ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಕ್ಯಾಂಪಸ್ಸಿನಲ್ಲಿ ಡಿಸಿಎಂ ರೌಂಡ್ಸ್

ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಕ್ಯಾಂಪಸ್ಸಿನಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ಮಂಗಳವಾರ ಒಬ್ಬರೇ ಕಾಲ್ನಡಿಗೆಯಲ್ಲಿ ರೌಂಡ್ಸ್ ಹಾಕಿ ಪರಿಶೀಲಿಸಿದರು.

ಅದಕ್ಕೂ ಮೊದಲು ಮಧ್ಯಾಹ್ನ ಸಮೀಪದಲ್ಲೇ ಇದ್ದ ತಮ್ಮ ಇಲಾಖೆಯ ಸಭೆಯೊಂದರಲ್ಲಿ ಪಾಲ್ಗೊಂಡು ಹೊರಬಂದ ಡಿಸಿಎಂ ನೇರವಾಗಿ ಪಾಲಿಟೆಕ್ನಿಕ್ ಕ್ಯಾಂಪಸ್ಸಿಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟರು. ಇಡೀ ಪ್ರದೇಶವನ್ನು ಒಂದು ಸುತ್ತು ಹಾಕಿದ ಅವರು, ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜ್, ಸೆಕ್ರೆಟರಿಯೇಟ್ ಪ್ರಾಕ್ಟೀಸ್ ಕಾಲೇಜ್ ಸೇರಿದಂತೆ ಎಲ್ಲ ಕಡೆಗಳಲ್ಲು ಕಾಲ್ನಡಿಗೆಯಲ್ಲೇ ಸುತ್ತಾಡಿದರು.

ಈ ವೇಳೆಯಲ್ಲಿ ಕ್ಯಾಂಪಸ್ಸಿನ ಸ್ವಚ್ಚತೆ, ಕಟ್ಟಡಗಳು ಮತ್ತು ಪ್ರಯೋಗಾಲಯ, ಹಾಸ್ಟೆಲ್ ಗಳ ನಿರ್ವಹಣೆ ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರು. ಜತೆಗೆ ಅಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದರು.

ಕೈಗಾರಿಕೆಗಳಲ್ಲಿ ಹೂಡಿಕೆ: ತೈವಾನ್ ಅಧಿಕಾರಿಗಳ ಜತೆ ಡಿಸಿಎಂ ಮಾತುಕತೆ

File photo:

ಬೆಂಗಳೂರು: ಕೋವಿಡ್ ನಂತರ ರಾಜ್ಯದಲ್ಲಿ ಬಂಡವಾಳ ಹೂಡಲು ತೈವಾನ್ ಕೈಗಾರಿಕೋದ್ಯಮಿಗಳು ಉತ್ಸಾಹ ತೋರುತ್ತಿದ್ದು, ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಆ ದೇಶದ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಬೆಂಗಳೂರನಲ್ಲಿ ಮಂಗಳವಾರ ತೈವಾನ್ ಆರ್ಥಿಕ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಜಾಸನ್ ತ್ಸು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಡಿಸಿಎಂ, ಕರ್ನಾಟಕವು ಕೊರೋನೋತ್ತರ ಕಾಲದಲ್ಲಿ ಹೂಡಿಕೆ ಮಾಡಲು ಪ್ರಶಸ್ತ್ಯವಾಗಿದ್ದು ಉದ್ಯಮಸ್ನೇಹಿ ವಾತಾವರಣ ಮತ್ತು ಕೈಗಾರಿಕಾಪೂರಕ ನೀತಿಯನ್ನು ಹೊಂದಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಮಾತುಕತೆ ಹಂತದಲ್ಲಿಯೇ ಹೂಡಿಕೆ ಬಗ್ಗೆ ಒಲವು ತೋರಿದ ತೈವಾನ್ ಅಧಿಕಾರಿಗಳು, ಜಪಾನ್ ಉದ್ಯಮಿದಾರರಿಗೆ ತುಮಕೂರು ಬಳಿ ಪ್ರತ್ಯೇಕ ಟೌನ್ ಶಿಪ್ ಕಟ್ಟಿಕೊಟ್ಟಂತೆಯೇ ನಮ್ಮ ಉದ್ಯಮಿದಾರರಿಗೂ ಪ್ರತ್ಯೇಕವಾದ ಟೌನ್ ಶಿಪ್ ನಿರ್ಮಿಸಿಕೊಡಿ. ಇದರಿಂದ ನಮ್ಮ ಹೂಡಿಕೆದಾರರು ಹೆಚ್ಚುಹೆಚ್ಚಾಗಿ ಉತ್ತೇಜಿತರಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದಾರೆಂದು ಡಿಸಿಎಂ ಅವರ ಗಮನ ಸೆಳೆದರು.

ಇದಕ್ಕೆ ಸಕಾರಾತ್ಮವಾಗಿ ಸ್ಪಂಧಿಸಿದ ಉಪ ಮುಖ್ಯಮಂತ್ರಿ, ತೈವಾನ್ ಟೌನ್ ಶಿಪ್ ನಿರ್ಮಿಸುವ ಬಗ್ಗೆ ಆದಷ್ಟು ಬೇಗ ನಮ್ಮ ಕೈಗಾರಿಕೆ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಕೈಗಾರಿಕಾಭಿವೃದ್ಧಿ ಮಂಡಳಿಯೇ ಅದನ್ನು ಅಭಿವೃದ್ಧಿ ಮಾಡಿಕೊಡಲಿದೆ ಎಂದು ತೈವಾನ್ ಅಧಿಕಾರಿಗಳಿಗೆ ಭರವಸೆ ನೀಡಿದರು.

ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಕ್ರಿಯೆಗಳು ತುಂಬಾ ಸುಲಭ. ಭೂ ಸ್ವಾಧೀನ ಪ್ರಕ್ರಿಯೆಗಳು ಸರಳವಾಗಿವೆ. ಉದ್ದಿಮೆದಾರರು ತಮಗೆಲ್ಲಿ ಅನುಕೂಲವಾಗುತ್ತದೋ ಅಲ್ಲಿ ಭೂಮಿ ನೀಡಲಾಗುವುದು. ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದ ಡಿಸಿಎಂ, ತೈವಾನ್ ದೇಶದಿಂದ ಗರಿಷ್ಠ ಹೂಡಿಕೆಯನ್ನು ಕರ್ನಾಟಕ ನಿರೀಕ್ಷಿಸುತ್ತಿದೆ ಎಂದರು.

ಎಲ್ ಇಡಿ, ಮೊಬೈಲ್ ಮುಂತಾದ ಕ್ಷೇತ್ರಗಳಲ್ಲಿ ಕ್ಲಸ್ಟರ್ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಒಲವು ತೋರಿದ ತೈವಾನ್ ನಿಯೋಗವು, ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ತೈವಾನೀಯರು ಉತ್ಸುಕರಾಗಿದ್ದಾರೆ ಎಂದಾಗ ಅದಕ್ಕೂ ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರು. ಜತೆಗೆ, ಎಲೆಕ್ಟ್ರಾನಿಕ್ ವಲಯದಲ್ಲಿ ಕರ್ನಾಟಕ ಮತ್ತು ತೈವಾನ್ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಅವರು ಆಹ್ವಾನ ನೀಡಿದರು.

ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವಿದೆ. ಅದಕ್ಕೆ ಪೂರಕವಾದ ಸರಪಳಿಯೂ ಬಲಿಷ್ಠವಾಗಿದೆ. ಈ ನಿಟ್ಟಿನಲ್ಲಿ ತೈವಾನ್ ಹೂಡಿಕೆದಾರರಿಗೆ ಸರ್ವರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.

ಟಿಈಸಿಸಿ ಕೇಂದ್ರ ಸ್ಥಾಪಿಸಿ:
ರಾಜಧಾನಿ ಬೆಂಗಳೂರಿನಲ್ಲಿ ತೈವಾನ್ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ (ಟಿಈಸಿಸಿ) ಸ್ಥಾಪಿಸುವಂತೆ ಉಪ ಮುಖ್ಯಮಂತ್ರಿ ಅವರು ತೈವಾನ್ ಅಧಿಕಾರಗಳನ್ನು ಕೋರಿದರು. ಅದಕ್ಕೆ ಕೇಂದ್ರ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಡಿಸಿಎಂ ಜತೆ, ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರೆ, ತೈವಾನ್ ಕಡೆಯಲ್ಲಿ ಟಿಈಸಿಸಿಯ ವಿಜ್ಞಾನ ತಂತ್ರಜ್ಞಾನ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಚಿನ್ ತ್ಸಾನ್ ವಾಂಗ್, ಟಿಈಸಿಸಿ ಆರ್ಥಿಕ ವಿಭಾಗದ ಮುಖ್ಯಸ್ಥ ಫಿಲ್ ಚಾಂಗ್ ಮುಂತಾದವರು ಇದ್ದರು.

ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ: ಸ್ಥಳ ಪರಿಶೀಲಿಸಿದ ಡಿಸಿಎಂ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದ 23 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ಹಾಗೂ ಸೆಂಟ್ರಲ್‌ ಪಾರ್ಕ್ ನಿರ್ಮಾಣಕ್ಕೆ ಇದೇ 27ರಂದು ಭೂಮಿಪೂಜೆ ನಡೆಯಲಿದ್ದು, ಅದಕ್ಕೆ ಪೂವಭಾವಿಯಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉನ್ನತ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ವ್ಯಾಪಕ ಪರಿಶೀಲನೆ ನಡೆಸಿದ ಅವರು, ಕಾರ್ಯಕ್ರಮವು ಗೊಂದಲ ಇಲ್ಲದೆ ಸರಳವಾಗಿ, ಅರ್ಥಪೂರ್ಣವಾಗಿ ನಡೆಯಬೇಕು. ಹೆಚ್ಚುಜನ ಸೇರಲು ಅವಕಾಶ ನೀಡಬಾರದು. ಕೋವಿಡ್‌ 19 ಇರುವ ಕಾರಣದಿಂದ ಹೆಚ್ಚು ಎಚ್ಚರಿಕೆ ವಹಿಸಬೇಕು. ಸರಕಾರ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌, ಡಿಸಿಎಂ ಕಾರ್ಯದರ್ಶಿ ಪ್ರದೀಪ್‌ ಪ್ರಭಾಕರ್‌, ಉದ್ಯಮಿ ಪ್ರಶಾಂತ ಪ್ರಕಾಶ ಹಾಗೂ ವಿಮಾನ ನಿಲ್ಧಾಣದ ಹಿರಿಯ ಅಧಿಕಾರಿಗಳು ಹಾಜರಿದ್ದರು.

