ರೈತಗೀತೆ ಕಾಲರ್ ರಿಂಗ್ ಟೋನ್ ಆಗಲಿ:ಬಿ‌.ಸಿ.ಪಾಟೀಲ್

ಬೆಂಗಳೂರು,ಜೂನ್.19:”ಜೈ ಕಿಸಾನ್” ಎಂದು ಹೆಮ್ಮೆ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲರು ಇದೀಗ “ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ” ಎನ್ನುವ ರಾಷ್ಟ್ರಕವಿ ಕುವೆಂಪು ವಿರಚಿತ ಪದ್ಯವನ್ನು ಇನ್ನಷ್ಟು ಪ್ರಚುರಪಡಿಸಲು ಮುಂದಾಗಿದ್ದಾರೆ.

ಅಂದ್ಹಾಗೆ ಈ ಹಾಡು ಕರ್ನಾಟಕದಲ್ಲಿ ರೈತಗೀತೆಯೆಂದೇ ಪ್ರಖ್ಯಾತಿ ಹೊಂದಿದ್ದು, ಅನ್ನದಾತನ ಮಹತ್ವವೇನು? ಎನ್ನುವುದನ್ನು ಸಾರಿಸಾರಿ ಹೇಳುತ್ತದೆ.ಅಷ್ಟೇ ಅಲ್ಲ ಕಾರ್ಯಕ್ರಮಗಳಲ್ಲಿ ಈ ಗೀತೆ ಮೊಳಗುತ್ತಿದ್ದಂತೆಯೇ ಎದ್ದುನಿಂತು ಗೌರವವನ್ನೂ ಸೂಚಿಸಲಾಗುತ್ತದೆ.
ಇದೀಗ ಕೃಷಿ ಸಚಿವರು ರೈತರ ಮಹತ್ವವನ್ನು ಸಾರುವ ಈ ಹಾಡನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು,ಅಧಿಕಾರಿಗಳು,ಸಿಬ್ಬಂದಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಸೇರಿದಂತೆ ರೈತರು ತಾವು ಬಳಸುವ ಮೊಬೈಲ್‌ನ ಕಾಲರ್ ಟೋನ್,ರಿಂಗ್ ಟೋನ್ ಆಗಿ ಬಳಸುವಂತೆ ಚಿಂತನೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆ “ಹಲೋ” ಬದಲಿಗೆ “ಜೈ ಕಿಸಾನ್” ಬಳಸುವಂತೆ ಸಚಿವರು ನಿರ್ದೇಶಿಸಿದ್ದರು.ಇದೀಗ ರೈತಗೀತೆಯನ್ನು ಕಾಲರ್ ರಿಂಗ್ ಟೋನಾಗಿ ಬಳಸಲು ಯೋಜನೆ ರೂಪಿಸಿರುವುದು ರೈತರ ಬಗ್ಗೆ ಸಚಿವರಿಗಿರುವ ಗೌರವವನ್ನು ವ್ಯಕ್ತಪಡಿಸುತ್ತಿದೆ.

ಸಚಿವ ಬಿ.ಸಿ.ಪಾಟೀಲರು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳನ್ನು ಸುತ್ತಿ ಕೃಷಿಚಟುವಟಿಕೆಗಳನ್ನು ನಿರ್ಬಂಧಮುಕ್ತಗೊಳಿಸಿ ರೈತರಿಗೆ ಅನುವು ಮಾಡಿಕೊಟ್ಟಿರುವುದೇ ಸಾಕ್ಷಿ.ಇದು ರೈತರ ಬಗೆಗಿನ ಪ್ರೀತಿ ಕೃಷಿ ಮೇಲಿನ ಕಾಳಜಿ ತೋರಿತ್ತು.

ಆಕಸ್ಮಿಕವಾಗಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ

ಬೆಂಗಳೂರು – 19:ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ಪ್ರತ್ಯೇಕ ಘಟನೆಯಲ್ಲಿ ಏಳು ಜನ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಅವರು ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ, ಪರಿಹಾರ ಹಣ ಮಂಜೂರು ಮಾಡಿಸಿದ್ದಾರೆ.

