ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಸರ್ಕಾರ ಸನ್ನದ್ಧ – ಎಸ್. ಸುರೇಶ್‌ ಕುಮಾರ್

ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಲ್ಲ, ಅವು ಸಂಪೂರ್ಣ ಸುರಕ್ಷಿತಾ ಕೇಂದ್ರಗಳಾಗಿದ್ದು ಯಾವುದೇ ಪೋಷಕರು ಆತಂಕಕ್ಕೊಳಗಾಗದೇ ತಮ್ಮ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳುಹಿಸಿಕೊಡಬೇಕೆಂದು ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸುರೇಶ್‌ ಕುಮಾರ್‌ ರಾಜ್ಯಾದ್ಯಂತ ಇರುವ 2879 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ನಾಳೆಯಿಂದ ಪರೀಕ್ಷೆಗಳನ್ನು ಬರೆಯಲಿದ್ದು, ಸರ್ಕಾರವು ಸುಗಮ ಪರೀಕ್ಷಾ ನಿರ್ವಹಣೆಗೆ ಎಲ್ಲ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಆರೋಗ್ಯ ತಪಾಸಣಾ ಕೌಂಟರ್‌ಗಳು ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಾಂತ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ 5755 ಆರೋಗ್ಯ ತಪಾಸಣಾ ಕೌಂಟರ್‌ಗಳು ಕಾರ್ಯ ನಿರ್ವಹಿಸಲಿವೆ ಎಂದ ಸಚಿವರು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರಂತೆ ಕಿರಿಯ ಆರೋಗ್ಯ ಸಹಾಯಕರು ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿ/ಸಿಬ್ಬಂದಿ ಮಾಸ್ಕ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿ ದೇಹದ ಉಷ್ಣತೆಯನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಕ್ಕೆ ಬರಲು ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರ ಸ್ಥಳಾಂತರ
ಕಂಟೈನ್‌ಮೆಂಟ್‌ ಜೋ಼ನ್‌ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಕೇಂದ್ರಗಳಲ್ಲಿನ 7490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಚಿವ ಸುರೇಶ್‌ ಕುಮಾರ್‌ ನೀಡಿದರು. ರಾಜ್ಯಾದ್ಯಾಂತ 10 ವಿದ್ಯಾರ್ಥಿಗಳು ಈ ದಿನದ ಅಂತ್ಯಕ್ಕೆ ಕೋವಿಡ್-19 ಸೊಂಕಿತರೆಂದು ಆರೋಗ್ಯ ಇಲಾಖೆಯು ಮಾಹಿತಿಯನ್ನು ನೀಡಿದ್ದು, ಗೃಹ ಕ್ವಾರೆಂಟೈನ್‌ ನಲ್ಲಿರುವ 09 ವಿದ್ಯಾರ್ಥಿಗಳು ಸೇರಿದಂತೆ 19 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗುವುದುದೆಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಪರೀಕ್ಷೆ ನಡೆಸುವುದು ಸರ್ಕಾರದ ಕರ್ತವ್ಯ:
ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿಲ್ಲ. ಶಿಕ್ಷಣ ಕ್ಷೇತ್ರದ ಪ್ರಮುಖರು ಸೇರಿ ಹಲವಾರು ಜನರ ಜೊತೆ ಸಂವಾದ ಚರ್ಚೆ ನಡೆಸಿದ ಬಳಿಕ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಪರೀಕ್ಷೆ ನಡೆಸದಂತೆ ಕೆಲವರು ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯಗಳು ಸರ್ಕಾರದ ತೀರ್ಮಾನವನ್ನು ಒಪ್ಪಿ ಪರೀಕ್ಷೆಗೆ ಅನುಮತಿ ನೀಡಿವೆ. ಹಾಗಾಗಿ ಸರ್ಕಾರಕ್ಕೆ ಪರೀಕ್ಷೆ ನಡೆಸುವುದು ಆದ್ಯ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಸಂಪೂರ್ಣ ಹಿತವನ್ನು ಕಪಾಡಲು ನಾವು ಬದ್ಧರಾಗಿದ್ದೇವೆ. ಯಾವುದೇ ಆತಂಕವಿಲ್ಲದೆ, ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಲ್ಲಿ ಸುರೇಶ್‌ ಕುಮಾರ್‌ ಮನವಿ ಮಾಡಿದರು.

ಪರೀಕ್ಷಾ ಕೇಂದ್ರಗಳಲ್ಲಿ ಒಂದು ಲಕ್ಷ ಸಿಬ್ಬಂದಿ:
ಎಂಟುವರೆ ಲಕ್ಷ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯಲು ಶಿಕ್ಷಣ, ಗೃಹ, ಆರೋಗ್ಯ ಮತ್ತು ಸಾರಿಗೆ ಇಲಾಖೆಯ ಒಂದು ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳು ಸೊಂಕು ನಿವಾರಕ ದ್ರವಣದಿಂದ ಸ್ಯಾನಿಟೈಸ್‌ ಗೆ ಒಳಗಾಗಿವೆ. ಪರೀಕ್ಷಾ ಕೇಂದ್ರದ ಸುತ್ತಲಿನ ಸೈಬರ್‌, ಜೆರಾಕ್ಸ್‌ ಕೇಂದ್ರಗಳು ಮುಚ್ಚಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡುವ ಪೋಷಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಪರೀಕ್ಷಾ ಸಂದರ್ಭದಲ್ಲಿ ಸುರಕ್ಷಿತವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಬರೆಯಲು ತಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದು ಸಚಿವ ಸುರೇಶ್‌ ಕುಮಾರ್‌ ಮನವಿ ಮಾಡಿದರು.