ನಮ್ಮ ರಾಜ್ಯದ ಮಟ್ಟಿಗೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಇದೊಂದು ಅಪರೂಪದ ಸ್ಮಾರಕವಾಗಲಿದ್ದು, ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ನಮ್ಮ ರಾಜ್ಯದ ಭವ್ಯ ಪರಂಪರೆಯನ್ನು ಸಾರಿ ಹೇಳುವ ರೀತಿಯಲ್ಲಿ ಇರುತ್ತದೆ. ವಿಶಾಲವಾದ ಉದ್ಯಾನವನದಲ್ಲಿ ನಮ್ಮ ನಾಡಪ್ರಭುಗಳ ಪ್ರತಿಮೆ ವಿರಾಮಜಮಾನವಾಗಿ ಕಾಣುವಂತೆ ಯೋಜನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಇದೇ 27ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಮೆ‌ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿದ್ದಾರೆ ಎಂದರು.

ಬಿಜೆಪಿ ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಹೊರಟಿದೆ: ಡಿ.ಕೆ ಶಿವಕುಮಾರ್

ಬೆಂಗಳೂರು:ರಾಜ್ಯ ಸರಕಾರಗಳ ವ್ಯಾಪ್ತಿಯಲ್ಲಿರುವ ಕಾಯ್ದೆಗಳ ಬದಲಾವಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ರವಾನಿಸಿದ್ದು, ಇದು ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮ ಪೂರ್ವ ತಯಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟುವ ಸಂಕಲ್ಪ ಕೈಗೊಂಡರು. ಜತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

ಕಾಂಗ್ರೆಸ್ ಪಕ್ಷವು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಜನರಿಗೆ ಕೃಷಿ ಮಾಡಲು ಭೂಮಿ ನೀಡಿದೆ. ಅದರೆ ಈಗಿನ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ರೈತರಿಗೆ ಮರಣ ಶಾಸನ ಬರೆಯುತ್ತಿದೆ. ಅದೇ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇನ್ನು ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ತಂದ ಕಾರ್ಮಿಕ ಕಾಯ್ದೆಯನ್ನು ಮೂರು ವರ್ಷ ರದ್ದು ಮಾಡಲು ಹೊರಟಿದ್ದಾರೆ.

ಇನ್ನು ಅವೈಜ್ಞಾನಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ. ಬೆಲೆ ಕಡಿಮೆ ಮಾಡಬೇಕಾದ ಸಮಯದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಬೆಲೆ ಏರಿಸಿ ಕೇಂದ್ರ ಸರ್ಕಾರ ಜನ ವಿರೋಧಿ ತೀರ್ಮಾನ ಕೈಗೊಂಡಿದೆ.

ಈ ಎಲ್ಲ ವಿಚಾರವಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಿ, ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ನಿಮಗೆ ಸಂದೇಶ ರವಾನಿಸುತ್ತೇವೆ.

ನಾವು ಸಂಪೂರ್ಣ ಸಹಕಾರ ನೀಡಿದರೂ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಯೂಟರ್ನ್ ಸರ್ಕಾರ. ಬೆಳಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆ ಬದಲಾಯಿಸುತ್ತದೆ. ಅಧಿವೇಶನ ಕರೆಯಲಿ ಎಲ್ಲವನ್ನು ಬಿಚ್ಚಿಡುತ್ತೇವೆ. ನಾನಾಗಲಿ ನಮ್ಮ ನಾಯಕರಾದ ಸಿದ್ದರಾಮಯ್ಯನವರಾಗಲಿ ಏನನ್ನೂ ಹೇಳುವುದೇ ಬೇಡ, ಮಾಧ್ಯಮಗಳೇ ಎಲ್ಲವನ್ನು ನಿಮ್ಮ ಮುಂದೆ ವಿವರಿಸುತ್ತಿವೆ.

ನಾವು ಸಲಹೆ ಕೊಡುತ್ತೇವೆ ಕೇಳಿ ಎಂದರೆ ನಮ್ಮ ಸಲಹೆ ಬೇಡ ಎಂದರು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಸಹಕಾರ ನೀಡಿದೆವು. ನಾವು ಈ ವಿಚಾರದಲ್ಲಿ ತೋರಿದ ಹೃದಯ ಶ್ರೀಮಂತಿಕೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಕಡೆಗೆ ಯಾವ ಮಟ್ಟಕ್ಕೆ ಇಳಿದರು ಎಂದರೆ, ಕಾರ್ಮಿಕರಿಗೆ ನೀಡುವ ಕಿಟ್ ಅನ್ನು ತಮ್ಮ ಫೋಟೋ ಹಾಕಿಕೊಂಡು ತಮ್ಮ ಬೆಂಬಲಿಗ ಮತದಾರರಿಗೆ ಕೊಟ್ಟರು.

