ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜ್ ನಾಮಪತ್ರ ಸಲ್ಲಿಕೆ

ಬೆಂಗಳೂರು:ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಇಂಚರ ಗೋವಿಂದರಾಜ್ ಅವರು ವಿಧಾನಸೌಧದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ‌ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಹಾಗೂ ಶಾಸಕ ಶ್ರೀನಿವಾಸ್ ಅವರು ಈ ವೇಳೆ ಹಾಜರಿದ್ದರು.

ನಾಮಪತ್ರ ಸಲ್ಲಿಕೆಯ ನಂತರ ಮಾಜಿ ಮುಖ್ಯಮಂತ್ರಿ ಎಚ್. ಡಿ‌ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,
ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ‌, ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ ಅವರು, ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ,ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಶಕ್ತಿ ಸಿಗಲಿದೆ
ಪಕ್ಷದ ಹಿತದೃಷ್ಟಿಯಿಂದ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ ಎಂದರು

ಕಳೆದ ಹಲವು ದಿನಗಳಿಂದ ಗಡಿ ಭಾಗದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಆಗ್ತಿದೆ ನಮ್ಮ ೨೦ ಯೋಧರು ಹುತಾತ್ಮರಾಗಿದ್ದಾರೆ ಭಾರತಕ್ಕೆ ಇದು ಸಂಕಷ್ಟದ ಸಮಯ ಕೊರೊನಾ ದಿಂದ ನಮ್ಮ‌‌ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ
ಇದು ಯುದ್ಧ ಮಾಡುವ ಸಮಯ ಅಲ್ಲ ಮಾತುಕತೆ ಮುಖಾಂತರ ಶಾಂತಿ ಕಾಪಾಡಬೇಕಿದೆ ಇದು ನನ್ನ ಸಲಹೆ ಎಂದರು.

ಪ್ರಚಾರ ಮಾಡಿಕೊಂಡು ಯಾಕೆ ಮಾಡಬೇಕು? ನಮ್ಮ ಸಾಮರ್ಥ್ಯ ಮೊದಲು ಹೆಚ್ಚಿಸಿಕೊಳ್ಳಬೇಕು ಪ್ರತಿನಿತ್ಯ ಚೀನಾ ವಸ್ತುಗಳ ಮೇಲೆ ಜನರು ಅವಲಂಬಿತರಾಗಿದ್ದಾರೆ
ನಮ್ಮಲ್ಲಿ‌ ವಸ್ತುಗಳ ಉತ್ಪಾದನೆ ಮಾಡಿಕೊಳ್ಳಲು ಮೊದಲು ಗಮನ ಕೊಡಬೇಕು ಪ್ರಚಾರಕ್ಕಾಗಿ ಶೋ ಮಾಡಲು ಗೆಲುವು ಸಾಧ್ಯ ಇಲ್ಲ ಇಂತಹ ವಿಚಾರದಲ್ಲಿ ಸೈಲೆಂಟಾಗಿ ನಮ್ಮ‌ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು‌

ಗಾಂಧಿ ಜಯಂತಿ ಸೇರಿ ಎಲ್ಲ ಜಯಂತಿಗಳ ರಜೆ ರದ್ದಿಗೆ ದೊರೆಸ್ವಾಮಿ ಶಿಫಾರಸು

ಬೆಂಗಳೂರು: ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯಮಾನ್ಯರ ಜಯಂತಿಗಳಿಗೆ ಶಾಲಾ- ಕಾಲೇಜುಗಳಿಗೆ ರಜೆ ನೀಡುವುದರ ಬದಲು ಅರ್ಥಪೂರ್ಣ ಆಚರಣೆಗೆ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ ಎಂ.ಆರ್. ದೊರೆಸ್ವಾಮಿ ಅವರು ಶಿಫಾರಸು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಉನ್ನತ ಶಿಕ್ಷಣ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಮಾತುಕತೆ ನಡೆಸಿ 7 ಪ್ರಮುಖ ಶಿಫಾರಸುಗಳ ವರದಿಯನ್ನು ಸಲ್ಲಿಸಿದರು.