ಗೃಹ ಇಲಾಖೆಯ ಸಂಪೂರ್ಣ ಸಹಕಾರ: 
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಶಿಕ್ಷಣ ಇಲಾಖೆಯ ಎಲ್ಲ ಕ್ರಮಗಳಿಗೆ ಗೃಹ ಇಲಾಖೆಯು ಸಂಪೂರ್ಣ ಸಹಕಾರವಿದೆ ಎಂದರು. ಎಲ್ಲ ಪರೀಕ್ಷ ಕೇಂದ್ರಗಳ ಸುತ್ತ 200 ಮೀಟರ್‌ ವರೆಗೂ ನಿಷೇದಾಜ್ಞೆಯನ್ನು ಪೊಲೀಸ್‌ ಇಲಾಖೆಯು ಜಾರಿಯಲ್ಲಿಡಲ್ಲಿದ್ದು, ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರ ಹಾಗೂ ಮುಂಭಾಗದಲ್ಲಿ ಜನದಟ್ಟಣೆ ಉಂಟಾಗದ ರೀತಿಯಲ್ಲಿ ನಿಯಂತ್ರಣ, ಪರೀಕ್ಷಾ ಅಕ್ರಮಗಳು ನಡೆಯದಂತೆ ಎಲ್ಲ ಸುರಕ್ಷಿತ ಕ್ರಮಗಳನ್ನು ಪೊಲೀಸ್‌ ಇಲಾಖೆ ಕೈಗೊಳ್ಳಲಿದೆ ಎಂದರು.

ಸಹಾಯವಾಣಿ
ಪರೀಕ್ಷಾ ಕೇಂದ್ರಗಳಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ಕೇಂದ್ರಿಕೃತ ಸಹಾಯವಾಣಿಯನ್ನು ಶಿಕ್ಷಣ ಇಲಾಖೆಯು ತೆರೆದಿದ್ದು, 080-23310075 ಹಾಗೂ 080-23310076 ಗಳು ಕಾರ್ಯನಿರ್ವಹಿಸಲಿವೆ ಯಾವುದೇ ಪರೀಕ್ಷ ಕೇಂದ್ರಿತ ಸಮಸ್ಯೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ಇವರು ನೋಡೆಲ್‌ ಅಧಿಕಾರಿಯಾಗಿ ಕೆಲವ ಮಾಡುವವರಿದ್ದು ಅವರನ್ನು ಯಾವುದೇ ಸಂದರ್ಭದಲ್ಲಿಯೂ ದೂರವಾಣಿ ಸಂಖ್ಯೆ 9449049434 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

ಕೋವಿಡ್-19 ಬಗ್ಗೆ ಅನವಶ್ಯಕ ಆತಂಕ ಬೇಡ – ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್

ರಾಜ್ಯ ಕೋವಿಡ್‌-19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಸುದರ್ಶನ್‌ ಮಾತನಾಡಿ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಚರಣ ವಿಧಾನ (SOP)ದನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಯಲಿಟ್ಟಿದ್ದು, ಈ ಕ್ರಮಗಳನ್ನು ಅನುಸರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. ಮಾಸ್ಕ, ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸಿ ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಯಾವುದೇ ಆರೋಗ್ಯ ಸಮಸ್ಯೆಯು ಉದ್ಬವಿಸುವುದಿಲ್ಲ ಎಂದ ಡಾ. ಸುದರ್ಶನ್‌ ಪೋಷಕರು ಸರ್ಕಾರದ ನಿರ್ದೇಶನಗಳನ್ನು ವಿದ್ಯಾರ್ಥಿಗಳು ಪಾಲಿಸುವಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿ ಪರೀಕ್ಷೆಗೆ ಸಜ್ಜುಗೊಳಿಸಬೇಕೆಂದರು. ಆತಂಕದಿಂದ ಪರೀಕ್ಷ ಕೊಠಡಿಯೊಳಕ್ಕೆ ಆಗಮಿಸುವ ಯಾವುದೇ ವಿದ್ಯಾರ್ಥಿಯು ತಾನು ಅಪೇಕ್ಷಿಸಿದಲ್ಲಿ ಒಂದೆರಡು ಕ್ಷಣ ಮಾಸ್ಕನ್ನು ಮೂಗಿನ ಕೆಳಭಾಗಕ್ಕೆ ಇಳಿಸಿದಲ್ಲಿಯೂ ಸಹ ಯಾವುದೇ ಆರೋಗ್ಯದ ಸಮಸ್ಯೆಯಾಗುವುದಿಲ್ಲ. ಕೆಮ್ಮು, ಸೀನಬೇಕಾದಲ್ಲಿ ಮಾತ್ರ ಕಡ್ಡಯವಾಗಿ ಮಾಸ್ಕನ್ನು ಧರಿಸಿದ್ದಲ್ಲಿ ಬೇರಾವ ತೊಂದರೆಯು ಆಗುವುದಿಲ್ಲ. ಲಕ್ಷಣ ರಹಿತವಾದ ವ್ಯಕ್ತಿಗಳಿಂದ ಬೇರೆ ವ್ಯಕ್ತಿಗಳಿಗೆ ಕೋವಿಡ್-19 ಹರಡುವಿಕೆ ಸಾಧ್ಯತೆಗಳು ತೀರ ಕಡಿಮೆ ಎಂಬುದು ವಿಶ್ವಾದ್ಯಂತ ನಡೆಸಿರುವ ಆರೋಗ್ಯ ಸಮೀಕ್ಷೆಗಳಲ್ಲಿ ಸಾಬೀತಾಗಿದೆ. ಅನವಶ್ಯಕವಾಗಿ ಕೋವಿಡ್-19 ಕುರಿತಂತೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಡಾ. ಸುದರ್ಶನ್‌ ಹೇಳಿದರು.

ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ
ಇಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ನಾಳೆ ನಡೆಯಲಿರುವ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿ ಸುಳ್ಳು ಎಂದು ಸ್ಪಷ್ಟೀಕರಿಸಿದ ಸುರೇಶ್‌ ಕುಮಾರ್‌ ಈ ಸುದ್ಧಿಯನ್ನು ಹಬ್ಬಿದ ವ್ಯಕ್ತಿಗಳನ್ನು ಬಂದಿಸಲು ಸೈಬರ್‌ ಕ್ರೈಮ್‌ಗೆ ಇಲಾಖೆಯು ದೂರನ್ನು ನೀಡುತ್ತದೆ ಎಂದು ಹೇಳಿದರು. ಮಾಧ್ಯಮಗಳು ಇಂತಹ ಸುದ್ಧಿಗಳನ್ನು ಬಿತ್ತರಿಸುವಾಗ ಅತ್ಯಂತ ಜಾಗರೂಕವಾಗಿ ಆಲೋಚಿಸಿ ಖಚಿತ ಪಡಿಸಿಕೊಂಡು ಕ್ರಮ ವಹಿಸಬೇಕಂದು ಮನವಿ ಮಾಡಿದ ಸುರೇಶ್‌ ಕುಮಾರ್‌ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸಮಾಜದ ಆತ್ಮ ವಿಶ್ವಾಸವನ್ನು ವೃದ್ಧಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಪರೀಕ್ಷಾ ಕೇಂದ್ರಗಳಿಗೆ ಭೇಟಿ:
ಇಂದು ಬೆಳಗ್ಗಿನಿಂದ ಬೆಂಗಳೂರಿನ 08 ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಾವು ಭೇಟಿ ನೀಡಿದ್ದು ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಅಣಕು ವ್ಯವಸ್ಥೆಯನ್ನು ಪರಿಶೀಲಿಸಿದ್ದಾಗಿ ಸಚಿವ ಸುರೇಶ್‌ ಕುಮಾರ್‌ ಹೇಳಿದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತಾ ಕ್ರಮಗಳು ತೃಪ್ತಿಕರವಾಗಿದ್ದು ಯಾವುದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಅವರ ಹಿತದೃಷ್ಠಿಯಿಂದ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳಿಗೆ ಪೋತ್ಸಾಹ ನೀಡಬೇಕೆಂದರು.
ಸಾಂಕ್ರಮಿಕ ರೋಗ ತಜ್ಞ ಡಾ. ಗಿರಿಧರ ಬಾಬು, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಲೋಕೇಶ್‌, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಜಗದೀಶ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ಒಬ್ಬ ವಿದ್ಯಾಥಿ೯ಗೂ ಸೋಂಕು ತಗುಲದಂತೆ ಎಚ್ಚರವಹಿಸಿ : ಸಚಿವ ಸುಧಾಕರ್‌

ಬೆಂಗಳೂರು : ಒಬ್ಬ ವಿದ್ಯಾಥಿ೯ಗೂ ಕೊರೋನಾ ಸೋಂಕು ತಗುಲದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರೀಕ್ಷೆ ನಡೆಸುವ ರಾಜ್ಯ ಸಕಾ೯ರದ ನಿಧಾ೯ರವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿ ಜಾಗರೂಕತೆಯಿಂದ ಪರೀಕ್ಷೆಯನ್ನು ನಡೆಸಬೇಕು. ರಾಜ್ಯದ ೨೮೭೯ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಆರಂಭವಾಗುವ ಪರೀಕ್ಷೆಯಲ್ಲಿ ೮,೪೮,೨೦೩ ವಿದ್ಯಾಥಿ೯ಗಳು ಪಾಲ್ಗೊಳ್ಳಲಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶಗಳಿಲ್ಲದಂತೆ ಸಕಾ೯ರ ನೀಡಿರುವ ಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.

ಕುಟುಂಬ ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ವಯಂ ಗೃಹಬಂಧನದಲ್ಲಿರುವ ಕೋವಿಡ್‌ – ೧೯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ,ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ತಮ್ಮ ನಿವಾಸದಿಂದಲೇ ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.

