ಸಾರ್ವಜನಿಕರ ಸಹಕಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸು-ಸುರೇಶ್ ಕುಮಾರ್

ಬೆಂಗಳೂರು: ನಾಡಿನ ಮಕ್ಕಳ ಬಹುದಿನಗಳ ನಿರೀಕ್ಷೆಯಾದ ಹಾಗೂ ಕೊರೋನಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ವ್ಯತ್ಯಯವಿಲ್ಲದೇ ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ನಡೆದ ಎಸ್ಎಸ್ಎಲ್ಸಿ ಮೊದಲ ದಿನದ ಪರೀಕ್ಷೆಯ ನಂತರ ಪರೀಕ್ಷೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆ ಕೇವಲ ಶಿಕ್ಷಣ ಇಲಾಖೆಗೆ ಮಾತ್ರವೇ ಸೀಮಿತವಾಗಿಲ್ಲ. ಪರೀಕ್ಷೆಗೆ ಇಡೀ ರಾಜ್ಯ ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು, ಸುಲಲಿತವಾಗಿ ಪರೀಕ್ಷೆ ನಡೆಯುತ್ತಿರುವುದರ ಹಿಂದೆ ಇಡೀ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ಆಡಳಿತ ಯಂತ್ರದ ಸಮರ್ಪಣೆ ಇದೆ. ಕೋವಿಡ್ ಪ್ರಸರಣದ ಕಾಲಘಟ್ಟದ ಮಧ್ಯೆ ನಡೆದ ಈ ಪರೀಕ್ಷೆಗೆ ವ್ಯವಸ್ಥೆಯೊಂದಿಗೆ ಸಾರ್ವಜನಿಕರು, ಪೋಷಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಒಂದು ಸಂಘಟಿತ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.

ಇಂದು ನಡೆದ ಈ ಪರೀಕ್ಷೆಯ ಪೂರ್ವದಲ್ಲಿ ತೆಗೆದುಕೊಂಡ ಯೋಜನಾಬದ್ಧ ನಿರ್ಧಾರಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದ ವೃತ್ತಿಪರ ವ್ಯವಸ್ಥೆ ಎಷ್ಟೊಂದು ಅಚ್ಚುಕಟ್ಟಿಗೆ ನಾಂದಿಯಾಗಿದೆ ಎಂದು ಹೇಳಿದ ಸುರೇಶ್ ಕುಮಾರ್ ಅದಕ್ಕೆ ಪೂರಕವಾದ ಹಲವಾರು ನಿದರ್ಶನಗಳನ್ನು ನೀಡಿದರು.

ಕೇರಳದ ಗಡಿ ಭಾಗಗಳಲ್ಲಿ ನೆಲೆಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ಕಲಿಯುತ್ತಿರುವ 367 ವಿದ್ಯಾರ್ಥಿಗಳನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ-ಕರ್ನಾಟಕದ ತಾಳಪಾಡಿ ಗಡಿ ಬಳಿ ಸ್ವಾಗತಿಸಿ ರಾಜ್ಯ ಸಾರಿಗೆ ಸಂಸ್ಥೆಯ 92 ಬಸ್ ಗಳಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಕರೆತರಲಾಗಿದೆ. ಯಾವುದೇ ವಿದ್ಯಾರ್ಥಿಗೆ ಯಾವುದೇ ತೊಂದರೆಯಾಗಿಲ್ಲ. ಕೇರಳ ರಾಜ್ಯದ ವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಹಾಜರಾಗಿರುವುದು ವಿಶೇಷ.

