ಬೆಂಗಳೂರು ನಗರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ; ಸುರೇಶ್‍ಕುಮಾರ್ ಪರಿಶೀಲನೆ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಬೆಂಗಳೂರು ಮಹಾನಗರ ಮತ್ತು ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ಕಡೇ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮಂಗಳವಾರ ಸಚಿವರು ವಿಕಾಸಸೌಧದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಪಿಂಪಿ ಉಪ ಆಯುಕ್ತರು, ಎಡಿಜಿಪಿ, ನಗರ ವ್ಯಾಪ್ತಿಯ ಡಿಸಿಪಿಗಳು, ಡಿಡಿಪಿಐಗಳು, ಬಿಇಒಗಳು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಬೆಂಗಳೂರು ಮಹಾನಗರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆ, ಸಾರಿಗೆ, ಮತ್ತು ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುರೇಶ್‍ಕುಮಾರ್ ಮಾರ್ಗದರ್ಶನ ನೀಡಿದರು.

ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷೆ, ಆರೋಗ್ಯ ತಪಾಸಣೆ, ಬಸ್ ಸೌಲಭ್ಯ ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಗೆ ಈ ಪರೀಕ್ಷೆಯಲ್ಲಿ ಪ್ರಥಮ ಆಧ್ಯತೆಯನ್ನು ನೀಡಲು ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸೊಂಕು ನಿವಾರಕ ದ್ರಾವಣದಿಂದ ಪ್ರತಿ ಪರೀಕ್ಷೆಯ ಮುನ್ನ ಹಾಗೂ ನಂತರದ ಅವಧಿಗಳಲ್ಲಿ ಸ್ಯಾನಿಟೈಸ್‌ ಮಾಡುವುದು ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಸ್ಕ ವಿತರಣೆಗೆ ಕ್ರಮ ವಹಿಸುವುದು, ಕಂಟೈನ್‌ಮೆಂಟ್‌ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ ವಿತರಿಸುವುದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್‌ಮೆಂಟ್‌ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿಯನ್ನು ನೀಡುವುದು, ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಎಲ್ಲಾ ಅಧಿಕಾರಿಗಳು ಸಮರ್ಪಣ ಮನೋಭಾವದಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವರು ನಿರ್ದೇಶಿಸಿದರು. ಯಾವುದೇ ಹಂತದಲ್ಲಿ ಪರೀಕ್ಷೆ ಕುರಿತು ಒಂದೇ ಒಂದ ಅಪಸ್ವರ ಬಾರದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಸಚಿವರು. ಪರೀಕ್ಷೆಯಲ್ಲಿ ಯಾವುದೇ ಒಂದೇ ಒಂದು ಅಪಸ್ವರ ಬಂದರೆ ಆಯಾ ವ್ಯಾಪ್ತಿಯ ಡಿಡಿಪಿಐ ಮತ್ತು ಬಿಇಒಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಕ್ಕಳು ತಮ್ಮ ಪೋಷಕರ ವಾಹನದಲ್ಲಿ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೇಂದ್ರದ ಹೊರಗೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸುವುದು ಹಾಗೆಯೇ ವಾಹನ ಪಾರ್ಕಿಂಗ್ ಕುರಿತಂತೆ ಹೆಚ್ಚಿನ ಗಮನ ಹರಿಸುವಂತೆ ಸಚಿವರು ಎಡಿಜಿಪಿಗೆ ಸಲಹೆ ನೀಡಿದರು. ಬುಧವಾರ ಅಣುಕು ಪರೀಕ್ಷಾ ಕೇಂದ್ರಗಳನ್ನು ನಡೆಸುವುದರಿಂದ ನಾಳೆಯಿಂದಲೇ ಪೊಲೀಸರು ಬೆಳಗ್ಗೆ 7 ಗಂಟೆಗೆ ಹಾಜರಿರುವವಂತೆ ಸೂಚನೆ ನೀಡಬೇಕೆಂದರು ಸುರೇಶ್ ಕುಮಾರ್ ಹೇಳಿದರು.