ನಾಗಮಂಗಲ ತಾಲೂಕಿನ ಬೀರನಹಳ್ಳಿಯ ಒಂದೇ ಕುಟುಂಬದ ಗೀತಾ, ಸವಿತ, ಸೌಮ್ಯ ಮೃತಪಟ್ಟಿದ್ದು, ಮೃತರ ಕುಟುಂಬದವರಿಗೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿರುವ ನಾಗಮಂಗಲದ ಚೋಳಸಂದ್ರ ಗ್ರಾಮದ ರಶ್ಮಿ ಹಾಗೂ ಇಂಚರ ಮೃತಪಟ್ಟಿದ್ದು ಎರಡೂ ಕುಟುಂಬದವರಿಗೆ ತಲಾ 2 ಲಕ್ಷ ರೂ ಹಾಗೂ ಕೆ.ಆರ್. ಪೇಟೆ ತಾಲೂಕಿನ ಹುಳಿಗಂಗನಹಳ್ಳಿಯ ಅಭಿಷೇಕ್ ಆಕಸ್ಮಿಕವಾಗಿ ಮೃತಪಟ್ಟಿದ್ದು, ಕುಟುಂಬದವರಿಗೆ 2 ಲಕ್ಷ ರೂ. ಮತ್ತು ಕೆ.ಆರ್.ಪೇಟೆ ಆದಿಹಳ್ಳಿ ಗ್ರಾಮದ ಕುಮಾರ್ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳ ಪಠ್ಯಕ್ರಮದಲ್ಲಿ ಕೋವಿಡ್-19 ಅರಿವಿನ ಪಾಠ : ಸಚಿವ ಸುರೇಶ್‌ಕುಮಾರ್

ಚಾಮರಾಜನಗರ : ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಪಠ್ಯಕ್ರಮಗಳಲ್ಲಿ ಕೋವಿಡ್ 19 ನ ಬಗ್ಗೆ ಕಿರುಹೊತ್ತಿಗೆ ಹೊರತಂದು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್‌ನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಕೋವಿಡ್ ಇನ್ನಿತರ ಮಹಾಮಾರಿ ರೋಗಗಳ ಬಗ್ಗೆ ದೇಶ-ವಿದೇಶಗಳು ಕೈಗೊಂಡ ಕ್ರಮಗಳು ಹಾಗೂ ಪರಿಹಾರಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.

ಅವರು ಇಂದು ಚಾಮರಾಜನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊರರೋಗಿಗಳ ವಿಭಾಗ ಹಾಗೂ ತುರ್ತುಚಿಕಿತ್ಸಾ ನಿಗಾಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ ಆಸ್ಪತ್ರೆಗಳಿಗೆ ರೋಗಿಗಳು ಆಗಮಿಸದಾಗ ವೈದ್ಯರು ಹಾಗೂ ಶೂಶ್ರುಕಿಯರು ಅವರನ್ನು ನಗುಮುಖದಿಂದ ಸ್ವಾಗತಿಸಬೇಕು ಎಂದ ಅವರು ಈಗಾಗಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್‌ಸ್ ಆಸ್ಪತ್ರೆಯಲ್ಲಿ ನಡೆದ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆಯು ಯಶಸ್ಸು ಕಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರಾರಂಭಿಕ ಪ್ರಯತ್ನಕ್ಕೆ ಉತ್ತೇಜನ ದೊರಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ವಿಧಿ ವಿಜ್ಞಾನ ಇಲಾಖೆಗಳ ವೈದ್ಯರ ತಜ್ಞರ ಸಮಿತಿಯನ್ನು ಸರ್ಕಾರ ಕೂಡಲೇ ನೇಮಕ ಮಾಡಿ, ಅವರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಪ್ಲಾಸ್ಮಾ ಚಿಕಿತ್ಸೆಯನ್ನು ಅಗತ್ಯವಿರುವ ಎಲ್ಲಾ ಆಸ್ಪತ್ರೆಗಳಲ್ಲಿ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