ಮನೆಯಿಂದ ಬರುವ ಪ್ರತಿಯೊಬ್ಬ ವಿದ್ಯಾಥಿ೯ ಪರೀಕ್ಷೆ ಬರೆದು ಮನೆಗೆ ಹಿಂತಿರುಗುವತನಕ ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯದಿಂದ ಕಾಯ್ದುಕೊಳ್ಳಬೇಕು. ಸಾವ೯ಜನಿಕ ಸಾರಿಗೆ ಲಭ್ಯವಿಲ್ಲದ ಕಡೆ ಮಕ್ಕಳನ್ನು ಕರೆತರುವ ವಾಹನ, ಪರೀಕ್ಷಾ ಕೇಂದ್ರಗಳ ಬಳಿ, ಪರೀಕ್ಷಾ ಕೊಠಡಿ, ಶೌಚಾಲಯ ಇತ್ಯಾದಿ ಸ್ಥಳಗಳನ್ನು ಸ್ಯಾನಿಟೈಸ್‌ ಮಾಡಬೇಕು. ಪ್ರತಿ ವಿದ್ಯಾಥಿ೯ಗೆ ಮಾಸ್ಕ್‌ ನೀಡಿ ಪರೀಕ್ಷೆ ಬರೆಯುವ ಕೊಠಡಿಯಲ್ಲೂ ಅಂತರ ಇರುವಂತೆ ನೋಡಿಕೊಳ್ಳಬೇಕು ಎಂದರು.

ಬೆಳಗ್ಗೆ ೭.೩೦ ಕ್ಕೆ ಬರುವುದರಿಂದ ಪರೀಕ್ಷೆ ಬರೆದು ಹಿಂತಿರುಗುವತನಕ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಪ್ರತಿ ಮಗುವಿಗೂ ಚಿಕ್ಕ ಬಿಸ್ಕೆಟ್‌ ಪ್ಯಾಕ್‌ ನೀಡಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಹಣ ಭರಿಸುವಂತೆ ಸೂಚಿಸಿದರು. ಪ್ರತಿ ವಿದ್ಯಾಥಿ೯ಯನ್ನೂ ಥಮ೯ಲ್‌ ಸ್ಕ್ಯಾನಿಂಗ್‌ ಮೂಲಕ ಪರೀಕ್ಷೆ ನಡೆಸಿ ಒಳಬಿಡಬೇಕು. ಒಂದು ವೇಳೆ ಜ್ವರ ಸಹಿತ ಇತರೆ ಸೋಂಕುಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.

ಕ್ವಾರಂಟೈನ್‌ ಪ್ರದೇಶಗಳ ಮಕ್ಕಳಿಗೆ ಪ್ರತ್ಯೇಕ ಕೇಂದ್ರಗಳನ್ನು ಮೀಸಲಿಟ್ಟು ಒಂದು ವೇಳೆ ಅವರು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂಬುದನ್ನು ಖಚಿತ ಪಡಿಸಿಕೊಂಡ ಸಚಿವರು, ಪೋಷಕರಿಗೆ ಆತಂಕಗಳಿಲ್ಲದಂತೆ ಜಿಲ್ಲಾಡಳಿತಗಳು ಮಾಧ್ಯಮಗಳ ಮೂಲಕ ಸಕಾ೯ರ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು ಎಂದರು.

ಶಿಕ್ಷಣ ಇಲಾಖೆ ಇತರೆ ಇಲಾಖೆಗಳ ಸಮನ್ವಯದೊಂದಿಗೆ ಮಾಡಿಕೊಂಡಿರುವ ಸಿದ್ದತೆ, ವಿದ್ಯಾಥಿ೯, ಪರೀಕ್ಷಾ ಸಿಬ್ಬಂದಿ ಮತ್ತು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೆ ನೀಡಿರುವ ಮಾಗ೯ಸೂಚಿಗಳ ಮಾಹಿತಿ ಪಡೆದ ಸಚಿವರು, ಎಲ್ಲವೂ ಯೋಜನಾಬದ್ಧವಾಗಿ, ವೈಜ್ಞಾನಿಕ ಆಲೋಚನೆ ಹಿನ್ನಲೆಯಲ್ಲಿ ತೀಮಾ೯ನಗಳನ್ನು ಕೈಗೊಳ್ಳಲಾಗಿದೆ. ಆದರೆ ಅವುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಆ ಮೂಲಕ ರಾಜ್ಯ ಸಕಾ೯ರದ ನಿಧಾ೯ರದ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ೪೫೮ ಕ್ವಾರಂಟೈನ್‌ ಪ್ರದೇಶಗಳಿವೆ. ಅಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ಗರಿಷ್ಠ ಪ್ರಮಾಣದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆ ಮಕ್ಕಳಲ್ಲಿ ಯಾರಿಗಾದರೂ ಸೋಂಕಿನ ಸೂಚನೆ ಕಂಡು ಬಂದಲ್ಲಿ ತಕ್ಷಣವೇ ಪರೀಕ್ಷಾಕೇಂದ್ರದ ಬಳಿಯಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತಿರದ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಕರೆದೊಯ್ದು ಪರೀಕ್ಷೆ ನಡೆಸಬೇಕು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಹೆಚ್ಚುವರಿ ಮುಖ್ಯ ಕಾಯ೯ದಶಿ೯ ಜಾವೇದ್‌ ಅಖ್ತರ್‌, ಶಿಕ್ಷಣ ಇಲಾಖೆ ಕಾಯ೯ದಶಿ೯ ಉಮಾಶಂಕರ್‌, ವೈದ್ಯಕೀಯ ಶಿಕ್ಷಣ ಇಲಾಖೆ ಕಾಯ೯ದಶಿ೯ ಅನಿಲ್‌ಕುಮಾರ್‌, ಬಿಬಿಎಂಪಿ ಉಸ್ತುವಾರಿ ಮಂಜುನಾಥ್‌, ನಿದೇ೯ಶಕಿ ಸುಮಂಗಲ, ತಜ್ಞರಾದ ಡಾ. ಸುದಶ೯ನ್‌, ಡಾ. ಗಿರಿಬಾಬು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಚಿವ ಪ್ರತಿಕ್ರಿಯೆ :