ಈಗಾಗಲೇ ಬೆಂಗಳೂರಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್ ಮುಗಿದಿದ್ದು, ನಾಳೆ ಬೆಳಗ್ಗೆ ಪುನಃ ಎಲ್ಲ ಕೇಂದ್ರಗಳ ಸ್ಯಾನಿಟೈಸೇಷನ್ ಮುಗಿಯಲಿದೆ. ಬುಧವಾರ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಯಲಿದ್ದು, ಆ ನಂತರ ಗುರುವಾರದ ಪರೀಕ್ಷಾ ಸಿದ್ಧತೆಗಾಗಿ ಕೇಂದ್ರಗಳ ಸ್ಯಾನಿಟೈಜೇಷನ್ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮಂಜುನಾಥ್‌ ತಿಳಿಸಿದರು.
ವಿಶೇಷವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪಾರ್ಕಿಂಗ್ ನಿರ್ವಹಣೆ ಮತ್ತು ಪರೀಕ್ಷಾ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಗಮನ ಹರಿಸಲು ನಮ್ಮ ಪೊಲೀಸ್ ಸಿಬ್ಬಂದಿಗೆ ಈ ಸಂಜೆಯೇ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಾಗುವುದು ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಡಿಜಿಪಿ ಮುರುಗನ್ ತಿಳಿಸಿದರು.

ಜಿಲ್ಲಾಧಿಕಾರಿ ಎಂ. ಶಿವಮೂರ್ತಿ ಮಾತನಾಡಿ, ಕಂಟೈನ್‍ಮೆಂಟ್ ವ್ಯಾಪ್ತಿಯಿಂದ ಬರುವ ಮಕ್ಕಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ನಮ್ಮ ಸಹಾಯದ ಅವಶ್ಯಕತೆ ಬಿದ್ದರೆ ತಮ್ಮನ್ನು ಸಂಪರ್ಕಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ತಮ್ಮತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಸಿದ್ಧತೆಗಳನ್ನು ವಿವರಿಸಿದ ಬಿಇಒಗಳು ತಮ್ಮ ಅಗತ್ಯಗಳನ್ನು ಸಭೆಯ ಗಮನಕ್ಕೆ ತಂದು ಪರಿಹರಿಸಿಕೊಂಡರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್, ಎಸಿಪಿ ಶ್ರೀಮತಿ ಆಶ್ವಿನಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ, ಬೆಂಗಳೂರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

20 ದಿನ ಸಂಪೂರ್ಣ ಲಾಕ್ ಡೌನ್ ಮಾಡಿ ಜನರ ಪ್ರಾಣ ಉಳಿಸಿ: ಎಚ್ಡಿಕೆ

ಬೆಂಗಳೂರು: ಉದ್ಯಾನ ನಗರಿಯಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೋನಾದಿಂದ ಜನರ ಜೀವ ರಕ್ಷಣೆಯಾಗಬೇಕಾದ್ರೆ ಕನಿಷ್ಟ 20 ದಿನ ಸಂಪೂರ್ಣ ಲಾಕ್ ಡೌನ್ ಮಾಡಬೇಕು ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಟ್ವೀಟ್ ಮೂಲಕ ಸರ್ಕಾರವನ್ನು ಒತ್ತಾಯಿಸಿರೋ ಎಚ್ಡಿಕೆ, ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ.‌ ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ‌ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ ಅಂತಾ ಸಲಹೆ ನೀಡಿದ್ದಾರೆ.

ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಿ. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡಬೇಕು. ಚಾಲಕರು, ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ದಕ್ಕಿಲ್ಲ. ಬರೀ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು. ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು. ಪ್ಯಾಕೇಜ್ ಘೋಷಣೆ ಮಾಡಿ, ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು.

ನಾದ ಬ್ರಹ್ಮನ ಜನ್ಮದಿನ: ಹಂಸಲೇಖರಿಗೆ‌ ಶುಭ ಕೋರಿದ ಸ್ಯಾಂಡಲ್ ವುಡ್

ಬೆಂಗಳೂರು:ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.69 ವಸಂತಗಳನ್ನು ಪೂರ್ಣಗೊಳಿಸಿರುವ ಸ್ಯಾಂಡಲ್ ವುಡ್ ನ ಲಿರಿಕಲ್,ಮ್ಯೂಸಿಕಲ್ ಲೆಕೆಂಟ್ ಗೆ ಚಿತ್ರರಂಗ ಶುಭ ಕೋರಿದೆ.

