ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆ ಅನುದಾನದಲ್ಲಿ ನಾಲ್ಕು ವಾಹನ‌ ಚಾಲನಾ ತರಬೇತಿ ಶಾಲೆ ಸ್ಥಾಪನೆ : ಗೋವಿಂದ ಕಾರಜೋಳ

ಮುಧೋಳ,ಜೂ.17: ‌ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆ ಅನುದಾನದಲ್ಲಿ ನಾಲ್ಕು ವಾಹನ‌ ಚಾಲನಾ ತರಬೇತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಮುಧೋಳ್ ನಗರದಲ್ಲಿಂದು ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಅವರು, ಮುಧೋಳ್, ಕೊಪ್ಪಳ, ಅಥಣಿ ಮತ್ತು ಸವದತ್ತಿಯಲ್ಲಿ ವಾಹನ ಚಾಲನಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲಾಗುವುದು. ಕರ್ನಾಟಕ ಸಾರಿಗೆ ಸಂಸ್ಥೆಗೆ 60 ಕೋಟಿ ರೂ ಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶೀಘ್ರವಾಗಿ ಮುಧೋಳ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಧೋಳ್ ನಲ್ಲಿ 5, ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಯನ್ನು ‌ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಕೋವಿವ್ 19 ರ ಸಂಕಷ್ಟ ದಲ್ಲಿ ಕರ್ನಾಟಕ ಸರ್ಕಾರ ಅತ್ಯುತ್ತಮ ಹಾಗೂ ಮಾದರಿಯುತವಾಗಿ ಮುಂಜಾಗ್ರತಾ ಹಾಗೂ ಪರಿಹಾರ ಕಾರ್ಯವನ್ನು ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಚಾಲಕರಿಗೆ, ಆಟೋ ಚಾಲಕರಿಗೆ ಕುಲ ಕಸುಬು ದಾರರಿಗೆ, ಹೂ ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ‌. ಇದಕ್ಕಾಗಿ 2280 ಕೋಟಿ ರೂ ಬಿಡುಗಡೆ ಮಾಡಿದೆ.ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 45ಸಾವಿರ ಜನರಿಗೆ ಆಶ್ರಯ ‌ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೂ ವೇತನ ಕಡಿತಗೊಳಿಸಿದೆ. ಆದರೆ ಕರ್ನಾಟಕ ಸರ್ಕಾರ ಪೂರ್ಣ ಪ್ರಮಾಣದಲ್ಲಿ ವೇತನ ನೀಡುತ್ತಿದೆ. ಕೇಂದ್ರ ಸರ್ಕಾರವೂ ಅತ್ಯುತ್ತಮ ವಾಗಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಡಿಸಿಎಂ ಲಕ್ಷಣ ಸವದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು‌. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿಯವರಾದ ಕ್ಯಾಪ್ಟನ್ ಡಾ. ರಾಜೇಂದ್ರ ,ಎಸ್ ಪಿ ಲೋಕೇಶ್ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಮತ್ತಿತರರು ಉಪಸ್ಥಿತರಿದ್ದರು.

