದೇಶಗಳು ಒಂದಾಗಿ ಬೆಂಬಲ ನೀಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಾಗರೀಕರು ಗುರುತಿಸಿ ಕೊಲ್ಲುತ್ತಿರುವ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು ಅವರಿಗೆ ಇಡೀ ದೇಶದ ಬೆಂಬಲ ಬೇಕಾಗಿದೆ.

ಹಿಂದೂ ದೇವಾಲಯಗಳು:

ಹಿಂದೂ ದೇವಾಲಯಗಳ ಈಗಿನ ಸ್ಥಿತಿ ಸಮಾಜದ ಚಿಂತೆಗೆ ಕಾರಣವಾಗಿದೆ.ಹಲವಾರು ದೇವಾಲಯಗಳು, ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇದ್ದು ಅನೇಕ ರೀತಿಯ ಪಕ್ಷಪಾತಗಳಿಗೆ ಒಳಗಾಗಿವೆ.ದೇವಾಲಯಗಳ ಸ್ವತ್ತುಗಳು ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಆಗುತ್ತಿದ್ದು, ಧಾರ್ಮಿಕ ಶ್ರದ್ಧೆ ಇಲ್ಲದ ವ್ಯಕ್ತಿಗಳನ್ನು ದೇವಾಲಯಗಳ ಆಡಳಿತಮಂಡಳಿಗೆ ನೇಮಕಮಾಡಲಾಗುತ್ತಿದೆ. ಇವುಗಳು ನಿಲ್ಲಬೇಕು.
ಹಿಂದೂ ದೇವಾಲಯಗಳು ಸಾಮಾಜಿಕ-ಸಾಂಸ್ಕೃತಿಕ ಕೇಂದ್ರಗಳಾಗಿ ಪುನಃ ಪರಿಗಣಿಸಲ್ಪಟ್ಟು ಅವುಗಳ ಆಡಳಿತವನ್ನು ಭಕ್ತರಿಗೆ ಒಪ್ಪಿಸಬೇಕು.

ಏಕತೆ:

ಈಗಿನ ಸವಾಲಿನ ಪರಿಸ್ಥಿತಿಯಲ್ಲಿ, ಭಾರತದ ಸನಾತನ ರಾಷ್ಟ್ರದ ಸಾರ್ವಕಾಲೀನ ಸ್ವಭಾವದ ಬಗ್ಗೆ ಅರಿವು ಬೇಕಾಗಿದೆ.
ನಂಬಿಕೆ, ಪೂಜಾವಿಧಾನ ಮತ್ತಿತರ ವೈವಿಧ್ಯಗಳಿರುವ ಭಾರತೀಯ ಸಮಾಜವು ನಿರಂತರವಾದ ಒಂದೇ ನಾಗರೀಕತೆ, ಸಂಸ್ಕೃತಿ ಮತ್ತು ಚರಿತ್ರೆಯನ್ನು ಹೊಂದಿದೆ.
ವಿದೇಶೀ ಆಕ್ರಮಣಕಾರರು ಹಲವು ಮತಗಳನ್ನು ಭಾರತಕ್ಕೆ ತಂದರೂ, ಭಾರತೀಯರೆಲ್ಲರ ಪೂರ್ವಜರು ಒಬ್ಬರೇ ಆಗಿದ್ದಾರೆ.

ಸಂಘಟಿತ ಹಿಂದೂ ಸಮಾಜ:

ಸಂಘಟಿತ ಹಿಂದೂ ಸಮಾಜವು ಮಾತ್ರ ಭಾರತ ವಿರೋಧೀ ಶಕ್ತಿಗಳಿಂದ ರಕ್ಷಣೆ ಒದಗಿಸಬಲ್ಲುದು
ಜಾಗೃತ, ಒಗ್ಗೂಡಿದ, ಬಲಿಷ್ಠ ಮತ್ತು ಚಲನಶೀಲ ಸಮಾಜವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿದೆ.
ನಮ್ಮನ್ನು ಒಂದುಮಾಡುವ ಪರಂಪರೆ, ನಮ್ಮ ಹೃದಯದಲ್ಲಿ ಪೂರ್ವಜರ ಸಾಧನೆಯಿಂದ ಉದಯಿಸುವ ಏಕತಾಭಾವ, ಮಾತೃಭೂಮಿಯ ಬಗ್ಗೆ ಶ್ರದ್ಧೆ ಇವುಗಳೇ ಹಿಂದೂ ಅಭಿವ್ಯಕ್ತಿಗೆ ಆಧಾರ.‌ಈ ಏಕತಾಭಾವವನ್ನು ಪ್ರಸರಿಸುವ ಪ್ರಕ್ರಿಯೆಯು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು. ಇದೇ ನಮ್ಮೆಲ್ಲರ ಗುರಿ. ಈ ಗುರಿಸಾಧನೆಗಾಗಿಯೇ, ಸಂಘವು ಕಳೆದ 96 ವರ್ಷಗಳಿಂದ ದುಡಿಯುತ್ತಿದೆ.

Video-ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ನೇರ ವಾರ್ನಿಂಗ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಬಿಡದಿ: “ಸಿದ್ದರಾಮಯ್ಯನವರೇ ಇಷ್ಟು ದಿನ ನನ್ನ ಬಗ್ಗೆ ಮತ್ತು ನನ್ನ ಪಕ್ಷದ ಬಗ್ಗೆ ಮಾತನಾಡಿದ್ದು ಸಾಕು. ಎಲ್ಲವನ್ನೂ ಇಲ್ಲಿಗೆ ನಿಲ್ಲಿಸಿ. ನೀವು ನಿಲ್ಲಿಸದಿದ್ದರೆ ನಾನೂ ಮಾತನಾಡುವುದನ್ನು ಮುಂದುವರೆಸಬೇಕಾಗುತ್ತದೆ ಎಂದು
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೇರ ಎಚ್ಚರಿಕೆ ನೀಡಿದರು.

ಬಿಡದಿ ತೋಟದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಸಿದ್ದರಾಮಯ್ಯ ಅವರು ಮೊದಲು ನಮ್ಮ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಆಮೇಲೆ ನಾನು ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದರು.

ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ ಡಿಕೆ ಅವರು ಹೇಳಿದ ಮಾತುಗಳು ಹೀಗಿವೆ;

ಸಿದ್ದರಾಮಯ್ಯ ವಿಶ್ವಾಸಕ್ಕೆ ಅರ್ಹವಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಸರಣಿ ಹೇಳಿಕೆಗಳನ್ನು ನೀಡುತ್ತಿರುವುದು ಒಂದೆಡೆ ಆಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಕುತಂತ್ರದಿಂದ ಅವರೇ ಮತ್ತಷ್ಟು ಮುಳುಗಿಸುತ್ತಿದ್ದಾರೆ.

ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಲು ನೇರ ಕಾರಣ ಸಿದ್ದರಾಮಯ್ಯ ಅವರೇ. ಅವರೇ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು.

ಸಮ್ಮಿಶ್ರ ಸರಕಾರ ಬಂದ ಒಂದೇ ತಿಂಗಳಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ (ಸಿದ್ದವನ) ಕೂತುಕೊಂಡು ಸಿದ್ದ ಸೂತ್ರ ರೂಪಿಸಿದ್ದು ಯಾರು? ತಮ್ಮ ಬೆಂಬಲಿಗರನ್ನು ಅಲ್ಲಿಗೆ ಕರೆಸಿಕೊಂಡು ಇನ್ನೊಂದು ವರ್ಷ ಈ ಸರಕಾರ ಇರುತ್ತೆ, ಆಮೇಲೆ ನೋಡೋಣ ಅಂದಿದ್ದು ಯಾರು? ಒಂದು ವಿಡಿಯೋ ವೈರಲ್ ಆಗಿತ್ತಲ್ಲ ಸಿದ್ದರಾಮಯ್ಯನವರೇ.

