ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…!

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿರುವ ಬಿ.ಕೆ ಹರಿಪ್ರಸಾದ್ ಹಾಗೂ ನಾಸೀರ್ ಅಹಮದ್ ಅವರು ವಿಧಾನಸೌಧದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಯು.ಟಿ ಖಾದರ್ ಹಾಗೂ ಶಾಸಕ ಎನ್.ಎ ಹ್ಯಾರಿಸ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿ.ಕೆ ಹರಿಪ್ರಸಾದ್ ಹಾಗೂ ನಾಸೀರ್ ಅಹಮದ್ ಅವರು ವಿದ್ಯಾರ್ಥಿ ನಾಯಕರಿಂದ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು. ಅವರ ಹಿರಿತನ ಹಾಗೂ ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಒಮ್ಮತದಿಂದ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಎಂದರೆ ಮೇಲ್ಮನೆ ಹಾಗೂ ಹಿರಿಯರ ಮನೆ. ಪಕ್ಷದ ಸಂಘಟನೆ ಹಾಗೂ ರಾಜ್ಯದ ಅನೇಕ ವಿಚಾರಗಳನ್ನು ಚರ್ಚೆ ಮಾಡಲು ಈ ಇಬ್ಬರು ಹಿರಿಯ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಲು ಒಮ್ಮತದಿಂದ ತೀರ್ಮಾನಿಸಿದ್ದೇವೆ. ಮೇಲ್ಮನೆ ಪ್ರವೇಶಿಸಲು ಸಾಕಷ್ಟು ಆಕಾಂಕ್ಷಿಗಳಿದ್ದರು. ಆದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಈ ಇಬ್ಬರು ನಾಯಕರನ್ನು ಆರಿಸಲು ತೀರ್ಮಾನಿಸಲಾಗಿದೆ.

‘ನಮಗೆ ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲು ಹಿರಿತನದ ಅಗತ್ಯವಿದ್ದು, ಅದಕ್ಕಾಗಿ ಈ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವೆ. ಇವರು ವಿದ್ಯಾರ್ಥಿ ನಾಯಕರಿಂದ ಹಿಡಿದು, ರಾಷ್ಟ್ರಮಟ್ಟದ ನಾಯಕರಾಗಿ ಅನೇಕ ರಾಜ್ಯಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 1983 ಹಾಗೂ 85ರಲ್ಲಿ ರಾಜಕೀಯ ಪ್ರವೇಶಿಸಿ, ವಿದ್ಯಾರ್ಥಿ ಘಟಕ, ಯೂಥ್ ಕಾಂಗ್ರೆಸ್, ಸೇವಾದಳ, ಎನ್ ಎಸ್ ಯೂಐ ಸೇರಿದಂತೆ ಎಲ್ಲ ಘಟಗಗಳಲ್ಲೂ ಇವರು ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದಾರೆ. ಪಕ್ಷಕ್ಕೆ ಬಲ ತುಂಬುವ ಉದ್ದೇಶದಿಂದ ನಮ್ಮ ಎಲ್ಲ ನಾಯಕರ ಜತೆ ಚರ್ಚಿಸಿದ ಹೈಕಮಾಂಡ್ ಈ ಹಿರಿಯ ನಾಯಕರಿಗೆ ಅವಕಾಶ ಕೊಟ್ಟಿದೆ.’

‘ಇವರೂ ಕೂಡ ಪಕ್ಷದ ಕಾರ್ಯಕರ್ತರೆ. ಹಿರಿಯರ ಮನೆಗೆ ಹಿರಿಯರ ಅವಶ್ಯಕತೆ ಇದ್ದು, ಹೀಗಾಗಿ ಪಕ್ಷ ಇವರಿಗೆ ಟಿಕೆಟ್ ಕೊಟ್ಟಿದೆ. ರಾಜ್ಯ ಸಭೆಯಲ್ಲೂ ಇದೇ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಕಳುಹಿಸಲಾಗಿದೆ ಎಂದರು.