ಮಂಗಳೂರಿನಲ್ಲಿ ಕಸಬಾ ಬೇಂಗ್ರೆ ಭಾಗದ 27 ಭಾಗದ ವಿದ್ಯಾರ್ಥಿಗಳು ಬಂದು ಮಂಗಳೂರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ಬೋಟಿನಿಂದ ಇಳಿದ ತಕ್ಷಣವೇ ಅರೋಗ್ಯ ಪರೀಕ್ಷೆ ನಡೆಸಿ ಪರೀಕ್ಷಾ ಕೇಂದ್ರಗಳಿಗೆ ವಾಹನದಲ್ಲಿ ಕರೆತರಲಾಯಿತು.

ಮಹಾರಾಷ್ಟ್ರದ ಗೋರೆಗಾಂವ್ ಭಾಗ ಇಚಲಕರಂಜಿ ಮತ್ತು ಇತರೆಡೆಯ 51 ವಿದ್ಯಾರ್ಥಿಗಳು ರಾಜ್ಯದ ಚಿಕ್ಕೋಡಿ ಜಿಲ್ಲೆಯ ಬೋರ್ಗಾಂವ್, ಜಡಿಕೆಹಾಳ, ಕಾಗವಾಡ, ನಿಪ್ಪಾಣಿ ಪರೀಕ್ಷಾ ಕೇಂದ್ರಗಳಲ್ಲಿ ಬಂದು ಪರೀಕ್ಷೆಯನ್ನು ಬರೆಯುವುದಕ್ಕೆ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾದ ನಿರ್ವಹಣೆ ಮಾಡಿದೆ. ಬೆಳಗ್ಗೆ 6 ಗಂಟೆಗೆ ನಮ್ಮ ಅಧಿಕಾರಿಗಳು ಖುದ್ದಾಗಿ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೋಗಿ ಮಕ್ಕಳನ್ನು ಬರಮಾಡಿಕೊಂಡು ಆರೋಗ್ಯ ತಪಾಸಣೆ ಮಾಡಿ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಆಯಾಯ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ್ದಾರೆ.

ಗೋವಾದಲ್ಲಿ ಈ ಬಾರಿ ಎರಡು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ನಿಟ್ಟಿನಲ್ಲಿ ಗೋವಾ ರಾಜ್ಯ ಸರ್ಕಾರ ನೀಡಿದ ಸಹಕಾರ ತುಂಬಾ ದೊಡ್ಡದು. ಗೋವಾದ ವಾಸ್ಕೋ ಯಲ್ಲಾ ಲಿಂಗೇಶ್ವರ ಶಾರದಾ ಮಂದಿರ ಪೀಠ ಪ್ರೌಢಶಾಲೆ ಹಾಗೂ ವಾಸ್ಕೋ ಬೈನಾದ ಯಲ್ಲಾಲಿಂಗೇಶ್ವರ ಶಾರದಾ ಪೀಠ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ನಮ್ಮ 47 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವನ್ನು ಗೋವಾ ಸರ್ಕಾರ ಕಲ್ಪಿಸಿಕೊಟ್ಟಿದೆ. ಪರೀಕ್ಷಾ ಪೂರ್ವದಲ್ಲಿ ಗಡಿಭಾಗಕ್ಕೆ ಗೋವಾ ರಾಜ್ಯದ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಸಶಸ್ತ್ರ ಪಡೆಯೊಂದಿಗೆ ಬಂದು ಸುರಕ್ಷಿತವಾಗಿ ನಮ್ಮ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ಕೊಂಡೊಯ್ದು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದೆ. ನಮ್ಮ ಇಲಾಖೆಯ ಅಧಿಕಾರಿಗಳನ್ನು ಈ ಪರೀಕ್ಷೆಗೆ ವೀಕ್ಷಕರಾಗಿ ನಿಯೋಜಿಸಲಾಗಿದ್ದು, ಆ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಕಣ್ ಗಾವಲು ಇಟ್ಟಿದ್ದಾರೆ. ಒಬ್ಬ ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗಿದ್ದು, ಅವನಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು.

