ಬೆಂಗಳೂರಿನಲ್ಲಿ ಕೋವಿಡ್ 19 ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಿಎಂ

ಬೆಂಗಳೂರು, ಜೂನ್ 22-:ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯ ಮುಖ್ಯಾಂಶಗಳು

1. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಿದರೆ ಮಾತ್ರ, ಸೋಂಕು ಹರಡುವ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯ.

2. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಶ್ರಮವಹಿಸಬೇಕೆಂದು ಆದೇಶಿಸಿದರು.

3. ಬೆಂಗಳೂರು ನಗರದಲ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಪ್ರಕ್ರಿಯೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

4. ಕ್ವಾರಂಟೈನ್ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಅಗತ್ಯ ಬಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಯಿತು.

5. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದರ ನಿಗದಿ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು.

6. ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಲ್ಲಿ ಇರುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ತಿಳಿಸಲಾಯಿತು.

7. ಬೆಂಗಳೂರು ನಗರದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಕೋವಿಡ್ 19 ಹೆಚ್ಚಾಗದಂತೆ ನೋಡಿಕೊಳ್ಳಬೇಕು.

8. ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದ್ದು, ಈ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಕೋವಿಡ್ 19 ನಿಯಂತ್ರಿಸುವುದು ನಮ್ಮ ಕರ್ತವ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.

9. ಕ್ವಾರಂಟೈನ್ ಉಲ್ಲಂಘನೆ ಮತ್ತು ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನೊಳಗೊಂಡ ತಂಡಗಳು ಕಾರ್ಯನಿರ್ವಹಿಸುತ್ತಿವೆ.

10. ವಾರ್ ರೂಂ ನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಲಭ್ಯವಿರಬೇಕು. ಸೋಂಕಿತರಿಗೆ ವಿಳಂಬವಿಲ್ಲದೆ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಪೊಲೀಸ್ ಆಯುಕ್ತ ಭಾಸ್ಕರ ರಾವ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರ ಮನೆ ತಲುಪಿದ ಕೊರೋನಾ ವೈರಸ್!

ಬೆಂಗಳೂರು: ಕೊರೋನಾ ವೈರಸ್ ಈಗಾಗಲೇ ಬೆಂಗಳೂರಿನ ಮೂಲೆ ಮೂಲೆಗೂ ಹರಡಿದೆ. ಇದೀಗ ವೈದ್ಯಾಕೀಯ ಶಿಕ್ಷಣ ಸಚಿವ, ಬೆಂಗಳೂರು ಕೋವಿಡ್-19 ಉಸ್ತುವಾರಿ ಡಾ.ಕೆ.ಸುಧಾಕರ್ ನಿವಾಸಕ್ಕೂ ಕೊರೋನಾ ಕಾಲಿಟ್ಟಿದೆ. ಸುಧಾಕರ್ ಮನೆಯ ಅಡುಗೆ ಕೆಲಸದವನಿಗೆ ಕೊರೋನಾ ದೃಢ ಪಟ್ಟಿದೆ.

ಅಲ್ಲದೆ, ಸುಧಾಕರ್ ಅವರ 82 ವರ್ಷದ ತಂದೆ ಆಸ್ಪತ್ರಗೆ ದಾಖಲಾಗಿದ್ದು, ಜ್ವರ ಹಾಗೂ ಕಫದಿಂದ ಬಳಲುತ್ತಿದ್ದಾರೆ, ಕೋವಿಡ್ ಪರೀಕ್ಷೆಯನ್ನೂ ಮಾಡಿಸಲಾಗಿದೆ. ಇದೀಗ ಸುಧಾಕರ್ ಕುಟುಂಬ ಅವರ ತಂದೆಯ ಕೊರೋನಾ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದೆ. ಈ ವಿಚಾರವನ್ನ ಸ್ವತಃ ಸಚಿವ ಸುಧಾಕರ್ ಟ್ವಿಟರ್ ಮೂಲಕ ದೃಢ ಪಡಿಸಿದ್ದಾರೆ.