ಕಾಂಗ್ರೆಸ್ ಶಾಸಕಾಂಗ‌ಸಭೆ,ರಾಜ್ಯ ಸರ್ಕಾರ, ಜನ ವಿರೋಧಿ ನೀತಿ ಖಂಡಿಸಿ, ಜೈಲ್ ಭರೋ ಚಳವಳಿ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಉಪಸ್ಥಿತರಿದ್ದರು..

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಯೋಧರ ಶೌರ್ಯ, ತ್ಯಾಗ, ಬಲಿದ ಗುಣಗಾನ ಮಾಡಿ, ಯೋಧರ ಆತ್ಮಕ್ಕೆ ಶಾಂತಿ ಕೋರಿ ಹುತಾತ್ಮ ಯೋಧರ ಗೌರವಾರ್ಥ ಶಾಸಕಾಂಗ ಸಭೆ ಮೌನ ಆಚರಿಸಿತು.

ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರ ಮಾತುಗಳು :

ಚೀನಾದೊಂದಿಗೆ ನಡೆದ ಘರ್ಷಣೆಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ.‌ ಯೋಧರ ಶೌರ್ಯ, ತ್ಯಾಗ, ಬಲಿದಾನ ಸದಾ ಸ್ಮರಣೀಯ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

ನಮ್ಮ ಸೇನೆ ಅತ್ಯಂತ ಶಕ್ತಿಶಾಲಿಯಾಗಿದೆ. ಆದರೆ, ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಧಾನಿಯವರ ಮೌನ ಸರಿಯಲ್ಲ.

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಇದು ಮುಂದೆ ಕರಾಳ ಶಾಸನವಾಗಲಿದೆ.

ಪಕ್ಷ ಮೊದಲಿನಿಂದಲೂ ಗೇಣಿದಾರರನ್ನು ರಕ್ಷಿಸಿಕೊಂಡು ಬಂದಿತ್ತು. ಇದರ ವಿರುದ್ಧ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು. ಇದಕ್ಕೆ ಶಾಸಕರು ಸಿದ್ಧತೆ ಮಾಡಿಕೊಳ್ಳಬೇಕು.

ಪೆಟ್ರೋಲ್, ಡೀಸೆಲ್‌ ಬೆಲೆ ನಿತ್ಯ ಏರಿಕೆಯಾಗುತ್ತಿದೆ. ಕಚ್ಛಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದೆ. ಇದರಿಂದ ಪೆಟ್ರೋಲ್, ಡೀಸೆಲ್‌ ಲೀಟರ್ ಗೆ 25-30 ರೂ.‌ಪ್ರಕಾರ ಮಾರಾಟವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ದರ ಏರಿಕೆ ಮೂಲಕ ಮಧ್ಯಮ ವರ್ಗದವರನ್ನು ಬಲಿ ಹಾಕಲು ಹೊರಟಿದೆ.

ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಪ್ರಧಾನಿ ಮೋದಿಯವರು ದೇಶದ ಆರ್ಥಿಕತೆ ಮತ್ತು ಜನರ ಆರೋಗ್ಯವನ್ನು ಹಾಳು ಮಾಡಲು ಹೊರಟಿದೆ.

ಕೇಂದ್ರ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಜೈಲ್ ಭರೋ ಚಳವಳಿ ನಡೆಸಲಾಗುವುದು.

ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಈಗ ದಿನಾಂಕ ನಿಗದಿಯಾಗಿದೆ. ಜುಲೈ 2 ರಂದು ಪದಗ್ರಹಣಕ್ಕೆ ಸಿದ್ಧತೆ ನಡೆಯುತ್ತಿದೆ. ಶಾಸಕರು ಈ ಸಂಬಂಧ ತಮ್ಮ ಕ್ಷೇತ್ರಗಳಲ್ಲಿ ತಯಾರಿ ಮಾಡಿಕೊಳ್ಳಬೇಕು.