ನನ್ನ ಸರಕಾರವನ್ನು ತೆಗೆಯಲು ಸಿದ್ಧಸೂತ್ರ ಸಿದ್ಧಪಡಿಸಿದ್ದೇ ನೀವು. ಸರಕಾರ ಇನ್ನೂ ಟೇಕಾಫ್ ಆಗುವ ಮುನ್ನವೇ ಅದನ್ನು ಉರುಳಿಸಲು ಪ್ಲಾನ್ ಮಾಡಿದ ನೀವು ಈಗ ನನ್ನ ಬಗ್ಗೆ ಹೇಳಿಕೆ ನೀಡುತ್ತಿದ್ದೀರಿ. ಇದಕ್ಕಿಂತ ದೊಡ್ಡ ವಿಕೃತಿ ಇನ್ನೇನಿದೆ?

ನಿಮ್ಮ ಶಾಸಕರ ವಿಚಾರಲ್ಲಿ ನಾನು ಯಾವ ರೀತಿ ನಡೆದುಕೊಂಡೆ ಎಂಬುದು ನನಗೆ ಮಾತ್ರ ಗೊತ್ತು. ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ ನನಗೆ ನೀವು ಅಧಿಕೃತ ನಿವಾಸ ಬಿಟ್ಟುಕೊಡಲಿಲ್ಲ. ಜೆ ಪಿ ನಗರದಿಂದ ದಿನವೂ ನಾನು ಓಡಾಡುವುದು ಜಾರಿಗೆ ತೊಂದರೆ ಆಗುತ್ತಿತ್ತು. ಆ ಕಾರಣಕ್ಕೆ ನಾನು ವೆಸ್ಟ್ ಎಂಡ್ ಹೋಟೆಲ್ ಗೆ ಮಧ್ಯಾಹ್ನದ ಊಟಕ್ಕೆ ಹೋಗಬೇಕಾಯಿತು. ಅಲ್ಲಿ ನಾನು ಮೋಜು ಮಾಸ್ತಿ ಮಾಡಲು ಹೋಗಲಿಲ್ಲ. ಉಳಿಯಲೂ ಇಲ್ಲ. ಬೆಳಗ್ಗೆ 9 ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 12 ಗಂಟೆವರೆಗೂ ಕೃಷ್ಣ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೆ. ಎಲ್ಲಕ್ಕೂ ದಾಖಲೆ ಇರುತ್ತದೆ, ಪರಿಶೀಲನೆ ಮಾಡಿಕೊಳ್ಳಿ ಸಿದ್ದರಾಮಯ್ಯನವರೇ.

ನೀವೆಲ್ಲ ಸೇರಿ ಸರಕಾರವನ್ನು ಕೆಡವಲು ಸ್ಕೆಚ್ ಹಾಕಿದಾಗ ನಾನು ಅಮೆರಿಕದಲ್ಲಿ ಇದ್ದೆ, ನಿಜ. ಅಂದು ಆದಿಚನಗಿರಿ ಶ್ರೀಗಳು ಅಮೆರಿಕದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಸ್ವಾಮೀಜಿ ಅವರು ಕರೆದ ಕಾರಣ ನಾನು ಅಮೆರಿಕಕ್ಕೆ ಹೋಗಬೇಕಾಯಿತು.

ಆಗ ನಾನು ಅಮೆರಿಕದಲ್ಲಿ ಇದ್ದ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ಬೇಗ ವಾಪಸ್ ಬನ್ನಿ ಕುಮಾರಸ್ವಾಮಿ. ಇಲ್ಲಿ ಆಪರೇಷನ್ ಕಮಲ ನಡೀತಿದೆ ಎಂದು ಕರೆ ಮಾಡಿದ್ದೆ ಎಂದು ಹೇಳಿದ್ದೀರಿ. ಯಾರಿಗೆ ಕರೆ ಮಾಡಿದ್ದೀರಿ? ಯಾವ ನಂಬರ್ ಗೆ ಕರೆ ಮಾಡಿದ್ದೀರಿ? ಸ್ವಲ್ಪ ಆ ನಂಬರ್ ಇದ್ದರೆ ಕೊಡುತ್ತೀರಾ?

ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ. ಇಂತ ಹಸಿಸುಳ್ಳು ಯಾಕೆ ಹೇಳುತ್ತೀರಿ? ನಿಮ್ಮ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದವರು ಮಾತ್ರ ಕರೆ ಮಾಡಿ, ಇಲ್ಲಿ ಅಂತದ್ದೇನು ಆಗುತ್ತಿಲ್ಲ ಕುಮಾರಸ್ವಾಮಿ ಅವರೇ. ನೀವು ಆರಾಮವಾಗಿ ಬನ್ನಿ ಎಂದು ಹೇಳಿದ್ದರು. ಆದರೆ, ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಅಷ್ಟೂ ಮಾಹಿತಿ ನಂಗೆ ಇರಲ್ಲ ಎನ್ನುವಷ್ಟು ಹುಂಬತನವೇ ನಿಮಗೆ?

ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ? ಯಾವಾಗ ಅಧಿಕೃತ ನಿವಾಸ ಸಿಗದೇ ಇದ್ದಾಗಲೇ ಇವರು ನನ್ನ ಸರಕಾರ ತೆಗಿತಾರೆ ಎನ್ನುವ ಅನುಮಾನ ನನಗಿತ್ತು. ಅದಕ್ಕೆ ನಾನು ಸರಕಾರದ ಕಾರನ್ನು ಕೂಡ ಬಳಕೆ ಮಾಡಿಕೊಳ್ಳಲಿಲ್ಲ. ಕೊನೆಪಕ್ಷ ಭತ್ಯೆಗಳನ್ನು ಕೂಡ ಪಡೆಯಲಿಲ್ಲ.

ನಿಮ್ಮ ಶಾಸಕರು ನನ್ನ ಬಳಿ ಬಂದು ಪತ್ರಗಳನ್ನು ಹೇಗೆ ಕೊಡುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಒಬ್ಬ ಮುಖ್ಯಮಂತ್ರಿ ಮುಂದೆ ಮನವಿ ಪತ್ರಗಳನ್ನು ಬಿಸಾಡುತ್ತಿದ್ದರು. ಅದಕ್ಕೆಲ್ಲಾ ಕುಮ್ಮಕು ನೀಡಿದ್ದು ಯಾರು?

ಎಂಟಿಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು. ಅಂತ ವ್ಯಕ್ತಿ ಬಿಜೆಪಿಗೆ ಹೋಗಿದ್ದು ಹೇಗೆ? ನಿಮಗೆ ಏನೂ ಗೊತ್ತಿಲ್ಲವೆ ಸಿದ್ದರಾಮಯ್ಯ?

ನಮ್ಮ ಪಕ್ಷದ ಶಾಸಕರು 3 ಜನ ಪಕ್ಷ ಬಿಟ್ಟು ಹೋದರು ನಿಜ. ಅದಕ್ಕೆ ಮೂಲ ಕಾರಣರು, ಅದಕ್ಕೆ ಸಿದ್ಧಸೂತ್ರಗಳನ್ನು ರೂಪಿಸಿದವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು.

ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು. ಬಡವರಿಗೆ ಸುಲುಭವಾಗಿ ನಾನು ಸಿಎಂ ಆಗಿ ಎಲ್ಲರಿಗೂ ಸಿಗುತ್ತಿದ್ದೆ. ಆದರೆ, ನೀವು ಸಿಎಂ ಆಗಿದ್ದಾಗ ಸಂಜೆ 6 ಗಂಟೆ ಮೇಲೆ ಸಿಕ್ತಾ ಇರಲಿಲ್ಲ. ಎಲ್ಲಿ ಹೋಗ್ತಾ ಇದ್ರಿ ಸಿದ್ದರಾಮಯ್ಯನವರೇ. ಗಢತ್ತಾಗಿ ಊಟ ಮಾಡಿ ನಿದ್ದೆ ಮಾಡ್ಕೊಂಡು ಇರ್ತಿದ್ರಾ, ಹೇಗೆ?