ʼಪರೀಕ್ಷೆಗಳನ್ನು ಸಮಪ೯ಕವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೋಷಕರು ಯಾವುದೇ ಆತಂಕಗಳಿಲ್ಲದೆ ಮಕ್ಕಳನ್ನು ಕಳುಹಿಸಿಕೊಡಿ. ಇಡೀ ದೇಶವೇ ಎದುರುನೋಡುತ್ತಿರವ ಈ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಧಿಕಾರಿ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಒಬ್ಬ ವಿದ್ಯಾಥಿ೯ಗೂ ಸೋಂಕು ತಗುಲದಂತೆ ಜಾಗೃತೆವಹಿಸಲಾಗಿದೆʼ ಎಂದು ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಕೊರೊನಾ ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲ,ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ:ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು:ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳಿಲ್ಲ, ವೆಂಟಿಲೇಟರ್ ಗಳ ಕೊರತೆ ಇದೆ. ಇದಕ್ಕೆ ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ ಎಂದು ಮಾಜಿ ಸಿಎಂ‌ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು COVID-19 ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ.‌ ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ.

ರಾಜ್ಯ ಸರ್ಕಾರ ಕೂಡ ಇದನ್ನೇ ಪರೋಕ್ಷವಾಗಿ ಹೇಳುತ್ತಿದೆ. ಕೊರೋನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ ‘ಮನೆ ಮದ್ದು’. ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂ. ಈ ದರ ಬಡವರಿಗಿರಲಿ, ಮೇಲ್ಮಧ್ಯಮವರ್ಗದವರಿಗೂ ಭರಿಸಲು ಸಾಧ್ಯವಾಗದು.

ಒಂದು ಕುಟುಂಬದ ನಾಲ್ಕು ಜನರಿಗೆ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ ಬೇಕು. ಬಡವರು ಮಧ್ಯಮವರ್ಗದವರು ಎಲ್ಲಿಂದ ತರುತ್ತಾರೆ? ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಎಚ್ಚರದಿಂದಿರಿ ಇದು ರಾಜ್ಯದ ಜನತೆಗೆ ನನ್ನ ಕಳಕಳಿಯ ಮನವಿ ಎಂದು ಎಚ್ ಡಿ ಕೆ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಫೇಕ್ ಪ್ರಶ್ನಪತ್ರಿಕೆ: ಸುರೇಶ್ ಕುಮಾರ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಸ್ಎಸ್ಎಲ್ಸಿ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಫೇಕ್ ಆಗಿದ್ದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಾಳೆ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದು, ಇದು ಫೇಕ್ ಪ್ರಶ್ನೆ ಪತ್ರಿಕೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ತಾವು ಅಧಿಕಾರಿಗಳಿಗೆ ಸೂಚನೆ‌ ನೀಡಿರುವುದಾಗಿ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಪೋಷಕರು ಇಂತಹ ಸುದ್ದಿಗಳಿಗೆ ಕಿವಿ ಕೊಡಬೇಡಬಾರದೆಂದು ಮನವಿ‌ ಮಾಡಿರುವ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಸ್ಥೈರ್ಯದಿಂದ ಪರೀಕ್ಷೆ ಬರೆಯಬೇಕೆಂದು ಹೇಳಿದ್ದಾರೆ. ಮಾಧ್ಯಮಗಳು ಇಂತಹ ಸತ್ಯಕ್ಕೆ‌ ದೂರವಾದ ಸುದ್ದಿಗಳನ್ನು ಹರಡದಿರಲು ಮನವಿ‌ ಮಾಡಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ

ಬೆಂಗಳೂರು: ಶಿಕ್ಷಣ‌ ಸಚಿವ‌ ಸುರೇಶ್ ಕುಮಾರ್ ಇಂದು ಬೆಂಗಳೂರು ನಗರದ ವಿವಿಧ‌ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ನಾಳೆಯಿಂದ ನಡೆಯಲಿರುವ ಪರೀಕ್ಷಾ‌ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.