1951 ರ ಜೂನ್ 23 ರಂದು ಜನಿರುವ ಹಂಸಲೇಖ ಮೂಲ ಹೆಸರು ಗಂಗರಾಜು, ಶಾಲಾ ದಿನಗಳಲ್ಲೇ ನಾಟಕಗಳಕನ್ನು ಬರೆದು ಸಾಹಿತ್ಯ ಪ್ರಪಂಚಕ್ಕೆ ತೆರೆದುಕೊಂಡು ಅಂದೇ ಹಂಸಲೇಖನಿ ಎಂದು ಪೆನ್ ನೇಮ್ ಇಟ್ಟು ಕೊಂಡು ಶಿಕ್ಷಕರ ಸಲಹೆಯಂತೆ ಅದನ್ನು ಹಂಸಲೇಖ ಎಂದು ಬದಲಾಯಿಸಿಕೊಂಡು ನಂತರ ಶಾಶ್ವತವಾಗಿ ಗಂಗರಾಜು ಹಂಸಲೇಖವಾಗಿದ್ದಾರೆ.

ತ್ರಿವೇಣಿ ಚಿತ್ರದ ನೀನಾ ಭಗವಂತ ಹಾಡಿನ ಮೂಲಕ ಸ್ಯಾಂಡಲ್ ವುಡ್ ಗೆ ಲಿರಿಕ್‌ ರೈಟರ್ ಆಗಿ ಎಂಟ್ರಿ ಕೊಟ್ಟ ಹಂಸಲೇಖ 500 ಕ್ಕೂ ಹೆಚ್ಚು ಹಾಡುಗಳಿಗೆ‌ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ.ಪ್ರೇಮಲೋಕ ಚಿತ್ರದ ಹಾಡುಗಳು ಇಂದಿಗೂ ಚಿತ್ರಪ್ರೇಮಿಗಳ ಬಾಯಲ್ಲಿ‌ ಗುನುಗುತ್ತಿವೆ.ರವಿಚಂದ್ರನ್ ಹಾಗು ಹಂಸಲೇಖ ಕಾಂಬಿನೇಷನ್ ನಲ್ಲಿ ಎರಡು ದಶಕಗಳ ಕಾಲ ಮೂಡಿಬಂದ ಹಾಡುಗಳು ಎವರ್ ಗ್ರೀನ್ ಗಳಾಗಿವೆ. ವರನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇತ್ತೀಚಿನ ನಟವರೆಗೆ ಬಹುತೇಕ ಎಲ್ಲ ಯಶಸ್ವಿ ನಾಯಕ ನಟರ‌ ಚಿತ್ರಗಳಿಗೂ ಸಂಗೀತ ನೀಡಿರುವ ಹೆಗ್ಗಳಿಕೆ ಹಂಸಲೇಖರದ್ದು.

ಸಾಹಿತ್ಯ,ಸಂಗೀತದ ಜೊತೆ ಸಂಭಾಷಣೆಯಲ್ಲೂ ಇವರದ್ದು ಎತ್ತಿದ ಕೈ.ಶ್ರೀಗಂಧದ ನಾಡಿನ ಸಾಂಸ್ಕೃತಿಕ ವೈಭವವನ್ನು ಅಕ್ಷರಗಳ ಮೂಲಕ‌ ಅಚ್ಚುಕಟ್ಟಾಗಿ ಕಟ್ಟುಕೊಡುವ ಜೊತೆಗೆ,ಆಧುನಿಕ ಶೈಲಿಯ ಗದ್ಯದ ಗೀತೆ ರಚಿಸಿ ಸಂಗೀತ ನೀಡಿ ಗೆದ್ದಿದ್ದಾರೆ.ಸಂಗೀತ ಕ್ಷೇತ್ರದ ಎಲ್ಲಾ ಆಯಾಮದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಈಗ ತಮ್ಮದೇ ಆದ ಸಂಗೀತ ಶಾಲೆ ನಡೆಸುತ್ತಾ ಕಲಾಸೇವೆಯಲ್ಲಿ ತೊಡಗಿರುವ ನಾದಬ್ರಹ್ಮನಿಗೆ ಸ್ಯಾಂಡಲ್ ವುಡ್ ಹುಟ್ಟು ಹಬ್ಬದ ಶುಭ ಕೋರಿದೆ. ವಿಶೇಷವಾಗಿ ಕನಸುಗಾರ ವಿ.ರವಿಚಂದ್ರನ್ ವಿಶೇಷ ರೀತಿಯಲ್ಲಿ ಹಂಸಲೇಖ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.