ಅಧಿಕಾರ ಇಲ್ಲದಿದ್ದರೂ, ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯದ ಉದ್ದಗಲಕ್ಕೂ ಸಹಾಯ ಮಾಡಿದರು. ಆಮೂಲಕ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಿದರು. ರೈತರಿಗೆ ಸಹಾಯ ಮಾಡಿ ಅಂತಾ ಕೇಳಿಕೊಂಡರೂ ಅವರ ನೆರವಿಗೆ ಬರಲಿಲ್ಲ. ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿಲ್ಲ. ರೈತರ ಸಂಕಷ್ಟ ನೋಡಲಾಗದೆ ಕಾಂಗ್ರೆಸ್ ನಾಯಕರು 100 ಕೋಟಿ ರೂಪಾಯಿಗೂ ಹೆಚ್ಚಿನ ತರಕಾರಿ ಖರೀದಿಸಿದರು. ಆ ಮೂಲಕ ಬೆಲೆ ಕುಸಿತ ತಪ್ಪಿಸಿದರು. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ಆದರೆ ನಮಗೆ ಜನರ ಬಗ್ಗೆ ಇರುವ ಕಾಳಜಿ, ಬದ್ಧತೆ ಮುಖ್ಯ.

ಹೊರಗಡೆಯಿಂದ ಬರುವ ಜನರಿಗೆ ವಿಮಾನ ಸೌಲಭ್ಯ ಕೊಡುತ್ತೀರಿ. ಆದರೆ ದೇಶ ಕಟ್ಟುವ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಕಲ್ಪಿಸಲಿಲ್ಲ. ಇವರ ಬಳಿ ಮೂರು ಪಟ್ಟು ಹಣ ವಸೂಲಿ ಮಾಡಲು ಹೊರಟರು. ಇವರ ಪ್ರಯಾಣಕ್ಕೆ ಸಹಕರಿಸುವ ಬಗ್ಗೆ ನಮ್ಮ ಸಿದ್ದರಾಮಯ್ಯನವರು ಹಾಗೂ ರಾಹುಲ್ ಗಾಂಧಿ ಅವರಿಗೆ ಹೇಳಿದಾಗ ಮೊದಲು ಆ ಕೆಲಸ ಮೊದಲು ಮಾಡಿ ಎಂದು ಪ್ರೋತ್ಸಾಹ ನೀಡಿದರು.

ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡುವ ಆಹಾರ ಪದಾರ್ಥಗಳನ್ನೂ ದುರುಪಯೋಗ ಮಾಡಿಕೊಂಡರು. ಈ ಬಗ್ಗೆ ದೂರು ಕೊಟ್ಟರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಇಂತಾ ಭಂಡತನ ಯಾಕೆ ಮುಖ್ಯಮಂತ್ರಿಗಳೇ?

70 ವರ್ಷ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಅಂತಾ ಕೇಳುತ್ತಾರಲ್ಲಾ, ಈ ಬಡವರು, ಕಾರ್ಮಿಕರಿಗೆ ಧ್ವನಿಯಾಗಿ, ಆರ್ಥಿಕ ಬಲ ತುಂಬಿ ದೇಶವನ್ನು ಕಟ್ಟಿದ್ದೇವೆ. ಇದು ದೇಶಕ್ಕೆ ಕಾಂಗ್ರೆಸ್ ಕೊಡುಗೆ.

ಕೋವಿಡ್ ವಿಚಾರದಲ್ಲಿ ಸರ್ಕಾರ ವಿಫಲ:

ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅವರ ವೈಫಲ್ಯಗಳನ್ನು ಬಿಂಬಿಸುತ್ತಿರುವ ಮಾಧ್ಯಮಗಳೇ ಅದಕ್ಕೆ ಸಾಕ್ಷಿ. ನಿಮಗೆ ಧನ್ಯವಾದಗಳು. ರಾಜ್ಯದಲ್ಲಿ ಸಾವು-ನೋವು ಹೆಚ್ಚುತ್ತಿರುವ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ನಮ್ಮ ಸಲಹೆ ಕೇಳಿದರಷ್ಟೇ ಕೊಡುತ್ತೇವೆ.

ಕಾರ್ಯಕರ್ತರಿಗೆ ಧ್ವನಿಯಾಗಲು ಈ ಕಾರ್ಯಕ್ರಮ:

ಈ ಕಾರ್ಯಕ್ರಮ ನನ್ನನ್ನಾಗಲಿ, ಕಾರ್ಯಾಧ್ಯಕ್ಷರನ್ನಾಗಲಿ ಅಥವಾ ಇತರೆ ನಾಯಕರನ್ನು ಬಿಂಬಿಸಿಕೊಳ್ಳಲು ಮಾಡುತ್ತಿಲ್ಲ. ಈ ಕಾರ್ಯಕ್ರಮವನ್ನು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಕಾರ್ಯಕರ್ತರ ಧ್ವನಿಯಾಗಲು ನಡೆಸಲಾಗುತ್ತಿದೆ. ಕಾರ್ಯಕರ್ತರು ಶಕ್ತಿಶಾಲಿಯಾದರೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂಬುದು ನನ್ನ ನಂಬಿಕೆ.

ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ನನಗೆ ಇದು ಅಧಿಕಾರವಲ್ಲ, ಜವಾಬ್ದಾರಿ. ಪಕ್ಷದ ಕಾರ್ಯಕರ್ತನಾಗಿ ನಾನು ನಿಮ್ಮೆಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲು ಬಯಸುತ್ತೇನೆ.