ತೆಲಂಗಾಣ ರಾಜ್ಯದ ಕೃಷ್ಣಾ ಗ್ರಾಮದಿಂದ ತಮ್ಮ ಪೋಷಕರೊಂದಿಗೆ ಬಂದು ನಾಲ್ಕು ಮಂದಿ ವಿದ್ಯಾರ್ಥಿಗಳು ರಾಯಚೂರಿನ ಶಕ್ತಿನಗರದ ಡಿಎವಿ ಶಾಲೆಯ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ಸಹ ನಮ್ಮ ಅಧಿಕಾರಿಗಳು ಗಡಿಭಾಗದಲ್ಲೇ ಬರಮಾಡಿಕೊಂಡು ಅವಶ್ಯ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಶಾಲಾವರಣವನ್ನು ತಳಿರುತೋರಣದಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಆಗಮಿಸಿದ ಪರೀಕ್ಷಾರ್ಥಿಗಳಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ಗೌರವ ವಂದನೆಯೊಂದಿಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು. ಇದು ಈ ವಿದ್ಯಾರ್ಥಿಗಳ ಪರೀಕ್ಷಾ ದುಗುಡ-ದುಮ್ಮಾನಗಳನ್ನು ದೂರಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಗದಗ ನಗರದಲ್ಲಿ ಅಲ್ಲಿನ ಸ್ಥಳೀಯ ಆಟೋ ಚಾಲಕ ಸಂಘದವರು ಎಸ್ಸೆಸ್ಸೆಲ್ಸಿ ಪರೀಕ್ಷಾಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ತಂತಮ್ಮ ಆಟೋರಿಕ್ಷಾಗಳಲ್ಲಿ ಉಚಿತವಾಗಿ ಕರೆತಂದು ಮಕ್ಕಳ ಹಿತದೃಷ್ಟಿಯಿಂದ ತಮ್ಮ ಪಾಲಿನ ಸೇವೆ ಸಲ್ಲಿಸಿ ಪರೀಕ್ಷೆಯ ಯಶಸ್ಸಿನ ಪಾಲುದಾರರಾಗಿದ್ದಾರೆ.

ಶಿರಹಟ್ಟಿ ತಾಲೂಕಿನ ಶಿಗ್ಲಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಬಸ್ ಅಲಭ್ಯತೆ ಹಿನ್ನೆಲೆಯಲ್ಲಿ ಪರದಾಡುತ್ತಿದ್ದುದನ್ನು ಗಮನಿಸಿದ ಲಕ್ಷ್ಮೇಶ್ವರದ ಪೊಲೀಸರು ತಮ್ಮ ವಾಹನದಲ್ಲಿ ಅವರನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.

ಪಾವಗಡದ ಸ್ವಾಮಿ ಜಪಾನಂದರು ಪಾವಗಡ ತಾಲೂಕಿನಲ್ಲಿ ಪರೀಕ್ಷೆ ಬರೆಯುತ್ತಿರುವ 3300 ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಮಾಸ್ಕ್, ಸ್ಯಾನಿಟೈಜರ್ಗಳನ್ನು ಪೂರೈಸುತ್ತಿದ್ದಾರೆ. ಪಾವಗಡ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಪ್ರತಿದಿನ ಸ್ಯಾನಿಟೈಜ್ ಮಾಡಿಸುತ್ತಿದ್ದಾರೆ. ಹಲವಾರು ಜನಪ್ರತಿನಿಧಿಗಳು, ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಮಾಸ್ಕ್ಗಳು, ಸ್ಯಾನಿಟೈಜರ್ ಮತ್ತು ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದಾರೆ.

