ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್‌ಗೆ ಕೊಪ್ಪಳದಿಂದಲೇ ಚಾಲನೆ

ಬೆಂಗಳೂರು/ಕೊಪ್ಪಳ,ಜೂನ್.20:ಕೃಷಿಯಲ್ಲಿ ಅತಿ ಮುಖ್ಯವಾಗಿರುವ ಮಣ್ಣನ್ನು ಕಾಲಕಾಲಕ್ಕೆ ಮತ್ತು ನೀರಿನ ಪರೀಕ್ಷೆ ಅಗತ್ಯ ತಾಂತ್ರಿಕತೆ ನೆರವಿಗಾಗಿ ಸರ್ಕಾರ ಹಾಗೂ ಕೃಷಿ ಇಲಾಖೆ ಉದ್ದೇಶಿಸಿರುವ “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್‌”ಗಳ ಪ್ರಾರಂಭಕ್ಕೆ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ಚಾಲನೆ ನೀಡಲು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಮುಂದಾಗಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 20 ರೈತ ಸಂಪರ್ಕ ಕೇಂದ್ರಗಳಿದ್ದು, ಲಭ್ಯವಿರುವ ಜಿಲ್ಲಾ ಉಸ್ತುವಾರಿ ಅನುದಾನದಲ್ಲಿಯೇ ಈ ರೈತ ಸಂಪರ್ಕ ಕೇಂದ್ರಗಳಲ್ಲಿ “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್‌” ಗಳಿಗೆ ಚಾಲನೆ ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಬಜೆಟ್‌ನಲ್ಲಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್‌ ಆರಂಭಿಸುವುದಾಗಿ ಘೋಷಿಸಿದ್ದರು.ಅದರಂತೆ ಕೃಷಿ ಸಚಿವರು ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ಕ್ಲಿನಿಕ್‌ಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ . ಈ ಮೊಬೈಲ್ ಕ್ಲಿನಿಕ್ ಹಳ್ಳಿಗಳ್ಳಿಗಳಿಗೆ ಭೇಟಿ ನೀಡಿ , ಅಲ್ಲಿನ ಮಣ್ಣು , ಕೃಷಿಗೆ ಬಳಸುತ್ತಿರುವ ನೀರನ್ನು ಸ್ಥಳದಲ್ಲಿಯೇ ಪರಿಶೀಲನೆ ಮಾಡಿಕೊಡಲಿದೆ . ರೈತರ ಮನೆ ಬಾಗಿಲಿಗೆ ತೆರಳಿ ಕೀಟನಾಶಕ , ಬೆಳೆ ರೋಗಗಳು ಬಗ್ಗೆ ಮಾಹಿತಿ , ಪರಿಹಾರ ನೀಡಲಿದೆ. ಹಾಗೆಯೇ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದ್ದು ರೈತರು ನೀರಿನಲ್ಲಿ ಕರಗುವ ಗೊಬ್ಬರ , ಸೂಕ್ಷ್ಮ ಪೌಷ್ಟಿಕಾಂಶ , ಹೈಡ್ರೋಜನ್‌ಗಳನ್ನು ಬಳಸಲು ನೆರವು ನೀಡಲಾಗುವುದು .ಮೊಬೈಲ್ ಕ್ಲಿನಿಕ್ ಬಗ್ಗೆ ತಾಂತ್ರಿಕತೆ ಚರ್ಚೆ ನಡೆದಿದೆ.ಆದಷ್ಟು ಬೇಗ ಕಾರ್ಯಾರಂಭ ಮಾಡಲಾಗುವುದು ಎಂದರು‌.

ರಾಜ್ಯದಲ್ಲಿ ಕೃಷಿಗೆ ಪೂರಕವಾಗಿ ರೈತ ಸಂಪರ್ಕ ಕೇಂದ್ರಗಳು ಬಹಳಷ್ಟು ಕೆಲಸ ಮಾಡುತ್ತಿದ್ದು, ಈ ರೈತ ಸಂಪರ್ಕ ಕೇಂದ್ರಗಳನ್ನು ಮತ್ತಷ್ಟು ಬಲಗೊಳಿಸಲು ಚಿಂತನೆ ನಡೆಸಲಾಗಿದೆ. ರೈತ ಸಂಪರ್ಕ ಕೇಂದ್ರಗಳು ಬಹುತೇಕ ಬಾಡಿಗೆ,ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ.ಕೆಲಸಕ್ಕೆ ಸ್ವಂತ ನಿವೇಶನವಿಲ್ಲ.ಸ್ವಂತ ಕಟ್ಟಡಕ್ಕೆ ನಬಾರ್ಡ್ ಹಣವನ್ನು ಬಳಸಬಹುದಾಗಿದೆ.ಶಾಸಕರು ತಮ್ಮತಮ್ಮ ಕ್ಷೇತ್ರಗಳಲ್ಲಿ ರೈತಸಂಪರ್ಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು.ರೈತ ಸಂಪರ್ಕ ಕೇಂದ್ರಗಳಿಗಾಗಿ ದಾನಿಗಳಿಂದ ಕಟ್ಟಡ,ನಿವೇಶನ ದಾನಪಡೆಯಲಾಗುವುದು ಎಂದು ತಿಳಿಸಿದರು.