ನನ್ನನ್ನು ಜೈಲಿಗೆ ಕಳುಹಿಸಿದಾಗ ಡಿ.ಕೆ ಶಿವಕುಮಾರ್ ರಾಜಕೀಯ ಅಂತ್ಯವಾಯ್ತು ಅಂತಾ ಮಾತನಾಡಿದರು. ನಮ್ಮ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನ್ನ ಜತೆ ಒಂದು ಗಂಟೆ ಮಾತುಕತೆ ನಡೆಸಿ ನನಗೆ ಶಕ್ತಿ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಎಷ್ಟು ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನಾವು ಈ ಸಂದರ್ಭದಲ್ಲಿ ಯೋಚಿಸಬೇಕು.

ಎನ್ಎಸ್ ಯುಐ ಹೆಣ್ಣುಮಗಳು ಇಂದು ಅಧ್ಯಕ್ಷೆಯಾಗಿದ್ದಾಳೆ. ಒಂದು ಕಾಲದಲ್ಲಿ ಮಹಿಳಾ ಕಾಂಗ್ರೆಸ್ ನವರಿಗೆ ವೇದಿಕೆ ಮೇಲೆ ಜಾಗ ಸಿಗುತ್ತಿರಲಿಲ್ಲ. ಎನ್ ಎಸ್ ಯುಐ, ಯೂತ್ ಕಾಂಗ್ರೆಸ್ ಅನ್ನು ಕೇವಲ ಹೋರಾಟ ಮಾಡಲು ಬಳಸಿಕೊಳ್ಳುತ್ತಿದ್ದರು. ಇದನ್ನು ನೋಡಿದ್ದೇನೆ, ಅನುಭವಿಸಿದ್ದೇನೆ. ಇವರು ಇಲ್ಲದಿದ್ದರೆ ಪಕ್ಷ ಇಲ್ಲ. ಇವರು ಪಕ್ಷದ ಆಧಾರ ಸ್ಥಂಭ.

ಹೀಗಾಗಿ ಈ ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯಿಂದ ಕೇಡರ್ ಬೇಸ್ ಪಕ್ಷವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೂಡ ಬೂತ್ ಮಟ್ಟದಲ್ಲಿ ಪಕ್ಷ ಬಲವಾಗುವಂತೆ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾವು ಎಲ್ಲರೂ ದೇಶಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಬೇಕು. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಈ ರಾಷ್ಟ್ರ ಧ್ವಜವನ್ನು ಹಾಕಿಕೊಳ್ಳಲು ಬಿಜೆಪಿ, ಜನತಾದಳ, ಕಮ್ಯುನಿಸ್ಟರಿಗೆ ಶಕ್ತಿ ಇಲ್ಲ. ಆದರೆ ನಿಮಗೆ ಈ ಭಾಗ್ಯ ಇದೆ. ದೇಶ ಕಟ್ಟಲು ಒಂದು ಪಕ್ಷ ಸ್ಥಾಪಿತವಾಗಿದೆ ಎಂದಾದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನೀವು ಆ ಪಕ್ಷದ ಸದಸ್ಯರಾಗಿರುವುದಕ್ಕೆ ಹೆಮ್ಮೆ ಪಡಿ.

ಬಾಬು ಜಗಜೀವನ್ ರಾಮ್ ಕೊನೆಯಾಸೆ:

ಒಮ್ಮೆ ರಾಜ್ಯದ ಯುವ ಘಟಕ, ಎನ್ ಎಸ್ ಯುಐ ಹಾಗೂ ಇತರೆ ಪ್ರತಿನಿಧಿಗಳು ನಾವು ಸಮಾವೇಶಕ್ಕೆ ತೆರಳಿದ್ದಾಗ ರಾಷ್ಟ್ರೀಯ ಅಧ್ಯಕ್ಷರಾದ ರಾಜೀವ್ ಗಾಂಧಿ ಅವರನ್ನು ನೋಡಲು ಕಾಯುತ್ತಿದ್ದೆವು. ಆಗ ಒಬ್ಬ ವಯಸ್ಸಾದವರು ಗೇಟ್ ಬಳಿ ಬಂದಾಗ ಒಳಗಡೆಯಿಂದ ಓಡಿ ಬಂದ ರಾಜೀವ್ ಗಾಂಧಿ ಅವರು ಅವರನ್ನು ಸ್ವಾಗತಿಸಿ ಕರೆದೊಯ್ದು, ಸುಮಾರು ಹೊತ್ತು ಮಾತನಾಡಿಸಿ ಕಳುಹಿಸಿದರು. ನಾವು ಒಳಗೆ ಹೋದಾಗ, ಅವರು ಯಾರು ಎಂದು ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನಾನು ನಿಮ್ಮ ತಾತ, ತಾಯಿ ಜತೆ ಕೆಲಸ ಮಾಡಿದ್ದೀನಿ. ಭಿನ್ನಾಭಿಪ್ರಾಯವಾಗಿ ಬೇರೆ ಪಕ್ಷ ಕಟ್ಟಿದೆ. ನಾನು ಸಾಯೋ ಮುನ್ನ ಕಾಂಗ್ರೆಸಿಗನಾಗಿಯೇ ಸಾಯಬೇಕು ಎಂದು ಹೇಳಿದ್ದಾಗಿ ತಿಳಿಸಿದರು. ಇದು ಈ ಪಕ್ಷಕ್ಕೆ ಇರುವ ಶಕ್ತಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಧ್ವಜವೇ ನಮ್ಮ ಧರ್ಮ.