ರಜೆ ನೀಡುವುದರ ಬದಲು, ಅಂದು ಅಂತಹ ಗಣ್ಯ ವ್ಯಕ್ತಿಗಳ ಬಗ್ಗೆ ಉಪನ್ಯಾಸ- ಕಾರ್ಯಾಗಾರಗಳನ್ನು ಆಯೋಜಿಸಬೇಕು. ಆ ಮೂಲಕ ಇಂದಿನ ಪೀಳಿಗೆಯನ್ನು ಜಾಗೃತರನ್ನಾಗಿಸಬಹುದು. ಇದರಿಂದ ಜಯಂತಿ ಗಳಿಗೆ ನಿಜವಾದ ಅರ್ಥ ಬರಲಿದೆ ಎಂದು ದೊರೆಸ್ವಾಮಿ ಸಲಹೆ‌‌‌ ನೀಡಿದರು.

ಕೋವಿಡ್ 19ರ ನಂತರದ ಸಮಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರುವುದು ದೊಡ್ಡ ಸವಾಲು. ಹೀಗಾಗಿ ನಾವು ಕೆಲ ತ್ಯಾಗಗಳನ್ನು ಮಾಡಲೇಬೇಕಾಗಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಶೈಕ್ಷಣಿಕ ವರ್ಷವನ್ನು ಸಮರ್ಪಕವಾಗಿ ಪೂರೈಸಬೇಕು. ಸಮಯದ ಸದ್ಭಳಕೆ ಬಹಳ ಮುಖ್ಯ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಬೋಧನಾ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಸಲಹೆ‌ ನೀಡಿದರು.

ಈ ಶಿಫಾರಸಿನ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದ ಡಿಸಿಎಂ ಅವರು, ಜಯಂತಿಗಳ ರಜೆ ವಿಚಾರದಲ್ಲಿ ನಿರ್ಧಾರವನ್ನು ಮುಖ್ಯಮಂತ್ರಿಗಳೇ ಕೈಗೊಳ್ಳಬೇಕು ಎಂದು ದೊರೆಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ದೊರೆಸ್ವಾಮಿ ಅವರ ಇತರೆ 6 ಶಿಫಾರಸುಗಳು ಹೀಗಿವೆ:

*ಎಂಜಿನೀಯರಿಂಗ್ ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆದಷ್ಟು ಬೇಗ ಮಾಡಬೇಕು. ವಿದ್ಯಾರ್ಥಿಗಳ ಪಾಲಿಗೆ ಅಂತಿಮ ಸೆಮಿಸ್ಟರ್ ಬಹಳ ಮುಖ್ಯ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ವಿವಿಧೆಡೆಯಲ್ಲಿ ಉದ್ಯೋಗಾವಕಾಶಕ್ಕೆ ಆಯ್ಕೆಯಾಗಿದ್ದು, ಅವರಿಗೀಗ ಉತ್ತೀರ್ಣತೆಯ ಪ್ರಮಾಣ ಪತ್ರ ಬೇಕು. ಹೀಗಾಗಿ ಆದಷ್ಟು ಬೇಗ ಪರೀಕ್ಷೆಯನ್ನು ಮುಗಿಸಬೇಕು.

*ಸರಕಾರಿ, ಖಾಸಗಿ ಸೇರಿದಂತೆ ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಬೇಕು. ಈ ಪರೀಕ್ಷೆಗಳ ಮಹತ್ವವನ್ನು ಕಡೆಗಣಿಸಬಾರದು.

*ಉನ್ನತ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಮಗ್ರ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ರೂಪಿಸಬೇಕು.

*ವಿಕಲಚೇತನ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು.

*6 ಜಿಲ್ಲೆಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣವನ್ನು ಸುಧಾರಿಸಲು ’ವಿಶೇಷ ಶಿಕ್ಷಣ ನೀತಿ’ಯನ್ನು ರೂಪಿಸಬೇಕು. ಜತೆಗೆ ಆ ಭಾಗದಲ್ಲಿ ಹೆಚ್ಚುಹೆಚ್ಚಾಗಿ ಕೌಶಾಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು, ಜಾಗತಿಕ ಭಾಷಾ ಕಲಿಕಾ ಕೇಂದ್ರಗಳನ್ನು ತೆರೆಯಬೇಕು, ಶಿಕ್ಷಕರ ಅಕಾಡೆಮಿ ಮತ್ತು ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಬೇಕು..