ಹೆಬ್ಬಾಳದ ಸರ್ಕಾರಿ ಪ್ರೌಢ ಶಾಲೆ, ಮಲ್ಲೇಶ್ವರಂನ ವೈಯಾಲಿಕಾವಲ್ ಸೊಸೈಟಿ ಶಾಲೆ, ಸ್ಟೆಲ್ಲಾ ಮಾರಿಸ್ ಶಾಲೆ, ನಿರ್ಮಲರಾಣಿ ಪ್ರೌಢ ಶಾಲೆ, ಜಯನಗರದ ಆರ್ ವಿ ಪ್ರೌಢಶಾಲೆ, ವಿಜಯ ಪ್ರೌಢಶಾಲೆ, ಸಾರಕ್ಕಿ‌ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ‌ ನೀಡಿದ ಸಚಿವರು ಪರೀಕ್ಷಾ‌ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು‌ ಅನುಸರಿಸಿರುವ ಕ್ರಮಗಳು, ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷೆ, ಆರೋಗ್ಯ ತಪಾಸಣೆ, ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಲಾಗಿರುವ ಸಿದ್ಧತಾ ಕ್ರಮಗಳನ್ನು ಅವಲೋಕಿಸಿ ತೃಪ್ತಿ‌ ವ್ಯಕ್ತ‌ ಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ‌ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದು, ಯಾವುದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಅವರ ಹಿತದೃಷ್ಟಿಯಿಂದ ಕೈಗೊಂಡಿರುವ ಸರ್ಕಾರದ ಕ್ರಮವನ್ನು ಪ್ರೋತ್ಸಾಹಿಸಬೇಕೆಂದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕೊಠಡಿಗಳನ್ನು ಸೊಂಕು ನಿವಾರಕ ದ್ರಾವಣದಿಂದ ಸ್ಯಾನಿಟೈಸ್‌ ಮಾಡುವುದರ ಬಗ್ಗೆಯೂ ಖಚಿತಪಡಿಸಿಕೊಂಡ ಸಚಿವರು ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣಾ ವಿತರಣೆಗೆ ಕ್ರಮ ವಹಿಸುವುದಲ್ಲದೆ ಕಂಟೈನ್‌ಮೆಂಟ್‌ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ ವಿತರಿಸುವುದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್‌ಮೆಂಟ್‌ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ‌ ಮೀಸಲಿಾಡುವುದು, ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿಯನ್ನು ನೀಡುವುದು, ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಎಲ್ಲ ಕ್ರಮಗಳು ಅಚ್ಚುಕಟ್ಟಾಗಿ ನಿರ್ವಹಣೆಯಾಗುವಲ್ಲಿ ಎಲ್ಲಾ ಅಧಿಕಾರಿಗಳು ಸಮರ್ಪಣ ಮನೋಭಾವದಿಂದ ಕೆಲಸ ಮಾಡಬೇಕೆಂದು ಹಾಜರಿದ್ದ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.

ಸಾರ್ವಜನಿಕ‌ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ಉಪನಿರ್ದೇಶಕರು ಹಾಜರಿದ್ದರು.

ಎಲ್ಲ ಕೊರೊನಾ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಕೊರೊನಾ ರೋಗಿಗಳಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಜೊತೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಗೆ ತರಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಯಾಗುತ್ತಿರುವ ಬಗ್ಗೆ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಈ ಒತ್ತಾಯ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಹೇಳೀಕೆಯ ವಿವರ ಹೀಗಿದೆ.

ಕೇಂದ್ರ-ರಾಜ್ಯ ಸರ್ಕಾರಗಳ ಸರಣಿ ವೈಫಲ್ಯಗಳಿಂದಾಗಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಪ್ರಧಾನಮಂತ್ರಿಗಳು ಸಾಕಷ್ಟು ಪೂರ್ವ ಸಿದ್ಧತೆಗಳಿಲ್ಲದೆ ಮಾರ್ಚ್ 24, 2020 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿ ಮಧ್ಯರಾತ್ರಿ 12 ಗಂಟೆಗೆ ಲಾಕ್‍ಡೌನ್ ಜಾರಿಗೆ ಬರುವುದಾಗಿ ಘೋಷಣೆ ಮಾಡಿದರು. ಆ ನಂತರ ದೇಶದುದ್ದಗಲಕ್ಕೂ ನಡೆದದ್ದು ಗೊತ್ತೇ ಇದೆ. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಅಗತ್ಯವಿರಲಿಲ್ಲ. ಅವಿವೇಕಿತನದ ತೀರ್ಮಾನದಿಂದಾಗಿ ಕೋಟ್ಯಾಂತರ ಕಾರ್ಮಿಕರು, ಕುಶಲಕರ್ಮಿ ಸಮುದಾಯಗಳು, ರೈತಾಪಿ ಸಮುದಾಯಗಳು ಪಡಬಾರದ ಕಷ್ಟಪಟ್ಟರು. ನೋಟ್‍ಬ್ಯಾನ್ ಮತ್ತು ಜಿ.ಎಸ್.ಟಿಗಳ ಅಸಮರ್ಪಕ ಅನುಷ್ಠಾನಗಳಿಂದಾಗಿ ಲಕ್ವಾ ಹೊಡೆದಂತಾಗಿದ್ದ ದೇಶದ ಆರ್ಥಿಕತೆಗೆ ಲಾಕ್‍ಡೌನ್‍ನಿಂದಾಗಿ ಉತ್ಪಾದಕ ವಲಯಗಳು ಇದ್ಧ ಬದ್ಧ ಚೈತನ್ಯವನ್ನು ಕಳೆದುಕೊಂಡಿವೆ.