ತಲ್ಚೇರ್‌ ರಸಗೊಬ್ಬರ ಕಾರ್ಖಾನೆ,13270 ಕೋಟಿ ರೂ. ಪುನಶ್ಚೇತನ: ಸಚಿವ ಸದಾನಂದ ಗೌಡ

ನವದೆಹಲಿ, ಜೂನ್‌ 23– ಒರಿಸ್ಸಾದ ತಲ್ಚೇರನಲ್ಲಿರುವ ರಸಗೊಬ್ಬರ ಕಾರ್ಖಾನೆಯ (ಟಿಎಎಲ್‌) ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗೊಳಿಸಲು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಟಿಎಫೆಲ್‌ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಸ್. ಎನ. ಯಾದವ್‌, ನಿರ್ದೇಶಕ (ಆಪರೇಷನ್ಸ್) ಶ್ರೀ ಎಸ್‌ ಗಾವಡೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ದೆಹಲಿಯಲ್ಲಿ ಇಂದು ಯೋಜನೆಯ ಪ್ರಗತಿ ಪರಿಶೀಲಿಸಿದರು.

ಯೋಜನೆಯ ಪ್ರಗತಿ ಬಗ್ಗೆ ವಿವರ ನೀಡಿದ ಶ್ರೀ ಯಾದವ್‌ ಅವರು – ಕೊರೊನಾ ರೋಗ ಹಾಗೂ ಲಾಕ್ಡೌನ್‌ನಿಂದಾಗಿ ಮಾನವ ಸಂಪನ್ಮೂಲ ಹಾಗೂ ಅಗತ್ಯ ಸರಕುಗಳ ಕೊರತೆಯಾಗಿತ್ತು, ಈಗ ಮತ್ತೆ ಕೆಲಸ ಆರಂಭವಾಗಿದೆ, ಇದುವರಗಿನ ಪ್ರಗತಿಯ ಪ್ರಕಾರ ಯೋಜನೆ ಪೂರ್ಣಗೊಳ್ಳುವುದು ನಿಗದಿತ ವೇಳಾಪಟ್ಟಿಗಿಂತ (ಸೆಪ್ಟೆಂಬರ್‌ 2023) 6 ತಿಂಗಳು ವಿಳಂಬವಾಗಬಹುದಾಗಿದೆ ಎಂದರು.
ಇದಕ್ಕೊಪ್ಪದ ಸಚಿವರು ವ್ಯರ್ಥವಾಗಿರುವ ಸಮಯವನ್ನು ತುಂಬಿಕೊಳ್ಳಲ ಏನೆಲ್ಲಾ ಅಗತ್ಯವಿದೆಯೋ ಅದನ್ನು ಮಾಡಿ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸದಲ್ಲಿ ಸ್ವಲ್ಪವೂ ವಿಳಂಬ ಮಾಡುವುದಿಲ್ಲ. ಅಗತ್ಯ ಬೆಂಬಲ, ಸಹಕಾರ ನೀಡುತ್ತೇವೆ. ಒಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯಬೇಕು ಎಂದು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಗೇಲ್‌ ಇಂಡಿಯಾ (GAIL 29.67%), ಆರ್‌.ಸಿ.ಎಫ್‌ (RCF 29.67%) ಕೋಲ್‌ ಇಂಡಿಯಾ(CIL 29.67%) ಹಾಗೂ ಎಫ್‌ಸಿಐಎಲ್ಲಿನ (FCIL’s 10.99 %.) ಜಂಟಿ ಉದ್ಯಮವಾಗಿರುವ ಟಿಎಫ್‌ಎಲ್‌ ಪನಶ್ಚೇತನಕ್ಕಾಗಿ 13270 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅತ್ಯಂತ ತಾಂತ್ರಿಕ ಕ್ಷಮತೆಯ ಹಾಗೂ ಪರಿಸರ ಸ್ನೇಹಿ ಇಂಧನ ವ್ಯವಸ್ತೆಯನ್ನು (ಕೋಲ್‌ ಗ್ಯಾಸಿಫಿಕೇಶನ್‌) ಕಾರ್ಖಾನೆಯಲ್ಲಿ ಅಳವಡಿಸಲಾಗುತ್ತಿದೆ.

ಸಭೆಯ ನಂತರ ಮಾಧ್ಯಮಕ್ಕೆ ಹೇಳಿಕೆಯೊಂದನ್ನು ನೀಡಿದ ಸಚಿವರು ಟಿಎಫೆಲ್ ಪುನಶ್ಚೇತನ ಯೋಜನೆ ಪೂರ್ಣಗೊಂಡಾಗ ಕಾರ್ಖಾನೆಯು ವಾರ್ಷಿಕವಾಗಿ 12.7 ಲಕ್ಷ ಟನ್‌ ರಸಗೊಬ್ಬರ ವಿಶೇಷವಾಗಿ ಯೂರಿಯಾ ಉತ್ಪಾದನೆ ಮಾಡುತ್ತದೆ. ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದರು.