ರಮೇಶ್ ಜಾರಕಿಹೊಳಿಗೂ ನನಗೂ ಭಿನ್ನಮತ ಇತ್ತಾ? ಅದು ನಿಮ್ಮ ಪಕ್ಷದಲ್ಲಿ ಶುರುವಾದ ಸಮಸ್ಯೆ. ಒಮ್ಮೆ ಶಾಸಕಾಂಗ ಪಕ್ಷ ಸಭೆ ಕರೆದು ಸರಿ ಮಾಡಬಹುದಿತ್ತು. ಹಾಗೆ ನೀವು ಮಾಡಲಿಲ್ಲ. ಸಮನ್ವಯ ಸಮತಿ ಅಧ್ಯಕ್ಷ ರಾಗಿ ನೀವು ಮಾಡಿದ್ದೇನು ಸಿದ್ದರಾಮಯ್ಯ?

ನಾನು ಜನಪರ ಕೆಲಸ ಮಾಡಲಿಲ್ಲ ಅಂತ ಹೇಳಿದ್ದೀರಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 109 ಕೋಟಿ ಕೊಟ್ಟಿದ್ದೇನೆ. ಬಡವರ ಬಗ್ಗೆ ಕಾಳಜಿ ಇಲ್ಲದಿದ್ದರೆ ಇಷ್ಟು ಮಾಡುತ್ತಿದ್ದೇನೆ.

ನಮ್ಮ ಪಕ್ಷದ ಕೋಟದಲ್ಲೆ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದಾಗ ನೀವು ಮಾಡಿದ್ದೇನು ಎನ್ನುವುದು ನನಗೆ ಗೊತ್ತಿದೆ. ಅವರಿಬ್ಬರಿಗೆ ಅಡ್ಡಿ ಮಾಡಿದವರು ಯಾರು?

ಧರ್ಮಸಿಂಗ್ ಅವರ ಸರಕಾರ ಬೀಳಲು ಕಾರಣ ಯಾರು? ಆ ಸರಕಾರದಲ್ಲಿ ಡಿಸಿಎಂ ಆಗಿದ್ದುಕೊಂಡು ರಾಜಕೀಯ ಬದುಕು ಕೊಟ್ಟ ಮಾತೃಪಕ್ಷಕ್ಕೆ ಹಳ್ಳ ಅಗೆಯುವುದು ಎಷ್ಟು ಸರಿ. ಆಗ ನನಗೆ ಪಕ್ಷ ಉಳಿಸುವುದು ಮುಖ್ಯವಾಗಿತ್ತು. ನಿಮ್ಮ ನಡವಳಿಕೆಯಿಂದಲೆ ಆ ಸರ್ಕಾರ ಹೋಯ್ತು ಸಿದ್ದರಾಮಯ್ಯನವರೇ.

50 ವರ್ಷದ ರಾಜಕಾರಣದಲ್ಲಿ ತುಂಬಾ ಜನರನ್ನು ನೋಡಿದ್ದೇನೆ ಎಂದಿದ್ದೀರಿ. ಕುಮಾರಸ್ವಾಮಿ ಯಾವಾಗ ರಾಜಕಾರಣಕ್ಕೆ ಬಂದಿದ್ದಾರೆ ಎಂದು ಕೇಳಿದ್ದೀರಿ. ನಾನು ರಾಜಕಾರಣದಲ್ಲಿ ಎಂದು ಸಹ ನಿಮ್ಮ ಹಂಗಿನಲ್ಲಿ ಬಂದಿಲ್ಲ. ದೇವೆಗೌಡರು ಸಾತನೂರಿನಲ್ಲಿ ಚುನಾವಣೆಗೆ ನಿಂತಾಗ ನಾನು ನೇತೃತ್ವ ವಹಿಸಿದ್ದೆ ಎಂಬುದನ್ನು ನೆನಪು ಮಾಡಿಕೊಳ್ಳಿ.

ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ನವರೆ, ನೀವೇ ಜಾತ್ಯಾತೀತ ಜನತಾದಳ ಅಧ್ಯಕ್ಷರಾಗಿದ್ದಿರಿ. 1999 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಸೋತು ಅನುಗ್ರಹಕ್ಕೆ ಬಂದು ಕಣ್ಣೀರು ಹಾಕಿದ್ದು ನೀವು ಮರೆತಿರಾ? ಆಗ ನಿಮಗೆ ದೇವೆಗೌಡರು ಧೈರ್ಯ ತುಂಬಿದ್ದು ಮರೆತಿರಾ?

ಯಾವ ಜೆಡಿಎಸ್ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದೆರೋ ನೀವು ಅದೇ ಪಕ್ಷವನ್ನು ಮುಗಿಸಲು ಹೋದಿರಿ. ನೀವು ಅಂತ ಹೀನ ಕೃತ್ಯ ನಡೆಸುತ್ತಿದ್ದಾಗ ನಾನು ಸುಮ್ಮನಿರಲು ಸಾಧ್ಯವೇ? ಅವಾಗ ನಿಮ್ಮನ್ನ ಪಕ್ಷದಿಂದ ಹೊರ ಹಾಕಿದಾಗ ಪಕ್ಷದಲ್ಲಿದ್ದ 58 ಜನ ಶಾಸಕರಲ್ಲಿ ಎಷ್ಟು ಜನ ನಿಮ್ಮ ಜತೆ ಬಂದರು?

ಜೆಡಿಎಸ್ ಮುಗಿಸಲು ಸಮಾವೇಶಗಳನ್ನು ಮಾಡಿದಂತೆ ಈಗ ಕಾಂಗ್ರೆಸ್ ಮುಗಿಸಲು ಈಗ ಅದೇ ಕುತಂತ್ರ ಮಾಡುತ್ತಿದ್ದೀರಿ. ಜಾತಿಗಣತಿ ವಿಚಾರದಲ್ಲಿ ನನ್ನನ್ನು ಡಬಲ್ ಗೇಮ್ ಅಂತೀರಾ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಇಡಲು ಹೊರಟಿದ್ದೀರಿ.

ಕಾಂಗ್ರೆಸ್ ಪಕ್ಷ ತಗೆಯೋದು ನೀವೇ ಸಿದ್ದರಾಮಯ್ಯ ಅವರೇ. ಒಬಿಸಿ ಸಮಾವೇಶ ಮಾಡಲು ಇವಾಗ ಹೊರಟಿದ್ದೀರಿ ನೀವು. ಮಂಡ್ಯದಲ್ಲಿ ಜೆಡಿಎಸ್ ವೀಕ್ ಎಂಬ ಹೇಳಿಕೆ ನೀಡಿದ್ದಿರಿ. ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ಮುಂದೆ ನಮ್ಮನ್ನು ಕೆಣಕಬೇಡಿ. ನನ್ನ ಪಾಡಿಗೆ ನಾನು ಇರ್ತಿನಿ. ನನ್ನ ತಂಟೆಗೆ ಬರಬೇಡಿ.

ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೀನಿ. ನಿಮ್ಮ ಪಕ್ಷ ಮುಗಿಸೋಕೆ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡ್ತಾ ಇದ್ದಾರೆ. ಬಿಎಸ್ವೈ ಸಿಎಂ ಆಗಿದ್ದಾಗ ನಾನು ಒಂದೇ ಬಾರಿ ಭೇಟಿ ಮಾಡಿದ್ದು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ ಸಿದ್ದರಾಮಯ್ಯ. ಎಲ್ಲಾ ವಿಚಾರವೂ ಗೊತ್ತಿದೆ. ಇದು ನಾನು ಹೇಳ್ತಿಲ್ಲ. ನಿಮ್ಮ ಪಕ್ಕದಲ್ಲಿ ಇದ್ದವ್ರೆ ಹೇಳಿರುವ ಮಾತು.

ಕಾಂಗ್ರೆಸ್ ನೆರಳಲ್ಲಿ ಇದ್ದೀರಾ, ಸರಿಯಾಗಿ ಪಕ್ಷ ಕಟ್ಟಿ. ಇದೀಗಾ ಡಿಕೆ ಶಿವಕುಮಾರ್ ಪಕ್ಷ ಕಟ್ಟೋಕೆ ಹೋಗಿದ್ದಾರೆ. ನಿನ್ನೆ ಒಂದು ವಿಡಿಯೋ ಬಂದಿದೆ. ವಿಡಿಯೋ ನೀವೇ ಬಿಟ್ರಾ ಅಥವಾ ಅವರೇ ಹೇಳಿದ್ರಾ ಗೊತ್ತಿಲ್ಲ. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ನೀವು? ಇವಾಗ ಹೇಳಿರೋರು ಯಾರು? ನಿಮ್ಮ ಪಟಾಲಂಗಳೇ ಅಲ್ಲವೆ?