ವಕ್ಫ್ ಆಸ್ತಿ ದುರ್ಬಳಕೆ: ಮುಂದಿನ ಅಧಿವೇಶನದಲ್ಲಿ ಲೋಕಾಯುಕ್ತ ಮಧ್ಯಂತರ ವರದಿ ಮಂಡನೆ

ಬೆಂಗಳೂರು, ಜೂನ್ 16-ಅನ್ವರ್ ಮಾಣಿಪ್ಪಾಡಿ ವರದಿಯನ್ವಯ ವಕ್ಫ್ ಆಸ್ತಿ ದುರ್ಬಳಕೆ ಕುರಿತಂತೆ ಲೋಕಾಯುಕ್ತ ತನಿಖೆಯ ಮಧ್ಯಂತರ ವರದಿಯನ್ನು ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಾಜ್ಯ ವಕ್ಫ್ ಮಂಡಳಿ ಮತ್ತು ಜವಳಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ವಕ್ಫ್ ಆಸ್ತಿಗಳ ದುರ್ಬಳಕೆ ಹಾಗೂ ಒತ್ತುವರಿ ಬಗ್ಗೆ ಅನ್ವರ್ ಮಾಣಿಪ್ಪಾಡಿ ವರದಿಯನ್ವಯ ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಲೋಕಾಯುಕ್ತರು ಮಧ್ಯಂತರ ವರದಿ ಸಲ್ಲಿಸಿದ್ದು, ಈ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪವಿತ್ರ ಹಜ್ ಯಾತ್ರೆಯ ಕುರಿತು ಸೌದಿ ಅರೇಬಿಯಾದಿಂದ ಯಾವುದೇ ಮಾಹಿತಿ ಸ್ವೀಕೃತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ 2020ರ ಯಾತ್ರೆಗೆ ಆಯ್ಕೆಯಾದ ಯಾತ್ರಾರ್ಥಿಗಳು ತಮ್ಮ ಮುಂಗಡ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆ:

ನೇಕಾರ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 2000 ರೂ. ಆರ್ಥಿಕ ನೆರವು ನೀಡಲು ಆನ್ ಲೈನ್ ನಲ್ಲಿ 18991 ಅರ್ಜಿಗಳು ಸ್ವೀಕೃತವಾಗಿವೆ. ಶೀಘ್ರವೇ ನೇಕಾರರಿಗೆ ನೆರವು ತಲುಪಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

14.15 ಕೋಟಿ ರೂ. ಮೌಲ್ಯದ ಕೈಮಗ್ಗ ಉತ್ಪನ್ನ ದಾಸ್ತಾನು ಹಾಗೂ 942.66 ಕೋಟಿ ರೂ. ಮೌಲ್ಯದ ವಿದ್ಯುತ್ ಮಗ್ಗ ಉತ್ಪನ್ನಗಳ ದಾಸ್ತಾನು ಮಾರಾಟವಾಗದೆ ಉಳಿದಿದೆ. ಇದರಲ್ಲಿ ವಿದ್ಯುತ್ ಮಗ್ಗದ ಸೀರೆಗಳನ್ನು ಉಚಿತ ದರದಲ್ಲಿ ಖರೀದಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ವಿದ್ಯುತ್ ಮಗ್ಗ ಘಟಕಗಳ ಕೂಲಿ ಕಾರ್ಮಿಕರಿಗೆ ಒಂದು ಬಾರಿಗೆ ಆರ್ಥಿಕ ನೆರವು ನೀಡಲು ಆನ್ ಲೈನ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.

ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮೂವರು ನೇಕಾರರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ ನೀಡಲು ಸೂಚಿಸಿದರು.

ಸಭೆಯಲ್ಲಿ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ, ವಕ್ಫ್ ಮತ್ತು ಹಜ್ ಸಚಿವ ಪಭು ಚವ್ಹಾಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಮತ್ತು ಎಂಎಸ್ ಎಂಇ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರರಾವ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ

ಬೆಂಗಳೂರು, ಜೂನ್ 16-ಆರ್ಥಿಕ ಸಮಸ್ಯೆ ಇದ್ದಾಗ್ಯೂ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸದಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಇಲಾಖೆಯ ಕಾರ್ಯಕ್ರಮ ಅನುಷ್ಠಾನದಲ್ಲಿ 2019-20ನೇ ಸಾಲಿನಲ್ಲಿ ಶೇ. 97 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಇಬ್ಬರು ಐಎಎಸ್, ಇಬ್ಬರು ಐಪಿಎಸ್, 13 ಅಭ್ಯರ್ಥಿಗಳು ಐಆರ್ಎಸ್ ಸೇವೆಗೆ ಆಯ್ಕೆಯಾಗಿರುವುದು ಸೇರಿದಂತೆ ಒಟ್ಟು 268 ಅಭ್ಯರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ವಿವಿಧ ಸೇವೆಗಳಿಗೆ ಸೇರ್ಪಡೆಯಾಗಿರುವ ಕುರಿತು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲಾಖೆಯ ಕಾರ್ಯಕ್ರಮಗಳನ್ನು ಆದ್ಯತೆಗೆ ಅನುಸಾರ ಗುರುತಿಸಿ, ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗಂಗಾರಾಮ್ ಬಡೇರಿಯ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ರೋಗ ಲಕ್ಷಣ ಇಲ್ಲದಿರುವ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ – ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್