ಸ್ವಾವಲಂಬಿ ಭಾರತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪ. ರಸಗೊಬ್ಬರ ಉತ್ಪಾದನೆಯಲ್ಲಿಯೂ ಸ್ವಾವಲಂಬನೆ ಗಳಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಫ್‌ಸಿಐಲ್‌ (HFCL) ರಸಗೊಬ್ಬರ ಕಾರ್ಖಾನೆಯ ಘೋರಕ್ಪುರ ಹಾಗೂ ಸಿಂದ್ರಿ ಘಟಕಗಳು ಮತ್ತು ಎಚೆಫ್‌ಸಿಎಲ್‌ನ (HFCL) ಬರೌಣಿ ಘಟಕದ ಪುನಶ್ಷೇತನ ಕಾಮಗಾರಿ ಪ್ರಗತಿಯಲ್ಲಿದೆ. ಇವೆಲ್ಲ ಪೂರ್ಣಗೊಂಡಾಗ ಭಾರತವು ರಸಗೊಬ್ಬರ ಸ್ವಾವಲಂಬನೆಯತ್ತ ಮಹತ್ತರ ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಹಿಸುವುದಿಲ್ಲ,ದೂರುಗಳಿಗೆ ನಿರ್ದೇಶಕರೇ ಹೊಣೆ : ಸಚಿವ ಸುಧಾಕರ್ ಎಚ್ಚರಿಕೆ

ಬೆಂಗಳೂರು : ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ತಂದೆ, ಪತ್ನಿ ಮತ್ತು ಪುತ್ರಿಗೆ ಕೊರೋನಾ ಸೋಂಕು ತಗುಲಿ ಸ್ವಯಂ ಗೃಹಬಂಧನದಲ್ಲಿರುವ ಸಚಿವರು ಮಂಗಳವಾರ ನಿವಾಸದಿಂದಲೇ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದದ ಮೂಲಕ ಕೋವಿಡ್‌ ಬೆಳವಣಿಗೆಗಳ ಪರಾಮರ್ಶೆ ನಡೆಸಿದರು.

ರೋಗಿಗಳನ್ನು ದಾಖಲು ಮಾಡಿಕೊಳ್ಳುವ ವಿಷಯದಲ್ಲಿ ಆಗುತ್ತಿರುವ ಗೊಂದಲಗಳು, ಕಳಪೆ ಆಹಾರ ವಿತರಣೆ ಆಗತ್ತಿರುವ ಮತ್ತು ಸ್ವಚ್ಛತೆ ಸರಿಯಿಲ್ಲದಿರುವುದಕ್ಕೆ ಸಂಬಂಧಿಸಿದಂತೆ ಎರಡು ಮೂರು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಗಲು – ರಾತ್ರಿ ಎನ್ನದೆ ಕಷ್ಟಪಟ್ಟು ಎಲ್ಲರೂ ಕೆಲಸ ಮಾಡಿ, ಬೆಂಗಳೂರು ನಗರ ಮತ್ತು ರಾಜ್ಯದ ಬಗ್ಗೆ ದೇಶವೇ ಮೆಚ್ಚುವಂತಹ ಕೆಲಸ ಮಾಡಿದ್ದು ಈಗ ಇಂತಹ ದೂರುಗಳು ಬಂದರೆ ಸಹಿಸಲು ಆಗುವುದಿಲ್ಲ ಎಂದರು.

ಕೋವಿಡ್‌ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ. ಇನ್ನು ಮುಂದೆ ದೂರು ಮರುಕಳಿಸದಂತೆ ಎಚ್ಚರವಹಿಸಬೇಕು. ಎಚ್ಚರಿಕೆಯಿಂದ ಕತ೯ವ್ಯ ನಿವ೯ಹಿಸುವಂತೆ ಸೂಚಿಸಿದ್ದರೂ, ಲೋಪಗಳು ಆಗುತ್ತಿದ್ದರೆ ನಿದೇ೯ಶಕರುಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದ ಸಚಿವರು, ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿದೇ೯ಶಕರುಗಳ ಜತೆ ಮಾತನಾಡಿ ಮಾಧ್ಯಮ ವರದಿಗಳ ಬಗ್ಗೆ ವಿವರಣೆ ಪಡೆದರು,
ಸಂಸ್ಥೆಯ ಮುಖ್ಯಸ್ಥರಿಗೆ ಇದು ಕೊನೆಯ ಎಚ್ಚರಿಕೆ. ಮುಂದೆ ಈ ರೀತಿ ಮಾತನಾಡುವುದಿಲ್ಲ, ಬದಲಿಗೆ ದೂರು ಬಂದ ಸಂಸ್ಥೆಗಳ ಹೊಣೆಯನ್ನು ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ವಹಿಸಲಾಗುವುದು. ಒಟ್ಟಾರೆ ವ್ಯವಸ್ಥೆ ಪಾರದಶ೯ಕವಾಗಿ ಗರಿಷ್ಠ ಬದ್ಧತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಸಕಾ೯ರ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು.

ಇನ್ನು ಮುಂದೆ ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಕಳುಹಿಸಿ ನಿಗಾ ವ್ಯವಸ್ಥೆ ಮಾಡಬೇಕು. ರೋಗ ಲಕ್ಷಣಗಳಿದ್ದು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಮಾತ್ರವೇ ಕೋವಿಡ್‌ ಆಸ್ಪತ್ರೆಗಳಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಬೇಕು. ಇವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ನೀಡುವ ಜತೆಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಸ್ವಚ್ಛತೆ ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ಆಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ಸರಬರಾಜುದಾರರಿಗೆ ನೀಡಬೇಕು. ಪ್ರಮಾಣ ಹೆಚ್ಚು ನೀಡಿದರೂ ಪರವಾಯಿಲ್ಲ. ಹೆಚ್ಚುವರಿ ಹಣವನ್ನು ಸಕಾ೯ರ ಭರಿಸಲು ಸಿದ್ಧ ಎಂದರು.