ಬಹಳ ಬೇಸರದ ಸಂಗತಿ ಎಂದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತನ್ನ ತಂದೆಯ ವಾಹನದಲ್ಲಿ ಬರುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ವಿದ್ಯಾರ್ಥಿ ವಿಶ್ವನಾಥ ಗಟ್ಟಿಮನಿಯವರ ತಂದೆ ಮೃತಪಟ್ಟಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ವಿದ್ಯಾರ್ಥಿಯ ಕುಟುಂಬದ ದುಃಖದಲ್ಲಿ ನಾನು ಭಾಗಿ. ಸದರಿ ವಿದ್ಯಾರ್ಥಿಗೆ ಮುಂದಿನ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಸ್ಥಳೀಯ ವಿಧಾನಸಭಾ ಸದಸ್ಯರಾದ ಶ್ರೀ ಶಿವನಗೌಡ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಅಂತ್ಯಕ್ರಿಯೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಮೃತ ವ್ಯಕ್ತಿ ದೇವದುರ್ಗ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ 57 ವರ್ಷದ ಶ್ರೀ ನಾಗಿರೆಡ್ಡಿ ಗಟ್ಟಿಮನಿ ಎಂಬುವರಾಗಿದ್ದು, ಕ್ಷಿಪ್ರ ಅವಧಿಯಲ್ಲಿ ಅವರ ಕುಟುಂಬಕ್ಕೆ ಮರಣೋತ್ತರ ಸೌಲಭ್ಯಗಳನ್ನು ನೀಡಲು ಈಗಾಗಲೇ ಸೂಚನೆ ನೀಡಿದ್ದೇನೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯೊಬ್ಬನ ತಾಯಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಆತನಿಗೆ ಈ ಪರೀಕ್ಷೆಯನ್ನು ನಿರಾಕರಿಸಲಾಗಿತ್ತು. ಇಂದು ಆತನಿಗೂ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸದರಿ ವಿದ್ಯಾರ್ಥಿಗೆ ಮುಂದಿನ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು.

ಶೇ. 98.3 ಹಾಜರಾತಿ:

ಮೊದಲನೆ ದಿನವಾದ ಇಂದು ನಡೆದ ದ್ವಿತೀಯ ಭಾಷೆ ಆಂಗ್ಲ ಮತ್ತು ಕನ್ನಡ ವಿಷಯಗಳ ಪರೀಕ್ಷೆಗೆ ನೊಂದಾಯಿತ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.3 ರಷ್ಟು ಇಂದು ಹಾಜರಾತಿ ಇದೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮೊದಲ ಬಾರಿಗೆ 7,43,688 ಶಾಲಾ ವಿದ್ಯಾರ್ಥಿಗಳು ಹಾಗೂ 20,892 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು. ತಾವು ಬೆಂಗಳೂರಿನ 12 ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿರುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದರು.

ಕಂಟೈನ್ಮೆಂಟ್ ಪ್ರದೇಶಗಳ 998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 201 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯವುದೇ ವಿದ್ಯಾರ್ಥಿಯೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಪ್ರಕರಣಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 614 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 555 ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,548 ವಿದ್ಯಾರ್ಥಿಗಳು ಹಾಜರಾಗಿದ್ದರೆ, 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾನು ನೀಡಿದ ಭರವಸೆಯಂತೆ ಪರೀಕ್ಷೆ ಸುವ್ಯಸ್ಥಿತವಾಗಿ ನಡೆದಿದೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇ ರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆಯ ಕುರಿತು ವಿಶ್ವಾಸವನ್ನಿಟ್ಟುಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.

ಈ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆದ ಇಂದಿನ ಪರೀಕ್ಷೆಯ ಹಾಜರಾತಿ, ಯಶಸ್ಸು ಎಲ್ಲವೂ ಸಹ ನಮ್ಮ ಪೋಷಕರ ಮತ್ತು ಮಕ್ಕಳ ಗಟ್ಟಿತನದ ಪ್ರತೀಕವಾಗಿದೆ ಅವರು ಶ್ಲಾಘಿಸಿದರು.