ಶಿಫಾರಸುಗಳ ಬಗ್ಗೆ ಚರ್ಚೆ:

ಶಿಫಾರಸುಗಳ ಬಗ್ಗೆ ಮಾತನಾಡಿದ ಡಿಸಿಎಂ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಇವು ಅತ್ಯಂತ ಮಹತ್ವದ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡುವ ಶಿಫಾರಸುಗಳಾಗಿದ್ದು, ಇವುಗಳ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಮಿತಿ ಮಾಡಿರುವ ಶಿಫಾರಸುಗಳ ಕೆಲ ಅಂಶಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅವುಗಳನ್ನು ಮತ್ತಷ್ಟು ಉತ್ತಮಪಡಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಜಯನಗರ ಆಸ್ಪತ್ರೆ ಗೆ ಸಾವಿರ ಪಿಪಿಇ ಕಿಟ್ ಕೊಟ್ಟ ಎಬಿ ಇನ್ಬೇವ್:

ಬಿಯರ್ ತಯಾರಿಸುವ ಎಬಿ ಇನ್ಬೇವ್ ಕಂಪನಿಯ ದಕ್ಷಿಣ ಏಷ್ಯಾದ ಸಿಇಒ ಕಾರ್ತಿಕ ಶರ್ಮಾ ಅವರು ಬೆಂಗಳೂರಿನ ಜಯನಗರ ಸರ್ಕಾರಿ ಆಸ್ಪತ್ರೆ ಗೆ ಒಂದು ಸಾವಿರ ಪಿಪಿಇ ಕಿಟ್ ಗಳನ್ನು ಗುರುವಾರ ಹಸ್ತಾಂತರಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪಿಪಿಇ ಕಿಟ್ ಗಳನ್ನು ಸ್ವೀಕರಿಸಿ, ಜಯನಗರ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಯನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಿರಣ್, ಕೋವಿಡ್ ನೋಡಲ್ ಅಧಿಕಾರಿ ಡಾ.ಸುಧಾ, ಡಾ.ಸುರೇಶ್, ಡಾ.ಪ್ರಕಾಶ ಮತ್ತಿತರರು ಇದ್ದರು.

 

ನಾಮ ಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು

ಬೆಂಗಳೂರು:ವಿಧಾನಸಭೆಯಿಂದ ವಿಧಾನಪರಿಷತ್‌ ಗೆ

ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಪ್ರತಾಪ್‌ ಸಿಂಹ ನಾಯಕ್,ಆರ್.ಶಂಕರ್, ಎಂಟಿಬಿ ನಾಗರಾಜ್ ಹಾಗೂ ಸುನಿಲ್ ವಲ್ಯಾಪುರೆಯವರು ನಾಮಪತ್ರ ಸಲ್ಲಿಸಿರು.

ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಅಭ್ಯರ್ಥಿಗಳು ಸಿಎಂಗೆ ಅಭಿನಂದನೆ ಸಲ್ಲಿಸಿದರು ನಂತರ ಬಿಜೆಪಿ ಕಚೇರಿಗೆ ತೆರಳಿ ಬಿ ಫಾರಂ ಪಡೆದರು ಅಲ್ಲಿಂದ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಭೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.

ಲೋಕೋಪಯೋಗಿ ಇಲಾಖೆಗೆ 7699 ಕೋಟಿ ಅನುದಾನ ‌ನಿಗಧಿ, ಕ್ರಿಯಾಯೋಜನೆ ರೂಪಿಸುವಂತೆ ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಜೂ.18: ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 7699 ಕೋಟಿ ರೂ. ಅನುದಾನವನ್ನು ನಿಗಧಿಪಡಿಸಲಾಗಿದ್ದು, ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.