ವಿಧಾನ ಪರಿಷತ್ ಚುನಾವಣೆಗೆ ಆಭ್ಯರ್ಥಿಗಳಾಗಿರುವ ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ಅವರಿಗೆ ಆಭಿನಂದನೆಗಳು. ಅವರನ್ನು ಆಯ್ಕೆ ಮಾಡಿರುವ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕೃತಜ್ಞತೆಗಳು.

ಸೂಚನಾ ಫಲಕಕ್ಕೆ ಟೆಂಪೋ ಡಿಕ್ಕಿ: ಇಬ್ಬರ ಸಾವು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಂಬಾಗಿಲಿನಲ್ಲಿ ನಡೆದಿದೆ. ಕುಂದಾಪುರದಿಂದ ಉಡುಪಿಗೆ ತರಕಾರಿ ಹೊತ್ತು ತರುತ್ತಿದ್ದ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಮತ್ತು ಸಹ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಅಂಬಾಗಿಲು ಬಳಿ ಈ ಅಪಘಾತ ನಡೆದಿದೆ. ದಿನೇಶ್ (35 )ಮತ್ತು ಮಂಜು (30 ) ಮೃತ ದುರ್ದೈವಿಗಳಾಗಿದ್ದು, ಇಬ್ಬರೂ ಉದ್ಯಾವರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು.
ಕುಂದಾಪುರದಿಂದ ಉದ್ಯಾವರಕ್ಕೆ ಟೆಂಪೋ ಟ್ರಾಕ್ಸ್ ನಲ್ಲಿ ತರಕಾರಿ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಮೃತ ದೇಹವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೋವಿಡ್ ವಿರುದ್ಧ ಹೋರಾಟ: ರಾಜ್ಯಗಳ ಪ್ರಯತ್ನಗಳಿಗೆ ಪ್ರಧಾನಿ ಶ್ಲಾಘನೆ

ಬೆಂಗಳೂರು, ಜೂನ್ 17-ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ವಿವಿಧ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ನಿಯಂತ್ರಣದೊಂದಿಗೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿ, ರಾಜ್ಯಗಳು ಇನ್ನು ಅನ್ ಲಾಕ್ ನತ್ತ ಹೆಜ್ಜೆಯಿಡಬೇಕು. ನಿರ್ಬಂಧ ಕಡಿಮೆಯಾಗಿ,, ಚಟುವಟಿಕೆಗಳು ಚುರುಕಾಗಲಿ ಎಂದು ಸಲಹೆ ನೀಡಿದರು.

ಆತ್ಮನಿರ್ಭರ್ ಪ್ಯಾಕೇಜ್ ಆರ್ಥಿಕ ಚಟುವಟಿಕೆ ಚುರುಕುಗಾಗಲು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿ, ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಂಡಿರುವ 5 ಟಿ ತತ್ವವನ್ನು ವಿವರಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ನಿರಂತರವಾಗಿ ಸೋಂಕಿತರು, ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುವುದರೊಂದಿಗೆ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಒಂದು ಲಕ್ಷ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದ್ದು, ಇದನ್ನು 2 ಲಕ್ಷಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ.

ರಾಜ್ಯದಲ್ಲಿ 673 ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗಳು ಸೋಂಕು ಹರಡುವ ತಾಣವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ರಾಜ್ಯದಲ್ಲಿರುವ 1.68 ಕೋಟಿ ಕುಟುಂಬಗಳಲ್ಲಿ 1.5 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಿದ್ದು, ಕೋವಿಡ್ ಸೋಂಕಿನಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ವ್ಯಕ್ತಿಗಳ ಮಾಹಿತಿಯನ್ನು ದಾಖಲಿಸಲಾಗಿದೆ. ಇದರಿಂದ ಮುನ್ನೆಚ್ಚರಿಕೆ ವಹಿಸಲು ಹಾಗೂ ಇಂತಹ ವ್ಯಕ್ತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಾಧ್ಯವಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕೋವಿಡ್ ಸೋಂಕು ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ಸಂಖ್ಯೆ 72ಕ್ಕೆ ಹೆಚ್ಚಿದ್ದು, ಪರೀಕ್ಷಾ ಸಾಮರ್ಥ್ಯ ದಿನಕ್ಕೆ 15 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಪ್ರತಿ ದಶಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 7500 ಪರೀಕ್ಷೆ ನಡೆಸಲಾಗುತ್ತಿದ್ದು, ಶೇ. 1.6 ರಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ದೈನಂದಿನ ಬೆಳವಣಿಗೆ ದರ ಶೇಕಡಾ 3.6 ರಷ್ಟಿದೆ ಎಂದು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದರು.