2013ರಲ್ಲಿ ಹೇಳಿದ್ದಿರಿ. ಇದೇ ನನ್ನ ಕೊನೆ ಚುನಾವಣೆ ಅಂತ. ನಿಮಗೆ ಇನ್ನೂ ಆಸೆ ಹೋಗಿಲ್ಲ. ಸಿಎಂ ಆಗಬೇಕು ಅಂತಾ ಇದ್ದೀರಾ. ಜನರಿಗೆ ಒಳ್ಳೇದು ಮಾಡೋ ಆಲೋಚನೆ ನಿಮಗೆ ಇಲ್ಲ.

Video-ವಿ.ಎಸ್. ಉಗ್ರಪ್ಪ, ಸಲೀಂ ನಡುವಿನ ಸಂಭಾಷಣೆಗೂ ನನಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಪಕ್ಷದಲ್ಲಿ ಶಿಸ್ತು ಕಾಪಾಡಲು ಯಾವ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಭಾಷಣೆಗೂ (ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ನಡುವೆ), ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲೀಂ, ಉಗ್ರಪ್ಪ ಮಾತನಾಡಿಲ್ಲ ಎಂದು ನಾನು ಹೇಳಲು ಹೋಗುವುದಿಲ್ಲ. ನೀವು ತೋರಿಸಿರುವುದು ನಿಜ. ಆದರೆ ಅದು ಇಬ್ಬರ ನಡುವಣ ಆಂತರಿಕ ಮಾತುಕತೆ. ಅಧಿಕೃತ ಹೇಳಿಕೆ ಅಲ್ಲ. ಈ ಬಗ್ಗೆ ಉಗ್ರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.ನಾನು ಮಾಧ್ಯಮಗಳ ತಪ್ಪು ಎಂದು ಯಾಕೆ ಹೇಳಲಿ? ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅದೇ ರೀತಿ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿರುವುದದ್ದನ್ನೂ ತೋರಿಸಿದ್ದೀರಿ. ಅದೇ ರೀತಿ ಈಗ ತೋರಿಸಿದ್ದೀರಿ. ಆದರೆ ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬುದು ನನ್ನ ಸ್ಪಷ್ಟವಾದ ಮಾತು ಎಂದರು.

ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಕಲ್ಲು ಎಸೆಯುವವರು, ಮೊಟ್ಟೆ ಹೊಡೆಯುವವರು, ಧಿಕ್ಕಾರ ಕೂಗುವವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಗಳವೂ ಇಲ್ಲ. ಗುಂಪುಗಳೂ ಇಲ್ಲ. ಈಗಿನ ಮಾತುಕತೆಗೆ ಸಂಬಂಧಿಸಿದಂತೆ ಕೆ. ರೆಹಮಾನ್ ಖಾನ್ ಅವರ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿಯು ಅದರ ನಿರ್ಧಾರ ಕೈಗೊಳ್ಳುತ್ತದೆ. ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಗೃಹ ಸಚಿವರು ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಸುಮೋಟೋ ಕೇಸ್ ದಾಖಲಿಸಿದರೂ ಒಳ್ಳೆಯದೇ.ಈಗಿನ ಮಾತುಕತೆಯಿಂದ ಪಕ್ಷಕ್ಕೆ ಖಂಡಿತ ಮುಜುಗರ ಆಗಿದೆ. ನಾನು ಇಲ್ಲ ಎಂದು ಹೇಳುವುದಿಲ್ಲ ಎಂದ್ರು.

ಕಾಂಗ್ರೆಸ್ ನಲ್ಲಿ ಹಿಂದೆ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರ ವಿರುದ್ಧ ಪಿತೂರಿ ಮಾಡಿದ್ದವರೇ ಈಗ ನನ್ನ ವಿರುದ್ದವೂ ಒಳಸಂಚು ಮಾಡುತ್ತಿದ್ದಾರೆ ಎಂಬ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಅದನ್ನು ತಿಳಿದುಕೊಂಡ ನಂತರ ಆ ಬಗ್ಗೆ ಮಾತನಾಡುತ್ತೇನೆ. ನಾನು ಯಾವುದೇ ಗುಂಪುಗಾರಿಕೆಗೆ ಸೇರಿಲ್ಲ. ಅದನ್ನು ಮಾಡುವುದೂ ಇಲ್ಲ. ಪೋಷಿಸುವುದೂ ಇಲ್ಲ. ಗುಂಪುಗಾರಿಕೆ ಮಾಡಲು ನಾನು ಹುಟ್ಟಿಲ್ಲ. ನನಗೆ ಪಕ್ಷ ಮುಖ್ಯ.ಪರ್ಸೆಂಟೇಜ್ ಬಗ್ಗೆ ನಮ್ಮ ಪಕ್ಷದಲ್ಲಿ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಬಿಜೆಪಿ ನಾಯಕರ 30 % ಕಮಿಷನ್ ಬಗ್ಗೆ ಎಚ್. ವಿಶ್ವನಾಥ್ ಅವರು ಮಾತನಾಡಿದ್ದಾರೆ.ಮಾಜಿ ಸಚಿವರೊಬ್ಬರು ಬೆಡ್ ರೂಮಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗ ಅವರ ಬಳಿ ಹೋಗಿ ಯಾಕೆ ಪ್ರಶ್ನೆ ಮಾಡಲಿಲ್ಲ? ನನ್ನ ವಿರುದ್ಧ ಪಕ್ಷದೊಳಗೆ ಯಾವ ಷಡ್ಯಂತ್ರವೂ ಇಲ್ಲ. ಅದಕ್ಕೆ ನಾನು ಹೆದರುವುದೂ ಇಲ್ಲ. ನಾನು ಹಳ್ಳಿಯಿಂದ ಬಂದವನಾಗಿದ್ದು, ನನಗೆ ನನ್ನದೇ ಆದ ನಡೆ, ನುಡಿ, ದೇಹಭಾಷೆ, ವ್ಯಕ್ತಿತ್ವ ಹಾಗೂ ಯಶಸ್ಸು ಇದೆ. ಕೆಲವೊಂದು ಗುಣಗಳು ಬದಲಾಗುವುದಿಲ್ಲ ಎಂದ್ರು.

ನನ್ನ ಕೆಲಸಕ್ಕೆ ತಕ್ಕಡಿ ಹಿಡಿಯುವುದು ಮತದಾರ ಹಾಗೂ ಜನ ಮಾತ್ರ. ಪಕ್ಷದ ಅಧ್ಯಕ್ಷರಾಗಿದ್ದಾಗ, ಸರಕಾರಗಳು ಇದ್ದಾಗ ಅವುಗಳ ತಕ್ಕಡಿ ತೂಕ ಏನು ಎಂದು ಗೊತ್ತಾಗುವುದು ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದ ನಂತರವಷ್ಟೇ. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಇದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಈ ಬಿಜೆಪಿ ಸರ್ಕಾರ ಹುಟ್ಟಿರುವುದು ಹಾಗೂ ಬದುಕಿರುವುದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರದಲ್ಲಿ ಈ ಸರಕಾರವನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದ್ರು.