ವಿಕಾಸಸೌಧದಲ್ಲಿಂದು ನಡೆದ ವಲಯ ಮತ್ತು ಘಟಕವಾರು ಪ್ರಗತಿ ಪರಿಶೀಲನೆಯ ಅಧ್ಯಕ್ಷತೆವಹಿಸಿ ಇಲಾಖೆಯ ಮ್ಯಾನೇಜ್ಮೆಂಟ್ ಇನ್ ಫರ್ಮೆಂಟೇಶನ್ ಸಿಸ್ಟಮ್‌ 2019 ಪುಸಕ್ತ ಬಿಡುಗಡೆ ಮಾಡಿನ ನಂತರ ಮಾತನಾಡಿದ ಅವರು, ವೈಜ್ಞಾನಿಕವಾಗಿ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ನಿರ್ವಹಣೆಗಾಗಿ “Annual Plan” ತಯಾರಿಸಿದ್ದು, ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವಾಗ ಈ ರಸ್ತೆಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು.ರಸ್ತೆ ಮತ್ತು ಕಟ್ಟಡಗಳ ನಿರ್ವಹಣೆಗಾಗಿ ಈಗಾಗಲೇ 652.00 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಈ ಮೊತ್ತದಲ್ಲಿ ಮುಂಗಾರು ಪೂರ್ವ ರಸ್ತೆ ನಿರ್ವಹಣೆಯನ್ನು ಹಾಗೂ ಕಟ್ಟಡಗಳ ವಾರ್ಷಿಕ ನಿರ್ವಹಣೆಯನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.ಆರ್‌ಐಡಿಎಫ್‌-25ರ ಯೋಜನೆಯಡಿ 718 ಕೋಟಿ ರೂ. ಮೊತ್ತದಲ್ಲಿ 3243 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಕಾಮಗಾರಿಗಳಿಗೆ ಶೀಘ್ರವಾಗಿ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಪ್ರಾರಂಭಿಸಿ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ ಇಲಾಖೆಯ ಅನುದಾನದಲ್ಲಿ ಈ ಸಾಲಿನಲ್ಲಿ 22 ರಾಣೆ ಚೆನ್ನಮ್ಮ/ಮೊರಾರ್ಜಿ ದೇಸಾಯಿ” ವಸತಿ ಶಾಲೆ ಸಂಕೀರ್ಣ ಕಾಮಗಾರಿಗಳನ್ನು ಹಾಗೂ 80 ಎಸ್‌ಸಿ ಎಸ್‌ಟಿ ಮಕ್ಕಳ ವಸತಿ ನಿಲಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ನಿವೇಶನಗಳನ್ನು ಒದಗಿಸಿದ್ದು, ಈ ನಿವೇಶನಕ್ಕೆ ಅನುಗುಣವಾಗಿ ಕಟ್ಟಡಗಳ ವಿನ್ಯಾಸವನ್ನು ಕೈಗೊಂಡು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಎಲ್ಲಾ ವಸತಿ ನಿಲಯಗಳ ಆವರಣಗಳಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.

ಅಪೆಂಡಿಕ್ಸ್‌-ಇ ಕ್ರಿಯಾ ಯೋಜನೆಯಡಿ ಅನುಮೋದನೆಯಾಗಿರುವ ಕಾಮಗಾರಿಗಳಲ್ಲಿ ಅತ್ಯವಶ್ಯಕ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು.
ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ಪ್ರಗತಿಯನ್ನು ತೀವ್ರಗೊಳಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಆರ್‌ಡಿಸಿಎಲ್‌ ಸಂಸ್ಥೆಗೆ ಸೂಚಿಸಿದರು.ಕೆಶಿಪ್‌-3ರ ಎಡಿಬಿ-2ರಡಿ 450 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯು ಶೇ.80ರಷ್ಟು ಪೂರ್ಣಗೊಂಡಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಬೇಕು.
ಶಾಲಾಕೊಠಡಿಗಳು ಅತ್ಯಾವಶ್ಯಕ ವಾಗಿರುವುದರಿಂದ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದರು.

ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ ಭಾಗವು ಮಳೆಗಾಲದಲ್ಲಿ ಹೆಚ್ಚು ಹಾಳಾಗುತ್ತಿದ್ದು, ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಂಡು ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಭೂಸಾರಿಗೆ ಮಂತ್ರಾಲಯವು “ತಾತ್ವಿಕವಾಗಿ ಉನ್ನತೀಕರಿಸಿರುವ” ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟಿಸುವ ವರೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಬೇಕು.
ರಸ್ತೆ ಸುರಕ್ಷತೆ ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ, ಅಪಘಾತವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ಇಲಾಖೆಯ ಉಪವಿಭಾಗ ಮತ್ತು ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್‌ಗಳಿಗೆ “ಕರ್ನಾಟಕ ಹೆದ್ದಾರಿ ಕಾಯ್ದೆ-1964”ರ ಬಗ್ಗೆ ಹೆಚ್ಚಿನ ತರಬೇತಿ ನೀಡಲು ವಲಯವಾರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದರು.

ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆದ ಪಿಯು ಇಂಗ್ಲಿಷ್ ಪರೀಕ್ಷೆ: ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೇ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆದಿದೆ.

ಇಂಗ್ಲಿಷ್ ಪರೀಕ್ಷೆಗೆ ಕಲಾ ವಿಭಾಗದಿಂದ 172350, ವಾಣಿಜ್ಯ 234926, ವಿಜ್ಞಾನ 188721 ಒಟ್ಟು 5,96,300 ಹಾಜರಾಗಬೇಕಿದ್ದು, ಇಂದು ರಾಜ್ಯಾದ್ಯಂತ 32 ಜಿಲ್ಲೆಗಳಲ್ಲಿ 5,72,665 ವಿದ್ಯಾರ್ಥಿಗಳು ಬರೆದರು. 23,635 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಗರಿಷ್ಠ ಸಂಖ್ಯೆಯ 1748 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ 99 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಗೈರು ಹಾಜರಿಯ ಕಾರಣವನ್ನು ಗುರುತಿಸಿ ಮುಂದೆ ಅವರು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಇದರಿಂದ ಯಾವುದೇ ವಿದ್ಯಾಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ವಿಶೇಷವಾಗಿ ಕಳೆದ ವರ್ಷ ನಡೆದ ಇಂಗ್ಲಿಷ್ ಪರೀಕ್ಷೆಗೆ 6,71,635 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, 6,34,993 ವಿದ್ಯಾರ್ಥಿಗಳು ಹಾಜರಾಗಿದ್ದರು. 36,642 ವಿದ್ಯಾರ್ಥಿಗಳು ಕಳೆದ ವರ್ಷ ಇಂಗ್ಲಿಷ್ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಹಾಗಾಗಿ ಕಳೆದ ಸಾಲಿನ ಹಾಜರಾತಿ ಶೇ. 94.54 ಇದ್ದು ಈ ಬಾರಿ ಶೇ. 96.03 ಇದ್ದು, ಕಳೆದ ಬಾರಿಗಿಂತ ಶೇ. 2 ರಷ್ಟು ಹೆಚ್ಚು ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಪರೀಕ್ಷೆಗೆ ಹಾಜರಾಗಿರುವುದು ಈ ಸಂದರ್ಭದಲ್ಲಿ ನಮ್ಮ ಪರೀಕ್ಷಾ ವ್ಯವಸ್ಥೆ ಕುರಿತಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇಟ್ಟಿರುವ ಭರವಸೆಯಾಗಿದ್ದು, ಇದು ನಮಗೆ ಅತ್ಯಂತ ಖುಷಿಯ ಸಂಗತಿಯಾಗಿದೆ ಎಂದು ಅವರು ಗುರುವಾರ ಪರೀಕ್ಷೆಯ ಅವಧಿ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಲವಾರು ಮಂದಿ ತಮಗಾಗಿ ವಿಶೇಷವಾಗಿ ನಿಗದಿಪಡಿಸಿದ್ದ ಖಾಸಗಿ ಇಲ್ಲವೇ ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ಬಸ್ ಸೌಲಭ್ಯವಿದ್ದ ಮಾರ್ಗಗಳ ವಿದ್ಯಾರ್ಥಿಗಳು ಮಾರ್ಗ ದ ಬಸ್ ಗಳಲ್ಲಿ ಬಂದರು. ಯಾವುದೇ ಪರೀಕ್ಷಾ ಕೇಂದ್ರಗಳಿಗೆ ಬಸ್ ಸೌಲಭ್ಯ ದೊರಕದೇ ಯಾವೊಬ್ಬ ವಿದ್ಯಾರ್ಥಿಗೂ ಯಾವುದೇ ಸಮಸ್ಯೆಯಾಗಿಲ್ಲ. ಆಂಗ್ಲಭಾಷಾ ವಿಷಯವನ್ನು ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಾರಿಗೆ ಇಲಾಖೆಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರಲು ತಮ್ಮ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣ ಬೆಳೆಸಲು ಸಾರಿಗೆ ಇಲಾಯಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 1016 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿ 430 ಪರೀಕ್ಷಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ 328 ಹಾಗೂ ಹೋಬಳಿ ಕೇಂದ್ರಗಳಲ್ಲಿ 258 