Photo credit: veeraswamy Ravichandran facebook page

ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ: ಸುರೇಶ್ ಕುಮಾರ್

ಬೆಂಗಳೂರು: ಸಾರಿಗೆ ವ್ಯವಸ್ಥೆ ಸೌಲಭ್ಯವಿಲ್ಲದೇ ರಾಜ್ಯದಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಗೈರುಹಾಜರಾಗದಂತೆ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಜೂ.25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ಪರಿಶೀಲಿಸಿ, ಮಳೆಗಾಲವಾದ್ದರಿಂದ ಯಾವುದೇ ಒಂದೇ ಒಂದು ಮಗುವಿಗೂ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳು ಹಾಗೆಯೇ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿರುವ ಪ್ರದೇಶದ ಜನವಸತಿ ಪ್ರದೇಶದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕೆಂದರು. ಕೆಲ ಮಕ್ಕಳು ದೋಣಿ, ಬೋಟ್‍ಗಳು ಮತ್ತು ಲಾಂಚ್‍ಗಳನ್ನು ಅವಲಂಬಿಸಿದ್ದಾರೆ. ಅವರು ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಬೇಕಾಗಿದ್ದು, ಜಿಲ್ಲಾಡಳಿತಗಳು ಈಗಾಗಲೇ ಮಾಡಿರುವ ವ್ಯವಸ್ಥೆಯನ್ನು ಪುನಃ ಖಾತರಿಪಡಿಸಿಕೊಳ್ಳಬೇಕು. ಕಟ್ಟಕಡೆಯ ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ಸಚಿವರು ತಿಳಿಸಿದರು.

ವಿಶೇಷವಾಗಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಆರೋಗ್ಯ ಸುರಕ್ಷಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬೆಳಗ್ಗೆ 7.30ರಿಂದಲೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವುದು, ಗಡಿ ಭಾಗದ ಮಕ್ಕಳನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಬರುವುದರ ಕುರಿತು ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದ ತಕ್ಷಣ ಹಾಗೂ ನಂತರ ಪಾಲಿಸಬೇಕಾದ ಕ್ರಮಗಳ ಕುರಿತು ಪರೀಕ್ಷಾ ಸಮಯ ಆರಂಭವಾಗುವ ತನಕ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಮೈಕ್ ಮೂಲಕ ಮಕ್ಕಳಿಗೆ ಹಿತವಾಗುವ ರೀತಿಯಲ್ಲಿ ಆಗಾಗ್ಗೆ ಪ್ರಕಟಿಸುವ ವ್ಯವಸ್ಥೆ ಮಾಡುವುದು, ಈಗಾಗಲೇ ಮಕ್ಕಳಿಗೆ ಮಾಸ್ಕ್‍ಗಳನ್ನು ಪೂರೈಸಿದ್ದು, ಯಾರಾದರೂ ಮಕ್ಕಳು ಮರೆತು ಬಂದರ ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಂದು ಮಾಸ್ಕ್ ನೀಡಲು ಅಗತ್ಯ ಕ್ರಮ ವಹಿಸುವುದು, ಪರೀಕ್ಷಾ ಕೇಂದ್ರದ ವ್ಯಾಪ್ತಿಯೊಳಗೆ ಬರುವ ವಿದ್ಯಾರ್ಥಿ ಆರೋಗ್ಯ ತಪಾಸಣಾ ಕೇಂದ್ರದ ಮೂಲಕವೇ ಹಾದು ಬರುವಂತೆ ಅಲ್ಲಿಂದ ನೇರವಾಗಿ ತನ್ನ ಕೊಠಡಿಗೆ ತೆರಳುವಂತಹ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ಕೆಲ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ಉತ್ತಮ ಉಪಕ್ರಮಗಳನ್ನು ಉಳಿದ ಜಿಲ್ಲಾಡಳಿತಗಳು ಅನುಸರಿಸಿ ಸುಲಲಿತ ಪರೀಕ್ಷೆಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಅವರು ಹೇಳಿದರು.