ವಿಶ್ವವ್ಯಾಪ್ತಿ ಮಾರಕವಾಗಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾದ ಬಗ್ಗೆ ಶಾಲಾ ಹಾಗೂ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಕೋವಿಡ್ 19 ಹಾಗೂ ಇತರ ಮಹಾ ಮಾರಿ ರೋಗಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರವು ಕಿರುಹೊತ್ತಿಗೆಯನ್ನು ಹೊರತಂದು ಅದನ್ನು ಪಠ್ಯಕ್ರಮಗಳಲ್ಲಿ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಣ ಇಲಾಖೆಯು ಕಾರ್ಯೋನ್ಮುಖವಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾಪೋಲೀಸ್ ವರೀಷ್ಠಾಧಿಕಾರಿ ಆನಂದ್‌ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಸಂಜೀವ್ ಸೇರಿದಂತೆ ಇತರರು ಹಾಜರಿದ್ದರು.

ಕ್ಯಾಬಿನೆಟ್ ನಲ್ಲಿ ಖಾಸಗಿ ಆಸ್ಪತ್ರೆಗಳ ದರ ನಿಗದಿ – ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು: ಕೋವಿಡ್ 19 ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಮಾಡುವ ವಿಚಾರ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ದರ ನಿಗದಿ ವಿಚಾರ ನಿನ್ನೆಯ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆ ಆಗಿದೆ. ಈ ವೇಳೆ ಬೇರೆ ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ದರಗಳ ಬಗ್ಗೆ ಕೂಡಾ ಪರಿಶೀಲಿಸಿದ್ದೇವೆ. ಈ ಬಗ್ಗೆ ಸಿಎಂ ಗಮನಕ್ಕೆ ಕೂಡಾ ತಂದಿದ್ದೇವೆ. ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ‌ ಮಾಡೋಣ ಎಂದು ಸಿಎಂ ಹೇಳಿದ್ದಾರೆ.ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುವವರೆಗೆ ದರ ನಿಗದಿ ಅಧಿಕೃತ ನಿರ್ಧಾರ ಆಗುವುದಿಲ್ಲ. ಖಾಸಗಿ ಆಸ್ಪತ್ರೆಗಳು ಹೇಳಿರುವ ದರ ಹೇಳಿದ್ದು, ಅದು ಅವರ ಬೇಡಿಕೆ ಆಗಿದೆ. ರಾಜ್ಯ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಎಷ್ಟು ದರ ನಿಗದಿ ಮಾಡಬೇಕು ಅಂತಾ ಸಿಎಂ ಮತ್ತು ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಕಾಮಗಾರಿಗೆ ಶೀಘ್ರ ಚಾಲನೆ: ಡಿಸಿಎಂ ಘೋಷಣೆ