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಬಾಧಿತವಾಗದಂತೆ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ವಿಶ್ವವಿದ್ಯಾಲಯಗಳು, ಇಲಾಖೆಗಳಲ್ಲಿ ಆರಂಭಿಸಲಾಗಿರುವ “ಅಗ್ರಿವಾರ್ ರೂಂ” ಬಗ್ಗೆ ಈ ಮೂರು ತಿಂಗಳಿನಲ್ಲಿ ರಾಜ್ಯ ರಾಷ್ಟ್ರಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೆಚ್ಚುಗೆ ವ್ಯಕ್ತವಾದ ಹಿನ್ನಲೆಯಲ್ಲಿ ಅಗ್ರಿವಾರ್ ರೂಮ್‌ಗಳನ್ನು ಮುಂದಿನ ದಿನಗಳಲ್ಲಿಯೂ ಮುಂದುವರೆಸಲಾಗುವುದೆಂದರು.

ಕೋವಿಡ್‌ನಿಂದಾಗಿ ಎಲ್ಲಾ ಇಲಾಖೆಗಳಿಗೂ ಅನುದಾನ ಕೊರತೆಯಾಗಿದೆ.ಅದರಂತೆ ಕೃಷಿ ವಿಶ್ವವಿದ್ಯಾಲಯಗಳಿಗೂ ಅನುದಾನದ ಕೊರತೆಯಾಗಿದೆ‌.ಆದರೂ ಆರ್ಥಿಕ ಇತಿಮಿತಿಯಲ್ಲಿ ಕೃಷಿಚಟುವಟಿಕೆ ಅಭಿವೃದ್ಧಿಗೆ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಧಮ್ಮು,ಕೆಮ್ಮಿನ ಸಮಯ ಇದಲ್ಲ:ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಬಿ.ಸಿ.ಪಾಟೀಲ್

-ಸಂಗ್ರಹ ಚಿತ್ರ

ಕೊಪ್ಪಳ,ಜೂನ್.20: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಧಮ್ಮು,ಕೆಮ್ಮು ಪರೀಕ್ಷೆ ಮಾಡುವ ಸಮಯ ಅಲ್ಲ.ಧಮ್ ಇವೆಲ್ಲ ಯಾವ ಭಾಷೆಯ ಪದಗಳು
ಇದರಲ್ಲಿ ಧಮ್ ತೋರಿಸುವಂತಹದ್ದು ಏನಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಕೊಪ್ಪಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಂದಿದ್ದಾರೆ.ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟಿದೆ. ಇದರಲ್ಲಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೂ ಸಹ ಅವರು ದಿನಕ್ಕೆ ಹತ್ತು ಹದಿನೈದು ಸಭೆಗಳನ್ನು ನಡೆಸುತ್ತಾರೆ.ಹೊರ ರಾಜ್ಯದವರು ಬರದೆ ಹೋಗಿದ್ದಲಿ ಕರ್ನಾಟಕದಲ್ಲಿ ಶೂನ್ಯ ಕೊರೊನಾ ಪ್ರಕರಣಗಳಾಗುತ್ತಿದ್ದವು.ಸುದ್ದರಾಮಯ್ಯ ವಿರೋಧ ಪಕ್ಷದ ನಾಯಕರು,ವಿರೋಧ ಮಾಡುವುದೇ ಅವರ ಕೆಲಸ.ಅವರು ವಿರೋಧಿಸುವುದನ್ನೇ ತಮ್ಮ ಆದ್ಯ ಕರ್ತವ್ಯ ಎಂದುಕೊಂಡಿದ್ದಾರೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದರ ನಿದಗಿ ವಿಚಾರಕ್ಕೆ ಚಿಂತನೆ ಕುರಿತು ಪ್ರತಿಕ್ರಿಯಿಸಿದ ಸಚಿವರು,ಬದುಕು ಬಹಳ ಮುಖ್ಯ.ಸರ್ಕಾರ ಎಲ್ಲಾ ಯೋಚನೆ ಮಾಡಿಯೇ ನಿರ್ಧಾರ ಮಾಡಿರುತ್ತದೆ.ದರ ಹೆಚ್ಚಲಿದೆ ಎಂಬ ಕಾರಣಕ್ಕೆ ಜೀವನ ಕಳೆದುಕೊಳ್ಳಲು ಆಗುವುದಿಲ್ಲ.ಇದರಲ್ಲಿ ಯಾವುದೇ ಲಾಭಿ ಇಲ್ಲ.ಖಾಸಗಿ ಆಸ್ಪತ್ರೆಯವರು ಸಹ ಸಿಬ್ಬಂದಿಗೆ ಸಂಬಳ ಕೊಡಬೇಕು.ಹೀಗಾಗಿ ದರ ನಿಗದಿ ಮಾಡಿರಬಹುದು.ದರ ಹೆಚ್ಚಾದಲ್ಲಿ ಸರ್ಕಾರ ಮತ್ತೆ ಯೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಕೆಲ ಬಿಜೆಪಿ ಶಾಸಕರಿಂದ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್,ಭೇಟಿ ಅವರವರ ವೈಯಕ್ತಿಕ ಅಭಿಪ್ರಾಯ.ಶಾಸಕರು ಕ್ಷೇಕ್ಕೆ ಅನುದಾನ ಬರದಿದ್ದರೆ ಪತ್ರ ಬರೆಯುವುದರಲ್ಲಿ ತಪ್ಪೇನಿಲ್ಲ ಎಂದರು.