ಕೇಂದ್ರದ ಪ್ರಮಾಣೀಕರಣದ ನಂತರ ಮಕ್ಕಳಿಗೆ ಕೋವಿಡ್ ಲಸಿಕೆ: ಸಿ.ಎಂ

ಉಡುಪಿ, ಅಕ್ಟೋಬರ್ 13: ಮಕ್ಕಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ಪ್ರಮಾಣೀಕರಣದ ನಿರೀಕ್ಷೆಯಲ್ಲಿದ್ದೇವೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಉಡುಪಿಯಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳು‌ ಮತ್ತು ಹದಿ ಹರೆಯದವರಿಗೆ ಕೋವಿಡ್ ಲಸಿಕೆ ಪರೀಕ್ಷೆ ಕೊನೆಯ ಹಂತ ತಲುಪಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಲಸಿಕೆ ಹಾಕಲಾಗುವುದು ಎಂದರು.

ಈಗಾಗಲೇ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮುಂದಿದ್ದು, ಸುಮಾರು 82 ರಷ್ಟು ಮೊದಲನೇ ಡೋಸ್ ಹಾಗೂ ಶೇ. 37 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಶೇ 90 ರಷ್ಟು ಮೊದಲನೇ ಹಾಗೂ ಶೇ 75 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು.

ಮತಾಂತರ ನಿಷೇಧ ಕಾಯ್ದೆ:
ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಚಿಂತನೆ ಮಾಡಿದ್ದು, ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಕಾಯ್ದೆಯ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಆದಷ್ಟು ಬೇಗನೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಳೆಹಾನಿ ಪ್ರದೇಶಕ್ಕೆ ಸಿದ್ದು ಭೇಟಿ: ರೈತರಿಂದ ಅಹವಾಲು ಸ್ವೀಕಾರ

ಕಲಬುರಗಿ: ಮಳೆಯಿಂದಾಗಿ ಹಾನಿಗೊಳಗಾಗಿರುವ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತೊಗರಿ ಹೊಲಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ನಂತರ ರೈತರಿಂದ ಅಹವಾಲು ಆಲಿಸಿದರು.

ಹಾನಿ ವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಲಬುರಗಿ ಜಿಲ್ಲೆಯಲ್ಲಿ 2019 ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ, ಬೆಳೆ ಹಾನಿಯಾದವರಿಗೆ ಇನ್ನೂ ಸರ್ಕಾರ ಪರಿಹಾರ ನೀಡಿಲ್ಲ. ಪ್ರವಾಹ ಬಂದ ಸಂದರ್ಭದಲ್ಲಿ ನಾನು ಜಿಲ್ಲೆಗೆ ಭೇಟಿನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಈ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ರು.

ಸೇಡಂ ತಾಲೂಕಿನ ಗಡಿಕೇಶ್ವಾರದಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದೆ, ಆದರೂ ಬಿಜೆಪಿಯ ಒಬ್ಬ ಜನಪ್ರತಿನಿಧಿಯಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿನೀಡಿಲ್ಲ. ನಾನು ನಿನ್ನೆ ಗಡಿಕೇಶ್ವಾರ ಗ್ರಾಮಕ್ಕೆ ಹೋಗಿದ್ದೆ, ಗ್ರಾಮದ 75% ಜನ ಜೀವಭಯದಿಂದ ಮನೆ ಖಾಲಿ ಮಾಡಿ ಗುಳೆ ಹೋಗಿದ್ದಾರೆ. ಅವರಿಗೆ ಉಳಿಯಲು ನೆಲೆಯಿಲ್ಲ. ಇದನ್ನು ನೋಡಿ ನಾನು ಖುದ್ದಾಗಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕರೆ ಮಾಡಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದೆ, ಆಗ ಅವರು ನಾಳೆ ಬೆಳಿಗ್ಗೆಯಿಂದಲೇ ಜನರಿಗೆ ಆಹಾರ, ತಾತ್ಕಾಲಿಕ ಶೆಡ್ ಸೇರಿದಂತೆ ಪುನರ್ವಸತಿ ಕಾರ್ಯ ಆರಂಭಿಸುತ್ತೇವೆ ಎಂದಿದ್ದಾರೆ. ಜನರಿಗೆ ರಕ್ಷಣೆ ಕೊಡಬೇಕಾದವರು ಯಾರು? ಸರ್ಕಾರ ಇರುವುದು ಯಾಕೆ ಹಾಗಾದರೆ ಎಂದು ಪ್ರಶ್ನಿಸಿದರು.

ಕಲಬುರಗಿಯ ಜಿಲ್ಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿನೀಡುವಂತೆ ನಮ್ಮ ಪಕ್ಷದ ಶರಣ ಪ್ರಕಾಶ್ ಅವರು ಕೂರು ಬಾರಿ ಹೇಳಿದ್ದಾರೆ, ಆದರೂ ಅವರು ಭೇಟಿಮಾಡಿಲ್ಲ. ಅಧಿಕಾರಿಗಳಿಗೆ ಈ ರೀತಿಯ ಉದಾಸೀನತೆ ಇದ್ದರೆ ಸರ್ಕಾರ ಜನಪರವಾದ, ಪಾರದರ್ಶಕ ಆಡಳಿತ ಕೊಡಲು ಸಾಧ್ಯವೇ? ಪರಿಹಾರ ಕಾರ್ಯ ಕೈಗೊಳ್ಳಲು ಕೊರೊನಾದಿಂದ ದುಡ್ಡಿಲ್ಲ ಎಂಬ ಕುಂಟು ನೆಪ ಹೇಳುವ ಸರ್ಕಾರ ಕೊರೊನಾಗಾಗಿ ಖರ್ಚು ಮಾಡಿರುವುದು ಹೆಚ್ಚೆಂದರೆ 6000 ಕೋಟಿ ರೂಪಾಯಿ. ನಮ್ಮ ರಾಜ್ಯದ ಬಜೆಟ್ ಗಾತ್ರ ಎರಡೂವರೆ ಲಕ್ಷ ಕೋಟಿ. ಕೇಂದ್ರ ಸರ್ಕಾರ ಕೊರೊನಾ ನಿರ್ವಹಣೆಗೆ ಅಲ್ಪಸ್ವಲ್ಪ ಸಹಾಯ ಮಾಡಿದೆ. ಆದರೂ ದುಡ್ಡಿಲ್ಲ ಅನ್ನೋದೊಂದೇ ಕಾರಣ ಕೊಡುತ್ತಾ ಕೂತರೆ ಹೇಗೆ? ಈ ಸರ್ಕಾರ ಜನ ಕಷ್ಟ ಕೇಳುವ ಬದಲು ದುಡ್ಡು ಹೊಡೆಯುವುದರಲ್ಲಿ ಬ್ಯುಸಿಯಾಗಿದೆ. ಉಸ್ತುವಾರಿ ಸಚಿವ ನಿರಾಣಿಗೆ ಸಕ್ಕರೆ ಕಾರ್ಖಾನೆ ನೋಡಿಕೊಳ್ಳೋದೆ ದೊಡ್ಡ ಕಷ್ಟದ ಕೆಲಸವಾಗುದೆ, ಇನ್ನೂ ಕಲಬುರ್ಗಿಗೆ ಬಂದು ಜನರ ಕಷ್ಟ ಕೇಳೋಕೆ ಎಲ್ಲಿ ಸಮಯವಿದೆ?