ಈಗಾಗಲೇ ಇಲಾಖೆ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದೆ. ಕೆಲ ದಾನಿಗಳು ಮಾಸ್ಕ್ ವಿತರಿಸಲು ಮುಂದೆ ಬಂದಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುವುದರಿಂದ ಅವರಿಗೆ ಪರೀಕ್ಷಾ ಕೇಂದ್ರಗಳ ಮುಂದೆ ಮಾಸ್ಕ್ ಹಂಚಲು ಅವಕಾಶ ಮಾಡಿಕೊಡದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ವಿವರಿಸಿದರು.

ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆಲ ಕೇಂದ್ರಗಳಿಗೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಹಾಗೆಯೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲೂಕುಗಳು ಪರೀಕ್ಷಾ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಬರುವ ಮಕ್ಕಳಿಗೆ ತೊಂದರೆಯಾಗದಂತೆ ನೆರೆ ರಾಜ್ಯದ ಜಿಲ್ಲಾಡಳಿತಗೊಂದಿಗೆ ವ್ಯವಹರಿಸಿ ಗಡಿಭಾಗದವರೆಗೆ ಅವರಿಗೆ ಬರಲು ವ್ಯವಸ್ಥೆ ಮಾಡಿ ನಮ್ಮ ಗಡಿಭಾಗದಿಂದ ಅವರಿಗೆ ಸುರಕ್ಷಿತ ವಾತಾವರಣದಲ್ಲಿ ನಮ್ಮ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಸಂಜೆ ವಾಪಾಸು ಕಳಿಸಲು ಅಗತ್ಯ ವ್ಯವಸ್ಥೆ ಮಾಡುವುದು. ಹಾಗೆಯೇ ಹೊರರಾಜ್ಯಗಳಿಂದ ಬಂದು ಹೋಗಲು ತೊಂದರೆಯಾಗುವ ವಿದ್ಯಾರ್ಥಿಗಳಿಗೆ ಅಗತ್ಯಬಿದ್ದರೆ ಆಯಾ ತಾಲೂಕಿನ ಹಾಸ್ಟೆಲ್‍ಗಳಲ್ಲಿ ಊಟ ವಸತಿಗೆ ಕ್ರಮ ವಹಿಸಬೇಕು. ಆ ಹಾಸ್ಟೆಲ್‍ನಿಂದ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲವೇ ಜೀಪ್ ವ್ಯವಸ್ಥೆ ಮಾಡಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.

ಪ್ರತ್ಯೇಕ ಕೊಠಡಿ ಪರೀಕ್ಷೆ:
ಹೊರ ರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸುವುದು ಕಂಟೈನ್‍ಮೆಂಟ್ ಪ್ರದೇಶದಿಂದ ಬರುವ ಮಕ್ಕಳು ಮತ್ತು ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳನ್ನು ಸಹ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.

ಕೇರಳದ ಕಾಸರಗೋಡು ಜಿಲ್ಲೆಯಿಂದ ಪ್ರತಿದಿನ 367 ವಿದ್ಯಾರ್ಥಿಗಳು ಕೇವಲ 5 ಕಿ.ಮೀ. ಅಂತರದ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದರಿಂದ ಅವರಿಗೆ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗದ ಬಸ್‍ಗಳನ್ನು ಹೊರತು ಪಡಿಸಿ ವಿಶೇಷವಾಗಿ ತೆಗೆದುಕೊಂಡ ಎಲ್ಲ ಬಸ್‍ಗಳಿಗೆ ಸಾರಿಗೆ ಇಲಾಖೆ ನಿಗಿದಿಪಡಿಸಿದ ದರದಲ್ಲಿ ಹಣ ಮತ್ತು ಖಾಸಗಿ ಸಂಸ್ಥೆಗಳ ನೀಡಿದ ಬಸ್‍ಗಳಿಗೆ ಇಂಧನ ವೆಚ್ಚ ನೀಡಲು ಸಚಿವರು ಇನ್ನೆರಡು ದಿನದೊಳಗೆ ಹಣ ಪಾವತಿ ಮಾಡಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದರು.