ಮಾಜಿ ಸಚಿವ ಹೆಚ್.ವಿಶ್ವನಾಥ್ ವಿರುದ್ಧ ಜೆಡಿಎಸ್ ಮುಖಂಡ ಸಾ‌. ರಾ ಮಹೇಶ್ ಅವರು ಮಾಡಿರುವ ಆರೋಪಕ್ಕೆ ವಿಶ್ವನಾಥರೇ ಉತ್ತರಿಸುತ್ತಾರೆ.ವಿಶ್ವನಾಥ್ ಬಹಳ ಬುದ್ಧಿವಂತರಿದ್ದಾರೆ ಅವರೇ ಚೆನ್ನಾಗಿ ಉತ್ತರಿಸುತ್ತಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿ.ಸಿ.ಪಾಟೀಲ್ ಉತ್ತರಿಸಿದರು.

ಪಿಯು ಪರೀಕ್ಷೆಗೆ ಕೊರೋನಾ ವಿದ್ಯಾರ್ಥಿನಿ-ಸತ್ಯಕ್ಕೆ ದೂರ: ಸುರೇಶ್‍ಕುಮಾರ್

ಬೆಂಗಳೂರು: ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್, ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ‘ಕೊರೋನಾ ನೆಗೆಟೀವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ಇಂದು ಮಧ್ಯಾಹ್ನ 2.54ಕ್ಕೆ ವರದಿಯನ್ನೂ ಸಹ ಪಡೆಯಲಾಗಿದೆ. ಈ ವರದಿಯಲ್ಲಿ ‘ಕೊರೋನಾ ನೆಗೆಟೀವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ, ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಆ ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.

ಜೂನ್ 18ರಂದು ನಡೆದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಬಳಿಕ ಬೆಂಗಳೂರಿನ ಜಯನಗರದ ಕಾಲೇಜೊಂದರಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ತಗುಲಿದ್ದು, ಈ ವಿದ್ಯಾರ್ಥಿ ಕ್ವಾರಂಟೈನ್ ಮೊಹರು ಅಳಿಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾಳೆಂದು ಇದರಿಂದ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿದೆ ಎಂಬ ರೀತಿಯಲ್ಲಿ ನಿನ್ನೆಯಿಂದ ಎಲ್ಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಯಾವ ಇಲಾಖೆ ನಿಖರ ಮಾಹಿತಿಯನ್ನು ನೀಡುತ್ತಿಲ್ಲವೆಂದು ಮೊಹರು ಅಳಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯನ್ನು ತಪ್ಪಿತಸ್ಥಳೆಂದು ಬಿಂಬಿಸಿ ಇಡೀ ಪ್ರಕರಣವನ್ನು ಗೋಜಲುಗೊಳಿಸಿ ವಿಶ್ವಾಸ ಕದಡುವ ಪ್ರಯತ್ನ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಇಡೀ ರಾಜ್ಯದಲ್ಲಿ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳ ಹಿತವನ್ನು ಕಾಯ್ದ ಶಿಕ್ಷಣ ಇಲಾಖೆಗೆ ಈ ವಿದ್ಯಾರ್ಥಿನಿಯೋರ್ವಳನ್ನು ಪರೀಕ್ಷಿಸದೇ ಬೇರೊಬ್ಬರಿಗೆ ತೊಂದರೆಯನ್ನುಂಟು ಮಾಡುವಂತಹ ಯಾವುದೇ ಉದ್ದೇಶವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಮ್ಮ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು, ಅವರ ಹಿತವೇ ನಮ್ಮ ಪ್ರಮುಖ ಆದ್ಯತೆಯಾಗಿದೆ.