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಜಿಲ್ಲೆಗಳಿಂದ ಬೇರೆ ಜಿಲ್ಲೆಗಳಿಗೆ 18529 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡು ಬದಲಾದ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಹೊರ ರಾಜ್ಯಗಳಿಂದ 1889 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಆಂಗ್ಲಭಾಷಾ ವಿಷಯಕ್ಕೆ ಪರೀಕ್ಷೆ ಬರೆಯುವರಿಗೆ ಅವರು ಆಯ್ಕೆ ಮಾಡಿಕೊಂಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಾಗಿ ಸದರಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಕರ್ನಾಟಕಕ್ಕೆ ಬರಲು ವಿಶೇಷ ಪಾಸ್ ಗಳನ್ನು ನೀಡಲಾಗಿತ್ತು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚುವರಿ ಕೊಠಡಿಗಳು-ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ:
ಕೋವಿಡ್-19 ಹಿನ್ನೆಲೆಯಲ್ಲಿ ಈ 1016 ಪರೀಕ್ಷಾ ಕೇಂದ್ರಗಳಲ್ಲಿ ಈ ಹಿಂದೆ ಇದ್ದ 23,064 ಕೊಠಡಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿ ಪರೀಕ್ಷೆಗಳನ್ನು ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ವಹಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಹಾಗೂ ಹೆಚ್ಚುವರಿ ಬ್ಲಾಕ್ ಗಳನ್ನು ಮತ್ತು ಕಟ್ಟಡದ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತುರ್ತು ಸಂದರ್ಭಗಳಿಗಾಗಿ ಮಾತ್ರ ಬೇಸಿಕ್ ಮೊಬೈಲ್ ಸೆಟ್(ಕ್ಯಾಮರಾ ಇಲ್ಲದಿರುವ)ನ್ನು ಬಳಸಲು ಅನುಮತಿ ನೀಡಿದ್ದು, ಉಳಿದಂತೆ ಯಾರೂ ಮೊಬೈಲ್ಗಳನ್ನು ತೆಗೆದುಕೊಂಡು ಹೋಗದಂತೆ ನಿಷೇಧಿಸಲಾಗಿತ್ತು. ಅಂತೆಯೇ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಸ್ಥಳೀಯ ಜಿಲ್ಲಾಡಳಿತ ಘೋಷಣೆ ಮಾಡಲಾಗಿತ್ತು. ಈ ಕಾರ್ಯಕ್ಕಾಗಿ ಅಗತ್ಯವಿರುವ ಕಡೆ ಹೆಚ್ಚುವರಿ ಸಿಬ್ಬಂದಿ ಬಳಸಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಗೆ ಹಾಜರಾಗುವ ಮುನ್ನ ಹಾಗೂ ಪರೀಕ್ಷೆ ನಂತರ ನಿರ್ಗಮಿಸುವ ಸಂದರ್ಭದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಕುರಿತಂತೆ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿ ಥರ್ಮಲ್ ಸ್ಕ್ಯಾನರ್ಗಳ ಮೂಲಕ ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆ ನಡೆಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕಂಟೈನ್ಮೆಂಟ್ ವಲಯಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಕೊಠಡಿ ಹಾಗೂ ಇತರೆ ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಒಂದು ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕಂಟೈನ್ಮೆಂಟ್ ವಲಯಗಳಿಂದ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಲಭ್ಯವಿದ್ದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಜ್ವರ, ನೆಗಡಿಯಂತಹ ಇತರೆ ಅನಾರೋಗ್ಯಕ್ಕೆ ಒಳಗಾದ ರಾಜ್ಯದ ವಿವಿಧೆಡೆಯ 20 ವಿದ್ಯಾರ್ಥಿಗಳು ತಮಗೆ ಮೀಸಲಾದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