ಹೋಂ ಕ್ವಾರಂಟೇನ್ ಉಲ್ಲಂಘಿಸಿದ್ರೆ ಕ್ರಿಮಿನಲ್ ಕೇಸ್

ಬೆಂಗಳೂರು: ಹೋಂ ಕ್ವಾರಂಟೇನ್ ನಲ್ಲಿ ಇದ್ರೂ ಪೊಲೀಸರ ಕಣ್ಣಿಗೆ ಮಣ್ಣೆರೆಚೆ ಹೊರಗಡೆ ತಿರುಗಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್. ಹೌದು, ಕೊರೋನಾ ಸಂಕಷ್ಟವನ್ನ ಅರ್ಥ ಮಾಡಿಕೊಂಡು ಸಹಕರಿಸ ಬೇಕಾದ ಶಂಕಿತರು ಬೇಜವಬ್ದಾರಿಯಿಂದಹೊರೆಗೆ ತಿರುಗುತ್ತಾ ಸಮಾಜಕ್ಕೆ ಕಂಟಕವಾಗುವವರಿಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಿತ್ತಿರೋ ಹಿನ್ನೆಲೆಯಲ್ಲಿ ಇಂದು ಸಿಎಂ ಗೃಹ ಕೃಷ್ಣಾದಲ್ಲಿ ಬಿಎಸ್ವೈ ಅಧಿಕಾರಿಗಳ ಸಭೆ ನಡೆಸಿದ್ರು. ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೋಂ ಕ್ವಾರಂಟೇನ್ ನಲ್ಲಿ ಇರೋರು ಹೊರಗೆ ತಿರುಗಾಡಿರೋದು ಗೊತ್ತಾದ್ರೆ ಅವರ ಮೇಲಾ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ. ಇನ್ನೂ, ಕೋವಿಡ್ ಚಿಕಿತ್ಸೆಗೆ ಬೆಡ್ ಗಳ ಕೊರತೆಯಾಗುವುದನ್ನ ಮನಗೊಂಡು ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಬ್ಲಾಕ್ ತೆರೆಯಾಲಾಗುವುದು ಅಂತಾ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆ ಕೊರೋನಾ ಕಾಣಿಸಿಸಿಕೊಂಡ ಪ್ರದೇಶಗಳ ಸೀಲ್ ಡೌನ್ ಗೂ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳ ಕೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದು ಐದು ವಾರ್ಡ್ ಗಳಲ್ಲಿ ಸಾಕಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅದ್ರಲ್ಲೂ ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಕಲಾಸಿಪಾಳ್ಯ ಭಾಗದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಕೆ.ಆರ್.ಮಾರುಕಟ್ಟೆ ಬಂದ್ ಮಾಡಲಾಗುವುದು. ಅಲ್ಲದೆ, ಕೊರೋನಾ ಹೆಚ್ಚಾಗಿರುವ ವಿದ್ಯಾರಣ್ಯಪುರ, ಧರ್ಮರಾಯ ದೇವಸ್ಥಾನ, ಕಲಾಸಿಪಾಳ್ಯ, ಸಿದ್ದಾಪುರ, ವಿಶ್ವೇಶ್ವರಪುರ ವಾರ್ಡ್ ಗಳನ್ನ ಸೀಲ್ ಡೌನ್ ಮಾಡಲಾಗುವುದು ಅಂತಾ ತಿಳಿಸಿದ್ರು.

ರೈಲಿಗೆ ತಲೆಕೊಟ್ಟು ಬಾಳೆಹಣ್ಣು ವ್ಯಾಪಾರಿ ಆತ್ಮಹತ್ಯೆ

ಬೆಂಗಳೂರು: ಸೂರ್ಯಗ್ರಹಣ ಮುಗಿದ ನಂತರದಲ್ಲಿ

ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕದಲ್ಲಿ ನಡೆಸಿದೆ.

ರೈಲು ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಾಳೆಹಣ್ಣು ವ್ಯಾಪಾರಿಯಾಗಿದ್ದರು ಯಲಹಂಕದ ಎನ್.ಇ.ಎಸ್.ರಸ್ತೆಯಲ್ಲಿ ಬಾಳೆಹಣ್ಣು ಮಾರುತ್ತಿದ್ದರು ಎನ್ನಲಾಗಿದೆ.

ಕುಟುಂಬ ಕಲಹದಿಂದ ಬೇಸತ್ತು ಮಧ್ಯ ರಾತ್ರಿ ಕುಡಿದ ಮತ್ತಿನಲ್ಲಿ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಯಲಹಂಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

ಉನ್ನತ ಶಿಕ್ಷಣ ಇಲಾಖೆಯಿಂದ ಯೋಗ ದಿನಾಚರಣೆ

ಬೆಂಗಳೂರು: ವಿಶ್ವ ಯೋಗ ದಿನದ ಅಂಗವಾಗಿ ಉನ್ನತ ಶಿಕ್ಷಣ ಇಲಾಖೆಯ ವಿಜಯೀಭವ ಯುಟ್ಯೂಬ್ ಚಾನೆಲ್ ವತಿಯಿಂದ ವಿಶೇಷ ಯೋಗ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಯೂತ್ ಯೋಗ ಐಕಾನ್ ಮಧುಶ್ರೀ ಸಂದರ್ಶ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಅವರು ಉಪಸ್ಥಿತರಿದ್ದರು.