ಜೂ. 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದ್ದು, ಈ ಸಂಬಂಧಲ್ಲಿ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

ರಾಜ್ಯದ 1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಜಿಲ್ಲಾ ಕೇಂದ್ರದ 430, ತಾಲೂಕು ಕೇಂದ್ರಗಳಲ್ಲಿನ 328 ಮತ್ತು ಹೋಬಳಿ ಕೇಂದ್ರಗಳ 258 ಪರೀಕ್ಷಾ ಕೇಂದ್ರಗಳನ್ನು ಸೃಜಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಲ್ಲಿ 23,064 ಕೊಠಡಿಗಳನ್ನು ಮುಂಚೆ ಪರೀಕ್ಷೆಯನ್ನು ನಿರ್ವಹಿಸಲು ಗುರುತಿಸಿಕೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ನಿರ್ವಹಿಸಲಾಗಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಉಷ್ಣಾಂಶ ಪರೀಕ್ಷೆಯನ್ನು ನಡೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಇಡೀ ರಾಜ್ಯದಲ್ಲಿ ಪರೀಕ್ಷಾ ಸಂದರ್ಭದಂದು ಜ್ವರ, ನೆಗಡಿಯಂತಹ ಅನಾರೋಗ್ಯಕ್ಕೆ ಒಳಗಾದ 20 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಅದೇ ರೀತಿ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯಗಳಿಂದ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ತಿಳಿಸಿದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಪರೀಕ್ಷಾ ಪೂರ್ವದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ನೀಡಲಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅದೇ ರೀತಿ ಇಂಗ್ಲಿಷ್ ಭಾಷಾ ಪರೀಕ್ಷೆಯ ದಿನದಂದು ಕಂಡುಬಂದ ನ್ಯೂನತೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂದು ಜೂನ್ 25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನೂ ಅನುಸರಿಸಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದೂ ಸುರೇಶ್‍ಕುಮಾರ್ ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೊರೋನಾ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಿ ನಮ್ಮ ಇಲಾಖೆಯ ದಾಖಲೆ/ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತೇನೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಘನ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿ ತಲಾ 2 ಮಾಸ್ಕ್‍ಗಳನ್ನು ಪಡೆಯಲಿದ್ದಾರೆ. ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಜಾರಿಯಲ್ಲಿಡಲಾಗುತ್ತದೆ ಎಂದು ವಿವರಿಸಿದ ಸಚಿವರು, ಈಗಾಗಲೇ ಹೇಳಿದಂತೆ ರಾಜ್ಯದ ವಿವಿಧ ಇಲಾಖೆಗಳು ಸಂಪೂರ್ಣ ಸಮನ್ವಯದೊಂದಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಒಂದು ಭರವಸೆ ನೀಡುವ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ವಹಿಲಿವೆ. ಈ ಬಗ್ಗೆ ಯಾವ ಅಪನಂಬಿಕೆಯೂ ಬೇಡ ಎಂದು ತಿಳಿಸಿದರು.

ಮಾಧ್ಯಮಗಳಿಗೆ ಮನವಿ

ಇಂತಹ ಅತ್ಯಂತ ಸೂಕ್ಷ್ಮ ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗಿದೆ. ನಾವು ನೀವೆಲ್ಲರೂ ಸೇರಿ ಸ್ವಾಸ್ಥ ಸಮಾಜವನ್ನು ನಿರ್ಮಿಸುವ ಕೆಲಸ ಮಾಡಬೇಕಾಗಿರುತ್ತದೆ. ಈ ಮೂಲಕ ಸಮಾಜಕ್ಕೆ ಒಂದು ಸಕಾರಾತ್ಮಕ ಸಂದೇಶ ನೀಡಬೇಕಾಗಿದೆ ಎಂದು ಸುರೇಶ್‍ಕುಮಾರ್ ಮಾಧ್ಯಮಗಳನ್ನು ವಿನಂತಿಸಿಕೊಂಡರು.