ಪೂರಕ ಪರೀಕ್ಷೆಯಲ್ಲಿ ಅವಕಾಶ:
ಕೋವಿಡ್ ಹಿನ್ನೆಲೆಯಲ್ಲಿ ಪಾಸಿಟೀವ್ ಇರುವವರ, ಕ್ವಾರಂಟೈನ್‍ನಲ್ಲಿರುವವರ ಮತ್ತು ಸಂಬಂಧಿಕರ ಸಂಪರ್ಕವಿರುವ ಮಕ್ಕಳಿಗೆ ಈ ಪರೀಕ್ಷೆ ನಿರಾಕರಿಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸಚಿವರು ವಿವರಿಸಿದರು.

ನಮ್ಮ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯೇ ಪ್ರಮುಖ ಮಾನದಂಡವಾಗಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಮತ್ತು ಮಕ್ಕಳ ಇಚ್ಛೆಗನುಗುಣವಾಗಿ ಘನ ಉಚ್ಛ ಮತ್ತು ವರಿಷ್ಠ ನ್ಯಾಯಾಲಯಗಳ ಆದೇಶ ಮತ್ತು ಅಗತ್ಯ ಸೂಚನೆಗಳನ್ವಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳ ಹಿತ ಮತ್ತು ಸುರಕ್ಷೆಯನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಹೆಚ್ಚುವರಿ ಸಿಬ್ಬಂದಿ- ಹೆಚ್ಚುವರಿ ಪರೀಕ್ಷಾ ಕೇಂದ್ರ:
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿ ಪರೀಕ್ಷಾ ಸಿಬ್ಬಂದಿ, ವಾಹನಗಳು, ಜೀಪ್‍ಗಳು, ಬಸ್‍ಗಳು ಮತ್ತು ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಚುನಾವಣೆ ಸಮಯದಲ್ಲಿ ಕಾಯ್ದಿರಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಹಾಗೆಯೇ ಕಂಟೈನ್‍ಮೆಂಟ್ ವಲಯಗಳನ್ನು ಘೋಷಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೇ ಅಧಿಕಾರಿವಿರುವ ಹಿನ್ನೆಲೆಯಲ್ಲಿ ಕಂಟೈನ್‍ಮೆಂಟ್ ವಲಯದ ಮಕ್ಕಳಿಗೆ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಎಲ್ಲ ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಯಾವುದೇ ಪರೀಕ್ಷಾ ಕೇಂದ್ರವು ಕಂಟೈನ್‍ಮೆಂಟ್ ವಲಯದಲ್ಲಿ ಇರಕೂಡದು. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಹೊಸದಾಗಿ ಕಂಟೈನ್‍ಮೆಂಟ್ ವಲಯಗಳು ಘೋಷಿತವಾದಲ್ಲಿ ತಕ್ಷಣವೇ ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕೆ ಬದಲಾಯಿಸಲು ಕ್ರಮ ವಹಿಸಿ ಮಕ್ಕಳಿಗೆ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಚಿವರು ತಿಳಿಸಿದರು.

ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ, 200 ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ನಿರ್ಮಾಣ, ಆ ವಲಯವನ್ನು ಪಾಸ್ ವಲಯವೆಂದು ಘೋಷಿಸಿ ಗುರುತುಪತ್ರವಿರುವ ಪರೀಕ್ಷಾ ಸಿಬ್ಬಂದಿ ಮತ್ತು ಹಾಲ್‍ಟಿಕೆಟ್ ಇರುವ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರವೇ ಅವಕಾಶ ನೀಡುವುದು, ಪ್ರತಿದಿನ ಎರಡು ಬಾರಿ ಸ್ಯಾನಿಟೈಜೇಷನ್ ಮಾಡುವುದು, 200 ವಿದ್ಯಾರ್ಥಿಗೆ ಒಂದರಂತೆ ಹೆಲ್ತ್‍ಕೌಂಟರ್ ಸ್ಥಾಪನೆ, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಕ್ರಮ ವಹಿಸಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪೊಲೀಸ್ ರಕ್ಷಣೆಯಲ್ಲಿ ಸಾಗಣೆ ಮಾಡುವುದು ಸೇರಿದಂತೆ ಪರೀಕ್ಷಾ ಪಾವಿತ್ರ ಕಾಪಾಡುವುದಕ್ಕೆ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು.