ಎಫ್ಐಆರ್ ದಾಖಲು:

ಸಾಮಾಜಿಕ ಜಾಲತಾಣಗಳಲ್ಲಿ ಎಸ್ಎಸ್ಎಲ್ಸಿ ಆಂಗ್ಲ ಭಾಷಾ ಪತ್ರಿಕೆ ಎಂದು ನಕಲಿ ಪ್ರಶ್ನೆಪತ್ರಿಕೆ ಹರಿ ಬಿಟ್ಟ ವ್ಯಕ್ತಿ ವಿರುದ್ಧ ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್ 2000, ಐಪಿಸಿ ಆಕ್ಟ್ ಪ್ರಕಾರ ಎಫ್ಐಆರ್ ದಾಖಲಾಗಿದೆ.

ಸಾರ್ವಜನಿಕರು-ಪೋಷಕರಲ್ಲಿ ಮನವಿ:

ಇಂದಿನ ಪರೀಕ್ಷೆ ಸಮಯ ಮುಗಿದ ನಂತರ ಹಲವು ಪರೀಕ್ಷಾ ಕೇಂದ್ರಗಳ ಬಳಿ ಪೋಷಕರು ಗುಂಪುಗುಂಪಾಗಿ ನಿಂತಿದ್ದು, ಸಾಮಾಜಿಕ ಅಂತರಕ್ಕೆ ವ್ಯತ್ಯಯ ಉಂಟಾಗಿದೆ ಎಂಬ ಬೆರಳೆಣಿಕೆಯ ಸಂಗತಿಯ ವರದಿಗಳಿವೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಆ ರೀತಿ ಗುಂಪುಗೂಡದೇ ಸಾಮಾಜಿಕ ಅಂತರ ಕಾಪಾಡಿ ಪರೀಕ್ಷೆಯ ಯಶಸ್ಸಿಗೆ ಸಹಕರಿಸಬೇಕೆಂದು ಸಚಿವರು ಕೋರಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 22 ನೇ ಘಟಿಕೋತ್ಸವ:ಆನ್‌ಲೈನ್ ಮೂಲಕ ಪದವಿ ಪ್ರಧಾನ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್

ಬೆಂಗಳೂರು – ಜೂನ್ 25, 2020: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಸಮಾರಂಭ ಗುರುವಾರ ಬೆಂಗಳೂರಿನಲ್ಲಿ ಜರುಗಿತು. ಸನ್ಮಾನ್ಯ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಪರಕುಲಪತಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಡಾ.ಕೆ.ಸುಧಾಕರ್ ಅವರು ಸಮಾರಂಭವನ್ನು ಉದ್ಘಾಟಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಕುಲಪತಿಗಳಾದ ಪದ್ಮಭೂಷಣ ಡಾ.ಪಿ.ಬಲರಾಂ, ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಸಚ್ಚಿದಾನಂದ್ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕುಟುಂಬದವರಿಗೆ ಕೊರೋನ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸ್ವಯಂ ಗೃಹಬಂಧನದಲ್ಲಿರುವ ಸಚಿವ ಸುಧಾಕರ್ ಅವರು ಆನ್‌ಲೈನ್ ವೀಡಿಯೋ ಸಂವಾದದ ಮೂಲಕ ಘಟಿಕೋತ್ಸವವನ್ನು ಉದ್ಘಾಟಿಸಿದರು. ವಿಶ್ವವಿದ್ಯಾಲಯದ ಪರ ಕುಲಪತಿಗಳಾಗಿ ಪದವಿ ಪ್ರಧಾನ ಮಾಡುತ್ತಿರುವುದು ಅತ್ಯಂತ ಗೌರವದ ಸಂಗತಿ ಎಂದು ಅವರು ಹೇಳಿದರು. ವೈದ್ಯಕೀಯ, ದಂತವೈದ್ಯಕೀಯ, ಸ್ನಾತಕೋತ್ತರ, ಆಯುರ್ವೇದ, ಹೋಮಿಯೋಪತಿ ಮುಂತಾದ ರಂಗಗಳಲ್ಲಿನ ಸುಮಾರು 36,434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಸಮಾರಂಭವನ್ನು ಆಯೋಜಿಸಲಾಗಿತ್ತು. ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇದಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಸರ್ಕಸ್: ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ‌