ಬಂಧು – ಬಾಂಧವರ ಹಿತರಕ್ಷಣೆಗೆ ಸರ್ಕಾರ ಬದ್ದ , ಸಾಗರೋತ್ತರ ಕನ್ನಡಿಗರಿಗೆ ಗೋವಿಂದ ಕಾರಜೋಳ ಅಭಯ

ಬೆಂಗಳೂರು. ಜೂ. 20 : ರಾಜ್ಯದಲ್ಲಿರುವ ತಮ್ಮ ಪೋಷಕರು, ಬಂಧು- ಬಾಂಧವರ ಆರೋಗ್ಯ ಹಾಗೂ ಹಿತರಕ್ಷಣೆಯನ್ನು ರಾಜ್ಯ ಸರ್ಕಾರವು ಮುತುವರ್ಜಿಯಿಂದ ಕೈಗೊಳ್ಳುತ್ತಿದೆ ಎಂದು ಉಪಮುಖ್ಯಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸಾಗರೋತ್ತರ ಕನ್ನಡಿಗರಿಗೆ ಅಭಯ ನೀಡಿದರು.

ಸಾಗರೋತ್ತರ ಕನ್ನಡಿಗರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಅನೇಕ ದೇಶಗಳು, ಉತ್ತರ ಕರ್ನಾಟಕದ ಅನೇಕ ಸಾಗರೋತ್ತರ ಕನ್ನಡಿಗರೊಂದಿಗೆ ಈ ಸಂವಾದದಲ್ಲಿ ಮಾತನಾಡಿ, ಸಂತಸವಾಯಿತು.

ಸಾಗರೋತ್ತರ ಕನ್ನಡಿಗರು ಕನ್ನಡಿಗರ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅನೇಕ ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ತಮ್ಮೊಂದಿಗೆ ಇದೆ. ಆತ್ಮ ಸ್ಥೈರ್ಯದಿಂದ ಇರುಬೇಕು ಎಂದು ಡಿಸಿಎಂ ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರವು ಕೊರೋನಾ ನಿಯಂತ್ರಣಕ್ಕಾಗಿ ಶಕ್ತಿ ಮೀರಿ ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಶ್ರಮಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಹಲವಾರು ಪ್ಯಾಕೇಜ್‍ಗಳನ್ನು ಜಾರಿಗೊಳಿಸುವ ಮೂಲಕ ಸಂಕಷ್ಟದಲ್ಲಿರುವ ಕುಲಕಸುಬು ಮಾಡುವವರಿಗೆ, ಕಾರ್ಮಿಕರಿಗೆ ಪರಿಹಾರವನ್ನು ವಿತರಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನಗಳೊಂದಿಗೆ ರಾಜ್ಯ ಸರ್ಕಾರವು ಕೆಲವು ನಿಬಂಧನೆಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ದೇಶನಗಳನ್ನು ಪಾಲಿಸುವಂತೆ ನಿರಂತರವಾಗಿ ಮನವಿ ಮಾಡಲಾಗುತ್ತಿದೆ. ಸರ್ಕಾರೇತರ ಸಂಘ ಸಂಸ್ಥೆಗಳು, ವಿದ್ಯಾವಂತರು, ಯುವಕರು ಜಾಗೃತಿ ಮೂಡಿಸಬೇಕು. ಪ್ರಯಾಣದ ವಿವರವನ್ನು ನೀಡದಿರುವ ಹಿನ್ನೆಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಶಂಕಿತರು ಹಾಗೂ ಸೋಂಕಿತರು ತಮ್ಮ ಪ್ರಯಾಣದ ವಿವರವನ್ನು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಶಿಕ್ಷಣ ಇಲಾಖೆಯು ಪಿಯುಸಿ ಪರೀಕ್ಷೆಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ನಡೆಸಿದೆ. ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಅವರು ಶಿಕ್ಷಣ ತಜ್ಞರೊಂದಿಗೆ ಸುಧೀರ್ಘವಾಗಿ ಚರ್ಚಿಸಿ, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತಹ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ದೇವಸ್ಥಾನಗಳಲ್ಲೂ ಮುಂಜಾಗ್ರತಾ ಕ್ರಮಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಭಿಯಾಗುತ್ತಿದೆ. ಸಮಪರ್ಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಇಂಗ್ಲೆಂಡ್ ನ ಗೋಪಾಲ್ ಕುಲಕರ್ಣಿ, ಇಟಲಿಯ ಹೇಮೇಗೌಡ ಮಧು, ಯುಕೆಯ ಬಸವ ಪಾಟೀಲ್, ಯುಎಇಯ ಚಂದ್ರು ಅಂಗದಲ್ಲಿ, ಸೌದಿ ಅರೇಬಿಯದ ರವಿ ಮಾಹಾದೇವ ಅವರು ಈ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಎಲ್ಲಾ ದೇಶಗಳ ಪ್ರತಿನಿಧಿಗಳಾಗಿ ಹಲವಾರು ಸಾಗರೋತ್ತರ ಕನ್ನಡಿಗರು ಸಂವಾದದಲ್ಲಿ ಪಾಲ್ಗೊಂಡು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