ಬೆಂಗಳೂರು – ಜೂನ್ 16, 2020: ರಾಜ್ಯದಲ್ಲಿ ಕಳೆದ 2 ವಾರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋವಿಡ್ ಲಕ್ಷಣ ಇಲ್ಲದಿರುವ ಸೋಂಕಿತರಿಗಾಗಿ *ಕೋವಿಡ್ ಕೇರ್ ಸೆಂಟರ್* ಸ್ಥಾಪಿಸುತ್ತಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಂಗಳವಾರದಂದು ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇತರೆ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಸರಿಸುತ್ತಿರುವ ಕ್ರಮಗಳ ಕುರಿತಂತೆ ಪರಿಣಿತರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಕೆಲವು ತೀರ್ಮಾನ ತೆಗೆದುಕೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಖಾಸಗಿ ವಲಯದ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸಚಿವರು ತಿಳಿಸಿದರು. ಕೊರೋನ ಚಿಕಿತ್ಸೆಯ ವ್ಯವಸ್ಥೆ ಇರುವಂತಹ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು. ಯಾವ ಆಸ್ಪತ್ರೆಗಳು ಎಷ್ಟು ಹಾಸಿಗೆಗಳು, ಎಷ್ಟು ಐಸಿಯು ಮತ್ತು ವೆಂಟಿಲೇಟರ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕು ಎನ್ನುವುದಕ್ಕೆ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿರುವುದಾಗಿ ಡಾ.ಸುಧಾಕರ್ ಹೇಳಿದರು. ಪ್ರತಿದಿನ ಕನಿಷ್ಠ 15,000 ದಿಂದ 25,000 ಕೋವಿಡ್ ಟೆಸ್ಟ್ ನಡೆಸುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹೆಚ್ಚಿನದಾಗಿ ಜನಸಂದಣಿ ಇರುವ ಜಾಗಗಳಲ್ಲಿ ಇರುವ ಜನರು, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೋಲೀಸರು, ಆರೋಗ್ಯ ಕಾರ್ಯಕರ್ತರು ಮುಂತಾದ ಹೆಚ್ಚು ಜನಸಂಪರ್ಕ ಹೊಂದುತ್ತಿರುವ ಜನರನ್ನು ಹೆಚ್ಚಿಗೆ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಎಲ್ಲಾ ರೀತಿಯ ILI ಹಾಗೂ SARI ಲಕ್ಷಣಗಳಿರುವವರನ್ನು ಕಡ್ಡಾಯ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ರೋಗ ಲಕ್ಷಣವಿರದ ಸೋಂಕಿತರನ್ನು ಪ್ರತ್ಯೇಕಿಸಿ ನಿಗಾವಹಿಸಲು ಅನುವಾಗುವಂತೆ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಯಾರಿಗೆ ರೋಗ ಲಕ್ಷಣ ಎಷ್ಟಿದೆ, ಎಂತಹ ಚಿಕಿತ್ಸೆ ಅಗತ್ಯವಿದೆ, ಯಾವ ಆಸ್ಪತ್ರೆಯಲ್ಲಿ ದಾಖಲಿಸಬೇಕು ಮುಂತಾದವುಗಳನ್ನು ಕಂಡುಹಿಡಿಯಲು ತಜ್ಞರ ಸಮಿತಿ ರಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಸಿಸಿಸಿ ಕೇಂದ್ರಗಳಲ್ಲಿ ಬೆಂಗಳೂರು ನಗರದಲ್ಲಿ ಕನಿಷ್ಠ 20,000 ಹಾಸಿಗೆ ಇರುವಂತೆ ವ್ಯವಸ್ಥೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ರೋಗಲಕ್ಷಣ ಇಲ್ಲದಿರುವವರಿಗೆ ಆಸ್ಪತ್ರೆಗಳಲ್ಲಿ ಭರ್ತಿ ಮಾಡಿಕೊಂಡರೆ ರೋಗಲಕ್ಷಣವಿರುವವರಿಗೆ ಚಿಕಿತ್ಸೆಗೆ ತೊಂದರೆ ಆಗಬಹುದು. ಆದ್ದರಿಂದ ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ಸಿದ್ಧತೆಗಳನ್ನು ಮಾಡುತ್ತಿರುವುದಾಗಿ ಸಚಿವರು ಹೇಳಿದರು.

ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಜವಾಬ್ದಾರಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೋಂಕು ಹೆಚ್ಚು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಅಗತ್ಯಬಿದ್ದಲ್ಲಿ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಸುಧಾರಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಇನ್ನಷ್ಟು ಲ್ಯಾಬ್‌ಗಳನ್ನು ಸ್ಥಾಪಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಟೆಸ್ಟ್ ನಡೆಸಲಾಗುವುದೆಂದು ಸಚಿವರು ತಿಳಿಸಿದರು.

ಫುಟ್‌ಪಾತ್ ತೆರವು, ವ್ಯಾಪಾರಸ್ಥರು ಕಂಗಾಲು: ಪೋಲಿಸಪ್ಪನ ದರ್ಪ!

ಬಾಗಲಕೋಟೆ: ಫುಟ್ ಪಾತ್ ವ್ಯಾಪಾರಸ್ಥರ ಹಾಗೂ ಅತಿಕ್ರಮಣದಾರರ ಅಂಗಡಿಗಳನ್ನು ನಗರಸಭೆ ವತಿಯಿಂದ ಇಂದು ತೆರವು ಕಾರ್ಯಾಚರಣೆ ಮಾಡಲಾಯಿತು.

ಹಳೇ ಬಾಗಲಕೋಟೆಯ ಎಂಜಿ ರೋಡ್ ನಲ್ಲಿ ಅಂಗಡಿ, ಮುಂಗಟ್ಟುಗಳ ಮುಂದೆ ನೆರಳಿಗಾಗಿ ಹಾಕಿರುವ ತಗಡುಗಳ ಹಾಗೂ ಫುಟ್ ಬಾತ್ ಮೇಲೆ ಹಾಕಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಗೊಳಿಸಲಾಯಿತು. ಈ ವೇಳೆ ತೆರವು ವಿರೋಧಿಸಿ ಅಂಗಡಿ, ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಕೂಡಾ ಕೆಲ ಕಾಲ ಪ್ರತಿಭಟನೆ ಕೂಡಾ ನಡೆಸಿದರು.

ಪ್ರತಿಭಟನೆ ವೇಳೆ ಪೊಲೀಸರು, ನಗರಸಭೆ ಸಿಬ್ಬಂದಿ ಜೊತೆ ಪುಟ್ ಪಾತ್ ವ್ಯಾಪಾರಸ್ಥರು ಮಾತಿನ ಚಕಮಕಿ ನಡೆಸಿದ್ರು. ಲಾಕ್ ಡೌನ್ ನಿಂದ ಮೊದಲೇ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ, ಇಂತಹ ಸಮಯದಲ್ಲಿ ತೆರವು ಕಾರ್ಯಾಚರಣೆ ನೆಪದಲ್ಲಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದೇ ಸಂದರ್ಭದಲ್ಲಿ ತೆರವು ನಿಲ್ಲುಸುವಂತೆ ಎಲ್ರೂ ಸೇರಿ ಎಂಎಲ್ ಎ ಸಾಹೇಬ್ರ ಕಡೆ ಹೋಗೋಣ ಎಂದ ಯುವಕನ ಮೇಲೆ ಬಾಗಲಕೋಟೆ ನಗರ ಠಾಣೆ ಪಿಎಸ್ಐ ಜವಳೇಕರ ಕೆಂಡಾಮಂಡಲವಾದ ಘಟನೆಯೂ ಜರುಗಿತು.