ಬೆಂಗಳೂರು, ಜೂನ್ 25: ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ: ಸಿ.ಎನ್. ಅಶ್ವತ್ಥ್ ನಾರಾಯಣ್ ಹಾಗೂ ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಬಿ.ಶ್ರೀರಾಮುಲು, ಭೈರತಿ ಬಸವರಾಜ, ಸಂಸದ ತೇಜಸ್ವಿ ಸೂರ್ಯ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ನಗರದಲ್ಲಿ ಕೋವಿಡ್ 19 ಪರಿಸ್ಥಿತಿ ಪರಿಶೀಲನೆ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು:

1. ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು. ಪರೀಕ್ಷಾ ವರದಿ ಬಂದು ಸೋಂಕು ದೃಢ ಪಟ್ಟ ನಂತರ ತ್ವರಿತವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಈಗ 100 ಅಂಬ್ಯುಲೆನ್ಸ್ ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ಈ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಯಿತು.

2. ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚಿಸಲಾಗಿದೆ.

3. ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಹಾಸಿಗೆಗಳ ಲಭ್ಯತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ, ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್ ಗಳು ಹಾಗೂ ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.

4. ಹಾಸಿಗೆಗಳ ಲಭ್ಯತೆ ಕುರಿತು, ಪ್ರತಿ ರೋಗಿಯ ದಾಖಲಿಸುವ ಕುರಿತು ಕ್ಷಣ ಕ್ಷಣದ ಮಾಹಿತಿ ಒದಗಿಸುವ ಕುರಿತು ಡಿಜಿಟಲ್ ಪ್ಲಾಟ್ ಫಾರ್ಮ್ ಸೃ಼ಜಿಸಲು ನಿರ್ಧರಿಸಲಾಯಿತು.

5 ರಾಜ್ಯದಲ್ಲಿ ಶೇ. 61 ರಷ್ಟು ಜನ ಗುಣಮುಖರಾಗಿದ್ದಾರೆ. 3700 ಸಕ್ರಿಯ ಪ್ರಕರಣಗಳು ಇವೆ.

6 ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯದಿಂದ ಕ್ರಮ ವಹಿಸುವಂತೆ ಸೂಚಿಸಲಾಯಿತು.

7. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಶಾಸಕರ ಸಭೆ ನಡೆಸಲಾಗುವುದು.

ಆಸ್ಟ್ರಿಯಾ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಭಿನಯದ ‘ಅಮೃತಮತಿ’ ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ನ ಪುಟ್ಟಣ್ಣನವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ ಆಸ್ಟ್ರಿಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಈಗ ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಮೊದಲಿಗೆ ಆನ್‌ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು ಇದು ಜುಲೈ 22ರಿಂದ ಆಗಸ್ಟ್ 5ರವರೆಗೆ ನಡೆಯಲಿದೆ.ಹೀಗೆ ಆನ್‌ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ಧಾ ಕಣದಲ್ಲೂ ಇದ್ದು ಫಲಿತಾಂಶವನ್ನು ಆನಂತರ ಪ್ರಕಟಿಸಿ ನೇರ ಪ್ರತ್ಯಕ್ಷ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಹೀಗಾಗಿ ‘ಅಮೃತಮತಿ’ ಚಿತ್ರ ಸ್ಪರ್ಧಾಕಣಕ್ಕೆ ಆಯ್ಕೆಯಾಗಿದೆ.

‘ಅಮೃತಮತಿ’ ಚಿತ್ರ 13ನೇ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ಬರೆದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ. ಮೂಲ ಕಥಾವಸ್ತುವನ್ನು ಮರು ವ್ಯಾಖ್ಯಾನ ಮಾಡಿ ಮರುಸೃಷ್ಟಿ ಮಾಡಲಾಗಿದೆ.