6 ವರ್ಷಗಳಲ್ಲಿ 500 ಬಿಲಿಯನ್ ಗೆ ರಾಜ್ಯ ಜಿಡಿಪಿ ಕೈಗಾರಿಕೋದ್ಯಮಿಗಳಿಗೆ ಸರ್ವಸಹಕಾರ ಎಂದ ಡಿಸಿಎಂ

ಬೆಂಗಳೂರು: ಮುಂದಿನ 6 ವರ್ಷಗಳಲ್ಲಿ ಕರ್ನಾಟಕವನ್ನು ’ನವ ಕರ್ನಾಟಕ’ವನ್ನಾಗಿ ರೂಪಿಸುವುದೂ ಸೇರಿದಂತೆ, ರಾಜ್ಯದ ಜಿಡಿಪಿಯನ್ನು 230 ಬಿಲಿಯನ್ ಡಾಲರಿನಿಂದ 500 ಬಿಲಿಯನ್ ಡಾಲರಿಗೆ ಹೆಚ್ಚಿಸುವ ಉದ್ದಿಮೆದಾರರ ಕನಸಿಗೆ ಸರಕಾರ ಸರ್ವರೀತಿಯ ಸಹಕಾರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಆಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ’ಕೋವಿಡ್ 19 ನಂತರ ಆರ್ಥಿಕತೆಯ ಪುನರುತ್ಥಾನ ಹಾಗೂ ನವ ಕರ್ನಾಟಕ ನಿರ್ಮಾಣ’ ವಿಷಯದ ಬಗ್ಗೆ ಅಸೋಚೋಮ್ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಂತರ ಕರ್ನಾಟಕವನ್ನು ಆರ್ಥಿಕವಾಗಿ, ಕೈಗಾರಿಕೀಕರಣವಾಗಿ ಹೊಸದಾಗಿ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಸರಕಾರವು ಉದ್ದಿಮೆದಾರರ ಜತೆ ಗಟ್ಟಿಯಾಗಿ ನಿಲ್ಲಲಿದೆ, ಕೈಗಾರಿಕೆಗಳಿಗೆ ಬೇಕಾದ ಸರ್ವರೀತಿಯ ಪೂರಕ ವಾತಾವರಣವನ್ನು ಸೃಷ್ಟಿ ಮಾಡಲಿದೆ ಎಂದು ಪ್ರಕಟಿಸಿದರು.

ಯಾರೇ ಬಂದು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಕ್ತ ಅವಕಾಶವಿದೆ. ಹೂಡಿಕೆ ಮಾಡಿದ ನಂತರ ಸರಕಾರದ ಅನುಮತಿ ಕೇಳಿದರೂ ಅಭ್ಯಂತರವಿಲ್ಲ. ಉದ್ಯೋಗಾವಕಾಶ ಸೃಷ್ಟಿ ಮಾಡುವ ಕೈಗಾರಿಕೋದ್ಯಮಕ್ಕೆ ಬೇಕಾದ ಎಲ್ಲ ಸೌಲಭ್ಯ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ನಮ್ಮ ರಾಜ್ಯವನ್ನು ಕೋವಿಡ್ ತುಂಬಾ ಬಾಧಿಸಿದೆ. ಸಾಮಾಜಿಕ, ಆರ್ಥಿಕ, ಕೈಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಸಮಸ್ಯೆಗಳನ್ನು ಸೃಷ್ಟಿಸಿದೆ. ಹೊಸಹೊಸ ಸವಾಲುಗಳು ಎದುರಾಗಿವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸಲು ಸರಕಾರಕ್ಕೆ ಉದ್ದಿಮೆದಾರರ ಸಹಕಾರ ಅಗತ್ಯವಾಗಿದೆ ಎಂದು ಡಿಸಿಎಂ ನುಡಿದರು.