ಈ ದಿನ ನಡೆದ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ನಕಲು ಮಾಡಿ ಸಿಕ್ಕಿಬಿದ್ದ ನಿದರ್ಶನಗಳಿಲ್ಲ. ಯಾವುದೇ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯೂ ಆಗಿಲ್ಲ ಎಂದು ಅವರು ಹೇಳಿದರು.

ಈ ಪರೀಕ್ಷೆ ನಮಗೆ ಜೂ. 25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದು ಲಿಟ್ಮಸ್ ಟೆಸ್ಟ್ ಇದ್ದಂತಾಗಿತ್ತು. ಇದೇ ರೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಹ ಆರೋಗ್ಯಕರ ವಾತಾವರಣದಲ್ಲಿ ನಡೆಯಲಿದೆ. ಆರೋಗ್ಯ, ಸಾರಿಗೆ, ಗೃಹ ಇಲಾಖೆ ಸೇರಿದಂತೆ ಆಯಾ ಭಾಗದ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ನಡೆದ ಪರೀಕ್ಷೆಯಲ್ಲಿ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

ಸಾಮಾಜಿಕ‌ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವ ಕೆಲ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಯ ಮೇಲೆ ಕ್ರಮ ವಹಿಸಲು ಸೂಚಿಸಲಾಗಿದೆಯೆಂದರು.

ಇದೇ ಸಂದರ್ಭದಲ್ಲಿ. 39 ವಿಷಯಗಳ ಪೈಕಿ 26 ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆಯಿಂದ ಪುನರ್ ಪ್ರಾರಂಭವಾಗಲಿರುವ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಉಪನ್ಯಾಸಕ‌ ವೃಂದ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಸಚಿವ ಸುರೇಶ್ ಕುಮಾರ್ ಆಗ್ರಹಿಸಿದರು. ಇಂಗ್ಲಿಷ್ ಭಾಷಾ ಉತ್ತರ ಪತ್ರಿಕೆಗಳ ಕುರಿತಂತೆ ವಿಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಲಾಗುವುದೆಂದರು.

ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಎಂ.ಟಿ. ರೇಜು ಹಾಜರಿದ್ದರು.

ಮಾಸ್ಕ್ ದಿನಾಚರಣೆಗೆ ಸಿಎಂ ಚಾಲನೆ

ಬೆಂಗಳೂರು, ಜೂನ್ 18: ಇಂದು ಮಾನ್ಯಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‌ಅವರು ವಿಧಾನಸೌಧದ‌ ಅಂಬೇಡ್ಕರ್ ಪ್ರತಿಮೆಯ ಬಳಿ ಮಾಸ್ಕ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸಲು “ಮಾಸ್ಕ್ ದಿನ” ಈ ಪ್ರಯುಕ್ತ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ವಿಧಾನಸೌಧದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಕಬ್ಬನ್ ಪಾರ್ಕ್ ವರೆಗೆ ಯಡಿಯೂರಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು.

ನಂತರ ಜನತೆಯನ್ನುದ್ದೇಶಿಸಿ ಸಿಎಂ ಮಾತನಾಡಿದರು.
ಕೋವಿಡ್ 19 ಕುರಿತು ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈ ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಕೈ ತೊಳೆಯುವುದು ಬಹಳ ಪ್ರಮುಖವಾದ ಅಂಶಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾರ್ವಜನಿಕರು ಸರ್ಕಾರದ ಜೊತೆ ಕೊರೋನಾ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಇವರೆಲ್ಲರ ಶ್ರಮದಿಂದ ಕೊರೋನಾ ನಿಯಂತ್ರಣ ಸಾಧ್ಯವಾಗಿದೆ ಬರುವ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕಠೀಣ ಕ್ರಮ ಕೈಗೊಳ್ಳಬೇಕಿದೆ
ಹೊರ ರಾಜ್ಯಗಳಿಂದ ಬರೋರನ್ನ ತಡೆದಿದ್ದರೆ ರಾಜ್ಯದಲ್ಲಿ ಈಗಾಗಲೇ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬರ್ತಿತ್ತು
ಈಗಲೂ ಕಾಲ ಮಿಂಚಿಲ್ಲ ನಾನು ಎಲ್ಲರ ಸಹಕಾರ ಕೋರುತ್ತೇನೆ ಎಂದರು.

ಮಾಸ್ಕ್ ಧರಿಸುವುದರಿಂದ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳುವುದರ ಜೊತೆ ಇತರರನ್ನೂ ರಕ್ಷಿಸಬಹುದು
ಕೋವಿಡ್ 19 ಕುರಿತು ಜನಜಾಗೃತಿಗಾಗಿ ಈ ಮಾಸ್ಕ್ ಡೇ ಆಚರಣೆ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಕ್ರಮ ತಗೊಂಡಿದೆ ಪ್ರಧಾನಿ ಮೋದಿ ಕೂಡಾ ನಮ್ಮ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.