ರಾಮನಗರ: ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಾಮನಗರದ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿವಾದ ಇದ್ದು, ಕೋವಿಡ್ ಬಿಕ್ಕಟ್ಟು ಹತೋಟಿಗೆ ಬಂದ ಕೂಡಲೇ ಆ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ನೀಡಲಾಗುವುದು ಎಂದು ಉಪ ಮಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ರಾಮನಗರದಲ್ಲಿ ಶುಕ್ರವಾರ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜೀವ್ ಗಾಂಧಿ ವಿವಿ ಸ್ಥಳಾಂತರಕ್ಕೆ ಸಂಬಂಧಿಸಿ ಕಾನೂನಾತ್ಮಕ ತೊಡಕಿದೆ. ಹೈಕೊರ್ಟಿನಲ್ಲಿ ಅರ್ಜಿಯೊಂದು ಇತ್ಯರ್ಥವಾಗಬೇಕಿದ್ದು, ಕೋವಿಡ್ ಕಾರಣಕ್ಕೆ ನ್ಯಾಯಾಲಯದ ಕಲಾಪ ನಡೆಯದೇ ಅದರ ವಿಲೇವಾರಿ ವಿಳಂಬವಾಗಿದೆ. ಈ ಅರ್ಜಿ ಇತ್ಯರ್ಥವಾದ ತಕ್ಷಣವೇ ಕಾಮಗಾರಿ ಆರಂಭಿಸಿ ಕಾಲಮಿತಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ವಿವಿ ಸ್ಥಳಾಂತರದ ಜತೆಯಲ್ಲಿಯೇ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೆಲ್ತ್ ಸಿಟಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಎರಡು ಯೋಜನೆಗಳು ಸಾಕಾರಗೊಂಡ ಮೇಲೆ ರಾಮನಗರದ ಚಿತ್ರಣವೇ ಬದಲಾಗಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ನಿಯಂತ್ರಣಕ್ಕೆ ಕ್ರಮ:
ಹಸಿರು ವಲಯವಾಗಿದ್ದ ಜಿಲ್ಲೆಯಲ್ಲಿ ಈಗ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಡಿಸಿಎಂ, ಆಸ್ಪತ್ರೆಗಳಲ್ಲಿ ಕಠಿಣ ಎಚ್ಚರಿಕೆ ವಹಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದಯಾನಂದ ಸಾಗರ್ ಆಸ್ಪತ್ರೆಯವರು ಜಿಲ್ಲೆಗೆ 200 ಬೆಡ್ ಗಳನ್ನು ನೀಡುವ ಭರವಸೆ ನೀಡಿದ್ದಾರೆ. ನಾನೇ ಖುದ್ದಾಗಿ ಆ ಆಸ್ಪತ್ರೆಯ ಆಡಳಿತ ಮಂಡಳಿಯವರ ಜತೆ ಮಾತಾನಾಡಿದ್ದೇನೆ. ಕೂಡಲೇ ಅವರನ್ನು ಸಂಪರ್ಕಿಸಿ ಬೆಡ್ ಗಳನ್ನು ಪಡೆದುಕೊಳ್ಳುವಂತೆ ಡಿಸಿಎಂ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಂದು ದೂರೂ ಬರಬಾರದು. ಔಷಧಿ, ಫಲ್ಮ್ ಮೀಟರ್ ಸೇರಿ ಸಪ್ಲೈ ಚೈನಿನಲ್ಲಿ ಯಾವುದೇ ವ್ಯತ್ಯಯವಾಗಬಾರದು. ದಿನೇದಿನೆ ಆ ವ್ಯವಸ್ಥೆ ಸುಧಾರಿಸುತ್ತಿರಬೇಕು. ಸ್ವಯಂ ಸೇವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ ಜವಾಬ್ದಾರಿ ವಹಿಸಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಇಬ್ಬರಿಂದ ಮೂವರು ಫಿಜಿಶಿಯನ್ನುಗಳು ಇರುವಂತೆ ನೋಡಿಕೊಳ್ಳಬೇಕು. ಕ್ವಾರಂಟೈನ್ ನಲ್ಲಿ ಇರುವ ಸೋಂಕಿತರಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಈ ಬಗ್ಗೆ ಯಾರೂ ದೂರುವಂತಿರಬಾರದು. ಕೋವಿಡ್ ನಿರ್ವಹಣೆಯಲ್ಲಿ ರಾಮನಗರ ಇಡೀ ರಾಜ್ಯಕ್ಕೆ ಮಾದರಿಯಾಗಿರಬೇಕು ಎಂದು ಉಪ ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬೆಳೆ ವಿಮೆ-ಡಿಸಿಎಂ ಗರಂ:
ರೈತರಿಗೆ ಬೆಳೆ ವಿಮೆ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕಾಪೋರೇಷನ್ ಬ್ಯಾಂಕ್ ಬಗ್ಗೆ ಉಪ ಮುಖ್ಯಮಂತ್ರಿ ಗರಂ ಆದ ಪ್ರಸಂಗ ಕೆಡಿಪಿ ಸಭೆಯಲ್ಲಿ ನಡೆಯಿತು. ಮೂರು ವರ್ಷವಾದರೂ ಬ್ಯಾಂಕಿನಿಂದ ವಿಮೆ ಮೊತ್ತ ಬಂದಿಲ್ಲ. ರೈತರು ಬ್ಯಾಂಕ್ ಮತ್ತು ಕಂದಾಯ ಇಲಾಖೆ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಡಿಸಿಎಂ ಗಮನ ಸೆಳೆದಾಗ, ಈ ಬಗ್ಗೆ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರಲ್ಲದೆ ಒಂಬುಡ್ಸಮನ್ ಗೆ ದೂರು ನೀಡುವಂತೆ ಆದೇಶಿಸಿದರು.