ಕನಿಷ್ಠ ಸರಕಾರ, ಗರಿಷ್ಠ ಆಡಳಿತ:
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ’ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂಬ ಪ್ತಧಾನಿಯವರ ಮಂತ್ರವನ್ನು ನಾವು ಪಾಲಿಸುತ್ತಿದ್ದೇವೆ. ಈ ಮೂಲಕ ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳನ್ನು ಮುನ್ನಡೆಯುವುದು ನಮ್ಮ ಧ್ಯೇಯವಾಗಿದೆ. ಹೀಗಾಗಿ ಮೂರೂ ಕ್ಷೇತ್ರಗಳಿಗೂ ನಾವು ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದೇವೆ. ಅಲ್ಲದೆ, ಕೈಗಾರಿಕೆಗಳ ಸ್ಥಾಪನೆ, ಹೊಸ ವ್ಯವಹಾರ ಆರಂಭಕ್ಕಿರುವ ಅಡೆತಡೆಗಳನ್ನು ನಿವಾರಿಸುತ್ತಿದ್ದೇವೆ ಹಾಗೂ ಎಲ್ಲ ಅನುಮತಿಗಳನ್ನು ಕ್ಷಿಪ್ರಗತಿಯಲ್ಲಿ ನೀಡುತ್ತಿದ್ದೇವೆ, ಈ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ಚುರುಕಾಗಿ ಆರಂಭವಾಗಿವೆ ಎಂದು ಉಪ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ:
ಕೈಗಾರಿಕೆಗಳಿಗೆ ಹೆಚ್ಚು ಒತ್ತಾಸೆ ನೀಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯವೂ ಆಗಿದೆ. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಯಿತಲ್ಲದೆ, ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿದ್ದ ಕೆಲ ಪಟ್ಟಭದ್ರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬಹುದು. ಇದು ನಮ್ಮ ಸರಕಾರ ಇಟ್ಟ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸರಕಾರ ಜನರಿಗೆ ತಿಳಿವಳಿಕೆ ಮೂಡಿಸುತ್ತಿದೆ. ಮುಖ್ಯವಾಗಿ ರೈತರಿಗೆ ಭೂಮಿ, ನೀರು, ಗೊಬ್ಬರ ಇತ್ಯಾದಿಗಳನ್ನು ಸದ್ಭಳಕೆ ಮಾಡಿಕೊಳ್ಳುವುದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತಿದೆ. ರೈತರಿಗೆ ಸಕಾಲಕ್ಕೆ ಉತ್ತಮ ಜ್ಞಾನ ನೀಡುವುದು ಅತಿ ಮುಖ್ಯ ಎಂಬುದನ್ನು ಸರಕಾರ ಮನಗಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಆಗುತ್ತವೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ ಎಂದು ಅವರು ಸ್ಪಷ್ಟಪಡಿಸಿದರು.

ಐಟಿ ಬಿಟಿ ಸೇರಿದಂತೆ ಯಾವುದೇ ಕೈಗಾರಿಕೆ ಇರಲಿ ಕರ್ನಾಟಕದಷ್ಟು ಪ್ರಶಸ್ತ್ಯವಾದ ರಾಜ್ಯ ಮತ್ತೊಂದಿಲ್ಲ. ಕೊರೋನಾದಂಥ ಮಾರಿಯನ್ನು ಹಿಮ್ಮೆಟ್ಟಿಸಿ ಉದ್ದಿಮೆಗಳನ್ನು ಪುನರುಜ್ಜೀವನಗೊಳಿಸಲು ಉದ್ದಿಮೆದಾರರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೀಯ. ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಫೂರ್ತಿಯಾದ ಕೈಗಾರಿಕೋದ್ಯಮಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಹೇಳಿದರು.

ಗಾರ್ಮೆಂಟ್ ಗಳಿಗೆ ಉತ್ತೇಜನ:
ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಗಾರ್ಮೆಂಟ್ ಊದ್ಯಮಕ್ಕೆ ಸರಕಾರ ಹೆಚ್ಚು ಒತ್ತಾಸೆ ನೀಡುವುದರ ಜತೆಗೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಬೆಂಗಳೂರು ಮಾತ್ರವಲ್ಲದೆ ಅತ್ಯುತ್ತಮ ಮಾನವ ಸಂಪನ್ಮೂಲ ಇರುವ ಗ್ರಾಮೀಣ, ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪನೆ ಮಾಡಿದರೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.