ಜಿ.ಎಸ್.ಟಿ ಕೌನ್ಸಿಲ್ ನಲ್ಲಾದ ಒಪ್ಪಂದದ ಪ್ರಕಾರ ರಾಜ್ಯಗಳಿಗೆ ಜೆ.ಎಸ್.ಟಿ ಇಂದಾದ ನಷ್ಟವನ್ನು ತುಂಬಿಕೊಡಬೇಕಾದುದ್ದು ಕೇಂದ್ರ ಸರ್ಕಾರದ ಕರ್ತವ್ಯ. ಕಳೆದ ವರ್ಷವೂ ನಮ್ಮ ಪಾಲಿನ ಜಿ.ಎಸ್.ಟಿ ಪರಿಹಾರದ ಹಣ ಕೊಟ್ಟಿಲ್ಲ, ಈ ವರ್ಷವೂ ಕೊಟ್ಟಿಲ್ಲ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯದಿಂದ ಸಂಗ್ರಹವಾದ ತೆರಿಗೆಯಲ್ಲಿ ನಮಗೆ ಬರುತ್ತಿದ್ದ ಪಾಲು 4.71℅ ಇತ್ತು, 15ನೇ ಹಣಕಾಸು ಆಯೋಗದಲ್ಲಿ ಈ ಪಾಲು 3.64% ಗೆ ಇಳಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ಸುಮಾರು 20,000 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗುತ್ತಿದೆ. ಕೇಂದ್ರದಿಂದ ಬರುತ್ತಿದ್ದ ಇರತೆ ಅನುದಾನದಲ್ಲೂ ಅರ್ಧದಷ್ಟು ಕಡಿಮೆಯಾಗಿದೆ. ಎಲ್ಲವೂ ಸೇರಿ ರಾಜ್ಯಕ್ಕೆ ಒಟ್ಟು 40,000 ರೂಪಾಯಿ ಅನುದಾನ ಕಡಿತಗೊಂಡಿದೆ. 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ 5495 ರೂಪಾಯಿ ವಿಶೇಷ ಅನುದಾನವನ್ನು ನಿರ್ಮಾಲಾ ಸೀತಾರಾಮನ್ ಅವರು ತಿರಸ್ಕರಿಸಿದರು. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದ್ರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ತೊರೆದು ಬಿಜೆಪಿ ಸೇರಿದವರು ಒಟ್ಟು 17 ಜನ. ಇದರಲ್ಲಿ ಜೆಡಿ(ಎಸ್) ನ ಶಾಸಕರು 3 ಜನರಿದ್ದಾರೆ. ಅವರನ್ನು ನಾನೇ ಕಳಿಸಿದ್ದಾ? ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪುಟಗೋಸಿ ಹುದ್ದೆ ಎಂದು ಕರೆದಿರುವ ಕುಮಾರಸ್ವಾಮಿ ಹೇಳಿಕೆ ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ. ಒಬ್ಬ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೊಡುವ ಗೌರವ ಅವರ ಮಾತಿನಿಂದಲೇ ತಿಳಿಯುತ್ತಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅವರ ತಂದೆ ಇದ್ದ ಹುದ್ದೆ ಪಟಗೋಸೆ ಹುದ್ದೆಯಾ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದ್ರು.

ವಿಶ್ವಾಸ ಮತ ಗೊತ್ತುವಳಿ ವೇಳೆ ಕುಮಾರಸ್ವಾಮಿ ಅವರು ಏನೆಂದು ಭಾಷಣ ಮಾಡಿದ್ರು? ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ, ಅಧಿಕಾರ ಮತ್ತು ಹಣದಾಸೆಗೆ ನಮ್ಮ ಶಾಸಕರನ್ನು ಬಿಜೆಪಿ ಖರೀದಿ ಮಾಡಿದ್ದರಿಂದ ನನ್ನ ಸರ್ಕಾರ ಹೋಗಿದೆ ಎಂದು ಹೇಳಿದ್ದರೆ ಹೊರತು ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳುಹಿಸಿದರು ಎಂದು ಹೇಳಿದ್ರಾ? ನಾನು ಅವರನ್ನು ಕಳಿಸಿದ್ರೆ ಅವತ್ತೇ ಹೇಳಬೇಕಿತ್ತು, ಉತ್ತರ ಕೊಡ್ತಿದ್ದೆ. ಕುಮಾರಸ್ವಾಮಿಗೆ ಎಷ್ಟು ನಾಲಿಗೆ ಇದೆ? ಈಗ ಕುಮಾರಸ್ವಾಮಿ ಮೈಸೂರಿನ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಇಂತಹ ಕೀಳು ಮಟ್ಟದ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಬೀಳುವ ಹಂತಕ್ಕೆ ಹೋದಾಗ ಕುಮಾರಸ್ವಾಮಿ ಅಮೇರಿಕ ಹೋಗಿ ಕೂತಿದ್ದು ಏಕೆ? ನಾನೇ ಫೋನ್ ಮಾಡಿ ಕುಮಾರಸ್ವಾಮಿ ಅವರೆ ಸರ್ಕಾರ ಬೀಳುವ ಹಂತಕ್ಕೆ ಹೋಗಿದೆ, ಭಾರತಕ್ಕೆ ಬನ್ನಿ ಎಂದು ಕರೆದರೆ ಇವತ್ತು ಬರ್ತೀನಿ, ನಾಳೆ ಬರ್ತೀನಿ ಎಂದು ಹೇಳುತ್ತಾ ಅಮೇರಿಕಾದಲ್ಲೇ 9 ದಿನ ಕಳೆದ್ರು.
ಮುಖ್ಯಮಂತ್ರಿಯಾದವರು ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ಕೂತು ಸರ್ಕಾರ ನಡೆಸೋದಾ? ಒಬ್ಬ ಶಾಸಕನನ್ನು, ಸಚಿವನನ್ನು ಭೇಟಿಮಾಡದೆ ಸರ್ಕಾರ ನಡೆಸೋಕಾಗುತ್ತಾ? ಈ ಕಾರಣಕ್ಕೆ ಕುಮಾರಸ್ವಾಮಿ ಅವರ ಸರ್ಕಾರ ಹೋಗಿದ್ದು. ಇದು ಹತ್ತೋ, ಹನ್ನೆರಡನೇ ಬಾರಿಯೋ ಈ ಆರೋಪವನ್ನು ಅವರು ಮಾಡಿದ್ದಾರೆ, ನನಗೂ ಪದೇ ಪದೇ ಉತ್ತರ ಕೊಟ್ಟು ಸಾಕಾಗಿದೆ. ಮತ್ತೆ ಇಂತಹಾ ಆರೋಪಗಳಿಗೆ ನಾನು ಉತ್ತರ ಕೊಡಲ್ಲ ಎಂದ್ರು.

ಯಡಿಯೂರಪ್ಪ ಅವರ ಹುಟ್ಟಿದಹಬ್ಬದ ದಿನ ಅವರನ್ನು ನಾನು ಕಡೇ ಬಾರು ಭೇಟಿಯಾದದ್ದು, ಆಮೇಲೆ ಒಂದು ದಿನವೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಒಮ್ಮೆಯಾದರೂ ಭೇಟಿಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರನ್ನು ಮೇಲಿಂದ ಮೇಲೆ ಭೇಟಿಯಾಗೋದೆ ಕುಮಾರಸ್ವಾಮಿ. ಯಡಿಯೂರಪ್ಪ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಗೃಹ ಸಚಿವ ಅಮಿತ್ ಶಾ ಬಿಜೆಪಿಯವರು, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕ, ನನ್ನ ಮಾತು ಕೇಳಿ ನರೇಂದ್ರ ಮೋದಿ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಮಾಡಿಸ್ತಾರ? ಇಂತಹಾ ಆರೋಪಕ್ಕೆ ನಗುಬಹುದು ಅಷ್ಟೆ. ನಾನು ರಾಜಕೀಯಕ್ಕಾಗಿ ನನ್ನ ಸಿದ್ಧಾಂತಗಳಿಗೆ, ನಂಬಿಕೊಂಡು ಬಂದಿರುವ ತತ್ವಗಳಿಗೆ ವಿರುದ್ಧವಾಗಿ ಒಂದು ದಿನವೂ ನಡೆದುಕೊಂಡಿಲ್ಲ. 2005 ರಲ್ಲಿ ಧರಂಸಿಂಗ್ ಅವರಿಗೆ ನೀಡಿದ್ದ ಬೆಂಬಲ ವಾಪಾಸು ಪಡೆದು ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದು ಸನ್ಯಾಸತ್ವಕ್ಕಾಗಿಯೋ ಅಥವಾ ಅಧಿಕಾರಕ್ಕಾಗಿಯೋ? ಕುಮಾರಸ್ವಾಮಿ ಅವರ ಪಕ್ಷದ ಹೆಸರಲ್ಲಿ ಜಾತ್ಯಾತೀತ ಅಂತಿದೆ, ಅಧಿಕಾರ ಬೇಕಾದಾಗ ಕೋಮುವಾದಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಳ್ತಾರೆ ಎಂದ್ರು.