ಪ್ರಸ್ತುತ ಕೊರೋನಾ ಸೋಂಕು ಸಮುದಾಯದ ಸೋಂಕಾಗಿ ವ್ಯಾಪಿಸಿಕೊಂಡಿದೆ. ಸರಿಯಾದ ತಪಾಸಣೆಗಳು ನಡೆಯುತ್ತಿಲ್ಲ. ಬಹುಶ: ರಾಜ್ಯದಲ್ಲೇ ಅಸಂಖ್ಯಾತ ಪ್ರಕರಣಗಳಿರಬಹುದು. ಬೆಂಗಳೂರು ಸೇರಿದಂತೆ ರಾಜ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ಕಾರ್ಮಿಕರು/ನೌಕರರನ್ನು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಜನರ ಬಳಿ ಹಣವಿಲ್ಲ.

ಇಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಕೊರೋನಾ ಚಿಕಿತ್ಸೆಗಾಗಿ ದರಗಳನ್ನು ನಿಗಧಿಪಡಿಸಿದೆ. ಪ್ರಸ್ತುತ ದರಗಳನ್ನು ನೋಡಿದರೆ ಮೇಲ್ಮಧ್ಯಮ ವರ್ಗಗಳಿಗೇ ಆಘಾತ ತರುವಂತಿದೆ. ಕೊರೋನಾ ಸೋಂಕು ಕುಟುಂಬದೊಳಕ್ಕೆ ವ್ಯಾಪಿಸಿದರೆ ಸಾಮಾನ್ಯವಾಗಿ ಕುಟುಂಬದ ಸದಸ್ಯರೆಲ್ಲರನ್ನು ಬಾಧಿಸುತ್ತದೆ. ಇಂತಹ ಪರಿಸ್ಥಿಯಲ್ಲಿ ಸರ್ಕಾರ ದಿನಾಂಕ: 23-06-2020 ರಂದು ಈ ಕೆಳಗಿನಂತೆ ಆಸ್ಪತ್ರೆಗೆ ದರಗಳನ್ನು ನಿಗಧಿಪಡಿಸಿದೆ.
ಸರ್ಕಾರ ದಿನವೊಂದಕ್ಕೆ ನಿಗಧಿ ಮಾಡಿರುವ ಈ ದರಗಳನ್ನು ಜನತೆ ಎಲ್ಲಿಂದ ನೀಡಲು ಸಾಧ್ಯ? ಈ ದರಗಳನ್ನು ನೋಡಿದರೆ ಸಾಕು ಜನರಿಗೆ ಹೃದಯಾಘಾತವಾಗುವಂತಿದೆ. ಇದನ್ನು ಗಮನಿಸಿದರೆ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯಗಳು ಜೀವಂತವಾಗಿವೆಯೇ ಎಂಬ ಪ್ರಶ್ನೆ ಬರುತ್ತದೆ. ಜನರ ಬಗ್ಗೆ ಕಾಳಜಿ ಇರುವ ಸರ್ಕಾರವೊಂದು ಮಾಡುವ ಕೆಲಸವೇ ಇದು? ಒಂದು ಕುಟುಂಬದ ನಾಲ್ಕೈದು ಜನ ಸದಸ್ಯರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾದರೆ ಎಲ್ಲಿಂದ 10-12 ಲಕ್ಷಕ್ಕೂ ಅಧಿಕ ಮೊತ್ತದ ಹಣ ತುಂಬಲು ಸಾಧ್ಯ?

ಇದಿಷ್ಟೆ ಅಲ್ಲದೆ ಸರ್ಕಾರದ ಅಧಿಸೂಚನೆ ಪ್ರಕಾರ
1)ಇಬ್ಬರು-ಮೂರು ಜನ ವಾರ್ಡ್‍ಗಳನ್ನು ಹಂಚಿಕೊಂಡು ಚಿಕಿತ್ಸೆ ಪಡೆದರೆ ಅವರಿಗೆ ಮೇಲಿನ ದರಗಳ ಜೊತೆಗೆ ಶೇ.25 ರವರೆಗೆ ಹೆಚ್ಚಿನ ದರಗಳನ್ನು ನಿಗಧಿಪಡಿಸಬಹುದು.
2)ಸರ್ಕಾರ ನಿಗಧಿಪಡಿಸಿರುವ ದರಗಳು ವಿಮಾ ಪ್ಯಾಕೇಜುಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಲಾಗಿದೆ.
3)ಸೂಟ್‍ಗಳನ್ನು ಪಡೆದರೆ ಅದಕ್ಕೆ ಮಿತಿ ಇಲ್ಲದಷ್ಟು ವೆಚ್ಚ ವಸೂಲಿ ಮಾಡಬಹುದಾಗಿ ತಿಳಿಸಲಾಗಿದೆ.