ನಕಲಿ ಬೀಜ‌ ಮಾರಾಟಗಾರರ ಒತ್ತಡಕ್ಕೆ ಮಣಿಯುವುದು ತಾಯಿ ಮಗುವಿಗೆ ವಿಷವುಣಿಸಿದಂತೆ:ಬಿ.ಸಿ.ಪಾಟೀಲ್

ಕೊಪ್ಪಳ,ಜೂನ್.19: ರೈತರಿಗೆ ಒಳ್ಳೆಯದು ಮಾಡುವುದೇ ನನ್ನ ಕರ್ತವ್ಯ.ನಕಲಿ ಕಳಪೆ ಬೀಜ ಗೊಬ್ಬರ ಮಾರಾಟಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.ಒತ್ತಡಕ್ಕೆ ಮಣಿಯುವುದು ತಾಯಿಯೇ ಮಗುವಿಗೆ ವಿಷವುಣಿಸಿದಂತೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳದಲ್ಲಿಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು,ಕಳಪೆ ಬೀಜ ಮಾರಾಟ ಮಾಡುವ ದೊಡ್ಡ ಜಾಲವನ್ನು ನಾವು ಬೇಧಿಸಿದ್ದೇವೆ.ಇನ್ನೂ ಬೇಧಿಸುವುದು ಬಹಳಷ್ಟಿದೆ. ಕಳಪೆ ಬೀಜ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ.ಕಳಪೆ ಬೀಜ ಮಾರಾಟದವರ ಒತ್ತಡ ತಂತ್ರಗಳಿಗೆ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ .ಕಳಪೆ ಬೀಜ ಮಾರಾಟವನ್ನು ನಾವೇ ಪತ್ತೆ ಮಾಡುತ್ತಿದ್ದೇವೆ..ಇಷ್ಟು ವರ್ಷ ಅದು ಪತ್ತೆಯಾಗಿದ್ದಿಲ್ಲ.ಕಳಪೆ ಬೀಜದ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ.ತಾವು ಕೃಷಿ ಸಚಿವರಾದ ಬಳಿಕ ಖುದ್ದಾಗಿ ಇಂತಹದೊಂದು ಡ್ರೈವ್ ಸ್ಟಾರ್ಟ್ ಮಾಡಲಾಗಿದ್ದು, ರಾಯಚೂರು,ಬೀದರ,ಹಾವೇರಿ ಸೇರಿದಂತೆ ಇಲ್ಲಿಯವರೆಗೂ ಸುಮಾರು 15 ಕೋಟಿ ಮೊತ್ತದ ಕಳಪೆ ಬೀಜ ಪತ್ತೆ ಮಾಡಲಾಗಿದೆ ಅನ್ನ ಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಸಮಯದಲ್ಲಿ ಕಳಪೆ ಬೀಜ ಪೂರೈಕೆ ಆಗಬಾರದು.ಕಳಪೆ ಬೀಜದ ಜೊತೆಗೆ ಕಳಪೆ ನಕಲಿ ರಸ ಗೊಬ್ಬರ, ಔಷಧಿಯನ್ನು ಸೀಜ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಈಗಾಗಲೇ ಬೀಜ ಕಾಯಿದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಕೊರೊನಾ ಪಾಸಿಟಿವ್ ಬಂದವರು ಸ್ವತಃ ತಮ್ಮೊಂದಿಗೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದರು.ಎಲ್ಲೆಲ್ಲಿ ಓಡಾಡಿದ್ದರೆಂಬ ಮಾಹಿತಿಯನ್ನು ಅವರೇ ಸ್ವತಃ ನೀಡಿದರೆ ಚಿಕಿತ್ಸೆಗೆ ಮತ್ತು ಇನ್ನಿತರರಿಗೆ ಸೋಂಕಿನಿಂದ ತಪ್ಪಿಸಲು ಸಹಾಯಕವಾಗುತ್ತದೆ. ಈಗ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿರುವ ಕಾರಣ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಮಾಡಲು ಅನುಕೂಲವಾಗುತ್ತಿದೆ. ಹೊರಗಿನಿಂದಲೇ ಬಂದವರಿನಮದ ಹೆಚ್ಚಾಗಿ ಸೋಂಕು ಹರಡುತ್ತಿದೆ.ಎಲ್ಲರೂ ತಪ್ಪದೇ ಸಾಮಾಜಿಕ ಅಂತರ,ಸರ್ಕಾರದ ನಿಯಮ ಪಾಲನೆ ಅನುಸರಿಸಬೇಕೆಂದು ಬಿ.ಸಿ.ಪಾಟೀಲ್ ಹೇಳಿದರು.

ಇದೇ ಸಂದರ್ಭದಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಮೇಲ್ಮನೆ ಸ್ಥಾನ ಕೈಬಿಟ್ಟಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು,ವಿಶ್ವನಾಥರಿಗೂ ಮಾಡಬೇಕೆನ್ನುವ ಒತ್ತಾಯ ಇದೆ.ಆರ್.ಶಂಕರ್,ಎಂಟಿಬಿ,ವಿಸದ್ವನಾಥ್ ಮೂವರಿಗೂ ಮೇಲ್ಮನೆ ಸ್ಥಾನ ಸಿಗಲಿದೆ ಎಂಬ ಭರವಸೆಯಿತ್ತು.ಅದರಂತೀಗ ಇಬ್ಬರಿಗೆ ಸಿಕ್ಕಿದೆ.ಇನ್ನೂ ನಾಲ್ಕೈದು ಸ್ಥಾ‌ನಗಳಿವೆ.ಸದ್ಯದಲ್ಲಿಯೇ ಇನ್ನೊಬ್ಬರಿಗೂ ಕೊಡಬಹುದು ಎಂದು ಉತ್ತರಿಸಿದರು.