ಯಡಿಯೂರಪ್ಪ, ವಿಜಯೇಂದ್ರ ಆಪ್ತರ ಮೇಲೆ ಐಟಿ ದಾಳಿ ಸಿದ್ದರಾಮಯ್ಯ ಮೂಲ ಕಾರಣ:ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಬಿಜೆಪಿಯನ್ನು ದುರ್ಬಲಗೊಳಿಸುವ ಒಳ ಉದ್ದೇಶದಿಂದ ಮಧ್ಯರಾತ್ರಿ ವೇಳೆಯಲ್ಲಿ ಪರಸ್ಪರ ಭೇಟಿ ಮಾಡಿದ್ದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರಿಗೆ ಚೆಕ್‌ʼಮೇಟ್ ಇಡುವ ಏಕೈಕ ಉದ್ದೇಶದಿಂದಲೇ ರಾಜ್ಯದಲ್ಲಿ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಆಪ್ತರ ಮನೆಗಳ ಮೇಲೆ ನಡೆದ ದಾಳಿಗೂ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ನೇರವಾಗಿಯೇ ಅವರು ತಿಳಿಸಿದರು.

ಮೈಸೂರಿನಲ್ಲಿ ಇಂದು ಬೆಳಗ್ಗೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಆದಾಯ ತೆರಿಗೆ ದಾಳಿ ಏತಕ್ಕೆ ನಡೆದಿದೆ ಎಂಬುದು ಅಲ್ಪಸ್ವಲ್ಪ ರಾಜಕೀಯ ಪ್ರಜ್ಞೆ ಇರುವವರಿಗೂ ಅರ್ಥವಾಗುತ್ತದೆ. ಯಡಿಯೂರಪ್ಪ ವೇಗಕ್ಕೆ ಬ್ರೇಕ್ ಹಾಕುವ ಏಕೈಕ ಉದ್ದೇಶದಿಂದಲೇ ಅವರೂ ಮತ್ತವರ ಪುತ್ರನ ಆಪ್ತರ ಮನೆಗಳ ಮೇಲೆ ಮೇಲಿನವರು (ಬಿಜೆಪಿ ವರಿಷ್ಠರು) ದಾಳಿ ಮಾಡಿಸಿದ್ದಾರೆ” ಎಂದರು.

ಯಾವ ಉದ್ದೇಶಕ್ಕೆ ಆದಾಯ ತೆರಿಗೆ ದಾಳಿ ನಡೆಯಿತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿಯನ್ನು ಇಂದು ಬೆಳಗ್ಗೆ ನಾನೂ ಸಹ ಮೈಸೂರು ಪತ್ರಿಕೆಯೊಂದರಲ್ಲಿ ಗಮನಿಸಿದ್ದೇನೆ. ಅವರಿಬ್ಬರ ನಡುವೆ ಏನೇನು ಗಹನ ಚರ್ಚೆ ನಡೆದಿದೆ ಎಂಬ ಅಂಶವನ್ನು ಆ ವರದಿಯಲ್ಲಿ ಬರೆಯಲಾಗಿದೆ. ಈ ವಿಷಯ ಗೊತ್ತಾಗಿಯೇ ದಾಳಿ ಮಾಡಿಸಿರಬಹುದು ಎಂದರು ಅವರು.

ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಐಟಿ ದಾಳಿ ನಡೆದಿದೆ ಎಂದು ನಾನೊಬ್ಬನೇ ಹೇಳಿದ್ದು. ಅದನ್ನು ಮತ್ತೆ ಹೇಳಲು ನನಗೇನೂ ಹಿಂಜರಿಕೆ ಇಲ್ಲ. ಕೇಂದ್ರ ಸರಕಾರಕ್ಕೂ ಎಲ್ಲ ಮಾಹಿತಿ ಇರುತ್ತದೆ. ರಾಜ್ಯದಲ್ಲೂ ಅವರದ್ದೇ ಸರಕಾರ ಇದೆ. ಇಲ್ಲೇನು ನಡೆಯುತ್ತಿದೆ ಎಂಬುದು ಅವರಿಗೂ ತಿಳಿಯುತ್ತಿದೆ. ಇವರ ಆಟಗಳನ್ನು ನೋಡಿ ಎಲ್ಲೆಲ್ಲಿ ಬಿಗಿ ಮಾಡಬೇಕು ಎಲ್ಲೆಲ್ಲ ಬಿಗಿ ಮಾಡಿದ್ದಾರಷ್ಟೇ ಎಂದು ಹೆಚ್‌ಡಿಕೆ ಮಾರ್ಮಿಕವಾಗಿ ಹೇಳಿದರು.

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನ್ ಬೇಕಾದ್ರೂ ಮಾಡ್ರಾರೆ?:

ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು. ಯಾರು ಯಾರ ಜತೆಗೆ ಬೇಕಾದೂ ಕೈ ಜೋಡಿಸಬಹುದು. ಸಿದ್ದರಾಮಯ್ಯ ಅವರಿಗೆ ಬೇಕಾದದ್ದು ಅಧಿಕಾರ ಮಾತ್ರ. ಅಧಿಕಾರ ಸಿಗುತ್ತದೆ ಎಂದಾದರೆ ಎಲ್ಲಿಗೆ ಬೇಕಾದರೂ ಹೋಗುತ್ತಾರೆ ಅವರು. ನಮ್ಮ ಪಕ್ಷದಲ್ಲಿ ಪವರ್ ಸಿಗಲ್ಲ, ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಅಂದಾಕ್ಷಣ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

23 ಮಂತ್ರಿಗಳನ್ನು ಬೀದಿಯಲ್ಲಿ ನಿಲ್ಲಿಸಿದರು:

ಕೇವಲ ಒಂದು ವಿರೋಧ ಪಕ್ಷದ ಸ್ಥಾನಕ್ಕಾಗಿ ಅವರದ್ದೇ ಪಕ್ಷದ 23 ಮಂತ್ರಿಗಳನ್ನು ಬೀದಿಯಲ್ಲಿ ನಿಲ್ಲಿಸಿದವರು ಸಿದ್ದರಾಮಯ್ಯ. ಕಳೆದ ಎರಡು ವರ್ಷದಿಂದ ವಿರೋಧ ಪಕ್ಷದ ನಾಯಕನಾಗಬೇಕು, ಗೂಟದ ಕಾರಿನಲ್ಲಿ ಕೂತು ತಿರುಗಾಡಬೇಕು ಅನ್ನುವ ದುರಾಸೆಯಿಂದ ಅಷ್ಟೂ ಮಂತ್ರಿಗಳ ರಾಜಕೀಯ ಜೀವನ ಹಾಳು ಮಾಡಿದರು. ತಮ್ಮ ಸ್ವಾರ್ಥ ರಾಜಕಾರಣದಿಂದ ಅವರೆಲ್ಲರ ಭವಿಷ್ಯಕ್ಕೆ ಕೊಳ್ಳಿ ಇಟ್ಟರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ಅವರ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಳಗೆ ಇಷ್ಟೆಲ್ಲ ಮಾಡಿ ಹೊರಗೆ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎನ್ನಲಿಕ್ಕೆ ಅವರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಹೆಚ್‌ಡಿಕೆ ಕಟುವಾಗಿ ಪ್ರಶ್ನಿಸಿದರು.

ಇವತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಕಾರಣ ಯಾರು? ಅದಕ್ಕೆ ಕೊಡುಗೆ ಕೊಟ್ಟವರು ಯಾರು? ನೀವೇ ತಾನೆ? ಅಲ್ಪಸಂಖ್ಯಾತರಿಗೆ ಇದೆಲ್ಲ ಚೆನ್ನಾಗಿ ಅರ್ಥವಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದರಲ್ಲದೆ, ಇನ್ನಾದರೂ ಕೀಳು ರಾಜಕೀಯ ಮಾಡುವುದನ್ನು ಬಿಡಿ ಎಂದು ತಾಕೀತು ಮಾಡಿದರು.