ಜನತೆಗೆ ಒಂದು ಕಡೆ ಹಣ ಹೊಂದಿಸುವ ಸಮಸ್ಯೆ ಆದರೆ ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಚಿಕಿತ್ಸೆ ನೀಡಲು ಜಾಗವೇ ಇಲ್ಲದೆ ತುಂಬಿ ಹೋಗಿವೆ ಎಂಬ ಮಾಹಿತಿ ಬರುತ್ತಿದೆ. ಸುಮಾರು 35,000 ವೆಂಟಿಲೇಟರ್‍ಗಳನ್ನು ಸರಬರಾಜು ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ, ಕೇಂದ್ರವು ಕೇವಲ 90 ವೆಂಟಿಲೇಟರ್‍ಗಳನ್ನು ಮಾತ್ರ ನೀಡಿದೆಯೆಂದು ಮಾಹಿತಿ ಇದೆ. ರಾಜ್ಯ ಸರ್ಕಾರವು ವೆಂಟಿಲೇಟರ್ ಉತ್ಪಾದಿಸಿಕೊಡುವಂತೆ ಕಂಪೆನಿಗಳನ್ನು ಇತ್ತೀಚೆಗೆ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮನಗರ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದ್ದ ಔಷಧಿ ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿಯಾಗಿದೆ.

ಪಿ.ಪಿ.ಇ ಕಿಟ್ ಮತ್ತು ಇನ್ನಿತರೆ ವೈದ್ಯಕೀಯ ಸಲಕರಣೆಗಳ ಕುರಿತು ವೈದ್ಯರೆ ಅನೇಕ ಕಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಯ ಅವ್ಯವಸ್ಥೆ ಕುರಿತಂತೆ ರೋಗಿಯೊಬ್ಬರು ಮಾಡಿರುವ ವರದಿ ಗಾಬರಿ ಹುಟ್ಟಿಸುವಂತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ.
ಸಂಕಷ್ಟದಿಂದ ಕಂಗೆಟ್ಟ ಜನ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಅರಾಜಕ ವಾತಾವರಣ ನಿರ್ಮಾಣವಾಗುವುದರ ಬದಲು ಸರ್ಕಾರ ತನ್ನ ಪುಕ್ಕಲುತನದ ನೀತಿಯನ್ನು ಮತ್ತು ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ಮೆಟ್ಟಿ ನಿಂತು ಪರಿಸ್ಥಿಯನ್ನು ನಿಗ್ರಹಿಸಬೇಕಾಗಿದೆ.
ಇಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಚಿಕಿತ್ಸೆ ಕುರಿತಂತೆ ಯಾವುದೇ ನಿರ್ದಿಷ್ಟ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಗಳಿಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕನಾಗಿ ನಾನು ಈ ಕೆಳಕಂಡಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ.

1)ಕೇಂದ್ರ-ರಾಜ್ಯ ಸರ್ಕಾರ ವೈಫಲ್ಯಗಳಿಂದಾಗಿ ಕೊರೋನಾ ಹರಡಿರುವುದರಿಂದ, ಕೊರೋನಾ ಸಂಬಂಧಿತ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು.
2)ಎಲ್ಲಾ ಆಸ್ಪತ್ರೆಗಳಿಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಅನ್ನು ಮೊದಲು ನಿಗಧಿಪಡಿಸಬೇಕು.
ಚಿಕಿತ್ಸೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಯಾಕೆ ಬೇಕೆಂದರೆ ಹಣ ಇರುವವರು ಮಾತ್ರ ವೆಂಟಿಲೇಟರ್ ಸೌಲಭ್ಯ ಪಡೆಯುತ್ತಾರೆ. ಬದುಕುವ ಶಕ್ತಿ ಇದ್ದು ಹಣ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಪಡೆಯಲಾಗದೆ ಬಡ, ಮಧ್ಯಮ ವರ್ಗದ ರೋಗಿಗಳು ಮರಣ ಹೊಂದಿದರೆ ಸರ್ಕಾರ ಕೊಲೆಗಡುಗನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಕೊರೋನಾದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿ ಹಣದ ದಂಧೆಗೆ ಅನೇಕರು ಇಳಿಯಬಹುದು.

ಈ ಎಲ್ಲಾ ಸಮಸ್ಯೆಗಳು ತಪ್ಪಬೇಕೆಂದರೆ ಸರ್ಕಾರ ತುರ್ತಾಗಿ ಉಚಿತ ಚಿಕಿತ್ಸೆಯನ್ನು ನೀಡುವ ಬಗ್ಗೆ ಘೋಷಿಸಬೇಕು ಮತ್ತು ಚಿಕಿತ್ಸೆ ನೀಡಲು ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಅನ್ನು ಕೂಡಲೇ ನಿಗಧಿಪಡಿಸಬೇಕು.
ಚಿಕಿತ್ಸೆಯ ಶಿಷ್ಠಾಚಾರ ಸರಿಯಾಗಿ ಪಾಲನೆಯಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಬೇಕು ಹಾಗೂ ಜನ ಸಾಮಾನ್ಯರು ಆತಂಕವಿಲ್ಲದೆ ಚಿಕಿತ್ಸೆ ತಡೆಯುವಂಥ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.