‘ಅಮೃತಮತಿ’ ಪಾತ್ರದಲ್ಲಿ ಖ್ಯಾತ ನಟಿ ಹರಿಪ್ರಿಯಾ ಅವರು ನಟಿಸಿದ್ದು ಅವರಿಗೆ ನೋಯ್ಡಾ ವಿಶ್ವ ಚಿತ್ರೋತ್ಸವದಲ್ಲಿ ಈ ಪಾತ್ರಾಭಿನಯ ಕ್ಕೆ `ಶ್ರೇಷ್ಠ ನಟಿ’ ಪ್ರಶಸ್ತಿ ಬಂದಿದ್ದನ್ನು ಇಲ್ಲಿ ನೆನೆಯಬಹುದು.ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದ ಉಳಿದ ತಾರಾಗಣದಲ್ಲಿ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್ ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ ಇದ್ದಾರೆ. ಸುರೇಶ್ ಅರಸ್ ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ: 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಬೆಂಗಳೂರು:ಸಾಕಷ್ಟು ಪರ ವಿರೋಧದ ನಡುವೆ ಕಡೆಗೂ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಂಡಿದೆ.ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆಗೆ ಅವಕಾಶ ನೀಡಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ.

ರಾಜ್ಯಾದ್ಯಂತ ಇರುವ 2879 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯುದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಆರೋಗ್ಯ ತಪಾಸಣಾ ಕೌಂಟರ್‌ಗಳು ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಾಂತ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ 5755 ಆರೋಗ್ಯ ತಪಾಸಣಾ ಕೌಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರಂತೆ ಕಿರಿಯ ಆರೋಗ್ಯ ಸಹಾಯಕರು ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಜವಾಬ್ದಾರಿಯನ್ನು ನಿರ್ವಹಿಸುದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿ/ಸಿಬ್ಬಂದಿ ಮಾಸ್ಕ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿ ದೇಹದ ಉಷ್ಣತೆಯನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶ ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರ ಸ್ಥಳಾಂತರ:
ಕಂಟೈನ್‌ಮೆಂಟ್‌ ಜೋ಼ನ್‌ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಕೇಂದ್ರಗಳಲ್ಲಿನ 7490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ .

ಪರೀಕ್ಷಾ ಕೇಂದ್ರಗಳಲ್ಲಿ ಒಂದು ಲಕ್ಷ ಸಿಬ್ಬಂದಿ:
ಎಂಟುವರೆ ಲಕ್ಷ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯಲು ಶಿಕ್ಷಣ, ಗೃಹ, ಆರೋಗ್ಯ ಮತ್ತು ಸಾರಿಗೆ ಇಲಾಖೆಯ ಒಂದು ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳು ಸೊಂಕು ನಿವಾರಕ ದ್ರವಣದಿಂದ ಸ್ಯಾನಿಟೈಸ್‌ ಗೆ ಒಳಗಾಗಿವೆ. ಪರೀಕ್ಷಾ ಕೇಂದ್ರದ ಸುತ್ತಲಿನ ಸೈಬರ್‌, ಜೆರಾಕ್ಸ್‌ ಕೇಂದ್ರಗಳು ಮುಚ್ಚಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಸ್ಮಾರ್ಟ್ ಕಿಯೋಸ್ಕ್ ಯಂತ್ರ ಸ್ಥಾಪನೆ