ಶಾಸಕರ ಹೆಸರು ಹೇಳುತ್ತಲೆ ಯುವಕನ ಮೇಲೆ ಪಿಎಸ್‌ಐ ಕೆಂಡಾಮಂಡಲವಾದ್ರು‌. ಹೇ ಕೇಳಿಲ್ಲಿ, ನೀ ದೊಡ್ಡದಾಗಿ ಮಾತಾಡಬೇಡ ಇಲ್ಲಿ. ಯಾಂವಂದರ ಏನರ ತಲೆ ತುಂಬಿದಿ ಅಂದ್ರ ನಿನ್ನ ಮೇಲೆ ಕೇಸ್ ಹಾಕ್ತಿನಿ ಯುಸ್ ಲೆಸ್ ಫೆಲೋ. ನಾಟಕ ಹಚ್ಚೀನೂ ಇಲ್ಲಿ ನೀನು ಭಾಳ್ ಮಾತಾಡಬೇಡ ಯೂಸಲೆಸ್ಪೆಲೋ ನಾ ಹೇಳೋದು ಅರ್ಥ ಮಾಡ್ಕೋ ನಿನ್ನ ವಯಸ್ಸಿನ್ನು ನಾಲ್ವತ್ತಾಗಿಲ್ಲ. ಬಾಗಲಕೋಟೆ ನಗರಸಭೆಗೆ ಹೊಸ ಅಧಿಕಾರಿ ಬಂದಾರ, ಅವರು ಏನ್ ಹೇಳ್ತಾರ ಅದರಂಗ ಕೇಳ್ಕೊಬೇಕಾಗುತ್ತ ಅಂತಾ ದರ್ಪ ತೋರಿಸಿದ್ರು…

ಮಗುವನ್ನ ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು ನೀರು ಮುಟ್ಟಿಸೋ‌ ವಿಚಿತ್ರ ಹರಕೆ!

ಹಾವೇರಿ: ಮಗುವನ್ನ ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು ಬಾವಿ ನೀರು ಮುಟ್ಟಿಸೋ‌ ಮೂಲಕ ಹರಕೆ ತೀರಿಸೋ ವಿಚಿತ್ರ ಪದ್ದತಿಯೊಂದು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ದರ್ಗಾದಲ್ಲಿದೆ.

ಪಟ್ಟಣದ ಹಜರತ್ ಫೀರ ಸಯ್ಯದ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ಇಂಥಾದ್ದೊಂದು ಪದ್ದತಿ ಇದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಪದ್ದತಿಯ ದೃಶ್ಯಗಳು ಈಗ ವೈರಲ್ ಆಗಿವೆ. ಮಕ್ಕಳಾಗದವರು ದರ್ಗಾಕ್ಕೆ ಹರಕೆ ಹೊತ್ತು ಮಕ್ಕಳಾದ ನಂತರ ಮಕ್ಕಳನ್ನ ದರ್ಗಾಗೆ ಕರೆತಂದು ದರ್ಗಾದಲ್ಲಿರೋ ಬಾವಿಯ ನೀರು ಮುಟ್ಟಿಸಿ ಹರಕೆ ತೀರಿಸೋ ಪದ್ದತಿ ಇದು.

ಮಕ್ಕಳನ್ನ ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಡುವಾಗ ಸ್ವಲ್ಪ ಯಾಮಾರಿದ್ರೂ ಮಕ್ಕಳು ಯಮಲೋಕ ಸೇರೋದು ಗ್ಯಾರಂಟಿ. ಹಲವಾರು ವರ್ಷಗಳಿಂದ ಇಂಥಾದ್ದೊಂದು ಪದ್ದತಿ ದರ್ಗಾದಲ್ಲಿ ನಡೆದುಕೊಂಡು ಬಂದಿದ್ರೂ ತಾಲೂಕು ಮತ್ತು ಜಿಲ್ಲಾಡಳಿತ ಇಂಥಾ ವಿಚಿತ್ರ ಪದ್ದತಿಗೆ ಕಡಿವಾಣ ಹಾಕೋಕೆ‌ ಮುಂದಾಗದೆ ಇರೋದು ವಿಪರ್ಯಾಸದ ಸಂಗತಿ.