ಇದೇ ವೇಳೆ ರೈತರಲ್ಲಿ ಸಾಗುವಳಿ ಚೀಟಿ ಇದ್ದರೂ ಖಾತೆ ಆಗುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಅವರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಂಬಂಧಿಸಿ ಯಾವುದೇ ದೂರೂ ಬರುವಂತಿಲ್ಲ. ಅವರ ಕೆಲಸಗಳು ಆದ್ಯತೆಯ ಮೇರೆಗೆ ಆಗಬೇಕು. ತತ್ ಕ್ಷಣವೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹಾರ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಜತೆಗೆ, ರೈತರಿಗೆ ಭಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದೂ ಅವರು ಆದೇಶಿಸಿದರು.

ಅರ್ಕಾವತಿ ಪ್ರದೇಶಾಭಿವೃದ್ಧಿ:
ರಾಮನಗರ ಪಟ್ಟಣದಲ್ಲಿಯೇ ಅರ್ಕಾವತಿ ನದಿ ಸುಮಾರು ಐದು ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಅದರ ಆಮೂಲಾಗ್ರ ಅಭಿವೃದ್ಧಿಗೆ ಒತ್ತು ನೀಡಲೇಬೇಕು. ಜತೆಗೆ, ಈ ವ್ಯಾಪ್ತಿಯಲ್ಲಿನ ಜಲಮೂಲಗಳನ್ನು ರಕ್ಷಿಸಬೇಕು. ಸರಕಾರ ಈ ಬಗ್ಗೆ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಲಿದೆ. ಈ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಪ್ರವಾಸೋದ್ಯಮಕ್ಕೆ ಒತ್ತು: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು‌ ನೀಡಬೇಕು. ಇದಕ್ಕೆ ಬೇಕಾಗುವ ಸಹಕಾರವನ್ನು ಎಲ್ಲ ಇಲಾಖೆಗಳಿಂದ ನೀಡಬೇಕು ಎಂದು ಅವರು‌ ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಗಣಿಗಾರಿಕೆಗೆ ಕಡಿವಾಣ:
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಅದ್ಯತೆ ನೀಡಬೇಕು ಎಂದು ಹೇಳಿದರು.
ಕಲ್ಲು ಗಣಿಗಾರಿಕೆ ಎಲ್ಲ ಕಡೆ ನಡೆಯುತ್ತಿದೆ. ಆದರೆ ಕಾನೂನಾತ್ಮಕವಾಗಿ ನಡೆಯಲಿ ಎಂಬುದು ನನ್ನ ಅನಿಸಿಕೆ ಎಂದರು.