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಸಹಾಯದಿಂದ ನಿರ್ವಹಿಸಬಹುದಾದ ಸ್ವಯಂಚಾಲಿತ ಸ್ಮಾರ್ಟ್ ಕಿಯೋಸ್ಕ್ ಯಂತ್ರ ಸ್ಥಾಪನೆ ಉದ್ಘಾಟಿಸಲಾಯಿತು.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಥರ್ಮಲ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಜೊತೆಗೆ, ಪ್ರಯಾಣಿಕರ ರೈಲು ಇರುವ ಮುನ್ನ ಅವರ ಟಿಕೇಟುಗಳನ್ನು ಪರೀಕ್ಷಿಸಬೇಕಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ವನ್ನು ತಡೆಗಟ್ಟುವ ಸಲುವಾಗಿ ಮಾನವ ಸಂಪರ್ಕವಿಲ್ಲದ ಈ ಕ್ರಮಗಳನ್ನು ಕೈಗೊಳ್ಳಲು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ಸಕ್ಷಮ್ ಯಂತ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.

ಸಕ್ಷಮ್ ಯಂತ್ರದ ಕಾರ್ಯ ನಿರ್ವಹಣೆ:

* ರೈಲು ನಿಲ್ದಾಣವನ್ನು ಪ್ರವೇಶಿಸುವ ಪ್ರಯಾಣಿಕರು ಯಂತ್ರದ ಬಳಿ ನಿಂತಾಗ ಅದರಲ್ಲಿ ಅಳವಡಿಸಿರುವ ಥರ್ಮಲ್ ಪರೀಕ್ಷಾ ಸಾಧನದ ಮೂಲಕ ಅವರ ಶರೀರದ ಉಷ್ಣತೆಯನ್ನು ಮತ್ತು ಅವರು ಮುಖದ ಮಾಸ್ಕ್ ಧರಿಸುವುದನ್ನು ಯಂತ್ರವು ದರ್ಶಕದಲ್ಲಿ ತೋರಿಸುತ್ತದೆ ಮತ್ತು ಯಂತ್ರ ದಿಂದ ದೂರದಲ್ಲಿ ಬೇರೆಡೆ ಇರುವ ಪರೀಕ್ಷಾ ಸಿಬ್ಬಂದಿಗಳು ಎಲ್ ಇ ಡಿ ಪರದೆಯ ಮೂಲಕ ನೋಡಬಹುದು.

ಪ್ರಯಾಣಿಕರು ಥರ್ಮಲ್ ಪರೀಕ್ಷೆ ನಂತರ ತಮ್ಮ ಟಿಕೆಟ್ ಮತ್ತು ಗುರುತಿನ ದಾಖಲೆಯನ್ನು ದರ್ಷಕದ ಮುಂದೆ ತೋರಿಸಿ, ಎಲ್ಲವು ಸಮರ್ಪಕವಾಗಿದ್ದಲ್ಲಿ ಪರೀಕ್ಷಾ ಸಿಬ್ಬಂದಿಯು ಮೈಕ್‌ನ ಮೂಲಕ ಮುಂದುವರೆಯಲು ಅನುಮತಿ ನೀಡುತ್ತಾರೆ, ಈ ಕಿಯೋಸ್ಕ್ (ಸಕ್ಷಮ್) ಯಂತ್ರವನ್ನು ಯಶವಂತಪುರ – ಶಿವಮೊಗ್ಗ ವಿಶೇಷ ರೈಲಿನ ಪ್ರಯಾಣಿಕರಿಂದ ಶ್ರೀ ಅಶೋಕ್ ಕುಮಾರ್ ವರ್ಮ, ವಿಭಾಗೀಯ ವ್ಯವಸ್ಥಾಪಕರು, ನೈರುತ್ಯ ರೈಲ್ವೆ ಮತ್ತು ವಿಭಾಗದ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಈ ಯಂತ್ರವನ್ನು ಪ್ರಾಯೋಜಿಸಿರುವ ಮ. ಫೀಮೇಸನ್ ಸರ್ಕಾರೇತರ ಸಂಸ್ಥೆ ಸದಸ್ಯರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಯಂತ್ರದ ಬೆಲೆ ಸುಮಾರು ರೂ 1.29 ಲಕ್ಷಗಳು.