ಕೋವಿಡ್ ವಾರ್ ರೂಂ ಸ್ಥಾಪನೆಯ ಮೂಲಕ ಸೋಂಕು ನಿಯಂತ್ರಣ ಪ್ರಕ್ರಿಯೆಯ ಮೇಲೆ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಮಾಹಿತಿ ಸಂಗ್ರಹ ನಡೆಸಲಾಗುತ್ತಿದೆ.

ರಾಜ್ಯದ ಎಲ್ಲ ಭಾಗಗಳಲ್ಲಿಯೂ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಟೆಲಿ ಐಸಿಯು ವ್ಯವಸ್ಥೆ ರೂಪಿಸಲಾಗಿದ್ದು, ತಜ್ಞ ವೈದ್ಯರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಪ್ರಾತ್ಯಕ್ಷಿಕೆ ನೀಡಿದರು.

ಅವರು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ತಂತ್ರಜ್ಞಾನದ ಬಳಕೆ, ತರಬೇತಿ ಕಾರ್ಯಕ್ರಮಗಳು, ಪಂಚಾಯತ್ ಮಟ್ಟದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಸಭೆಯ ಪ್ರಾರಂಭದಲ್ಲಿ ಲಡಾಕ್ ನಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ‌ ಹರಿಪ್ರಸಾದ್ ಹಾಗು ಹಾಲಿ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ಗೆ ಟಿಕೆಟ್ ಘೋಷಿಸಿದೆ.

ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ಇಂದು ಸಂಜೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿ ನಾಮಪತ್ರ ಸಲ್ಲಿಕೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಇನ್ನುಳಿದಂತೆ ಜೆಡಿಎಸ್ ತನ್ನ ಒಂದು ಸ್ಥಾನಕ್ಕೆ ಹೆಸರು ಪ್ರಕಟಿಸಿದ್ದು, ಬಿಜೆಪಿ ತನ್ನ ಪಾಲಿನ ನಾಲ್ಕು ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ, ಕೊನೆ ಹಂತದ ಕಸರತ್ತು ಬಿಜೆಪಿಯಲ್ಲಿ ನಡೆಯುತ್ತಿದೆ.

ಪ್ರವಾಸೋದ್ಯಮ ಉದ್ಯಮಕ್ಕೆ ಉತ್ತೇಜನ: ಕ್ಯಾರವ್ಯಾನ್ ಗೆ‌ ಚಾಲನೆ ನೀಡಿದ ಸಿಎಂ

ಬೆಂಗಳೂರು: ಸ್ಟಾಟ್ ಅಪ್ ಯೋಜನೆಯಡಿ ಕ್ಯಾರವ್ಯಾನ್ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಅಭಿವೃದ್ಧಿ ಪಡಿಸಿರುವ ನೂತನ ಕ್ಯಾರವ್ಯಾನ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ನೀಡಲಿರುವ ಆಧ್ಯತೆ ಕುರಿತು ವಿವರ ನೀಡಿದರು.

ಸಿಎಂ ಹೇಳಿದ್ದೇನು?:

1. ಪ್ರವಾಸೋದ್ಯಮ ಅತಿ ಹೆಚ್ಚು ಉದ್ಯೋಗಗಳನ್ನು ಸೃಜಿಸುವ ಉದ್ಯಮವಾಗಿದೆ.

2. ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗಿರುವುದು ಸರ್ವವೇದ್ಯವಾಗಿದೆ.