ತ್ರೈಮಾಸಿಕ ಸಭೆ:
ಜಿಲ್ಲೆಯ ಪ್ರಗತಿ ಪರಿಶೀಲನಾ ಪ್ರತೀ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಲಿದೆ. ಸಭೆಯಿಂದ ಸಭೆಗೆ ಅಭಿವೃದ್ಧಿಯ ಫಲಿತಾಂಶದ ಹೆಗ್ಗುರುತುಗಳು ಕಾಣಬೇಕು. ಅಧಿಕಾರಿಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಕರ್ತವ್ಯಲೋಪವನ್ನು ಸಹಿಸುವ ಪ್ರಶ್ನೆ ಇಲ್ಲ. ನಾನು ಬರುವ ಎಲ್ಲ ದಿನ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಮುಂತಾದವರು ಭಾಗಿಯಾಗಿದ್ದರು.

ರಾಮನಗರ ಕೆಡಿಪಿ ಸಭೆಗೆ ಮುನ್ನ ಶ್ರೀರಾಮನ ದರ್ಶನ ಪಡೆದ ಡಿಸಿಎಂ

ರಾಮನಗರ: ಶತಶತಮಾನಗಳು ಕಳೆದರೂ ಶ್ರೀರಾಮನ ಮೇಲಿರುವ ಭಾರತೀಯರ ನಂಬಿಕೆ, ಭಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ನರನಾಡಿಗಳಲ್ಲೂ ಆ ಸೀತಾರಾಮನೇ ತುಂಬಿಹೋಗಿದ್ದಾನೆ. ಪ್ರಸಕ್ತ ಕಾಲಘಟ್ಟದಲ್ಲಿ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ರಾಮತತ್ತ್ವದಲ್ಲೇ ಪರಿಹಾರವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರತಿಪಾದಿಸಿದರು.

ರಾಮನಗರದಲ್ಲಿ ಶುಕ್ರವಾರ ಜಿಲ್ಲೆಯ ಮೊದಲ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಮೀಪದ ಶ್ರೀ ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಪಟ್ಟಾಭಿರಾಮನ ದರ್ಶನ ಪಡೆದ ನಂತರ ಮಾತನಾಡಿದ ಅವರು, ರಾಮನನ್ನು ನಾವೆಲ್ಲರೂ ಮತ್ತೆಮತ್ತೆ ಸ್ಮರಿಸುತ್ತೇವೆ. ನಿರಂತರವಾಗಿ ಪೂಜಿಸುತ್ತೇವೆ. ಭವಿಷ್ಯದಲ್ಲಿ ಇನ್ನೆಷ್ಟೇ ತಲೆಮಾರುಗಳು ಕಳೆದರೂ ಆ ಮರ್ಯಾದಾ ಪುರುಷೋತ್ತಮನ ಆದರ್ಶ, ಮೌಲ್ಯಗಳು ನಮ್ಮನ್ನು ಕೈಹಿಡಿದು ಸದಾ ನಡೆಸುತ್ತಲೇ ಇರುತ್ತವೆ ಎಂದು ಹೇಳಿದರು.

ಅದೆಷ್ಟೋ ವರ್ಷಗಳಿಂದ ಇದ್ದ ಅಡ್ಡಿಗಳೆಲ್ಲ ನಿವಾರಣೆಯಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಬಿದ್ದ ಕೆಲ ದಿನಗಳಲ್ಲೇ ಈ ರಾಮಗಿರಿಯಲ್ಲಿ ಪಟ್ಟಾಭಿರಾಮನ ದರ್ಶನ ಭಾಗ್ಯ ಸಿಕ್ಕಿದ್ದು ನನ್ನ ಪೂರ್ವಜನ್ಮದ ಫಲ. ಸಕಲ ಪ್ರಜೆಗಳ ಪಾಲಿನ ದೈವ ಈ ರಾಮ ಸನ್ನಿಧಿಯಿಂದ ನಾನು ನೇರವಾಗಿ ಕೆಡಿಪಿ ಸಭೆಗೆ ಹೋಗುತ್ತಿದ್ದೇನೆ. ಇಂದಿನಿಂದ ರಾಮನಗರ ಜಿಲ್ಲೆಯ ಅಭಿವೃದ್ಧಿಯಲ್ಲು ನವಶಕೆ ಆರಂಭವಾಗಲಿದೆ ಎಂದು ಡಿಸಿಎಂ ಹೇಳಿದರು.