ಆರೋಗ್ಯ, ಶಾಂತಿ, ಸಂತೋಷ ಎಂಬ ಪರಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಧುಶ್ರೀ ಅವರು, ದೇಹವನ್ನು ಸಡಿಲಗೊಳಿಸುವುದು ಹಾಗೂ ಸೂರ್ಯ ನಮಸ್ಕಾರ ಮಾಡುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೆ ಯೋಗ ಮಾಡುವಾಗ ಉಸಿರಾಟ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು. ಇದರ ಜತೆಗೆ ತಾಡಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಭುಜಂಗಾಸನವನ್ನು ಪ್ರದರ್ಶಿಸಿ ತದನಂತರ ಪ್ರಾಣಾಯಾಮ ಮಾಡಿ ಆದರ ಬಗ್ಗೆ ಸರಳವಾಗಿ ಮಾಹಿತಿ ನೀಡಿದರು. ಮಧುಶ್ರೀ ಅವರೊಂದಿಗೆ ವೆಂಕೇಶ್ ಪ್ರಸಾದ್ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಆಸನಗಳನ್ನು ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮಣರೆಡ್ಡಿ ಅವರು, ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಯೋಗವು ಕೋವಿಡ್ ನಂತಹ ಬಿಕ್ಕಟ್ಟನ್ನು ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಲು ಪ್ರತಿಯೊಬ್ಬರಿಗೂ ಶಕ್ತಿಯನ್ನು ನೀಡುತ್ತದೆ. ಇನ್ನು ಮುಂದೆ ನಾವೆಲ್ಲರೂ ಭಾರತೀಯ ಪರಂಪರೆಯಲ್ಲಿ ನಡೆದುಬಂದಿರುವ ಆರೋಗ್ಯ ಪದ್ಧತಿಗಳನ್ನೇ ಅನುಸರಿಸಿ ಉತ್ತಮ ಆರೋಗ್ಯ ಹೊಂದೋಣ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೂ ಮಾನಸಿಕ ಸ್ಥೈರ್ಯವನ್ನು ಮೂಡಿಸುತ್ತಿದ್ದೇವೆ. ನಮ್ಮ ಯುಟ್ಯೂಬ್ ಚಾನೆಲ್ ಪ್ರಸ್ತುಪಡಿಸುತ್ತಿರುವ ಈ ಕಾರ್ಯಕ್ರಮಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆಂದು ಹೇಳಿದರು.

ನಿಖಿಲ್ ಪತ್ನಿ ರೇವತಿಗೆ ಹುಟ್ಟು ಹಬ್ಬದ ಸಂಭಮ: ಪತ್ನಿಗೆ ನಿಖಿಲ್ ಏನಂತ ಕರೆದಿದ್ದಾರೆ ಗೊತ್ತಾ?

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹವಾದ ಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ತನ್ನ ಮಡದಿಯ ಹುಟ್ಟುಹಬ್ಬವನ್ನು ಸರಳವಾಗಿ ಕಲರ್ ಫುಲ್ ಆಗಿ ಆಚರಿಸುವ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ.

ಮದುವೆಯ ನಂತರದ ಪತ್ನಿ ರೇವತಿಯ ಮೊದಲ ಹುಟ್ಟುಹಬ್ಬವನ್ನು ನಟ ಜಾಗ್ವಾರ್ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಆಚರಿಸಿದ್ದಾರೆ.ಸಮಾರಂಭದಂತಹ ಕಾರ್ಯಕ್ರಮ ಮಾಡದೆ ಸಿಂಪಲ್ ಆಗಿ ಮ್ಯಾಚಿಂಗ್ ಡ್ರೆಸ್ ತೊಟ್ಟು ಪತ್ನಿ ರೇವತಿ ಕೈಯಿಂದ ಕೇಕ್ ಕತ್ತರಿಸಿ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.

ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ ಎಂದು ಪತ್ನಿಗೆ ಶುಭಾಷಯ ತಿಳಿಸಿದ್ದಾರೆ. ಇದು ನಿಖಿಲ್ ಅಭಿಮಾನಿಗಳು ಹಾಗೂ ನೆಟ್ಟಿಗರ ಮನಗೆದ್ದಿದ್ದು ಪತ್ನಿಗೆ ಚಿನ್ನ ಎಂದು ಕರೆದು ಹಂಚಿಕೊಂಡ ಬರ್ತ್ ಡೇ ಕಲರ್ ಫುಲ್ ಫೋಟೋಗೆ ಐವತ್ತು ಸಾವಿರಕ್ಕೂ‌ ಹೆಚ್ಚಿನ ಜನ ಕೆಲವೇ ಗಂಟೆಗಳಲ್ಲಿ ಲೈಕ್ ಮಾಡಿ ನೂರಾರು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಿಖಿಲ್ ಇದೀಗ ಪತ್ನಿಯ ಬರ್ತ್ ಡೇ ಸಂಭ್ರಮದಲ್ಲೂ ಸುದ್ದಿಯಲ್ಲಿದ್ದಾರೆ.