ಚಾಮುಂಡೇಶ್ವರಿಯಲ್ಲಿ ಸೋತಿದ್ದು ಯಾಕೆ?:

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಕ್ಕಾಗಿ ಅದೇ ಮಂಡ್ಯದಲ್ಲಿ ಬೆನ್ತಟ್ಟಿಕೊಂಡ ಇದೇ ಮೈಸೂರಿನ ಮಹಾನ್ ನಾಯಕರು (ಸಿದ್ದರಾಮಯ್ಯ), ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಯಾಕೆ? ಯಾರಿಂದ ಸೋತರು ಎಂಬುದು ಗೊತ್ತಿಲ್ಲವೇ? ಹಾಲಿ ಮುಖ್ಯಮಂತ್ರಿ ಆಗಿದ್ದವರು 36,000 ಮತಗಳ ಅಂತರದಲ್ಲಿ ಸೋತರೂ ಅಂದರೆ ನನ್ನದೂ ಸ್ವಲ್ಪ ಪಾತ್ರ ಇರಬೇಕಲ್ವಾ? ಇದರಲ್ಲಿ ಮುಚ್ಚುಮರೆ ಇಲ್ಲ, ನಾನು ನೇರವಾಗಿಯೇ ಹೇಳಿದ್ದೇನೆ. ಇವರು ಕಳೆದ ಚುನಾವಣೆಯಲ್ಲಿ 130ರಿಂದ 78ಕ್ಕೆ ಯಾಕೆ ಬಂದರು? ಒಮ್ಮೆ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಇದರಿಂದಲಾದರೂ ಆ ಮಹಾನ್ ನಾಯಕರು ಪಾಠ ಕಲಿಯಬೇಕು. ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಲಘುವಾಗಿ ಮಾತನಾಡಬಾರದು. ರಾಜಕೀಯ ಎಂದ ಮೇಲೆ ಏಳುಬೀಳು ಎಲ್ಲರಿಗೂ ಇದ್ದದ್ದೇ. ಅದು ಬಿಟ್ಟು ಮತ್ತೊಬ್ಬರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದ ಅವರು; ಮಂಡ್ಯದಲ್ಲಿ ನಿಖಿಲ್ ಯಾಕೆ ಸೋತರು? ಎಂದು ನಾನು ಈಗಾಗಲೇ ಹೇಳಿದ್ದೇನೆ. ರೈತಸಂಘ, ಕಾಂಗ್ರೆಸ್, ಬಿಜೆಪಿ, ಕೆಲ ಮಾಧ್ಯಮಗಳು ಸೇರಿ ʼಮ್ಯಾನೇಜ್ʼ ಮಾಡಿದ ಚುನಾವಣೆ ಅದು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಹಾಗೇ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು ಎಂದು ನಾನು ಹೇಳಿದ್ದೇನೆ. ಈ ವಿಷಯ ಮಂಡ್ಯ ಜನತೆಗೆ ಗೊತ್ತಿದೆ ಎಂದು ಅವರು ಹೇಳಿದರು.

ರಾಜಕೀಯವಾಗಿ ಬೆಳೆದು ಬಂದ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ ಎಂದು ಪದೇಪದೆ ಎಚ್ಚರಿಕೆ ನೀಡುತ್ತಿದ್ದರೂ ನಮ್ಮನ್ನು ಕೆಣಕುತ್ತಲೇ ಇದ್ದಾರೆ. ನಾವು ಉತ್ತರ ಕೊಡದೇ ಸುಮ್ಮನೆ ಇರಲಾದೀತೆ? ಅವರಿಗೆ ನಮ್ಮ ಬಗ್ಗೆ ಮಾತನಾಡಿದ್ದರೆ ತಿಂದ ಅನ್ನ ಜೀರ್ಣ ಆಗಲ್ಲ ಎಂದು ಹೆಚ್‌ಡಿಕೆ ಟೀಕಿಸಿದರು.

ಸಿದ್ದರಾಮಯ್ಯಗೆ ಪಾಠ ಕಲಿಸಲೆಂದೇ ಮುಸ್ಲಿಮರಿಗೆ ಟಿಕೆಟ್:

ಸಿಂಧಗಿ ಉಪ ಚುನಾವಣೆಯಲ್ಲಿ ಪೈಪೋಟಿ ಇರುವುದು ಬಿಜೆಪಿ-ಜೆಡಿಎಸ್ ನಡುವೆ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿ ನೆಲೆಯೇ ಇಲ್ಲ. ಯಾವತ್ತೂ ಅಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೂ ಬಂದಿಲ್ಲ. ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಅಲ್ಲಿ ಗೆಲ್ಲೋದು ಜೆಡಿಎಸ್ ಪಕ್ಷವೇ. ಹಾನಗಲ್ ಕ್ಷೇತ್ರದಲ್ಲಿಯೂ ನಮಗೆ ಉತ್ತಮ ವಾತಾವರಣವಿದೆ. ನಾವು ಎಂ.ಟೆಕ್ ಪದವೀಧರನಿಗೆ ಟಿಕೆಟ್ ನೀಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕೆ ನಾವು ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಕಳೆದ ಬಾರಿ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲೂ ಮುಸ್ಲಿಮ್ ಅಭ್ಯರ್ಥಿಗೆ ನಮ್ಮ ಪಕ್ಷ ಟಿಕೆಟ್ ನೀಡಿತ್ತು. ಟಿಕೆಟ್ ಕೊಡಲು ಈ ದೊಣ್ಣೆ ನಾಯಕನ ಅಪ್ಪಣೆ ಬೇಕಾ ನಮಗೆ? ನಾನು ಯಾರಿಗೆ ಬೇಕಾದರೂ ಟಿಕೆಟ್ ಕೊಡ್ತೇನೆ? ಕೇಳೋಕೆ ಇವರು ಯಾರು? ಬೇಕಾದರೆ ಅಲ್ಪಸಂಖ್ಯಾತರಿಗೆ ಅವರೂ ಟಿಕೆಟ್ ಕೊಡಬೇಕಿತ್ತು, ಬೇಡ ಎಂದವರು ಯಾರು? ಎಂದರು ಅವರು.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾಡಿದ್ದೇನು? ಎಷ್ಟೆಲ್ಲ ಕುತಂತ್ರ ಹೂಡಿದರು ಎಂಬುದು ನನಗೆ ಗೊತ್ತಿದೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಅಪಪ್ರಚಾರ ಮಾಡಿದ್ದನ್ನು ನಾನು ಮರೆತಿಲ್ಲ. ಜೆಡಿಎಸ್ ಬಿಜೆಪಿ ಬಿ ಟೀಮ್, ಗೆದ್ದರೆ ಬಿಜೆಪಿ ಜತೆ ಹೋಗ್ತಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿದ್ದರು. ಇವರ ಕುತಂತ್ರ ರಾಜಕಾರಣಕ್ಕೆ ಸಡ್ಡು ಹೊಡೆಯುವ ಉದ್ದೇಶದಿಂದಲೇ ನಾನು ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇನೆ. ಸಿದ್ದರಾಮಯ್ಯನಿಗೆ ಪಾಠ ಕಲಿಸುವ ಉದ್ದೇಶದಿಂದಲೇ ಹೀಗೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಜಗಳ ಒಳ್ಳೆಯದಲ್ಲ:
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗಾಗಿ ಸಚಿವರ ಮಧ್ಯೆ ನಡೆದಿರುವ ಪೈಪೋಟಿ ಒಳ್ಳೆಯದಲ್ಲ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಅವಕಾಶ ಸಿಕ್ಕಿರುವುದು ಜನರ ಕೆಲಸ ಮಾಡಲಿಕ್ಕೇ ಹೊರತು ಪರಸ್ಪರ ಕಿತ್ತಾಡಿಕೊಳ್ಳುವುದಕ್ಕಲ್ಲ. ಉಸ್ತುವಾರಿ ಸಿಗದಿದ್ದರೂ ಉತ್ತಮವಾಗಿ ಕೆಲಸ ಮಾಡಿ ತೋರಿಸಬಹುದು ಎಂದು ಎಂದು ಅವರು ಹೇಳಿದರು.