ಜಾತಿ, ಧರ್ಮ ಬೇಧವಿಲ್ಲದೆ ಪ್ರತಿಯೊಬ್ಬರನ್ನು ಒಟ್ಟಿಗೆ ಕರೆದುಕೊಂಡು ಮುನ್ನಡೆಯುವುದು ನನ್ನ ಉದ್ದೇಶ. ರಾಮ ಹಾಕಿಕೊಟ್ಟ ಸನ್ಮಾರ್ಗದಲ್ಲಿಯೇ ಪ್ರಗತಿಯ ರಥಚಕ್ರಗಳು ಸಾಗಲಿವೆ. ಎಲ್ಲರ ಸಹಕಾರದಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕು ಎಂಬುದು ನನ್ನ ಇಚ್ಚೆಯಾಗಿದೆ. ಆ ಕಾರ್ಯಕ್ಕೆ ಈ ರಾಮ ಸನ್ನಿಧಿಯಿಂದಲೇ ಚಾಲನೆ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದರು:
ಸುಮಾರು 400 ಮೆಟ್ಟಿಲುಗಳ ಎತ್ತರದ ರಾಮಗಿರಿ ಬೆಟ್ಟವನ್ನು ಅಶ್ವತ್ಥನಾರಾಯಣ ಅವರು ಎಲ್ಲಿಯೂ ನಿಲ್ಲದೇ ಕಾಲ್ನಡಿಗೆಯಲ್ಲಿಯೇ ಹತ್ತಿದರು. ಪುರಾಣ ಪ್ರಸಿದ್ಧವಾದ ಈ ತಾಣವನ್ನು ವೀಕ್ಷಿಸಿದರಲ್ಲದೆ ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು. ಬಳಿಕ ಬೆಟ್ಟದ ಮೇಲಿರುವ ಪಟ್ಟಾಭಿರಾಮ ಸ್ವಾಮಿ ಹಾಗೂ ಶಿವನಿಗೆ ಪೂಜೆ ಸಲ್ಲಿಸಿದರು.

ಕ್ಷೇತ್ರದ ಐತಿಹ್ಯ, ಪ್ರಕೃತಿಗೆ ಮಾರುಹೋದ ಡಿಸಿಎಂ:
ನಮ್ಮ ಪಾಲಿಗೆ ಈ ರಾಮಕ್ಷೇತ್ರ ಬಹಳ ವಿಶೇಷ. ಈ ಬೆಟ್ಟದಲ್ಲಿ ಶ್ರೀರಾಮಚಂದ್ರರು ಸೀತಾ ಸಮೇತರಾಗಿ 5ರಿಂದ 6 ವರ್ಷ ತಂಗಿದ್ದರು. ಇಲ್ಲಿರುವ ಪಟ್ಟಾಭಿರಾಮ ದೇವರನ್ನು ವಾನರ ಅರಸ ಸುಗ್ರೀವನೇ ಸ್ಥಾಪಿಸಿದನೆಂದು ಹಾಗೂ ಇಲ್ಲಿರುವ ಶಿವಲಿಂಗವನ್ನು ಸಾಕ್ಷಾತ್ ಶ್ರೀರಾಮರೇ ಸ್ಥಾಪನೆ ಮಾಡಿದರೆಂದೂ ಪುರಾಣಗಳು ಹೇಳುತ್ತವೆ. ಜತೆಗೆ ಬೆಟ್ಟವು ರಣಹದ್ದು ಸಂರಕ್ಷಣಾ ಧಾಮವೂ ಆಗಿದೆ. ಹೀಗಾಗಿ ಸರ್ವರೀತಿಯಲ್ಲೂ ಈ ತಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.ಕೆಡಿಪಿ ಸಭೆಯ ನಾಮಕರಣ ಸದಸ್ಯ ಎಂ.ರುದ್ರೇಶ ಹಾಜರಿದ್ದರು.