ಅಣಕು ಪರೀಕ್ಷಾ ಕೇಂದ್ರ:
ಮಕ್ಕಳು ಮತ್ತು ಪೋಷಕರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೈಗೊಳ್ಳಲಾದ ಎಲ್ಲ ವ್ಯವಸ್ಥೆ ಮತ್ತು ಸಾಮಾಜಿಕ ಸುರಕ್ಷಾ ಕ್ರಮಗಳನ್ನು ತೋರಿಸುವ ಹಿನ್ನೆಲೆಯಲ್ಲಿ ಪರೀಕ್ಷೆಗಿಂತ ಒಂದು ದಿನ ಮುಂಚೆ ಅಂದರೆ ಜೂ. 24ರಂದು ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಸಲಾಗುವುದು. ಇದರಲ್ಲಿ ಆಸಕ್ತ ಪೋಷಕರು ಮತ್ತು ಮಕ್ಕಳು ಭಾಗವಹಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಹಾಗೆಯೇ ಆರೋಗ್ಯ, ಗೃಹ, ಸಾರಿಗೆ ಇಲಾಖೆ ಸೇರಿದಂತೆ ಆಯಾ ಸ್ಥಳೀಯಾಡಳಿತಗಳು ಪರೀಕ್ಷೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿವೆ. ನಮ್ಮ ಪರೀಕ್ಷೆಯತ್ತ ನ್ಯಾಯಾಲಯಗಳು ಸೇರಿದಂತೆ ಇಡೀ ದೇಶವೇ ನೋಡುತ್ತಿರುವುದರಿಂದ ಪರೀಕ್ಷೆಯ ಯಶಸ್ಸಿಗೆ ಪ್ರತಿಯೊಬ್ಬರೂ ಸಪರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಗೋವಾದಲ್ಲಿ 2 ಪರೀಕ್ಷಾ ಕೇಂದ್ರ:
ಗೋವಾ ರಾಜ್ಯದಲ್ಲಿ ತೆರೆಯಲಾಗಿರುವ 2 ಪರೀಕ್ಷಾ ಕೇಂದ್ರಗಳಿಗೆ ನಮ್ಮ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ ಸಕಾಲಕ್ಕೆ ಪ್ರಶ್ನೆ ಪತ್ರಿಕೆ ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಪರೀಕ್ಷಾ ಕೇಂದ್ರಕ್ಕೆ ಒಬ್ಬ ವಿದ್ಯಾರ್ಥಿ 40 ಕಿ.ಮೀ ದೂರದಿಂದ ಬರುವ ಹಿನ್ನೆಲೆಯಲ್ಲಿ ಅವನಿಗಾಗಿ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದ್ದು ಅದಕ್ಕಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ವಿವರಿಸಿದರು. ಮಳೆ ಜಾಸ್ತಿಯಾಗಿ ಇಲ್ಲವೇ ನದಿಯಲ್ಲಿ ನೀರು ಭರ್ತಿಯಾಗಿ ಸೇತುವೆಗಳು ಮುಳುಗುವ ಭೀತಿಯಿರುವ ಮಕ್ಕಳಿಗೆ ಹಾಸ್ಟೆಲ್‍ಗಳಲ್ಲಿ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿ ಮನೆಯವರಿಗೆ ಕೋವಿಡ್ ಸೋಂಕು ಪಾಸಿಟಿವ್ ಇರುವುದರಿಂದ ಆ ವಿದ್ಯಾರ್ಥಿಗೆ ಪೂರಕ ಪರೀಕ್ಷೆಗೆ ಅವಕಾಶ ಮಾಡಿಕೊಡಲು ತಿಳಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ತಿಳಿಸಿದರು. ಈಗಾಗಲೇ ಯಾವ ಕೊಠಡಿಯಲ್ಲಿ ತಮ್ಮ ಆಸನಗಳ ವ್ಯವಸ್ಥೆ ಮಾಡಲಾಗಿದೆ ಹಾಗೆಯೇ ಎಲ್ಲಿಂದ ಯಾವ ವಾಹನದಲ್ಲಿ ತಮ್ಮನ್ನು ಪಿಕ್‍ಅಪ್ ಅಂಡ್ ಡ್ರಾಪ್ ಮಾಡಲಾಗುವುದು ಎಂಬ ಕುರಿತು ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ದಿ. ಕೆ.ಸಿ. ರೆಡ್ಡಿ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಜೂ. 22: ದಿ. ಶ್ರೀ ಕೆ.ಸಿ. ರೆಡ್ಡಿ ಅವರ ಮಾದರಿ ಪ್ರತಿಮೆ ಬದಲಾಯಿಸಿ ಶಾಶ್ವತವಾಗಿ ಉಳಿಯುವಂತಹ ಮೂಲ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿಮೆಯ ಮಾದರಿಗಳ ತರಿಸಿಕೊಂಡು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ನೈಜ ಪ್ರತಿಮೆಯನ್ನು ಸ್ಥಾಪಿಸಬೇಕು. ನುರಿತ ಹಾಗೂ ಪರಿಣಿತರ ಸಹಕಾರದೊಂದಿಗೆ ಈ ಪ್ರತಿಮೆಯನ್ನು ಸ್ಥಾಪಿಸಬೇಕು.ಕೆ.ಸಿ. ರೆಡ್ಡಿ ಯವರ ಕೊಡುಗೆ ಅಪಾರವಾಗಿದೆ. ಅವರ ಪ್ರತಿಮೆಯು ಶಾಶ್ವತವಾಗಿರುವಂತೆ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಅನುಸರಣಾ ವರದಿಯೊಂದಿಗೆ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಡಿಸಿಎಂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಗಳ ಶೀಘ್ರ ವಿಭಜನೆ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಜೂ. 22 : ಲೋಕೋಪಯೋಗಿ ಇಲಾಖೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಶೀಘ್ರವಾಗಿ ವಿಭಜಿಸುವಂತೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ವಿಧಾನಸೌಧದಲ್ಲಿಂದು ಇಲಾಖೆಗಳನ್ನು ವಿಭಜಿಸುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗಳನ್ನು ವಿಭಜಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಇಂಜಿನಿಯರ್‍ಗಳು ಹಾಗೂ ಇಂಜಿನಿಯರಿಂಗ್ ಸಂಘದ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಮೂರು ಇಲಾಖೆಗಳಿಂದ ಮಾಹಿತಿ ಕ್ರೂಡೀಕರಿಸಲಾಗಿದೆ. ಸಾಧಕ ಬಾದಕಗಳ ಕುರಿತು ಚರ್ಚಿಸಲಾಗಿದೆ. ವಿಭಜಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದು ಉತ್ತಮ ನಿರ್ಧಾರವಾಗಿದೆ. ನೀರಾವರಿ ಸಚಿವರು ಹಾಗೂ ಗ್ರಾಮೀಣಾವೃದ್ಧಿ ಸಚಿವರು ಇಲಾಖೆಗಳನ್ನು ವಿಭಜನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ, ಸಹಕರಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ನೀರಾವರಿ ಸಚಿವರಿಗೆ ಡಿಸಿಎಂ ಧನ್ಯವಾದಗಳನ್ನು ವ್ಯಕ್ತಪಡಿಸಿದ ಡಿಸಿಎಂ, ಶೀಘ್ರವಾಗಿ ವಿಭಜನೆಯ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.