ಚಿಕಿತ್ಸೆ ನೀಡಲು ತಜ್ಞ ಮತ್ತು ಹಿರಿಯ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ. ಕತ೯ವ್ಯಕ್ಕೆ ನಿಯೋಜನೆಗೊಂಡಿರುವ ತಜ್ಞರು, ವೈದ್ಯರು ಮತ್ತು ಪಿಜಿ ವಿದ್ಯಾಥಿ೯ಗಳ ಪಟ್ಟಿಯನ್ನು ಆಯಾ ವಾಡು೯, ಐಸಿಯು ಮುಂದೆ ಪ್ರಕಟಣಾ ಫಲಕದಲ್ಲಿ ಹಾಕಬೇಕು. ಜತೆಗೆ ಕ್ಯಾಮೇರಾ ಅಳವಡಿಸಿ ಕತ೯ವ್ಯಕ್ಕೆ ಹಾಜರಾಗುವವರು ತಮ್ಮ ಹೆಸರು ಹೇಳಿ ಒಳ ಹೋಗಬೇಕು. ಒಳಗೆ ಮತ್ತು ಹೊರಗೆ ಹೋಗುವ ಮುನ್ನ ಕಡ್ಡಾಯವಾಗಿ ಸಮಯ ನಮೂದಿಸಿ ಸಹಿ ಮಾಡಲೇಬೇಕು. ಈ ವ್ಯವಸ್ಥೆ ಬುಧವಾರದಿಂದಲೇ ಎಲ್ಲ ಕೋವಿಡ್‌ ಆಸ್ಪತ್ರೆಗಳಲ್ಲಿ ಜಾರಿಯಾಗಬೇಕು ಎಂದು ಸೂಚನೆ ನೀಡಿದರು.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೋವಿಡ್‌ ಕೇರ್‌ ಸೆಂಟರ್‌ಗಳು, ಅಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗಳಿಂದ ಆಂಬ್ಯುಲೆನ್ಸ್‌ ಅಥವಾ ಸಕಾ೯ರಿ ಬಸ್‌ಗಳ ಮೂಲಕ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ಸಚಿವ ಸುಧಾಕರ್‌ ಸಲಹೆ ನೀಡಿದರು.

ಕೋವಿಡ್‌ ಕಾರ್ಯಚಟುವಟಿಕೆಗಳಿಗೆ ನೀಯೋಜನೆಗೊಂಡಿರುವ ಹಿರಿಯ ಅಧಿಕಾರಿಗಳು ಮತ್ತು ಕೋವಿಡ್‌ ಆಸ್ಪತ್ರೆ ಮುಖ್ಯಸ್ಥರು, ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯ ರೊಂದಿಗೆ ಸಮನ್ವಯ ಇಟ್ಟುಕೊಂಡು ಆಯಾ ದಿನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಸೂಚನೆಗಳನ್ನು ಪಾಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ರೋಗ ಲಕ್ಷಣಗಳು ಇಲ್ಲದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲು ಮಾಡುವ ಮತ್ತು ನಿಗಾ ವಹಿಸುವುದಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ಮಾಗ೯ಸೂಚಿ ಬಿಡುಗಡೆ ಮಾಡಲಾಗುವುದು ಎಂದರು.

ಕ್ವಾರಂಟೈನ್‌ನಲ್ಲೂ ಕಾರ್ಯನಿರ್ವಹಣೆ:
ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡು ಸ್ವಯಂ ಗೃಹಬಂಧನದಲ್ಲಿರುವ ಸಚಿವ ಸುಧಾಕರ್‌ ಮನೆಯಲ್ಲಿ ಇದ್ದುಕೊಂಡೇ ಮಾಮೂಲಿನಂತೆ ಕಾರ್ಯಕ ನಿರ್ವಹಿಸಿದರು. ಬೆಳಗ್ಗೆ ಮೊಬೈಲ್‌ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಸಚಿವರು ಮಧ್ಯಾಹ್ನದ ನಂತರ ಕೋವಿಡ್‌ ಬೆಳವಣಿಗೆಗಳ ಮಾಹಿತಿ ಪಡೆದರು. ಬಳಿಕ ಹಿರಿಯ ಅಧಿಕಾರಿಗಳು ಮತ್ತು ಕೋವಿಡ್‌ ಆಸ್ಪತ್ರೆ ನಿರ್ದೇಶಕರುಗಳ ಜತೆ ವಿಡಿಯೋ ಸಂವಾದ ನಡೆಸಿದರು.
ಕುಟುಂಬ ಸದಸ್ಯರಿಗೆ ಸೋಂಕು ತಗುಲಿರುವ ಬಗ್ಗೆ ಸುದ್ದಿ ತಿಳಿದು ಹಾರೈಕೆಗಳ ಮಹಾಪೂರವೇ ಸಚಿವರಿಗೆ ಹರಿದು ಬಂದಿದ್ದು ತಮ್ಮ ಹಾಗೂ ಕುಟುಂಬ ಸದಸ್ಯರ ಬಗ್ಗೆ ಜನರು ತೋರಿಸಿದ ಅಭಿಮಾನ ಮತ್ತು ಕಾಳಜಿಗೆ ಧನ್ಯವಾದಗಳನ್ನು ಅರ್ಪಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.