3. ಈ ಸನ್ನಿವೇಶದಲ್ಲಿ ನಿರುದ್ಯೋಗ ನಿವಾರಣೆಯ ದಿಕ್ಕಿನಲ್ಲಿ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.

4. ರಾಜ್ಯದ ಜಿ.ಡಿ.ಪಿ.ಗೆ ಪ್ರವಾಸೋದ್ಯಮದ ಕೊಡುಗೆ ಶೇಕಡಾ 14 ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಗುರಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

5. ಕೋವಿಡ್-19ರ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿದೆ.

6. ಇದರ ಭಾಗವಾಗಿ ಕಾರವಾನ್ (ಮಿನಿ ಬಸ್) ಪ್ರವಾಸೋದ್ಯಮಕ್ಕೆ ಇಂದು ಚಾಲನೆ ನೀಡಲಾಗಿದೆ.

7. ಕಾರವಾನ್ ಪ್ರವಾಸೋದ್ಯಮ ಪರಿಕಲ್ಪನೆಯು ಸ್ವತಂತ್ರ ತಿರುಗಾಟದ ಅನುಭವಕ್ಕಾಗಿ ಅತ್ಯಂತ ಜನಪ್ರಿಯವಾಗಿದೆ.

8. ಪ್ರವಾಸದ ಅವಧಿಯಲ್ಲಿ ಸೂಕ್ತ ರಕ್ಷಣೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಾರವಾನನಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಾಗಿದೆ.

9. ಕಾರವಾನ್‍ಗಳ ನಿಲುಗಡೆಗೆ ಪ್ರಾಥಮಿಕ ಹಂತದಲ್ಲಿ ರಾಜ್ಯ ಸರ್ಕಾರದ ಸಂಸ್ಥೆಗಳಾದ ಅರಣ್ಯ ವಸತಿ ಮತ್ತು ವಿಹಾರಧಾಮ ಹಾಗೂ ಕೆ.ಎಸ್.ಟಿ.ಡಿ.ಸಿ ಘಟಕಗಳ ಆವರಣದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು.

10. ಪ್ರಾಥಮಿಕ ಹಂತದಲ್ಲಿ ಹಂಪಿ, ಗೋಕರ್ಣ, ಬಾದಾಮಿ, ಕುದುರೆಮುಖ, ಸಕಲೇಶಪುರ, ಬೇಲೂರು, ಹಳೇಬೀಡು, ಸಕ್ರೆಬೈಲು ಹಾಗೂ ಕೊಡಗು ಪ್ರವಾಸಿ ತಾಣಗಳಲ್ಲಿ ಕಾರವಾನ್‍ಗಳನ್ನು ನಿಯೋಜಿಸಲಾಗುವುದು.

11. ರಾಜ್ಯದ ನೂತನ ಪ್ರವಾಸಿ ನೀತಿಯನ್ವಯ ಇನ್ನೂ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಕಾರವಾನ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುವುದು.

12. ಕಳೆದ ವಾರವಷ್ಟೇ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ.

13. ಕೋವಿಡ್-19 ನಿಂದಾಗಿ ಪ್ರವಾಸೋದ್ಯಮ ವಲಯದಲ್ಲಿ ಸುಮಾರು 15 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

14. ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗಿದ್ದು, ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಸೂಚನೆ ನೀಡಿದ್ದೇನೆ.

15. ರಾಜ್ಯಕ್ಕೆ ಪ್ರವಾಸಿಗರನ್ನು ಆಕರ್ಷಿಸುವ, ಅತ್ಯುತ್ತಮ ಪ್ರವಾಸಿ ಗಮ್ಯವಾಗಿಸುವ ನಿಟ್ಟಿನಲ್ಲಿ ಎಲ್ಲ ಪಾಲುದಾರರೂ ಕೈಜೋಡಿಸಬೇಕು.

16. ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಕಾರವಾನ್ ಪ್ರವಾಸೋದ್ಯಮ ಇದಕ್ಕೆ ಪೂರಕವಾಗಲಿದೆ ಎಂದು ಆಶಿಸುತ್ತೇನೆ